ನವದೆಹಲಿ: ಮೊದಲೆಲ್ಲಾ ಈ ವಿಮಾನಗಳಲ್ಲಿನ ವಿಡಿಯೋಗಳು ಒಳ್ಳೆಯ ಕಾರಣಕ್ಕೆ ಸುದ್ದಿ ಆಗಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದವು. ಆದರೆ ಇತ್ತೀಚಿನ ವಿಡಿಯೋಗಳು ಮಾತ್ರ ಪ್ರಯಾಣಿಕರಿಗೆ ವಿಮಾನ ಹತ್ತುವ ಮುಂಚೆ ಒಂದು ಬಾರಿ ಯೋಚನೆ ಮಾಡುವಂತೆ ಮಾಡುತ್ತವೆ ಅಂತ ಹೇಳಿದರೆ ತಪ್ಪಾಗುವುದಿಲ್ಲ ನೋಡಿ.
ಮೊದಲೆಲ್ಲಾ ವಿಮಾನದಲ್ಲಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿದ್ದು, ತಮ್ಮ ಗುರುಗಳನ್ನು ನೆನೆದು ವಿಮಾನದ ಸಿಬ್ಬಂದಿ ಭಾವುಕರಾಗಿದ್ದು, ಪಾನ್ ಅಗಿದು ಕಿಟಕಿಯಿಂದಾಚೆಗೆ ಉಗಿಯಬೇಕು ದಯವಿಟ್ಟು ಕಿಟಕಿ ತೆಗೆಯಿರಿ ಅಂತ ಹೇಳಿ ತಮಾಷೆ ಮಾಡಿದ ಪ್ರಯಾಣಿಕನ ವಿಡಿಯೋ ಹೀಗೆ ಹತ್ತಾರು ವಿಡಿಯೋಗಳು ವೈರಲ್ ಆಗಿದ್ದವು. ಅಲ್ಲದೇ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋಗಳು ಜನರನ್ನು ರಂಜಿಸಿದ್ದವು.
ಅಷ್ಟೇ ಅಲ್ಲದೇ, ಇತ್ತೀಚೆಗೆ ಕುಡಿದ ಅಮಲಿನಲ್ಲಿ ಒಬ್ಬ ಪ್ರಯಾಣಿಕ ಮಹಿಳೆಯೊಬ್ಬರ ಸೀಟಿನ ಮೇಲೆ ಬಳಿ ಹೋಗಿ ಮೂತ್ರ ವಿಸರ್ಜನೆ ಮಾಡಿದ್ದು, ಗಗನಸಖಿಯರೊಡನೆ ಜಗಳಕ್ಕೆ ಇಳಿದ ಪ್ರಯಾಣಿಕರ ವೀಡಿಯೋಗಳು ಹೀಗೇ ಒಂದಾ? ಎರಡಾ? ಅಬ್ಬಬ್ಬಾ.. ಒಟ್ಟಿನಲ್ಲಿ ವಿಮಾನ ಪ್ರಯಾಣದ ಬಗ್ಗೆ ಜನರಲ್ಲಿ ಸ್ವಲ್ಪ ಮಟ್ಟಿಗೆ ಬೇಸರ ಮೂಡಿಸಿದೆ ಅಂತಾನೂ ಹೇಳಬಹುದು.
ಏರ್ ಇಂಡಿಯಾ ವಿಮಾನದಲ್ಲಿ ನೀಡಿದ್ದ ಆಹಾರದಲ್ಲಿ ಕೀಟ!?
ಕೆಲವು ದಿನಗಳ ಹಿಂದೆ ವಿಮಾನದಲ್ಲಿ ಕಳಪೆ ಗುಣಮಟ್ಟದ ಆಹಾರವನ್ನು ನೀಡಲಾಗುತ್ತಿದೆ ಎಂದು ಜನಪ್ರಿಯ ಬಾಣಸಿಗ ಸಂಜೀವ್ ಕಪೂರ್ ಏರ್ ಇಂಡಿಯಾವನ್ನು ಟೀಕಿಸಿದ ನಂತರ, ಈಗ ಅಂತಹದೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.
ಹೌದು.. ಏರ್ ಇಂಡಿಯಾ ವಿಮಾನಯಾನ ಸಂಸ್ಥೆ ಮತ್ತೆ ಸುದ್ದಿಯಲ್ಲಿದೆ. ಮುಂಬೈನಿಂದ ಚೆನ್ನೈಗೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾಗ, ಮಹಾವೀರ್ ಜೈನ್ ಎಂಬ ಪ್ರಯಾಣಿಕರು ಆಹಾರದಲ್ಲಿ ಕೀಟವನ್ನು ಕಂಡುಕೊಂಡಿದ್ದಾರೆ. ಇದರ ವೀಡಿಯೋ ಮಾಡಿ ಅದನ್ನು ಟ್ವೀಟ್ ಮಾಡಿದ್ದಾರೆ. ಟ್ವೀಟ್‌ನಲ್ಲಿ ಅವರು, 'ಬಿಸಿನೆಸ್ ಕ್ಲಾಸ್‌ನಲ್ಲಿ ನೀಡಲಾಗುವ ಊಟದಲ್ಲಿ ಕೀಟ' ಎಂದು ಬರೆದು ಕೊಂಡಿದ್ದಾರೆ. ಈ ಪ್ರಯಾಣಿಕ ತಮ್ಮ ಆಹಾರದಲ್ಲಿ ಸಣ್ಣ ಕೀಟ ಬಿದ್ದಿರುವಂತಹ ಚಿಕ್ಕ ವೀಡಿಯೋವನ್ನು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: Bengaluru Airport: ಐಡಿ ಇಲ್ಲಾಂದ್ರೂ ಪರ್ವಾಗಿಲ್ಲ, ಮುಖ ತೋರಿಸಿ ಸಾಕು! ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಇನ್ಮುಂದೆ ಹೊಸ ರೂಲ್ಸ್
ಸಾಮಾಜಿಕ ಜಾಲತಾಣದಲ್ಲಿ ವೈರಲ್
ಕೇವಲ ಆರು ಸೆಕೆಂಡಿನ ಈ ಪುಟ್ಟ ವೀಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಕೇವಲ ಒಂದು ದಿನದ ಹಿಂದೆ ಹಂಚಿಕೊಳ್ಳಲಾಗಿದ್ದು, ಇದನ್ನು ಪೋಸ್ಟ್ ಮಾಡಿದಾಗಿನಿಂದ, ಇದಕ್ಕೆ 5000ಕ್ಕೂ ಹೆಚ್ಚು ವೀಕ್ಷಣೆಗಳು ಸಿಕ್ಕಿವೆ. ಏರ್ ಇಂಡಿಯಾದ ಅಧಿಕೃತ ಟ್ವಿಟರ್ ಹ್ಯಾಂಡಲ್ ಈ ವ್ಯಕ್ತಿಯ ಟ್ವೀಟ್‌ಗೆ ಉತ್ತರಿಸಿದ್ದು, "ಸರ್, ನಾವು ಯಾವಾಗಲೂ ನಮ್ಮ ವಿಮಾನವನ್ನು ಸ್ವಚ್ಛವಾಗಿ ಮತ್ತು ಕೀಟ ಮುಕ್ತವಾಗಿಡಲು ಪ್ರಯತ್ನಿಸುತ್ತೇವೆ ಮತ್ತು ನಿಮ್ಮ ಈ ಅನುಭವವನ್ನು ಗಮನಿಸಿದ್ದೇವೆ ಮತ್ತು ಅದಕ್ಕೆ ನಾವು ವಿಷಾದಿಸುತ್ತೇವೆ. ತಕ್ಷಣದ ಪರಿಶೀಲನೆಗಾಗಿ ನಾವು ನಿಮ್ಮ ಪ್ರತಿಕ್ರಿಯೆಯನ್ನು ಸಂಬಂಧಿತ ತಂಡದೊಂದಿಗೆ ಹಂಚಿಕೊಳ್ಳುತ್ತಿದ್ದೇವೆ” ಎಂದು ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ