ಇಟಾಹ್: 2019ರಲ್ಲಿ 16 ವರ್ಷದ ದಲಿತ ಬಾಲಕಿಯ (Dalit Girl) ಮೇಲೆ ನಡೆದಿದ್ದ ಸಾಮೂಹಿಕ ಅತ್ಯಾಚಾರದ (Sexual harassment) ವಿಡಿಯೋವನ್ನು 4 ವರ್ಷದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಆಘಾತಕಾರಿ ಘಟನೆ ಉತ್ತರಪ್ರದೇಶದ (Uttar Pradesh) ಇಟಾಹ್ (Itah) ಪ್ರದೇಶದಲ್ಲಿ ನಡೆದಿದೆ. 2019ರ ಮೇ ತಿಂಗಳಲ್ಲಿ ನಾಲ್ವರು ಕಾಮುಕರು ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದರು. ಅಂದು ವಿಡಿಯೋ ಮಾಡಿಕೊಂಡಿದ್ದು ರಾಕ್ಷಸರು ನಾಲ್ಕು ವರ್ಷದ ಬಳಿಕ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾರೆ.
ಕೃತ್ಯ ನಡೆದಾಗ ಬಾಲಕಿ 10ನೇ ತರಗತಿಯಲ್ಲಿ ಓದುತ್ತಿದ್ದಳು. ಆದರೆ ಆಕೆಯ ಪೋಷಕರು ಮತ್ತು ಕುಟುಂಬಸ್ಥರು ಮರ್ಯಾದೆಗೆ ಅಂಜಿ ಪೊಲೀಸರಿಗೆ ದೂರು ನೀಡಿರಲಿಲ್ಲ. ಅತ್ಯಾಚಾರ ನಡೆದ ಬಳಿಕ ಆಕೆಯನ್ನು ಶಾಲೆಗೂ ಕಳಿಸಿರಲಿಲ್ಲ. ಇದನ್ನೇ ಬಂಡವಾಳವನ್ನಾಗಿಸಿಕೊಂಡ ಕಾಮುಕರು ಪುನಃ ಆಕೆಯ ಮೇಲೆ ದೌರ್ಜನ್ಯ ಎಸಗಲು ಕಾಯುತ್ತಿದ್ದರು. ಈ ಮಧ್ಯೆ 2021ರಲ್ಲಿ ಆಕೆಗೆ ಮದುವೆ ಮಾಡಿ ಕಳುಹಿಸಿದ್ದರು.
ಇದನ್ನೂ ಓದಿ: Crime News: ಬಿಹಾರದಲ್ಲಿ ಪೈಶಾಚಿಕ ಕೃತ್ಯ! ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರಗೈದು ದುಪ್ಪಟ್ಟಾದಿಂದ ಕೊಲೆಗೆ ಯತ್ನ!
ಪುನಃ ಬಾಲ ಬಿಚ್ಚಿದ್ದ ರಾಕ್ಷಸರು
ಇತ್ತೀಚೆಗೆ ಪುನಃ ಮೂವರು ಕಾಮುಕರು ಬಾಲಕಿಯ ಮನೆಗೆ ತೆರಳಿ ಆಕೆಯ ಪೋಷಕರ ಬಳಿ ಪುನಃ ಅವರ ಮಗಳಿಗೆ ತಮ್ಮನ್ನು ಭೇಟಿಯಾಗುವಂತೆ ಸೂಚಿಸಿದ್ದಾರೆ. ಆದರೆ ಹುಡುಗಿ ಮತ್ತು ಆಕೆಯ ಪೋಷಕರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದು, ಇದರಿಂದ ಸೇಡು ತೀರಿಸಿಕೊಳ್ಳಲು ಮುಂದಾದ ಕಾಮುಕರು ಸಾಮೂಹಿಕ ಅತ್ಯಾಚಾರ ಕೃತ್ಯ ಎಸಗಿದಾಗ ಮಾಡಿಕೊಂಡಿದ್ದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಅಷ್ಟೇ ಅಲ್ಲದೇ ಕೃತ್ಯ ಎಸಗಿದ ಪ್ರಮುಖ ಅಪರಾಧಿ ಆ ವಿಡಿಯೋವನ್ನು ಹುಡುಗಿಯ ಅತ್ತೆಗೂ ಕಳಿಸಿ ಸಂಸಾರ ಒಡೆಯುವಂತೆ ಮಾಡಿದ್ದಾರೆ.
ದಲಿತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಪ್ರಮುಖ ಆರೋಪಿ ಊರಿನ ಮುಖಂಡನ ಪುತ್ರನಾಗಿದ್ದು, ಅಷ್ಟೇ ಅಲ್ಲದೇ, ಅತ್ಯಾಚಾರ ಕೃತ್ಯ ಮತ್ತು ಅದರ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಮುಕನ ಅಪ್ಪನ (ಊರಿನ ಮುಖಂಡ) ಮನೆಗೆ ಹೋಗಿ ದೂರು ನೀಡಲು ಮುಂದಾದಾಗ ಸಂತ್ರಸ್ತರನ್ನೇ ಅವಮಾನಿಸಿ ಜಾತಿ ನಿಂದನೆ ಮಾಡಿದ್ದಾರೆ. ಪ್ರಕರಣ ಸಂಬಂಧ ತಡವಾಗಿಯಾದರೂ ಹುಡುಗಿಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದು, ಸದ್ಯ ಪ್ರಮುಖ ಆರೋಪಿ ಊರ ಮುಖಂಡನ ಕಾಮುಕ ಪುತ್ರನನ್ನು ಪೊಲೀಸರು ಬಂಧನ ಮಾಡಿದ್ದಾರೆ.
ಇದನ್ನೂ ಓದಿ: Vijayapura: ಥೂ, ಮನುಷ್ಯರಾ ನೀವು? 60 ವರ್ಷದ ವೃದ್ದೆಯನ್ನು ಅತ್ಯಾಚಾರಗೈದ ಯುವಕರು
ಈ ಬಗ್ಗೆ ಹುಡುಗಿಯ ತಂದೆ ಪೊಲೀಸರಿಗೆ ನೀಡಿದ ದೂರಿನಲ್ಲಿ, ‘ಅನೇಕ ನೋವು ಅಪಮಾನವನ್ನು ಸಹಿಸಿಯೂ, ಮರ್ಯಾದೆಗೆ ಅಂಜಿ ನಮ್ಮ ಮಗಳನ್ನು ಭವಿಷ್ಯದ ಹಿತದೃಷ್ಟಿಯಿಂದ ಅವಳಿಗೆ ಮದುವೆ ಮಾಡಿಸಿ ಈ ಊರಿನಿಂದಲೇ ದೂರ ಕಳಿಸಿಕೊಟ್ಟಿದ್ದೆವು. ಮದುವೆಯಾದ ನಂತರ ಹೇಗೋ ಖುಷಿಯಾಗಿದ್ದಳು. ಆದರೆ ಆಕೆಯ ವೈವಾಹಿಕ ಜೀವನಕ್ಕೆ ಅಡ್ಡಿ ತರುವುದನ್ನು ಆಕ್ಷೇಪಿಸಿ ಊರಿನ ಮಾಜಿ ಮುಖಂಡನ ಮನೆಗೆ ದೂರು ನೀಡಲು ತೆರಳಿದ್ದಾಗ ನನ್ನನ್ನು ಅವಮಾನಿಸಿ ಜಾತಿ ನಿಂದನೆ ಮಾಡಿದ್ದಾರೆ. ಕಾನೂನು ಕ್ರಮ ಅಂತಾ ಹೋದರೆ ಕೊಲೆ ಮಾಡೋದಾಗಿ ಬೆದರಿಕೆ ಹಾಕಿದ್ದಾರೆ. ಈಗ ನಾನು ಎಫ್‌ಐಆರ್ ಹಾಕಿದ ಬಳಿಕ ದೂರು ವಾಪಸ್ ಪಡೆಯುವಂತೆ ಆರೋಪಿಗಳ ಕುಟುಂಬಸ್ಥರು ಒತ್ತಡ ಹೇರುತ್ತಿದ್ದಾರೆ. ದೂರು ಹಿಂಪಡೆಯದಿದ್ದರೆ ನಿಮ್ಮನ್ನು ಗ್ರಾಮದಿಂದ ಹೊರಗೆ ಹಾಕಬೇಕಾದೀತು ಎಂದು ಭಯ ಪಡಿಸುತ್ತಿದ್ದಾರೆ ಎಂದು ಹುಡುಗಿಯ ತಂದೆ ಆತಂಕ ವ್ಯಕ್ತಪಡಿಸಿದ್ದಾರೆ.
ಸದ್ಯ ಪ್ರಕರಣ ಸಂಬಂಧ ದೂರು ದಾಖಲಿಸಿಕೊಂಡಿರುವ ಉತ್ತರ ಪ್ರದೇಶ ಪೊಲೀಸರು ತನಿಖೆ ಕೈಗೊಂಡಿರುವುದಾಗಿ ಹೇಳಿದ್ದಾರೆ. ಯಾವ ಮಟ್ಟಿಗೆ ಸಂತ್ರಸ್ತ ಹುಡುಗಿಗೆ ನ್ಯಾಯ ಸಿಗುತ್ತೆ ಅನ್ನೋದನ್ನು ಕಾದು ನೋಡಬೇಕಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ