Vikas Dubey - ‘ಎನ್​ಕೌಂಟರ್​ನಲ್ಲಿ ವಿಕಾಸ್ ಡುಬೇ ಹತ್ಯೆಯಾಗಬಹುದು’ – ಒಂದು ದಿನ ಮುಂಚೆ ಸಲ್ಲಿಕೆಯಾಗಿತ್ತು ಪಿಐಎಲ್

ನಕಲಿ ಎನ್​ಕೌಂಟರ್​ನಲ್ಲಿ ಪೊಲೀಸರು ವಿಕಾಸ್ ದುಬೆಯನ್ನ ಹತ್ಯೆಗೈಯ್ಯುವ ಸಾಧ್ಯತೆ ಇದೆ ಎಂದು ವಕೀಲ ಘನಶ್ಯಾಮ್ ಉಪಾಧ್ಯಾಯ್ ಅವರು ಸುಪ್ರೀಂ ಕೋರ್ಟ್​ಗೆ ಸಲ್ಲಿಸಿದ್ದ ಪಿಐಎಲ್​ನಲ್ಲಿ ಅಂದಾಜಿಸಿದ್ದರು.

ಸುಪ್ರೀಂ ಕೋರ್ಟ್​​

ಸುಪ್ರೀಂ ಕೋರ್ಟ್​​

 • Share this:
  ನವದೆಹಲಿ(ಜುಲೈ 10): ಇವತ್ತು ಶುಕ್ರವಾರ ಬೆಳಗ್ಗೆ ಉತ್ತರ ಪ್ರದೇಶದ ಗ್ಯಾಂಗ್​ಸ್ಟರ್ ವಿಕಾಶ್ ದುಬೇ ಎನ್​ಕೌಂಟರ್ ಆಗಿರುವುದು ನಾನಾ ಚರ್ಚೆಗಳಿಗೆ ಕಾರಣವಾಗಿದೆ. ಇಡೀ ಘಟನೆಯ ಸುತ್ತು ಅನುಮಾನಗಳ ಹುತ್ತ ಬೆಳೆದಿವೆ. ವಿಕಾಸ್ ದುಬೇಯನ್ನ ಪೊಲೀಸರೇ ಸಾಯಿಸುತ್ತಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಕೆಲ ಜನರು ನುಡಿದಿದ್ದ ಭವಿಷ್ಯ ನಿಜವಾಗಿದೆ. ಕುತೂಹಲವೆಂದರೆ, ಎನ್​ಕೌಂಟರ್ ಆಗುವ ಒಂದು ದಿನ ಮುಂಚೆ, ಅಂದರೆ ನಿನ್ನೆ ಗುರುವಾರದಂದು ವಿಕಾಸ್ ದುಬೆಯ ಎನ್​ಕೌಂಟರ್ ಆಗಬಹುದು ಎಂದು ವಕೀಲರೊಬ್ಬರು ಸರ್ವೋಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ನಕಲಿ ಎನ್​ಕೌಂಟರ್​ನಲ್ಲಿ ಪೊಲೀಸರು ವಿಕಾಸ್ ದುಬೆಯನ್ನ ಹತ್ಯೆಗೈಯ್ಯುವ ಸಾಧ್ಯತೆ ಇದೆ ಎಂದು ವಕೀಲ ಘನಶ್ಯಾಮ್ ಉಪಾಧ್ಯಾಯ್ ಅವರು ಸುಪ್ರೀಂ ಕೋರ್ಟ್​ಗೆ ಸಲ್ಲಿಸಿದ್ದ ಪಿಐಎಲ್​ನಲ್ಲಿ ಅಂದಾಜಿಸಿದ್ದರು.

  “ವಿಕಾಸ್ ಡುಬೆಯ ಸಹಚರರು ಹಾಗೂ ಪೊಲೀಸ್ ಹತ್ಯಾಕಾಂಡ ಘಟನೆಯ ಆರೋಪಿಗಳನ್ನ ಉತ್ತರ ಪ್ರದೇಶ ಪೊಲೀಸರು ಎನ್​ಕೌಂಟರ್ ಮಾಡಿದ್ದಾರೆ. ವಿಕಾಸ್ ದುಬೇಗೂ ಅದೇ ಗತಿ ಆಗುತ್ತದೆ. ಅವರ ಸಹಚರರ ಎನ್​ಕೌಂಟರ್​ಗೆ ಕಥೆ ಹೆಣೆದಂತೆ ಈತನ ಕೊಲೆಗೆ ಪೊಲೀಸರು ಕಥೆ ಕಟ್ಟುತ್ತಾರೆ” ಎಂದು ಉಪಾಧ್ಯಾಯ್ ಅವರು ತಮ್ಮ ಅರ್ಜಿಯಲ್ಲಿ ಆತಂಕ ವ್ಯಕ್ತಪಡಿಸಿದ್ದರು.

  ತಮಗೆ ವಿಕಾಶ್ ದುಬೇ ಬಗ್ಗೆ ಯಾವುದೇ ಅನುಕಂಪ ಇಲ್ಲ. ಆದರೆ, ಅಫ್ಜಲ್ ಗುರು ಮತ್ತು ಅಜ್ಮಲ್ ಕಸಬ್​ರಂಥವರನ್ನೇ ಕಾನೂನು ರೀತಿಯಲ್ಲಿ ವಿಚಾರಣೆಗೆ ಅವಕಾಶ ಮಾಡಿಕೊಟ್ಟ ದೇಶ ಇದು. ಉತ್ತರ ಪ್ರದೇಶ ಪೊಲೀಸರು ತಾವೇ ಕಾನೂನು ಕೈಗೆತ್ತಿಕೊಂಡು ವಿಕಾಸ್ ದುಬೆಯನ್ನು ಸಾಯಿಸುವಂತಾಗಬಾರದು ಎಂದವರು ವಾದಿಸಿದ್ದರು.

  ಇದನ್ನೂ ಓದಿ: ICSE, ISC Results 2020: ಐಸಿಎಸ್ಇ 10ನೇ ತರಗತಿ ಪರೀಕ್ಷೆಯಲ್ಲಿ ಶೇ. 99.33, ಐಎಸ್​ಸಿ 12ನೇ ತರಗತಿ ಪರೀಕ್ಷೆಯಲ್ಲಿ ಶೇ. 96.84 ಫಲಿತಾಂಶ  ವಿಕಾಸ್ ದುಬೇ ವಿರುದ್ಧ 60 ಕ್ರಿಮಿನಲ್ ಪ್ರಕರಣಗಳಿದ್ದವು. ಆದರೆ, ಜಾಮೀನು ಪಡೆಯಲು ಆತ ಯಶಸ್ವಿಯಾಗಿದ್ದ. ಪೊಲೀಸರು ತಮ್ಮ ಕರ್ತವ್ಯ ನಿಭಾಯಿಸದೇ ಭ್ರಷ್ಟಾಚಾರದಲ್ಲಿ ಮುಳುಗಿದ್ದರಿಂದ ಆತನಿಗೆ ಜಾಮೀನು ಹೊಂದಲು ಸಾಧ್ಯವಾಗಿತ್ತು ಎಂದು ಉತ್ತರ ಪ್ರದೇಶ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿರುವ ಘನಶಾಮ್ ಉಪಾಧ್ಯಾಯ್, ಗ್ಯಾಂಗ್​ಸ್ಟರ್​ನ ಸಹಚರರ ಹತ್ಯೆ, ಆತನ ಮನೆ, ವಾಣಿಜ್ಯ ಆಸ್ತಿಗಳ ಧ್ವಂಸ ಘಟನೆಯನ್ನು ಕೋರ್ಟ್ ಮೇಲುಸ್ತುವಾರಿಯಲ್ಲಿ ಸಿಬಿಐ ತನಿಖೆಗೆ ವಹಿಸಬೇಕು ಎಂದು ಒತ್ತಾಯಿಸಿದ್ದರು. ಅಲ್ಲದೇ, ವಿಕಾಸ್ ದುಬೇ ಜೊತೆ ಪೊಲೀಸರು ಮತ್ತು ರಾಜಕಾರಣಿಗಳು ಹೊಂದಿದ್ದ ಸಂಬಂಧದ ಬಗ್ಗೆಯೂ ತನಿಖೆಯಾಗಬೇಕು ಎಂದು ಅವರು ಕೇಳಿಕೊಂಡಿದ್ದರು.

  ಜುಲೈ 2ರಂದು ಉತ್ತರ ಪ್ರದೇಶದ ಹಮೀರ್​ಪುರ್​ನ ಗ್ಯಾಂಗ್​ಸ್ಟರ್ ವಿಕಾಸ್ ದುಬೇಯ ಮನೆಯನ್ನು ರೇಡ್ ಮಾಡಲು ಪೊಲೀಸರ ತಂಡವೊಂದು ತೆರಳಿತ್ತು. ಈ ವೇಳೆ ದುಬೇ ಸಹಚರರು ಮನೆಯಿಂದಲೇ ಪೊಲೀಸರ ಮೇಲೆ ಗುಂಡಿನ ದಾಳಿ ಎಸಗಿದ್ದರು. ಈ ಘಟನೆಯಲ್ಲಿ 8 ಮಂದಿ ಪೊಲೀಸರು ಬಲಿಯಾದರೆ, ಇನ್ನೂ ಕೆಲವರು ಗಾಯಗೊಂಡಿದ್ದರು. ಆ ಬಳಿಕ ವಿಕಾಸ್ ದುಬೇ ಹಾಗೂ ಆತನ ಗ್ಯಾಂಗ್ ತಪ್ಪಿಸಿಕೊಂಡಿತ್ತು.

  ಇದನ್ನೂ ಓದಿ: Nepal Bans Indian News Channels: ನೇಪಾಳದಲ್ಲಿ ಭಾರತೀಯ ಮಾಧ್ಯಮಗಳಿಗೆ ನಿರ್ಬಂಧ

  ಈತನನ್ನು ಹಿಡಿಯಲು ಉತ್ತರ ಪ್ರದೇಶ ಸರ್ಕಾರ ಎಸ್​ಟಿಎಫ್ ವಿಶೇಷ ಪೊಲೀಸ್ ತಂಡವನ್ನ ಕಟ್ಟಿತು. ಈತನ ಕೆಲ ಸಹಚರರನ್ನು ಎನ್​ಕೌಂಟರ್​ನಲ್ಲಿ ಹತ್ಯೆ ಮಾಡಲಾಯಿತು. ಈತ ಮಧ್ಯ ಪ್ರದೇಶದ ಉಜ್ಜಯಿನಿಯಲ್ಲಿರುವ ಮಹಾಕಾಳ ಮಂದಿರಕ್ಕೆ ಬಂದಾಗ ನಿನ್ನೆ ಸಿಕ್ಕಿಬಿದ್ದಿದ್ದಾನೆ. ಮಧ್ಯ ಪ್ರದೇಶ ಪೊಲೀಸರು ಈತನನ್ನು ಉತ್ತರ ಪ್ರದೇಶ ಪೊಲೀಸರಿಗೆ ಒಪ್ಪಿಸಿದ್ದಾರೆ. ಈತನನ್ನು ಕಾನಪುರಕ್ಕೆ ಕರೆದೊಯ್ಯುವ ಮಾರ್ಗಮಧ್ಯೆ ಎನ್​ಕೌಂಟರ್ ಆಗಿದೆ.

  ವಿಕಾಸ್ ದುಬೆಯನ್ನು ಕರೆದೊಯ್ಯುವಾಗ ಕಾರು ಪಲ್ಟಿ ಹೊಡೆದಿದೆ. ಈ ವೇಳೆ ಈತ ಗಾಯಗೊಂಡ ಪೊಲೀಸರಿಂದ ಗನ್ ಕಸಿದುಕೊಂಡು ತಪ್ಪಿಸಿಕೊಳ್ಳಲು ಯತ್ನಸಿದ. ಆಗ ನಾವು ಆತನನ್ನು ಸುತ್ತುವರಿದೆವು. ಆತ ಶರಣಾಗಲು ನಿರಾಕರಿಸಿ ಗುಂಡು ಹೊಡೆಯಲು ಪ್ರಾರಂಭಿಸಿದ. ನಾವು ಆತ್ಮರಕ್ಷಣೆಗೆ ಗುಂಡು ಹೊಡೆಯಬೇಕಾಯಿತು ಎಂದು ಪೊಲೀಸರು ಹೇಳಿದ್ದಾರೆ.
  Published by:Vijayasarthy SN
  First published: