ಮುಂಬೈ(ಜ. 24): 'ಟಿಕೆಟ್ ರಹಿತ ಪ್ರಯಾಣ, ದಂಡಕ್ಕೆ ಆಹ್ವಾನ' ಎಂಬ ಸಾಲನ್ನು ಬಸ್ ಮತ್ತು ರೈಲುಗಳಲ್ಲಿ ನೋಡಿರುತ್ತೇವೆ. ಟಿಕೆಟ್ ಇಲ್ಲದೇ ಪ್ರಯಾಣಿಸುವವರು ಒಂದು ವೇಳೆ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದರೆ ಅಧಿಕ ದಂಡ ಕಟ್ಟಬೇಕಾದ ಪೇಚಿಗೆ ಸಿಲುಕುತ್ತಾರೆ. ಹೀಗೆ ರೈಲಿನಲ್ಲಿ ಟಿಕೆಟ್ ಇಲ್ಲದೇ ಪ್ರಯಾಣಿಸುವ ಜನರ ಬಳಿ ಅಧಿಕಾರಿಯೊಬ್ಬರು ಸಂಗ್ರಹ ಮಾಡಿರುವ ದಂಡದ ಮೊತ್ತ ಕೇಳಿದರೆ ನೀವು ಶಾಕ್ ಆಗ್ತೀರಾ..
ಸೆಂಟ್ರಲ್ ರೈಲ್ವೆ ಫ್ಲೈಯಿಂಗ್ ಸ್ವ್ಯಾಡ್ನ ಭಾಗವಾಗಿರುವ ಟ್ರಾವೆಲಿಂಗ್ ಟಿಕೆಟ್ ಇನ್ಸ್ಪೆಕ್ಟರ್ ಎಸ್.ಬಿ. ಗಲಾಂಡೆ ಕಳೆದ ವರ್ಷ ಅತೀ ಹೆಚ್ಚು ದಂಡ ಸಂಗ್ರಹಿಸಿರುವ ಅಧಿಕಾರಿಯಾಗಿದ್ದಾರೆ. 2019ನೇ ವರ್ಷದಲ್ಲಿ ಒಟ್ಟು 22,680 ಟಿಕೆಟ್ ರಹಿತ ಪ್ರಯಾಣಿಕರಿಂದ 1.51 ಕೋಟಿ ರೂ. ದಂಡವನ್ನು ಸಂಗ್ರಹಿಸಿದ್ದಾರೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.
ಎಂಎಂ ಶಿಂಧೆ ಮತ್ತು ಡಿ ಕುಮಾರ್ ಮತ್ತು ರವಿಕುಮಾರ್ ಜಿ(ಮುಂಬೈ ವಿಭಾಗದ ಇನ್ಸ್ಪೆಕ್ಟರ್) - ರೈಲ್ವೆ ಇಲಾಖೆಯ ಈ ಮೂವರು ಟಿಕೆಟ್ ಇನ್ಸ್ಪೆಕ್ಟರ್ಗಳು ಸಹ 2019ರಲ್ಲಿ ಟಿಕೆಟ್ ರಹಿತ ಪ್ರಯಾಣಿಕರಿಂದ ಒಂದು ಕೋಟಿಗೂ ಅಧಿಕ ದಂಡವನ್ನು ಸಂಗ್ರಹಿಸಿದ್ದಾರೆ. ಗಲಾಂಡೆ, ಶಿಂಧೆ ಮತ್ತು ಡಿ ಕುಮಾರ್ ದೂರ ಪ್ರಯಾಣದ ರೈಲುಗಳಲ್ಲಿ ದಂಡ ಸಂಗ್ರಹಿಸಿದರೆ, ರವಿಕುಮಾರ್ ಜಿ ಮುಂಬೈ ಸಬ್ ಅರ್ಬನ್ ನೆಟ್ವರ್ಕ್ಗೆ ಒಳಪಡುವ ರೈಲುಗಳಲ್ಲಿ ದಂಡ ಸಂಗ್ರಹಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Republic Day 2020: ಬ್ರೆಜಿಲ್ ಅಧ್ಯಕ್ಷ ಜೈರ್ ಬೊಲ್ಸೊನಾರೋ ಈ ಬಾರಿಯ ಗಣರಾಜ್ಯೋತ್ಸವಕ್ಕೆ ಮುಖ್ಯ ಅತಿಥಿ
ಟ್ರಾವೆಲಿಂಗ್ ಟಿಕೆಟ್ ಇನ್ಸ್ಪೆಕ್ಟರ್ಗಳು ಟಿಕೆಟ್ ಇಲ್ಲದೇ ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಂದ ದಂಡ ಸಂಗ್ರಹಿಸಲು ನೇಮಕಗೊಂಡಿರುತ್ತಾರೆ. ಸ್ಥಳೀಯ ಮತ್ತು ದೂರ ಪ್ರಯಾಣದ ರೈಲುಗಳಲ್ಲಿ ಟಿಕೆಟ್ ಪರಿಶೀಲಿಸುತ್ತಾರೆ. ಶಿಂಧೆ 16035 ಟಿಕೆಟ್ ರಹಿತ ಪ್ರಯಾಣಿಕರಿಂದ 1.07 ಕೋಟಿ, ಡಿ.ಕುಮಾರ್ 15,234 ಟಿಕೆಟ್ ರಹಿತ ಪ್ರಯಾಣಿಕರಿಂದ 1.02 ಕೋಟಿ ಮತ್ತು ರವಿಕುಮಾರ್ 20657 ಟಿಕೆಟ್ ರಹಿತ ಪ್ರಯಾಣಿಕರಿಂದ 1.45 ಕೋಟಿ ದಂಡವನ್ನು ಸಂಗ್ರಹಿಸಿದ್ದಾರೆ.
"ಅತಿ ಹೆಚ್ಚು ದಂಡ ಸಂಗ್ರಹ ಮಾಡಿರುವ ಅಧಿಕಾರಿಗಳನ್ನು ಸನ್ಮಾನಿಸಿ ನಗದು ಬಹುಮಾನ ನೀಡಿದ್ದೇವೆ. ಅವರ ಕೊಡುಗೆಯನ್ನು ಪರಿಗಣಿಸಿ ಪ್ರಧಾನ ವ್ಯವಸ್ಥಾಪಕರಿಂದ ಪ್ರಮಾಣಪತ್ರವನ್ನೂ ಸಹ ನೀಡಿದ್ದೇವೆ," ಎಂದು ಸೆಂಟ್ರಲ್ ರೈಲ್ವೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಶಿವಾಜಿ ಸುತರ್ ಹೇಳಿದರು.
ಜಾಗತಿಕ ಭ್ರಷ್ಟಾಚಾರ ಸೂಚ್ಯಂಕ; ಭಾರತಕ್ಕೆ 80ನೇ ಸ್ಥಾನ
2019ರಲ್ಲಿ ಸೆಂಟ್ರಲ್ ರೈಲ್ವೆ 37.64 ಲಕ್ಷ ಟಿಕೆಟ್ ರಹಿತ ಪ್ರಕರಣಗಳಲ್ಲಿ 192.51 ಕೋಟಿ ರೂ. ದಂಡವನ್ನು ಸಂಗ್ರಹಿಸಿತ್ತು. 2018ರಲ್ಲಿ 34.09 ಲಕ್ಷ ಟಿಕೆಟ್ ರಹಿತ ಪ್ರಯಾಣಿಕರಿಂದ 168.30 ಕೋಟಿ ದಂಡ ಸಂಗ್ರಹ ಮಾಡಲಾಗಿತ್ತು. ಟಿಕೆಟ್ ರಹಿತ ಪ್ರಯಾಣಿಕರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ ಎಂದು ಸೆಂಟ್ರಲ್ ರೈಲ್ವೆ ತಿಳಿಸಿದೆ. 2018ನೇ ವರ್ಷಕ್ಕೆ ಹೋಲಿಸಿದರೆ, 2019ರಲ್ಲಿ ಟಿಕೆಟ್ ರಹಿತ ಪ್ರಯಾಣಿಕರಿಂದ ಸಂಗ್ರಹಿಸಿದ ಆದಾಯ ಶೇ.14.39ರಷ್ಟು ಹೆಚ್ಚಿದೆ. ಟಿಕೆಟ್ ರಹಿತ ಪ್ರಕರಣಗಳು ಶೇ.10.41 ರಷ್ಟು ಹೆಚ್ಚಾಗಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ