ವಿಶ್ವದ ಅತ್ಯಂತ ಪ್ರತಿಷ್ಠಿತ ಮತ್ತು ದುಬಾರಿ ಕಾರಲ್ಲಿ ಒಂದು ಎಂದರೆ ಅದು ಲ್ಯಾಂಬೊರ್ಗಿನಿ. ಈ ಕಾರನ್ನು ತಗೋಳೋ ದುಡ್ಡಲ್ಲಿ ಜನ ಹತ್ತಾರು ಮನೆಗಳನ್ನು ಕಟ್ಟಬಹುದು, ಅಷ್ಟು ಬೆಲೆಬಾಳುವ ಕಾರಿದು. ಇಷ್ಟು ಬೆಲೆ ಬಾಳುವ ಕಾರನ್ನು ಇಲ್ಲೊಬ್ಬ ಯೂಟ್ಯೂಬರ್ ಪುಡಿಪುಡಿ ಮಾಡಿದ್ದಾನೆ. ಹೌದು, ಮಿಖಾಯಿಲ್ ಲಿಟ್ವಿನ್ ಎಂಬ ಹೆಸರಿನಿಂದ ಜನಪ್ರಿಯವಾಗಿರುವ ರಷ್ಯಾದ ಯೂಟ್ಯೂಬರ್ (Russian YouTuber) ಬಿಳಿ ಲ್ಯಾಂಬೊರ್ಗಿನಿ (white Lamborghini) ಉಡೀಸ್ ಎಸ್‌ಯುವಿಯನ್ನು ಸಂಪೂರ್ಣವಾಗಿ ನಜ್ಜುಗುಜ್ಜು ಮಾಡಿದ್ದು, ಸಂಪೂರ್ಣ ಘಟನೆಯನ್ನು ಮೊಬೈಲ್‌ನಲ್ಲಿ (Mobile) ಸೆರೆ ಹಿಡಿದು ತನ್ನ ಸಾಮಾಜಿಕ ಜಾಲತಾಣಗಳಲ್ಲಿ (Social Media) ಖಾತೆಯಲ್ಲಿ ಹಂಚಿಕೊಂಡಿದ್ದಾನೆ. ಮಿಖಾಯಿಲ್ ಲಿಟ್ವಿನ್ ನಾಶಮಾಡಿದ ಕಾರು ₹ 3.15 ಕೋಟಿಯ ಆರಂಭಿಕ ಬೆಲೆಯನ್ನು ಹೊಂದಿರುವ ಅಲ್ಟ್ರಾ-ಐಷಾರಾಮಿ ಲ್ಯಾಂಬೊರ್ಗಿನಿ ಕಾರು. ಅರೇ ಇಷ್ಟೆಲ್ಲಾ ಕೋಟಿ ಮೌಲ್ಯದ ಕಾರನ್ನು ಯಾಕೆ ಹೀಗೆ ಮಾಡಿದ್ದಾನೆ ಈತ ಅಂತಾ ನಿಮಗೆ ಪ್ರಶ್ನೆ ಬಂದಿರಬಹುದು ಅಲ್ವಾ? ಮಿಖಾಯಿಲ್ ಲಿಟ್ವಿನ್ ಹೀಗೆ ಮಾಡಲು ಅದರ ಹಿಂದೆ ಒಂದು ಕಾರಣವಿದೆಯಂತೆ.
ಲ್ಯಾಂಬೋರ್ಗಿನಿ ಕಾರನ್ನು ನಜ್ಜುಗುಜ್ಜು ಮಾಡಿದರ ಹಿಂದಿನ ಕಾರಣವೇನು?
ಮಿಖಾಯಿಲ್ ಲಿಟ್ವಿನ್ ಓರ್ವ ಜನಪ್ರಿಯ ಯುಟ್ಯೂಬರ್. ಹಲವು ಉತ್ಪನ್ನಗಳ ಕಂಪನಿಗಳು ಇವರಿಗೆ ತಮ್ಮ ಬ್ರ್ಯಾಂಡನ್ನು ಪ್ರಚಾರ ಮಾಡುವಂತೆ ವಿನಂತಿಸಿಕೊಳ್ಳುತ್ತವೆ. ಅದಕ್ಕಾಗಿ ಕೆಲ ವಿಶೇಷ ಕಟೆಂಟ್, ಐಡಿಯಾ, ವಿಭಿನ್ನವಾಗಿ ತೋರಿಸಬೇಕು ಎಂಬ ನಿಟ್ಟಿನಲ್ಲಿ ಆ ಬ್ರ್ಯಾಂಡ್‌ನ ಪ್ರಚಾರಕ್ಕೆ ಇಳಿಯುತ್ತಾರೆ. ಆದರೆ ಮಿಖಾಯಿಲ್ ಲಿಟ್ವಿನ್ ಬ್ರ್ಯಾಂಡ್ ಒಂದರ ಜಾಹೀರಾತನ್ನು ಬಹಳನೇ ವಿಶೇಷವಾಗಿ ಮಾಡಿದ್ದಾರೆ.
ಎನರ್ಜಿ ಡ್ರಿಂಕ್ ಪ್ರಚಾರಕ್ಕಾಗಿ ಲ್ಯಾಂಬೋರ್ಗಿನಿ ಕಾರೇ ಉಡೀಸ್
ಹೌದು, ಒಂದು ಎನರ್ಜಿ ಡ್ರಿಂಕ್ ಬ್ರ್ಯಾಂಡ್ ಪ್ರಚಾರಕ್ಕಾಗಿ ಮೂರು ಕೋಟಿ ಮೌಲ್ಯದ ಕಾರನ್ನೇ ಪುಡಿಪುಡಿ ಮಾಡಿದ್ದಾನೆ ನೋಡಿ. ಲಿಟ್ವಿನ್‌ಗೆ ಎನರ್ಜಿ ಡ್ರಿಂಕ್ ಬ್ರ್ಯಾಂಡ್, ಲಿಟ್ ಎನರ್ಜಿ ಪ್ರಚಾರಕ್ಕಾಗಿ ಆಫರ್ ಬಂದಿತ್ತು. ಇದನ್ನು ವಿಶೇಷವಾಗಿ ಹೊರತರಲು ಹೋಗಿ ಕಾರನ್ನೇ ಛಿದ್ರ ಮಾಡಿದ್ದಾನೆ. ಈ ವಿಡಿಯೋವನ್ನು ಲಿಟ್ವಿನ್ ಯೂಟ್ಯೂಬ್‌ನಲ್ಲಿ, ತನ್ನ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾನೆ. ವಿಡಿಯೋದಲ್ಲಿ ಕ್ರೇನ್‌ನಿಂದ ಒಂದು ಭಾರವಾದ ವಸ್ತು ಕಾರು ಮೇಲೆ ಬೀಳುವುದನ್ನು ಕಾಣಬಹುದು. ಇಲ್ಲಿ ಲಿಟ್ ಎನರ್ಜಿ ಡ್ರಿಂಕ್‌ನ ದೊಡ್ಡ ಮತ್ತು ಭಾರವಾದ ಕ್ಯಾನ್ ತಯಾರಿಸಿದ್ದು, ಅದನ್ನು ಲ್ಯಾಂಬೋರ್ಗಿನಿ ಕಾರ್ ಮೇಲೆ ಬಿಡಲಾಗಿದೆ. ದೊಡ್ಡ ಗಾತ್ರದ ಎನರ್ಜಿ ಡ್ರಿಂಕ್ ಗಾತ್ರದ ಕ್ಯಾನ್ ಕ್ರೇನ್‌ನಿಂದ ಬೀಳುತ್ತಿದ್ದಂತೆ ₹ 3.15 ಕೋಟಿಯ ಲ್ಯಾಂಬೋರ್ಗಿನಿ ಕಾರು ಪೀಸ್ ಪೀಸ್ ಆಗಿದೆ. ಇಲ್ಲಿ ಈ ಎನರ್ಜಿ ಡ್ರಿಂಕ್ ಎಷ್ಟು ಶಕ್ತಿಶಾಲಿಯಾಗಿದೆ ಎಂಬುದನ್ನು ತೋರಿಸುವ ಅರ್ಥದಲ್ಲಿ ಲಿಟ್ವಿನ್ ದುಬಾರಿ ಕಾರನ್ನು ಪುಡಿಪುಡಿ ಮಾಡಿದ್ದಾನೆ ಎನ್ನಬಹುದು.
View this post on Instagram
ಯುಟ್ಯೂಬರ್ ಲಿಟ್ವಿನ್ ಕೆಲವು ದಿನಗಳ ಹಿಂದೆ ವೀಡಿಯೊವನ್ನು ಅಪ್‌ಲೋಡ್ ಮಾಡಿದ್ದು, ಅಂದಿನಿಂದ ಇದು ಯೂಟ್ಯೂಬ್‌ನಲ್ಲಿ 7 ಮಿಲಿಯನ್ ವೀಕ್ಷಣೆಗಳು ಮತ್ತು 700,000 ಕ್ಕೂ ಹೆಚ್ಚು ಲೈಕ್ಸ್‌ಗಳನ್ನು ಪಡೆದುಕೊಂಡಿದೆ. ಇಂಟರ್ನೆಟ್ ಬಳಕೆದಾರರಂತೂ ಕಾಮೆಂಟ್ ಮೂಲಕ ಕಾಮೆಂಟ್ ಬಾಕ್ಸ್ ಅನ್ನು ತುಂಬಿಸಿಬಿಟ್ಟಿದ್ದಾರೆ. ಕೆಲವರು ಲಿಟ್ವಿನ್ ಕೆಲಸಕ್ಕೆ ಉಗಿದು ಉಪ್ಪಿನಕಾಯಿ ಹಾಕಿದರೆ, ಇನ್ನೂ ಕೆಲವರು ಕೆಲಸದ ಶ್ರದ್ಧೆ ಎಂದಿದ್ದಾರೆ. ಕೆಲವರಿಗೇ ನಡೆಯುತ್ತಿರುವ ವಿದ್ಯಾಮಾನದಲ್ಲಿ ಬದುಕುವುದೇ ಕಷ್ಟವಾಗಿದೆ, ಆದರೆ ಕೆಲವರು ತಮ್ಮ ಹುಚ್ಚು ವಿಡಿಯೋಗಳ ವೀಕ್ಷಣೆಗಾಗಿ ಏನೆಲ್ಲಾ ಮಾಡುತ್ತಾರಪ್ಪಾ ಅಂತಾ ಕಾಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: Car Accident: ಬೆಂಗಳೂರಲ್ಲಿ ಹೈಫೈ ಲ್ಯಾಂಬೋರ್ಗಿನಿ ಆ್ಯಕ್ಸಿಡೆಂಟ್! ಕಂಬಕ್ಕೆ ಡಿಕ್ಕಿ ಹೊಡೆದು ಕಾರು ಬಿಟ್ಟು ಮಾಲೀಕ ಎಸ್ಕೇಪ್
ಒಳ್ಳೆಯವರು ನಿಮ್ಮ ಹಾಗೇ ವರ್ತಿಸುವುದಿಲ್ಲ. ಈ ಹಾಳು ಮಾಡಿದ ಹಣದಲ್ಲಿ ಎಷ್ಟೋ ಜನರಿಗೆ ಸಹಾಯ ಮಾಡಬಹುದಿತ್ತು ಎಂದು ಹಲವರು ಕಾಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ಇದು ಕೆಲಸದ ಮೇಲಿರುವ ಶ್ರದ್ಧೆ ಎಂದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ