ಕಳೆದ ಎರಡು ವರ್ಷಗಳಿಂದ ಈ ವೈರಸ್ (Virus) ಎಂಬ ಮಾರಿಗಳು ಪ್ರಪಂಚದಾದ್ಯಂತ ಹಬ್ಬಿದೆ. ಕೆಲ ವರ್ಷಗಳ ಹಿಂದೆ ಪ್ರಪಂಚದಾದ್ಯಂತ ಕೊರೊನಾ (Corona) ಎಂಬ ವೈರಸ್ ಜನರನ್ನೊಮ್ಮೆ ಜೀವಭಯದಲ್ಲಿ ಬದುಕುವಂತೆ ಮಾಡಿತ್ತು. ಎಷ್ಟೋ ಜನರನ್ನು ಈ ವೈರಸ್ ಕೊಂದಿದೆ ಕೂಡಾ. ಇದೀಗ ಆಫ್ರಿಕಾದಲ್ಲಿ ಹೊಸ ವೈರಸ್ ಒಂದು ಪತ್ತೆಯಾಗಿದೆ ಎಂದು ಸುದ್ದಿ ಹಬ್ಬಿದೆ. ಆಫ್ರಿಕಾದಲ್ಲಿ (Africa) ಎಬೋಲಾ ಮಾದರಿಯ ಮಾರಕ ಮಾರ್ಬರ್ಗ್ ವೈರಸ್ (Marburg Virus) ಪತ್ತೆಯಾಗಿದ್ದು, ಈವೆರೆಗೂ ಕನಿಷ್ಠ 9 ಮಂದಿ ಹೊಸ ರೋಗಕ್ಕೆ ತುತ್ತಾಗಿದ್ದು ಸಾವನ್ನಪ್ಪಿದ್ದಾರೆ. ಇದು ಆಫ್ರಿಕಾದ ಕೆಲ ನಗರಗಳಲ್ಲಿ ಪತ್ತೆಯಾಗಿದ್ದು, ಎಲ್ಲರಲ್ಲೂ ಮುನ್ನೆಚ್ಚರಿಕೆಯಿಂದಿರಲು ಸರ್ಕಾರ ಘೋಷಿಸಿದೆ.
ಎಬೋಲಾದಂತೆ ಡೇಂಜರ್ ಈ ಮಾರಕ ಮಾರ್ಬರ್ಗ್ ವೈರಸ್
ಎಬೋಲಾ ವೈರಸ್‌ನಷ್ಟೇ ಮಾರಣಾಂತಿಕವಾಗಿರುವ ಮಾರಕ ಮಾರ್ಬರ್ಗ್ ವೈರಸ್ ಈಕ್ವಟೋರಿಯಲ್ ಗಿನಿಯಲ್ಲಿ ಆತಂಕ ಮೂಡಿಸಿದ್ದು ರಕ್ತಸ್ರಾವ ಜ್ವರಕ್ಕೆ ಕಾರಣವಾಗುವ ಈ ವೈರಸ್ ಹೊಸ ತಲೆನೋವಾಗಿ ಆಫ್ರಿಕಾದ ಜನತೆಯಲ್ಲಿ ನಡುಕ ಹುಟ್ಟಿಸಿದೆ. ವಿಶ್ವ ಆರೋಗ್ಯ ಸಂಸ್ಥೆ ಕೂಡ ಹೊಸ ವೈರಸ್ ಬಗ್ಗೆ ವಿವರಿಸಿದ್ದು ಕಾಳಜಿ ವಹಿಸುವಂತೆ ಎಚ್ಚರಿಕೆ ನೀಡಿದೆ.
ಮುನ್ನೆಚ್ಚರಿಕೆ ಕ್ರಮವಾಗಿ ಕ್ವಾರೆಂಟೈನ್
ಮಾರಕ ಮಾರ್ಬರ್ಗ್ ವೈರಸ್ ಈವರೆಗೂ ಸುಮಾರು 9 ಮಂದಿಯನ್ನು ಬಲಿಪಡೆದುಕೊಂಡಿದೆ. ಎಬೋಲಾ ವೈರಸ್‌ನಷ್ಟೇ ಮಾರಣಾಂತಿಕವಾಗಿರುವ ರಕ್ತಸ್ರಾವ ಜ್ವರಕ್ಕೆ ಕಾರಣವಾಗುವ ಈ ವೈರಸ್, ಮತ್ತೊಂದು ಆಘಾತವಾಗಿ ಎದುರಾಗಿದೆ ಎಂದು ಅಲ್ಲಿನ ಆರೋಗ್ಯ ಸಚಿವರು ಸೋಮವಾರ ತಿಳಿಸಿದ್ದಾರೆ.
ಇದನ್ನೂ ಓದಿ: ಟರ್ಕಿ, ಸಿರಿಯಾ ಬೆನ್ನಲ್ಲೇ ನ್ಯೂಜಿಲೆಂಡ್ನಲ್ಲಿ ಪ್ರಬಲ ಭೂಕಂಪ: 6.1 ತೀವ್ರತೆ ದಾಖಲು!
ಮುನ್ನೆಚ್ಚರಿಕೆ ಕ್ರಮವಾಗಿ ಈಕ್ವಟೋರಿಯಲ್ ಗಿನಿಯಲ್ಲಿ ಒಂದು ಪ್ರಾಂತ್ಯವನ್ನು ಸಂಪೂರ್ಣವಾಗಿ ಕ್ವಾರೆಂಟೈನ್‌ಗೆ ಒಳಪಡಿಸಲಾಗಿದೆ ಎಂದು ಆರೋಗ್ಯ ಸಚಿವರು ತಿಳಿಸಿದ್ದಾರೆ.
ಈಕ್ವಟೋರಿಯಲ್ ಗಿನಿಯಾದಲ್ಲಿ ಒಂಬತ್ತು ಜನರು ಮಾರ್ಬರ್ಗ್ ವೈರಸ್‌ನಿಂದ ಏಕಾಏಕಿ ಸಾವನ್ನಪ್ಪಿದ್ದಾರೆ, ಇದು ಹೆಮರಾಜಿಕ್ ಜ್ವರವನ್ನು ಉಂಟುಮಾಡುತ್ತದೆ ಮತ್ತು ಹೆಚ್ಚುಕಮ್ಮಿ ಎಬೋಲಾ ಕಾಯಿಲೆಯ ರೋಗಲಕ್ಷಣಗಳನ್ನು ಹೊಂದಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ಹೇಳಿದೆ.
ಪೀಡಿತ ಜಿಲ್ಲೆಗಳಲ್ಲಿ ವೈದ್ಯಕೀಯ ತಂಡಗಳ ನಿಯೋಜನೆ
ರೋಗಿಗಳ ಸಂಪರ್ಕಗಳನ್ನು ಪತ್ತೆಹಚ್ಚಲು, ರೋಗದ ಲಕ್ಷಣಗಳನ್ನು ಹೊಂದಿರುವ ಜನರನ್ನು ಕ್ವಾರಂಟೈನ್ ಮಾಡಲು ಮತ್ತು ವೈದ್ಯಕೀಯ ಆರೈಕೆಯನ್ನು ಒದಗಿಸಲು ವೈದ್ಯಕೀಯ ತಂಡಗಳನ್ನು ಪೀಡಿತ ಜಿಲ್ಲೆಗಳಲ್ಲಿ ಸರ್ಕಾರ ನಿಯೋಜಿಸಿದೆ. ಜೊತೆಗೆ ಸೋಂಕು ತಡೆಗಟ್ಟುವಿಕೆ, ಪ್ರಯೋಗಾಲಯ ಮತ್ತು ಅಪಾಯ ಸಂವಹನದಲ್ಲಿ ಆರೋಗ್ಯ ತುರ್ತು ತಜ್ಞರನ್ನು ಸರ್ಕಾರ ನಿಯೋಜಿಸಲು ಮುಂದಾಗಿದೆ.
"ಮಾರ್ಬರ್ಗ್ ಹೆಚ್ಚು ಸಾಂಕ್ರಾಮಿಕವಾಗಿದೆ. ಈಕ್ವಟೋರಿಯಲ್ ಗಿನಿಯನ್ ಅಧಿಕಾರಿಗಳು ರೋಗವನ್ನು ದೃಢೀಕರಿಸುವಲ್ಲಿ ತೆಗೆದುಕೊಂಡ ತುರ್ತು ಕ್ರಮಗಳು ನಿಜಕ್ಕೂ ಶ್ಲಾಘನೀಯ.
ರೋಗವನ್ನು ಬೇಗ ಪತ್ತೆ ಮಾಡಿರುವುದು ಇತರೆ ರೋಗಿಗಳನ್ನು ರಕ್ಷಿಸಲು ಸಹಕಾರಿಯಾಗಿದೆ. ನಾವು ಯಾವುದೇ ಹೆಚ್ಚಿನ ಪ್ರಾಣಾಪಾಯವಾಗದಂತೆ ನೋಡಿಕೊಳ್ಳುತ್ತೇವೆ ಮತ್ತು ಸಾಧ್ಯವಾದಷ್ಟು ಬೇಗ ವೈರಸ್ ಅನ್ನು ನಿಲ್ಲಿಸುತ್ತೇವೆ" ಎಂದು ಆಫ್ರಿಕಾದ WHO ಪ್ರಾದೇಶಿಕ ನಿರ್ದೇಶಕ ಡಾ.ಮತ್ಶಿಡಿಸೊ ತಿಳಿಸಿದ್ದಾರೆ.
ಎಬೋಲಾ ವೈರಸ್ ಮಾದರಿಯ ರೋಗ
WHO ಪ್ರಕಾರ, ಮಾರ್ಬರ್ಗ್ ವೈರಸ್ ರೋಗವು ಹೆಚ್ಚು ಮಾರಣಾಂತಿಕ ಕಾಯಿಲೆಯಾಗಿದ್ದು, ಸಾವಿನ ಅನುಪಾತವು 88 ಪ್ರತಿಶತದವರೆಗೆ ಇದೆ. ಇದು ಎಬೋಲಾ ವೈರಸ್ ಕಾಯಿಲೆಗೆ ಕಾರಣವಾಗುವ ವೈರಸ್‌ನ ಕುಟುಂಬದ ಸೋಂಕಾಗಿದೆ.
ಮಾರ್ಬರ್ಗ್ ವೈರಸ್ ರೋಗಲಕ್ಷಣಗಳು
ಮಾರ್ಬರ್ಗ್ ವೈರಸ್ ರೋಗಲಕ್ಷಣಗಳು ತೀವ್ರ ಜ್ವರ, ತೀವ್ರ ತಲೆನೋವು ಮತ್ತು ಹೆಚ್ಚಿನ ಆಯಾಸವನ್ನು ಒಳಗೊಂಡಿರುತ್ತದೆ. ಸೋಂಕು ತಗುಲಿದ ಏಳು ದಿನಗಳ ಒಳಗೆ ರೋಗಿಗಳಲ್ಲಿ ತೀವ್ರವಾದ ಹೆಮರಾಜಿಕ್ ರೋಗಲಕ್ಷಣಗಳು ಕಂಡುಬರುತ್ತವೆ.
ಬಾವಲಿಗಳಿಂದ ಹರಡುವ ವೈರಸ್
ಮಾರ್ಬರ್ಗ್ ವೈರಸ್ ಸಾಮಾನ್ಯವಾಗಿ ಆಫ್ರಿಕಾದ ಫ್ರೂಟ್ ಬ್ಯಾಟ್ ಅಥವಾ ಬಾವಲಿ ಮೂಲಕ ಹರಡುತ್ತದೆ. ಈ ಬಾವಲಿಗಳು ವೈರಸ್ ಅನ್ನು ತಮ್ಮಲ್ಲಿ ಹೊಂದಿದ್ದರೂ, ಅವುಗಳಿಗೆ ಅದರಿಂದ ಯಾವ ಅಪಾಯವೂ ಆಗುವುದಿಲ್ಲ. ಈ ವೈರಸ್ ಹಣ್ಣನ್ನು ತಿನ್ನುವ ಬಾವಲಿಗಳಿಂದ ಜನರಿಗೆ ಹರಡುತ್ತದೆ.
ಚಿಕಿತ್ಸೆ ಏನು?
ಇಲ್ಲಿಯವರೆಗೆ, ವೈರಸ್‌ಗೆ ಚಿಕಿತ್ಸೆ ನೀಡಲು ಯಾವುದೇ ಲಸಿಕೆಗಳು ಅಥವಾ ಚಿಕಿತ್ಸೆಗಳು ಕಂಡುಬಂದಿಲ್ಲ, ಆದರೂ ರೋಗಲಕ್ಷಣಗಳು ಕಂಡುಬಂದಲ್ಲಿ ತಕ್ಷಣ ಆಸ್ಪತ್ರೆಗೆ ತೆರಳಿ ಪ್ರಾರ್ಥಮಿಕ ಚಿಕಿತ್ಸೆಗಳನ್ನು ಪಡೆಯುವುದು ಒಳಿತು.
ಕೀ-ಎನ್‌ಟೆಮ್ ಪ್ರಾಂತ್ಯ ಮತ್ತು ಪಕ್ಕದ ಮೊಂಗೊಮೊ ಜಿಲ್ಲೆಯಲ್ಲಿ ಆರೋಗ್ಯ ಎಚ್ಚರಿಕೆ ಘೋಷಿಸಲಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ಮತ್ತು ವಿಶ್ವಸಂಸ್ಥೆಗಳ ಜತೆಗಿನ ಸಮಾಲೋಚನೆ ಬಳಿಕ ಲಾಕ್‌ಡೌನ್ ಯೋಜನೆಯನ್ನು ಜಾರಿಗೊಳಿಸಲಾಗಿದೆ ಎಂದು ಈಕ್ವಟೋರಿಯಲ್ ಗಿನಿಯಾದ ಆರೋಗ್ಯ ಸಚಿವ ಮಿಟೊಹಾ ಒಂಡೋ ಆಯೆಕಬಾ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ