ರಾಜಸ್ಥಾನ: ಸಂದರ್ಶನವೊಂದರಲ್ಲಿ (Interview) ಪ್ರವಾದಿ ಮಹಮ್ಮದ್ (Prophet Mohammad) ವಿರುದ್ಧ ಆಕ್ಷೇಪಾರ್ಹ ಹೇಳಿಕೆ (Objectionable statement) ನೀಡಿ ಮುಸ್ಲಿಮರ (Muslim) ಕೆಂಗಣ್ಣಿಗೆ ಗುರಿಯಾಗಿದ್ದ ಬಿಜೆಪಿ (BJP) ಮಾಜಿ ವಕ್ತಾರೆ ನೂಪುರ್ ಶರ್ಮಾ (Nupur Sharma) ಹತ್ಯೆಗೆ ಯತ್ನ (Attempted murder) ನಡೆದಿತ್ತಾ? ಇದೀಗ ಇಂಥದ್ದೊಂದು ಪ್ರಶ್ನೆ ಎದ್ದಿದೆ. ಯಾಕೆಂದ್ರೆ ನೂಪುರ್ ಶರ್ಮಾ ಅವರನ್ನು ಹತ್ಯೆ ಮಾಡೋಕೆ ಅಂತಾನೆ ಪಾಕಿಸ್ತಾನದಿಂದ (Pakistan) ವ್ಯಕ್ತಿಯೊಬ್ಬ ಭಾರತಕ್ಕೆ (India) ಬಂದಿದ್ದ ಎಂಬ ಆಘಾತಕಾರಿ ವಿಚಾರ ಇದೀಗ ಬೆಳಕಿಗೆ ಬಂದಿದೆ. ನೂಪುರ್ ಶರ್ಮಾ ಹತ್ಯೆ ಮಾಡಬೇಕು ಅಂತ ಪಾಕಿಸ್ತಾನದಿಂದ ಬಂದಿದ್ದ ವ್ಯಕ್ತಿಯೊಬ್ಬನನ್ನು ಭಾರತದಲ್ಲಿ ಬಂಧಿಸಲಾಗಿದೆ. ಅನುಮಾನಾಸ್ಪದವಾಗಿ ಓಡಾಡುತ್ತಿದ್ದಾಗ ಬಂಧಿಸಿ, ವಿಚಾರಣೆ ನಡೆಸಿದ ಮೇಲೆ ನೂಪುರ್ ಶರ್ಮಾ ಹತ್ಯೆ ಯತ್ನ ವಿಚಾರ ಬೆಳಕಿಗೆ ಬಂದಿದೆ.
ರಾಜಸ್ಥಾನದಲ್ಲಿ ಪಾಕಿಸ್ತಾನ ಪ್ರಜೆಯ ಬಂಧನ
ರಾಜಸ್ಥಾನದ ಅಂತಾರಾಷ್ಟ್ರೀಯ ಗಡಿಯಿಂದ ನುಸುಳುತ್ತಿದ್ದ ಪಾಕಿಸ್ತಾನಿ ಪ್ರಜೆಯನ್ನು ಗಡಿ ಭದ್ರತಾ ಪಡೆ (ಬಿಎಸ್ಎಫ್) ಬಂಧಿಸಿದೆ. ಜುಲೈ 16 ರಂದು ರಾತ್ರಿ 11 ಗಂಟೆ ಸುಮಾರಿಗೆ ಶ್ರೀ ಗಂಗಾನಗರ ಜಿಲ್ಲೆಗೆ ಹೊಂದಿಕೊಂಡಿರುವ ಹಿಂದೂಮಲ್ಕೋಟ್ ಗಡಿ ಬೇಲಿಯಲ್ಲಿ ಅನುಮಾನಾಸ್ಪದವಾಗಿ ಆತ ಸುತ್ತಾಡುತ್ತಿದ್ದ. ಈ ವೇಳೆ ಬಿಎಸ್ಎಫ್ ಯೋಧರು ಹಿಡಿದು ವಿಚಾರಿಸಿದಾಗ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡಿಲ್ಲ ಎನ್ನಲಾಗಿದೆ.
ಪಾಕಿಸ್ತಾನದಿಂದ ಚಾಕು ಹಿಡಿದು ಬಂದಿದ್ದ ವ್ಯಕ್ತಿ
ಆತನ ಹುಡುಕಾಟ ನಡೆಸಿದಾಗ ಆತನ ಬಳಿ 11 ಇಂಚಿನ ಹರಿತವಾದ ಚಾಕು, ಧಾರ್ಮಿಕ ಪುಸ್ತಕಗಳು, ನಕ್ಷೆಗಳು, ಬಟ್ಟೆ ಮತ್ತು ಆಹಾರ ಪದಾರ್ಥಗಳು ಪತ್ತೆಯಾಗಿವೆ ಎನ್ನಲಾಗಿದೆ. ಜೊತೆಗೆ ಆತನಿಂದ ಹಲವು ಅನುಮಾನಾಸ್ಪದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಇದನ್ನೂ ಓದಿ: Explained: ಪ್ರವಾದಿ ಅವಹೇಳನ ಮಾಡಿದ ನೂಪುರ್ ಶರ್ಮಾ ಯಾರು? ಅವರು ಮಾಡಿರುವ ವಿವಾದವೇನು?
ನೂಪುರ್ ಶರ್ಮಾ ಹತ್ಯೆ ಮಾಡಲು ಬಂದಿದ್ದ ವ್ಯಕ್ತಿ
ವಿಚಾರಣೆ ವೇಳೆ ಆರೋಪಿ ತನ್ನ ಹೆಸರನ್ನು ರಿಜ್ವಾನ್ ಅಶ್ರಫ್ ಎಂದು ಹೇಳಿದ್ದಾನೆ. ಅವರು ಉತ್ತರ ಪಾಕಿಸ್ತಾನದ ಮಂಡಿ ಬಹೌದ್ದೀನ್ ನಗರದ ನಿವಾಸಿಯಾಗಿದ್ದಾನೆ. 8ನೇ ತರಗತಿವರೆಗೆ ಓದಿರುವ ಅಶ್ರಫ್ಗೆ ಉರ್ದು, ಪಂಜಾಬಿ ಮತ್ತು ಹಿಂದಿ ಭಾಷೆ ಗೊತ್ತಿದೆ. ನೂಪುರ್ ಶರ್ಮಾರನ್ನು ಕೊಲ್ಲುವ ಉದ್ದೇಶದಿಂದ ಗಡಿ ದಾಟಿ ಬಂದಿದ್ದಾಗಿ ಆಘಾತಕಾರಿ ಹೇಳಿಕೆ ನೀಡಿದ್ದಾನೆ.
ದರ್ಗಾಕ್ಕೆ ಚಾದರ ಅರ್ಪಿಸಿ ಬಳಿಕ ಹತ್ಯೆಗೆ ನಿರ್ಧಾರ
ಪ್ರವಾದಿ ಮೊಹಮ್ಮದ್ ಕುರಿತು ನೂಪುರ್ ಶರ್ಮಾ ನೀಡಿದ ಹೇಳಿಕೆಯಿಂದ ರಿಜ್ವಾನ್ ಅಶ್ರಫ್ಗೆ ನೋವಾಗಿತ್ತಂತೆ. ಹೀಗಾಗಿ ಅವರನ್ನು ಕೊಲ್ಲುವ ಉದ್ದೇಶದಿಂದ ಗಡಿದಾಡಿ ಭಾರತಕ್ಕೆ ಬಂದಿದ್ದಾನೆ. ಭಾರತಕ್ಕೆ ಪ್ರವೇಶಿಸಿದ ನಂತರ ಅಶ್ರಫ್ ಶ್ರೀ ಗಂಗಾನಗರದಿಂದ ಅಜ್ಮೀರ್ ದರ್ಗಾಕ್ಕೆ ಹೋಗಲು ಬಯಸಿದ್ದ ಎನ್ನಲಾಗಿದೆ. ಅಲ್ಲಿ ‘ಚಾದರ್’ ಅರ್ಪಿಸಿದ ಬಳಿಕ ನೂಪುರ್ ಶರ್ಮಾ ಅವರನ್ನು ಕೊಲ್ಲಲು ಯೋಜನೆ ರೂಪಿಸಿದ್ದ ಎನ್ನುವುದು ವಿಚಾರಣೆ ವೇಳೆ ಗೊತ್ತಾಗಿದೆ.
ಇದನ್ನೂ ಓದಿ: Nupur Sharma: ನೂಪುರ್ ಶರ್ಮಾ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳಬಾರದು; ಸುಪ್ರೀಂಕೋರ್ಟ್
ನೂಪುರ್ ಶರ್ಮಾ ಹೇಳಿಕೆ ಖಂಡಿಸಿ ಪಾಕಿಸ್ತಾನದಲ್ಲಿ ಸಭೆ
ನೂಪುರ್ ಶರ್ಮಾ ಹೇಳಿಕೆಯ ನಂತರ ಪಾಕಿಸ್ತಾನದಲ್ಲಿ ಧರ್ಮಗುರುಗಳ ಸಭೆ ನಡೆಸಲಾಗಿದೆ ಎಂದು ಹೇಳಲಾಗುತ್ತಿದೆ. ಈ ಸಭೆಯಲ್ಲಿ ಅಶ್ರಫ್ ರಿಜ್ವಾನ್ ಕೂಡ ಭಾಗವಹಿಸಿದ್ದ. ಈ ಸಭೆಯ ನಂತರವೇ ಆತ ನೂಪುರ್ ಶರ್ಮಾ ಅವರನ್ನು ಕೊಲ್ಲುವ ಉದ್ದೇಶವನ್ನು ಹೊಂದಿದ್ದ. ಆದರೆ, ಈಗ ಗಡಿ ಭದ್ರತಾ ಪಡೆ ಸಿಬ್ಬಂದಿ ಒಳನುಗ್ಗಿದವರನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ. ಅದರ ನಂತರ ಈಗ ಇನ್ನೂ ಅನೇಕರು ಒಳ ನುಸುಳಿರುವ ಶಂಕೆ ವ್ಯಕ್ತವಾಗಿದ್ದು, ಈ ಬಗ್ಗೆಯೂ ತನಿಖೆ ನಡೆಯುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ