HOME » NEWS » National-international » A STUDY FOUND OUT CONSPIRACY OF CHINESE HACKING INDIAS POWER SUPPLY SNVS

ಭಾರತವನ್ನು ಕತ್ತಲಲ್ಲಿ ಮುಳುಗಿಸಲು ಚೀನಾ ಪ್ಲಾನ್? 12 ಸರ್ಕಾರಿ ಘಟಕಗಳನ್ನ ಹ್ಯಾಕ್ ಮಾಡಿದ ಚೀನೀಯರು

ಭಾರತದ ವಿದ್ಯುತ್ ಘಟಕಗಳನ್ನ ಗುರಿಯಾಗಿಸಿ ಚೀನೀ ಹ್ಯಾಕರ್ಸ್ ಗುಂಪುಗಳು ದಾಳಿ ನಡೆಸಿ ಮಾಲ್ವೇರ್ ಹರಿಬಿಟ್ಟಿದ್ದ ವಿಚಾರ ಬೆಳಕಿಗೆ ಬಂದಿದೆ. ಕಳೆದ ವರ್ಷ ಮುಂಬೈನಲ್ಲಿ 2 ಗಂಟೆ ವಿದ್ಯುತ್ ಸ್ಥಗಿತಗೊಂಡಿದ್ದರ ಹಿಂದೆಯೂ ಹ್ಯಾಕರ್ಸ್ ಕೈವಾಡ ಇರುವ ಶಂಕೆ ಇದೆ.

news18
Updated:March 1, 2021, 2:29 PM IST
ಭಾರತವನ್ನು ಕತ್ತಲಲ್ಲಿ ಮುಳುಗಿಸಲು ಚೀನಾ ಪ್ಲಾನ್? 12 ಸರ್ಕಾರಿ ಘಟಕಗಳನ್ನ ಹ್ಯಾಕ್ ಮಾಡಿದ ಚೀನೀಯರು
ಹ್ಯಾಕರ್ ಸಾಂದರ್ಭಿಕ ಚಿತ್ರ
  • News18
  • Last Updated: March 1, 2021, 2:29 PM IST
  • Share this:
ನವದೆಹಲಿ(ಮಾ. 01): ಕಳೆದ ವರ್ಷದ ಅಕ್ಟೋಬರ್ ತಿಂಗಳಲ್ಲಿ (ಅ. 13) ಮುಂಬೈ ನಗರಿ ಎರಡು ಗಂಟೆ ಸ್ತಬ್ದಗೊಂಡಿತ್ತು. ಮುಂಬೈ, ಥಾಣೆ ಮತ್ತು ನವಿ ಮುಂಬೈನಲ್ಲಿ ವಿದ್ಯುತ್ ಸ್ಥಗಿತಗೊಂಡು ರೈಲುಗಳು ರದ್ದಾದವು, ಸರ್ಕಾರಿ ಕಚೇರಿಗಳು ಮುಚ್ಚಿದವು, ಸ್ಟಾಕ್ ಮಾರುಕಟ್ಟೆಯೂ ಸ್ತಬ್ದಗೊಂಡಿತು. ಇದು ದುಷ್ಕರ್ಮಿಯ ಕುಕೃತ್ಯ ಆಗಿರಬಹುದು ಎಂಬುದು ಅಧಿಕಾರಿಗಳ ಶಂಕೆ ಎಂದು ಮಹಾರಾಷ್ಟ್ರದ ಇಂಧನ ಸಚಿವ ನಿತೀನ್ ರಾವತ್ ಮಾಹಿತಿ ನೀಡಿದ್ದರು. ಆದರೆ, ಇದೀಗ ಆ ಕೆಲಸ ಚೀನೀ ಹ್ಯಾಕರ್ಸ್​ಗಳದ್ದು ಎಂಬ ಶಂಕೆ ಬಲವಾಗಿ ವ್ಯಕ್ತವಾಗುತ್ತಿದೆ. ಅಂತಾರಾಷ್ಟ್ರೀಯ ವರದಿಯೊಂದರ ಅಂಶವೂ ಈ ನಿಟ್ಟಿನಲ್ಲಿ ಬೊಟ್ಟು ಮಾಡಿ ತೋರಿಸಿದೆ. ಅಮೆರಿಕ ಮೂಲದ ‘ರೆಕಾರ್ಡೆಡ್ ಫ್ಯೂಚರ್’ ಎಂಬ ಕಂಪನಿ ನಡೆಸಿದ ವ್ಯಾಪಕ ಅಧ್ಯಯನದ ವೇಳೆ ಚೀನೀ ಹ್ಯಾಕರ್​ಗಳ ಗುಂಪುಗಳು ಭಾರತದ 12ಕ್ಕೂ ಹೆಚ್ಚು ಸರ್ಕಾರಿ ಸಂಸ್ಥೆಗಳ ಸಿಸ್ಟಂಗಳನ್ನ ಹ್ಯಾಕ್ ಮಾಡಿವೆ ಎಂದು ಹೇಳಿದೆ. ಕಳೆದ ವರ್ಷ, ಅಂದರೆ 2020ರ ಮಧ್ಯ ಭಾಗದಲ್ಲಿ ಭಾರತೀಯ ಸರ್ಕಾರಿ ಸಂಸ್ಥೆಗಳ ಸಿಸ್ಟಂಗಳಿಗೆ ಮಾಲ್​ವೇರ್​ಗಳನ್ನ ಬಿಟ್ಟು ದಿಕ್ಕುತಪ್ಪಿಸುವ ಕೆಲಸ ಮಾಡಿವೆ ಎಂದು ಈ ಅಧ್ಯಯನದ ವರದಿ ಹೇಳಿದೆ. ಅಚ್ಚರಿ ಎಂದರೆ, ಚೀನಾದ ಪಿಎಲ್​ಎ ಸೇನೆ ಲಡಾಖ್​ನಲ್ಲಿ ಭಾರತದ ಗಡಿಭಾಗವನ್ನ ಅತಿಕ್ರಮಿಸುವ ಕೆಲಸ ಆರಂಭಿಸಿದ್ದೂ ಇದೇ ಅವಧಿಯಲ್ಲಿ.

ಭಾರತೀಯ ಸಿಸ್ಟಂಗಳನ್ನ ಹ್ಯಾಕ್ ಮಾಡಿದ್ದ ಚೀನೀ ಹ್ಯಾಕರ್ಸ್ ಗುಂಪುಗಳಲ್ಲಿ ರೆಡ್ ಇಕೋ (Red Echo) ಕೂಡ ಇದೆ. ಇವು ಚೀನಾದ ಗುಪ್ತಚರ ಮತ್ತು ಭದ್ರತಾ ಸಂಸ್ಥೆಯಾದ ಎಂಎಸ್​ಎಸ್ ಹಾಗೂ ಪಿಎಲ್​ಎ ಸೇನೆಗೆ ಕೆಲಸ ಮಾಡುತ್ತವೆ. ಭಾರತದ ವಿದ್ಯುತ್ ವ್ಯವಸ್ಥೆಯನ್ನ ಸ್ಥಗಿತಗೊಳಿಸುವ ಚಿತಾವಣೆ ನಡೆದಿರುವುದು ಸ್ಪಷ್ಟವಾಗಿದೆ. ಇವು ಹ್ಯಾಕ್ ಮಾಡಿದ ಕಂಪನಿಗಳಲ್ಲಿ ಬಹುತೇಕವು ವಿದ್ಯುತ್ ಉತ್ಪಾದನೆ ಮತ್ತು ವಿತರಣೆಗೆ ಸಂಬಂಧಿಸಿದ ಘಟಕಗಳೇ ಆಗಿವೆ.

ಇದನ್ನೂ ಓದಿ: ಮಹಿಳಾ ಐಪಿಎಸ್ ಅಧಿಕಾರಿಗೆ ಲೈಂಗಿಕ ಕಿರುಕುಳ: ರಾಜೇಶ್ ದಾಸ್ ವಿರುದ್ಧ ಎಫ್ಐಆರ್ ದಾಖಲು

ಪವರ್ ಸಿಸ್ಟಂ ಅಪರೇಷನ್ ಕಾರ್ಪೊರೇಷನ್ ಲಿ, ಎನ್​ಟಿಪಿಸಿ, ಪ್ರಮುಖ ಘಟಕ, ಎನ್​ಟಿಪಿಸಿಯ ಕೂಡಗಿ ವಿದ್ಯುತ್ ಘಟಕ, ವೆಸ್ಟರ್ನ್ ರೀಜನಲ್ ಲೋಡ್ ಡಿಸ್ಪಾಚ್ ಸೆಂಟರ್, ತೆಲಂಗಾಣ ಸ್ಟೇಟ್ ಲೋಡ್ ಡಿಸ್ಪಾಚ್ ಸೆಂಟರ್, ಡೆಲ್ಲಿ ಸ್ಟೇಟ್ ಲೋಡ್ ಡಿಸ್ಪಾಚ್ ಸೆಂಟರ್ ಸೇರಿ ಹ್ಯಾಕ್ ಆದ ವಿದ್ಯುತ್ ಘಟಕಗಳೆಲ್ಲವೂ ವಿದ್ಯುತ್ ಪೂರೈಕೆ ವಿಭಾಗದಲ್ಲಿ ಬಹಳ ಮಹತ್ವದ ಘಟಕಗಳೆನ್ನಲಾಗಿದೆ. ಹಾಗೆಯೇ, ವಿಒ ಚಿದಂಬರನಾರ್ ಬಂದರು ಮತ್ತು ಮುಂಬೈ ಪೋರ್ಟ್ ಟ್ರಸ್ಟ್ ಕಂಪನಿಗಳ ಸಿಸ್ಟಂಗಳನ್ನೂ ಚೀನೀ ಗುಂಪುಗಳು ಹ್ಯಾಕ್ ಮಾಡಿದ್ದು ತಿಳಿದುಬಂದಿದೆ.

ಈ ಬಗ್ಗೆ ಭಾರತ ಸರ್ಕಾರದಿಂದ ಇನ್ನೂ ಅಧಿಕೃತ ಮಾಹಿತಿ ಅಥವಾ ಪ್ರತಿಕ್ರಿಯೆ ಬರಬೇಕಿದೆ. ಈ ಅಧ್ಯಯನ ನಡೆಸಿದ Recorded Future ಸಂಸ್ಥೆಯು ಜಾಗತಿಕವಾಗಿ ವಿವಿಧ ದೇಶಗಳು ಕೈಗೊಳ್ಳುವ ಸೈಬರ್ ಕ್ರಮಗಳ ಮೇಲೆ ನಿಗಾ ಇರಿಸುವ ಕೆಲಸ ಮಾಡುತ್ತದೆ. ಭಾರತದ ಘಟಕಗಳ ಮೇಲೆ ಮಾಲ್​ವೇರ್ (ವೈರಸ್) ಹರಿಬಿಟ್ಟ ಹ್ಯಾಕರ್​ಗಳು ಚೀನಾ ಸರ್ಕಾರ ಬೆಂಬಲಿತ ಗುಂಪುಗಳಿಗೆ ಸೇರಿವೆ ಎಂಬುದು ಈ ಕಂಪನಿಯ ಅಭಿಪ್ರಾಯ.
Published by: Vijayasarthy SN
First published: March 1, 2021, 2:29 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories