Monkeypox: ಮಂಕಿಪಾಕ್ಸ್ ರೋಗಲಕ್ಷಣಗಳ ಬಗ್ಗೆ ಹೊರಬಿತ್ತು ಹೊಸ ಮಾಹಿತಿ

ಕೊರೋನಾ ವೈರಸ್ ಬಳಿಕ ಇಡೀ ವಿಶ್ವದಲ್ಲಿ ಮತ್ತೊಂದು ವೈರಸ್ ಮಂಕಿಪಾಕ್ಸ್ ತಲ್ಲಣ ಸೃಷ್ಟಿಸಿದೆ. ಇದೀಗ ಭಾರತದಲ್ಲಿ ನಾಲ್ಕು ಜನರಿಗೆ ಮಂಗನ ಕಾಯಿಲೆ ಇರುವುದು ದೃಢಪಟ್ಟಿದೆ. ಈ ಸಂದರ್ಭದಲ್ಲಿ ಜಾಗರೂಕರಾಗಿರುವಂತೆ ವೈದ್ಯರು ಸಲಹೆ ನೀಡಿದ್ದಾರೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ನವ ದೆಹಲಿ: ಕರೋನಾ ವೈರಸ್ ಬಳಿಕ ಇಡೀ ವಿಶ್ವದಲ್ಲಿ ಮತ್ತೊಂದು ವೈರಸ್ (Virus) ಮಂಕಿಪಾಕ್ಸ್ (Monkepox) ತಲ್ಲಣ ಸೃಷ್ಟಿಸಿದೆ. ಇದೀಗ ಭಾರತದಲ್ಲಿ ನಾಲ್ಕು ಜನರಿಗೆ ಮಂಗನ ಕಾಯಿಲೆ ಇರುವುದು ದೃಢಪಟ್ಟಿದೆ. ಈ ಸಂದರ್ಭದಲ್ಲಿ ಜಾಗರೂಕರಾಗಿರುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಇದೀಗ ಏಕಾಏಕಿ ಕಾಣಿಸಿಕೊಂಡಿರುವ ಮಂಕಿಪಾಕ್ಸ್‌ ಅಥವಾ ಮಂಗನ ಕಾಯಿಲೆಯ ಲಕ್ಷಣಗಳು ಈ ಹಿಂದೆ ಆಫ್ರಿಕನ್ ಪ್ರದೇಶಗಳಲ್ಲಿ (African region) ಕಾಣಿಸಿಕೊಂಡಿದ್ದಕ್ಕಿಂತ ಬಹಳ ಭಿನ್ನವಾಗಿವೆ ಎಂದು ಬ್ರಿಟಿಷ್ ಮೆಡಿಕಲ್ ಜರ್ನಲ್ (ಬಿಎಂಜೆ) ನಲ್ಲಿ (British Medical Journal) ಪ್ರಕಟವಾದ ಅಧ್ಯಯನವೊಂದು ಹೇಳಿಕೊಂಡಿದೆ. ಈ ಕಾಯಿಲೆ (Disease) ಎಷ್ಟು ಅಪಾಯಕಾರಿ. ಈ ಬಗ್ಗೆ ನಿಗಾವಹಿಸುವುದು ಹೇಗೆ ಎಂದು ತಿಳಿಯೋಣ.

ಸಂಶೋಧನೆ ಅಧ್ಯಯನದಲ್ಲೇನಿದೆ?
ಈ ಸಂಶೋಧನೆ ಅಧ್ಯಯನ ನಡೆಸಿದ ಆಧಾರದ ಮೇಲೆ ಲಂಡನ್‌ನಲ್ಲಿ ಅಧ್ಯಯನಕ್ಕೆ ಒಳಪಟ್ಟ ಒಟ್ಟು197 ಪುರುಷರಲ್ಲಿ 196 ಜನ ಪುರುಷರು ನಾವು ಸಲಿಂಗಕಾಮಿ, ದ್ವಿಲಿಂಗಿ ಮತ್ತು ಪುರುಷರೊಂದಿಗೆ ಲೈಂಗಿಕತೆಯನ್ನು ಹೊಂದಿದ್ದೇವೆ ಎಂದು ಹೇಳಿಕೊಂಡಿದ್ದಾರೆ. ಅವರಿಗೆ ಈ ಮಂಕಿಪಾಕ್ಸ್‌ ಕಾಯಿಲೆ ಇರುವುದು ದೃಢ ಪಟ್ಟಿದೆ. ಅಧ್ಯಯನದ ಪ್ರಕಾರ, 2007-11 ರಲ್ಲಿ ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯದಲ್ಲಿ ಮತ್ತು 2017-18 ರಲ್ಲಿ ನೈಜೀರಿಯಾದಲ್ಲಿ ಮಂಕಿಪಾಕ್ಸ್‌ ಕಾಯಿಲೆಗೆ ಹೋಲಿಸಿದರೆ ಇದೀಗ ಏಕಾಏಕಿ ಗುದನಾಳದ ನೋವು ಮತ್ತು ಶಿಶ್ನ ಊತ (ಎಡಿಮಾ) ಎಂಬ ರೋಗ ಲಕ್ಷಣಗಳು, ಸಾಮಾನ್ಯವಾಗಿ ಪ್ರಸ್ತುತವಾಗಿ ಕಾಯಿಲೆ ದೃಢ ಪಟ್ಟವರಿಗೆ ಈ ಲಕ್ಷಣಗಳು ಕಂಡುಬರುತ್ತಿವೆ.

ಇದನ್ನೂ ಓದಿ:  Explained: ಮಂಕಿಪಾಕ್ಸ್ ಮತ್ತು ಚಿಕನ್ ಪಾಕ್ಸ್ ಇವೆರಡರ ನಡುವಿನ ವ್ಯತ್ಯಾಸವೇನು; ಇವುಗಳ ಸಾಮಾನ್ಯ ರೋಗಲಕ್ಷಣ ಯಾವುದು?

ಈ ಸಂಶೋಧನೆ ಕೈಗೊಂಡ ಸಂಶೋಧಕರು ವಿಶ್ವದ ಎಲ್ಲ ವೈದ್ಯರಿಗೆ “ಈ ರೀತಿಯ ಲಕ್ಷಣಗಳು ಒಬ್ಬ ವ್ಯಕ್ತಿಯಲ್ಲಿ ಕಾಣಿಸಿಕೊಂಡರೆ ಕೂಡಲೇ ಅವರನ್ನು ಮಂಕಿಪಾಕ್ಸ್‌ ಕಾಯಿಲೆಯ ಪರೀಕ್ಷೆ ಮಾಡಿಸಿ, ಇದರಿಂದ ಈ ಕಾಯಿಲೆಯ ಲಕ್ಷಣಗಳು ಬೇರೆಯವರಿಗೆ ಹರಡದಂತೆ ನೋಡಿಕೊಳ್ಳಬಹುದು” ಎಂದು ಹೇಳಿದ್ದಾರೆ. ಹೆಚ್ಚಿನ ಸಂದರ್ಭಗಳಲ್ಲಿ ಈ ವೈರಸ್ ಸಾಮಾನ್ಯವಾಗಿ ಅನಾರೋಗ್ಯವನ್ನು ತರುತ್ತದೆ. ಇದು ಕಡಿಮೆ ಸಾಂಕ್ರಾಮಿಕವಾಗಿದೆ ಆದರೆ, ಮಂಕಿಪಾಕ್ಸ್ ವೈರಸ್‌ನ ಲಕ್ಷಣಗಳು ಶೀಘ್ರದಲ್ಲಿ ಗೋಚರಿಸುವುದಿಲ್ಲ ಎನ್ನಲಾಗಿದೆ.

ಮಂಕಿಪಾಕ್ಸ್ ಜಾಗತಿಕ ಸಾರ್ವಜನಿಕ ತುರ್ತುಪರಿಸ್ಥಿತಿ ಎಂದ ಡಬ್ಲ್ಯೂಹೆಚ್ಒ:
ವಿಶ್ವ ಆರೋಗ್ಯ ಸಂಸ್ಥೆಯು ಮಂಕಿಪಾಕ್ಸ್ ಅನ್ನು ಆತಂಕಕಾರಿ ಜಾಗತಿಕ ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿ ಎಂದು ಘೋಷಿಸಿದೆ. 70 ಕ್ಕೂ ಹೆಚ್ಚು ದೇಶಗಳಲ್ಲಿ ಮಂಕಿಪಾಕ್ಸ್ ಹರಡುವಿಕೆಯು 'ಅಸಾಧಾರಣ' ಪರಿಸ್ಥಿತಿಯಾಗಿದೆ ಎಂದು ಈ ಸಂಸ್ಥೆ ಹೇಳಿದೆ.

ಈ ಮಂಕಿಪಾಕ್ಸ್‌ ಕಾಯಿಲೆ ಕುರಿತಾಗಿ ಡಬ್ಲ್ಯುಎಚ್‌ಒ ಮಹಾನಿರ್ದೇಶಕ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಬುಧವಾರದಂದು “ಇದೀಗ ಈ ಕಾಯಿಲೆಯು ಎಲ್ಲ ಕಡೆ ತನ್ನ ವ್ಯಾಪ್ತಿಯನ್ನು ಹೆಚ್ಚಿಸಿಕೊಳ್ಳುತ್ತಿದೆ. ಈ ಕಾಯಿಲೆಯ ಗಂಭೀರ ಅಪಾಯಗಳನ್ನು ದೇಶಗಳು, ಸಮುದಾಯಗಳು ಮತ್ತು ವ್ಯಕ್ತಿಗಳು ತಿಳಿದುಕೊಂಡು, ಇದರ ಅಪಾಯದ ಬಗ್ಗೆ ಜಾಗೃತೆ ಇರಲಿ ಎಂದು ಹೇಳುತ್ತಾ "ಈ ಕಾಯಿಲೆಯಿಂದ ನೀವು ದೂರ ಇರಬೇಕೆಂದರೆ -ಪುರುಷರೊಂದಿಗೆ ಸಂಭೋಗಿಸುವ ಪುರುಷರಿಗೆ ನಿಮ್ಮ ಲೈಂಗಿಕ ಪಾಲುದಾರರ ಸಂಖ್ಯೆಯನ್ನು ಕಡಿಮೆ ಮಾಡಿ, ಹೊಸಬರೊಂದಿಗೆ ಲೈಂಗಿಕ ಕ್ರಿಯೆ ನಡೆಸಬೇಡಿ. ಅವರ ಆರೋಗ್ಯದ ಕುರಿತು ಮರುಪರಿಶೀಲಿಸಿ ನಂತರ ಮುಂದುವರಿಯಿರಿ. ಇಲ್ಲದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ” ಎಂದು ಅವರು ಹೇಳಿದರು.

“ಹೊಸ ವಿಧಾನಗಳ ಮೂಲಕ ಪ್ರಪಂಚದಾದ್ಯಂತ ವೇಗವಾಗಿ ಹರಡುವ ಸಾಂಕ್ರಾಮಿಕ ರೋಗವನ್ನು ನಾವು ಎದುರಿಸುತ್ತಿದ್ದೇವೆ ಮತ್ತು ಈ ರೋಗದ ಬಗ್ಗೆ ನಮಗೆ ಬಹಳ ಕಡಿಮೆ ಮಾಹಿತಿ ಇದೆ” ಎಂದಿದ್ದಾರೆ.

ಭಾರತಕ್ಕೂ ಕಾಲಿಟ್ಟ ಮಂಕಿಪಾಕ್ಸ್
ಮಂಗನ ಕಾಯಿಲೆ ಅಂದರೆ ಮಂಕಿಪಾಕ್ಸ್ ಇಡೀ ವಿಶ್ವದಲ್ಲೇ ಆತಂಕ ಹೆಚ್ಚಿಸುತ್ತಿದ್ದು ಇದೀಗ ಭಾರತದಲ್ಲಿಯೂ ನಾಲ್ಕು ಪ್ರಕರಣಗಳು ವರದಿಯಾಗಿವೆ. ವಿಶ್ವ ಆರೋಗ್ಯ ಸಂಸ್ಥೆ ಮಂಕಿಪಾಕ್ಸ್ ಅನ್ನು ಜಾಗತಿಕ ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿ ಎಂದು ಘೋಷಿಸಿದೆ. ಈ ಮಧ್ಯೆ ಮಂಕಿಪಾಕ್ಸ್ ಭಾರತಕ್ಕೂ ಲಗ್ಗೆ ಇಟ್ಟಿರುವುದು ಜನರ ಆತಂಕ ಹೆಚ್ಚಿಸಿದೆ. ಈ ಕುರಿತಂತೆ ಸಲಹೆ ನೀಡುವ ತಜ್ಞರು, ರೋಗನಿರೋಧಕ ಶಕ್ತಿ ಕಡಿಮೆ ಇರುವವರು ಹೆಚ್ಚಿನ ಕಾಳಜಿ ವಹಿಸುವ ಅಗತ್ಯವಿದೆ ಎಂದು ಹೇಳುತ್ತಾರೆ. ಇದೆಲ್ಲದರ ನಂತರವೂ, ಈ ವೈರಸ್ ಕಡಿಮೆ ಸಾಂಕ್ರಾಮಿಕ ಮತ್ತು ಅದರಲ್ಲಿ ಸಾವಿನ ಸಾಧ್ಯತೆಗಳು ತುಂಬಾ ಕಡಿಮೆ ಇರುವ ಕಾರಣ ಭಯಪಡುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:   Monkeypox: ಟ್ರಾವೆಲ್ ಹಿಸ್ಟರಿ ಇಲ್ಲದಿದ್ರೂ ದೆಹಲಿ ಮೂಲದ ವ್ಯಕ್ತಿಗೆ ಮಂಕಿಪಾಕ್ಸ್ ತಗುಲಿದ್ದೇಗೆ?

ಮಂಕಿಪಾಕ್ಸ್ ತಡೆಯುವ ಕ್ರಮಗಳು
ತಜ್ಞರ ಪ್ರಕಾರ, ಕಟ್ಟುನಿಟ್ಟಾದ ಮೇಲ್ವಿಚಾರಣೆ ಮಾಡುವ ಮೂಲಕ ಮಂಕಿಪಾಕ್ಸ್ ಅನ್ನು ಪರಿಣಾಮಕಾರಿಯಾಗಿ ತಡೆಯಬಹುದು. ಸೋಂಕಿತರನ್ನು ಪ್ರತ್ಯೇಕಿಸುವ ಮೂಲಕ ಮತ್ತು ಅವರ ಸಂಪರ್ಕಕ್ಕೆ ಬಂದವರನ್ನು ಪ್ರತ್ಯೇಕಿಸುವ ಮೂಲಕ ಸೋಂಕು ಹರಡುವಿಕೆಯನ್ನು ನಿಯಂತ್ರಿಸಬಹುದು. ಅದೇ ಸಮಯದಲ್ಲಿ, ದುರ್ಬಲ ರೋಗನಿರೋಧಕ ಶಕ್ತಿ ಹೊಂದಿರುವ ವ್ಯಕ್ತಿಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವ ಅವಶ್ಯಕತೆಯಿದೆ ಎಂದು ವೈದ್ಯರು ಒತ್ತಿ ಹೇಳಿದ್ದಾರೆ.
Published by:Ashwini Prabhu
First published: