ರಾಯ್‌ಪುರ: ತನ್ನನ್ನು ಮದುವೆಯಾಗಲು ನಿರಾಕರಿಸಿದ್ದಕ್ಕೆ ನಡುರಸ್ತೆಯಲ್ಲಿ ಅಪ್ರಾಪ್ತ ಬಾಲಕಿಯ ತಲೆ ಕೂದಲಲ್ಲಿ ಹಿಡಿದೆಳೆದು ಆಕೆಗೆ ಚಾಕುವಿನಿಂದ ಇರಿದ (Crime News) ಆಘಾತಕಾರಿ ಘಟನೆ ಛತ್ತೀಸ್‌ಗಢದ ರಾಯ್‌ಪುರದಲ್ಲಿ (Raipur) ನಡೆದಿದೆ. ರಾಯ್‌ಪುರ ನಗರದ ಗುಧಿಯಾರಿ ಪ್ರದೇಶದಲ್ಲಿ ಈ ಕೃತ್ಯ ನಡೆದಿದ್ದು, 47 ವರ್ಷದ ಆರೋಪಿ 16 ವರ್ಷದ ಬಾಲಕಿಯನ್ನು ತನ್ನನ್ನು ಮದುವೆಯಾಗುವಂತೆ ಬೆದರಿಸಿ (Threat) ಆಕೆಯ ಕೂದಲಲ್ಲಿ ಹಿಡಿದೆಳೆದುಕೊಂಡು ಹೋಗಿದ್ದಾನೆ.
ಬಾಲಕಿಯನ್ನು ಸಾರ್ವಜನಿಕ ಪ್ರದೇಶದಲ್ಲಿ ಹೀಗೆ ಹಿಡಿದೆಳೆದುಕೊಂಡು ಹಿಂಸಿಸಿದ ವ್ಯಕ್ತಿಯನ್ನು ಓಂಕಾರ್ ತಿವಾರಿ ಅಲಿಯಾಸ್ ಮನೋಜ್ (47) ಎಂದು ಗುರುತಿಸಲಾಗಿದ್ದು, ಈತನನ್ನು ಪೊಲೀಸರು ಬಂಧನ ಮಾಡಿದ್ದಾರೆ. ಆರೋಪಿಯು ಬಾಲಕಿಯನ್ನು ಮದುವೆಯಾಗುವಂತೆ ಈ ಹಿಂದಿನಿಂದಲೂ ಹಿಂಸೆ ನೀಡುತ್ತಿದ್ದನಂತೆ. ಆದರೆ ಆಕೆಗೆ ಈತನ ಜೊತೆ ಮದುವೆ ಆಗಲು ಇಷ್ಟವಿರಲಿಲ್ಲ. ಅಲ್ಲದೇ ಆಕೆಯ ತಾಯಿಗೂ ಇಷ್ಟವಿರಲಿಲ್ಲ. ಹೀಗಾಗಿ ಆಕೆಗೆ ಬೆದರಿಸಿ ಇಂತಹ ಕೃತ್ಯ ನಡೆಸಲು ಮುಂದಾಗಿದ್ದಾನೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: Crime News: ಶ್ರದ್ಧಾ, ನಿಕ್ಕಿ, ಮೇಘಾ; ಲಿವ್ ಇನ್ ಸಂಸ್ಕೃತಿಗೆ ಬಲಿಯಾದ ಯುವತಿಯರ ಬೆಚ್ಚಿ ಬೀಳಿಸುವ ಶಾಕಿಂಗ್ ಸ್ಟೋರಿಗಳು!
ಕೃತ್ಯದ ವಿಡಿಯೋ ವೈರಲ್
ಶನಿವಾರ ಸಂಜೆ ವೇಳೆ ಈ ಘಟನೆ ಸಂಭವಿಸಿದ್ದು, ಆರೋಪಿಯು ಬಾಲಕಿಗೆ ಸಾರ್ವಜನಿಕ ಸ್ಥಳದಲ್ಲೇ ಹಿಂಸೆ ನೀಡುತ್ತಿದ್ದಾಗ ಅಲ್ಲಿದ್ದವರು ಯಾರೋ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಪೊಲೀಸರು ತಕ್ಷಣ ಕಾರ್ಯ ಪ್ರವೃತ್ತರಾಗಿ ಬಾಲಕಿಯನ್ನು ಹಿಂಸಾತ್ಮಕವಾಗಿ ಹಿಡಿದೆಳೆದುಕೊಂಡು ಹೋದ ಕಿರಾತಕ ಓಂಕಾರ್ ತಿವಾರಿ ಅಲಿಯಾಸ್ ಮನೋಜ್ ಎಂಬಾತನನ್ನು ಬಂಧನ ಮಾಡಿದ್ದಾರೆ.
ಮಾರಣಾಂತಿಕ ಹಲ್ಲೆಗೈದ ಭೂಪ
ಆರೋಪಿ ಓಂಕಾರ್ ತಿವಾರಿ ಅಲಿಯಾಸ್ ಮನೋಜ್ ಆಪ್ರಾಪ್ತ ಬಾಲಕಿಯನ್ನು ತಲೆಗೂದಲಲ್ಲಿ ಹಿಡಿದು ಎಳೆದುಕೊಂಡು ಹೋಗಿರುವುದು ಮಾತ್ರವಲ್ಲದೇ ಆಕೆಗೆ ಹರಿತವಾದ ಆಯುಧದಿಂದ ಇರಿದು ಹಲ್ಲೆಯನ್ನೂ ಮಾಡಿದ್ದಾನೆ. ವಿಡಿಯೋದಲ್ಲಿ ಆತ ಎಡಗೈಯಲ್ಲಿ ಅಮಾಯಕ ಬಾಲಕಿಯ ತಲೆಗೂದಲನ್ನು ಹಿಡಿದುಕೊಂಡರೆ, ಬಲ ಕೈಯಲ್ಲಿ ಹರಿತವಾದ ಆಯುಧವನ್ನು ಹಿಡಿದುಕೊಂಡು ಬೀಸುತ್ತಾ ಹೋಗಿದ್ದಾನೆ. ಅಲ್ಲದೇ ಆಕೆಗೆ ಪದೇ ಪದೇ ಬೆದರಿಸಿ ಆ ಚಾಕುವಿನಿಂದ ಇರಿದು ಮಾರಣಾಂತಿಕ ಹಲ್ಲೆಯನ್ನೂ ಮಾಡಿದ್ದಾನೆ.
ಗಂಭೀರ ಸ್ಥಿತಿಯಲ್ಲಿ ಬಾಲಕಿ
ಆರೋಪಿಯಿಂದ ಮಾರಣಾಂತಿಕ ಹಲ್ಲೆಗೆ ಒಳಗಾಗಿರುವ ಬಾಲಕಿಯನ್ನು ಕೂಡಲೇ ಅಲ್ಲಿದ್ದವರು ಯಾರೋ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಆಕೆಯ ಪರಿಸ್ಥಿತಿ ಚಿಂತಾಜನಕವಾಗಿದ್ದು, ವೈದ್ಯರು ಐಸಿಯುನಲ್ಲಿ ಚಿಕಿತ್ಸೆ ನೀಡುತ್ತಿದ್ದಾರೆ. ಇನ್ನೂ ಕೂಡ ಆಕೆಯ ಆರೋಗ್ಯದ ಬಗ್ಗೆ ವೈದ್ಯರು ಮಾಹಿತಿ ನೀಡಿಲ್ಲ, ಆಕೆಯನ್ನು ಅಬ್ಸರ್ವೇಶನ್‌ನಲ್ಲಿ ಇಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: Nikki Yadav ಕೊಲ್ಲುವ ಮುನ್ನ ಸ್ನೇಹಿತರ ಜೊತೆ ಎಂಗೇಜ್‌ಮೆಂಟ್ ಪಾರ್ಟಿ ಮಾಡಿದ್ದ ಕಿರಾತಕ Sahil Gehlot!
ಪೊಲೀಸರು ಹೇಳೋದೇನು?
ಪ್ರಕರಣ ಸಂಬಂಧ ಪ್ರತಿಕ್ರಿಯೆ ನೀಡಿರುವ ರಾಯ್‌ಪುರದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ಪ್ರಶಾಂತ್ ಅಗರವಾಲ್, ಸಂತ್ರಸ್ತ ಬಾಲಕಿಯು ಆರೋಪಿ ಓಂಕಾರ್ ತಿವಾರಿ ಅಲಿಯಾಸ್ ಮನೋಜ್‌ನ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಳು. ಆದರೆ ಆತ ದಿನನಿತ್ಯ ಆಕೆಗೆ ಮದುವೆಯಾಗುವಂತೆ ಹಿಂಸೆ ನೀಡುತ್ತಿದ್ದ, ಅಲ್ಲದೇ ಬಾಲಕಿಯನ್ನು ಲೈಂಗಿಕವಾಗಿ ದುರ್ಬಳಕೆ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದ. ಇದರಿಂದ ತೀವ್ರ ಮನನೊಂದ ಬಾಲಕಿಯು ಆತನ ಅಂಗಡಿಯಿಂದ ಕೆಲಸ ತೊರೆಯುವ ಪ್ರಸ್ತಾಪ ಮಾಡಿದ್ದಳು. ಹೀಗಾಗಿ ಕಿಡಿಗೇಡಿ ಆರೋಪಿಯು ಸಂತ್ರಸ್ತ ಬಾಲಕಿಯ ವಿರುದ್ಧ ತಿರುಗಿಬಿದ್ದು ಆಕೆಗೆ ದೌರ್ಜನ್ಯ ಎಸಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಇವಿಷ್ಟೇ ಅಲ್ಲದೇ ಆರೋಪಿಯು ಬಾಲಕಿಯನ್ನು ತನಗೆ ಕೊಟ್ಟು ಮದುವೆ ಮಾಡುವಂತೆ ಪ್ರಸ್ತಾಪ ಮಾಡಿದ್ದ. ಆದರೆ ಆ ಬಾಲಕಿಯ ತಾಯಿ ಅದಕ್ಕೊಪ್ಪದೆ ವಿರೋಧ ವ್ಯಕ್ತಪಡಿಸಿದ್ದರು. ಹೀಗಾಗಿ ಅತ್ತ ಮದುವೆಯೂ ಇಲ್ಲ, ಇತ್ತ ಬಾಲಕಿ ಕೆಲಸವೂ ಬಿಡುತ್ತಾಳೆ ಎಂದು ಅಂದುಕೊಂಡ ಆರೋಪಿಯು ಆಕೆಯ ಮೇಲೆ ಹಿಂಸಾತ್ಮಕ ಕೃತ್ಯ ಎಸಗಿದ್ದಾನೆ. ಸದ್ಯ ಪೊಲೀಸರು ಆರೋಪಿಯು ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆ ಸಂಬಂಧಿತ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ