Alzheimer's Disease: ಅಮೆರಿಕ ಸೋಮವಾರ, ಅಲ್ಜೈಮರ್ ಕಾಯಿಲೆಗೆ ಪ್ರಥಮ ಬಾರಿಗೆ ಹೊಸ ಔಷಧವೊಂದಕ್ಕೆ ಅನುಮೋದನೆ ನೀಡಿದೆ. ಸುಮಾರು 20 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಅಮೆರಿಕ ಅಲ್ಜೈಮರ್ ಕಾಯಿಲೆಯನ್ನು ಗುಣಪಡಿಸುವ ಔಷಧಿಗೆ ಒಪ್ಪಿಗೆ ನೀಡಿದ್ದು, ಈ ಔಷಧಿಯ ಅಸಮರ್ಥತೆಯ ಬಗ್ಗೆ ಹಲವಾರು ಸ್ವತಂತ್ರ ಸಲಹೆಗಾರರು ಎಚ್ಚರಿಸಿದ್ದರೂ ಕೂಡ, ಅದನ್ನು ಗಣನೆಗೆ ತೆಗೆದುಕೊಳ್ಳದೆ, ಅಮೆರಿಕ ಈ ಹೆಜ್ಜೆ ಇಟ್ಟಿದೆ. ಅಮೆರಿಕದ ಮೂಲದ ಬಯೋಜೆನ್ ಕಂಪೆನಿ ಮತ್ತು ಜಪಾನಿನ ಈಸೈ ಕಂಪೆನಿ ಅಭಿವೃದ್ಧಿ ಪಡಿಸಿದ, ಅಡುಕನುಮಾಬ್ (Aducanumab) ಎಂಬ ಈ ಔಷಧಿಯನ್ನು ಅಮೆರಿಕದ ಫುಡ್ ಅಂಡ್ ಅಡ್ಮಿನಿಸ್ಟ್ರೇಶನ್ ವಿಭಾಗವು ಅಂಗೀಕರಿಸಿದೆ.
ಎಫ್ಡಿಎಯ ಈ ನಿರ್ಧಾರ ಬಹು ನಿರೀಕ್ಷಿತವಾಗಿತ್ತು. ಈ ಔಷಧಿಯಿಂದ ಕಂಪೆನಿಗೆ ಶತಕೋಟಿ ಡಾಲರ್ಗಳ ನಿರೀಕ್ಷೆ ಇದೆ. ಅಷ್ಟು ಮಾತ್ರವಲ್ಲ, ಅಲ್ಜೈಮರ್ ರೋಗದಿಂದ ಬಳಲುತ್ತಿರುವವರ ಕುಟುಂಬದವರಲ್ಲಿ ಈ ಹೊಸ ಬೆಳವಣಿಗೆ ಭರವಸೆಯನ್ನು ಮೂಡಿಸಿದೆ. ಈ ಔಷಧಿಯನ್ನು ಅದುಹೆಲ್ಮ್ ಎಂಬ ಬ್ರ್ಯಾಂಡ್ ಹೆಸರಿನ ಮೂಲಕ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುವುದು ಎಂದು ಫುಡ್ ಅಂಡ್ ಅಡ್ಮಿನಿಸ್ಟ್ರೇಶನ್ ವಿಭಾಗವು ತಿಳಿಸಿದೆ.
ಈ ಔಷಧಿ ಅಲ್ಜೈಮರ್ನನ ಆರಂಭಿಕ ಹಂತದ ರೋಗಿಗಳಲ್ಲಿ, ಮೆದುಳಿನಿಂದ ಅಮಿಲಾಯಿಡ್ ಬೆಟಾ ಎಂಬ ಅಂಟಾದ ಪ್ರೋಟೀನ್ ಸಂಗ್ರಹವನ್ನು ತೆಗೆದು ಹಾಕುತ್ತದೆ. ಅಮಿಲಾಯಿಡ್ ಬೆಟಾ, ರೋಗಿಯ ನೆನಪಿನ ಶಕ್ತಿ ಮತ್ತು ಸ್ವ ಕಾಳಜಿಯ ಸಾಮರ್ಥ್ಯವನ್ನು ಕುಂಠಿತಗೊಳಿಸುತ್ತದೆ ಎನ್ನಲಾಗುತ್ತದೆ.
ಅಲ್ಜೈಮರ್ ಕಾಯಿಲೆಯು, ನ್ಯೂರೋ ಡಿಜನರೇಟಿವ್ ಡಿಸಾರ್ಡರ್ ಆಗಿದ್ದು, ನಿಧಾನವಾಗಿ ನೆನಪಿನ ಶಕ್ತಿ ಮತ್ತು ಆಲೋಚನೆಗಳನ್ನು ನಾಶ ಪಡಿಸುತ್ತದೆ. ದ ಅಲ್ಜೈಮರ್ಸ್ ಅಸೋಸಿಯೇಶನ್ ಅಂದಾಜು ಮಾಡಿರುವ ಪ್ರಕಾರ, 6 ಮಿಲಿಯನ್ಗೂ ಹೆಚ್ಚು ಅಮೆರಿಕನ್ನರು ಈ ಕಾಯಿಲೆಯನ್ನು ಹೊಂದಿದ್ದಾರೆ. 2050ರ ಸಮಯಕ್ಕೆ ಇದು ಸುಮಾರು 13 ದಶಲಕ್ಷಕ್ಕೆ ಏರಿಕೆಯಾಗಬಹುದು ಎಂದು ಅಂದಾಜಿಸಲಾಗಿದೆ.
ಈ ಔಷಧಿಯು ಅಮೆರಿಕದ ಮಾರುಕಟ್ಟೆಯನ್ನು ತಲುಪುತ್ತಿದ್ದಂತೆ ಅದರ ಮೇಲ್ವಿಚಾರಣೆಯನ್ನು ತಾನು ಮುಂದುವರಿಸುವುದಾಗಿ ಎಫ್ಡಿಎ ತಿಳಿಸಿದೆ. ಬಯೋಜೆನ್ ಮತ್ತೊಂದು ಕ್ಲಿನಿಕಲ್ ಪ್ರಯೋಗವನ್ನು ನಡೆಸಬೇಕೆಂಬ ಷರತ್ತನ್ನು ವಿಧಿಸಿಯೇ, ಈ ಔಷಧಿಗೆ ಅಂಗೀಕಾರ ನೀಡಲಾಗಿದೆ. ಮಾಸೆಚೂಟ್ಸ್ ಮೂಲದ ಬಯೋಟೆಕ್ನಾಲಜಿ ಕಂಪೆನಿಯೊಂದರ ಪ್ರಕಾರ, ಪಟ್ಟಿ ದರ ವರ್ಷಕ್ಕೆ 56,000 ಡಾಲರ್.
ಮಾಯೋ ಕ್ಲಿನಿಕ್ನ ತಜ್ಞ ರೊನಾಲ್ಟ್ ಪೀಟರ್ಸೆನ್ ಪ್ರಕಾರ,ಇದು ಎಲ್ಲಾ ಅಲ್ಜೈಮರ್ ರೋಗಿಗಳಿಗೆ ಸಿಹಿ ಸುದ್ದಿ. ಇದುವರೆಗೆ ಈ ರೋಗವನ್ನು ಮಾರ್ಪಡಿಸಲು ಸಾಧ್ಯವಾಗುವಂತಹ ಯಾವುದೇ ಔಷಧಿಗೆ ಅನುಮೋದನೆ ಸಿಕ್ಕಿರಲಿಲ್ಲ”“ಇದು ರೋಗವನ್ನು ಗುಣ ಪಡಿಸುವುದಿಲ್ಲ, ಆದರೆ ಅದರ ಪ್ರಗತಿಯನ್ನು ಕುಂಠಿತಗೊಳಿಸುತ್ತದೆ” ಎಂದು ಅವರು ಹೇಳಿದ್ದಾರೆ.
“ಈ ಅನುಮೋದನೆಯಿಂದ, ಅಲ್ಜೈಮರ್ಸ್ ರೋಗಿಗಳಿಗೆ ಇನ್ನಷ್ಟು ಹೆಚ್ಚು ಕಾಲ ಸುಗಮವಾಗಿ ಬದುಕಲು ಸಾಧ್ಯವಾಗುತ್ತದೆ. ಅಲ್ಜೈಮರ್ಸ್ ರೋಗಿಗಳ ಕುಟುಂಬದವರು ಇನ್ನಷ್ಟು ಹೆಚ್ಚು ಕಾಲ ನೆಮ್ಮದಿಯಿಂದ ನೋಡಿಕೊಳ್ಳಬಹುದು. ಈ ಮೂಲಕ , ಈ ರೋಗದ ವಿರುದ್ಧ ಹೋರಾಟದಲ್ಲಿ, ವಿಜ್ಞಾನಿಗಳು ಮತ್ತು ಕಂಪೆನಿಗಳಿಗೆ ಪುನಶ್ಚೈತನ ನೀಡಬಹುದು. ಇದು ಒಂದು ಭರವಸೆಯ ಕಿರಣ” ಎಂದು ದ ಅಲ್ಜೈಮರ್ಸ್ ಅಸೋಸಿಯೇಶನ್ನ ಸಿಇಓ ಹ್ಯಾರಿ ಜಾನ್ಸ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ