5G case hearing; ಕಲಾಪದ ವೇಳೆ ಜೂಹಿ ಚಾವ್ಲಾ ಸಿನಿಮಾ ಹಾಡು ಹೇಳಿ ಅಡ್ಡಿಪಡಿಸಿದ ವ್ಯಕ್ತಿ

Juhi Chawla : ವರ್ಚುಯಲ್​ ಕಲಾಪದ ವೇಳೆ ವ್ಯಕ್ತಿಯೊಬ್ಬ ಜೂಹಿ ಚಾವ್ಲಾ ಅವರ ನಟನೆಯ ಸಿನಿಮಾದ ಹಾಡುಗಳನ್ನು ಹಾಡುವ ಮೂಲಕ ಅಡ್ಡಿಮಾಡಿದ್ದಾರೆ.

ಜೂಹಿ ಚಾವ್ಲಾ

ಜೂಹಿ ಚಾವ್ಲಾ

  • Share this:
    ನವದೆಹಲಿ (ಮೇ. 2): ದೇಶದಲ್ಲಿ 5ಜಿ ವೈರ್​ಲೆಸ್​ ನೆಟ್​ವರ್ಕ್​ಗಳನ್ನು ಸ್ಥಾಪಿಸುವುದರಿಂದ ಇವುಗಳ ಹೊರಸೂಸುವ  ವಿಕಿರಣದಿಂದಾಗಿ ಪ್ರಾಣಿ, ಪಕ್ಷಿ ಸಂಕುಲಕ್ಕೆ ಮಾತ್ರವಲ್ಲದೇ ಸಸ್ಯ ಸಂಕುಲಕ್ಕೆ ಹಾನಿಯಾಗಲಿದೆ ಎಂದು ಬಾಲಿವುಡ್​ ಬೆಡಗಿ ಜೂಹಿ ಚಾವ್ಲಾ ಈಗಾಗಲೇ ದೆಹಲಿ ಹೈ ಕೋರ್ಟ್​ ಮೆಟ್ಟಿಲೇರಿದ್ದಾರೆ. ಈ ಪ್ರಕರಣ ಕುರಿತು ಇಂದು ನ್ಯಾಯಾಪೀಠ ಅರ್ಜಿ ವಿಚಾರಣೆ ನಡೆಸಿತು. ಕೋವಿಡ್​ ಹಿನ್ನಲೆ ಈ ಪ್ರಕರಣದ ವರ್ಚುಯಲ್​ ವಿಚಾರಣೆ ನಡೆಸಲಾಯಿತು. ಈ ವರ್ಚುಯಲ್​ ವಿಚಾರಣೆಗೆ ಜನರು ಭಾಗಿಯಾಗುವಂತೆ ನಟಿ ಕೂಡ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಲಿಂಕ್​ ಶೇರ್​ ಮಾಡಿದ್ದರು. ಇಂದು ಬೆಳಗ್ಗೆ ನಡೆದ ಈ ವರ್ಚುಯಲ್​ ಕಲಾಪದ ವೇಳೆ ವ್ಯಕ್ತಿಯೊಬ್ಬ ಜೂಹಿ ಚಾವ್ಲಾ ಅವರ ನಟನೆಯ ಸಿನಿಮಾದ ಹಾಡುಗಳನ್ನು ಹಾಡುವ ಮೂಲಕ ನ್ಯಾಯಾಲಯದ ಕಲಾಪಕ್ಕೆ ಅಡ್ಡಿಮಾಡಿದ್ದಾನೆ.

    ಮೊದಲಿಗೆ ಜೂಹಿ ಚಾವ್ಲಾ ಅವರ 1993 ಸೂಪರ್​ ಹಿಟ್​ ಚಿತ್ರ 'ಹಮ್​ ಹೈ ರಾಹಿ ಪ್ಯಾರ್​ ಕೆ' ಚಿತ್ರದ 'ಘೂನ್​ಘಟ್​ ಕಿ ಆಡ್​ಸೆ' ಹಾಡನ್ನು ಹಾಡಿ ಕಲಾಪದ ಗಂಭೀರತೆಗೆ ಧಕ್ಕೆ ತಂದರು. ಮತ್ತೆ ವರ್ಚುಯಲ್​ ಕಲಾಪಕ್ಕೆ ಪ್ರವೇಶಿದ ಈತ 'ನಜಯಾಜ್'​ ಚಿತ್ರದ 'ಲಾಲ್​ ಲಾಲ್​ ಹೊಂಥನ್​ ಪೆ' ಹಾಡನ್ನು ಹಾಡಲು ಶುರು ಮಾಡಿದ. ಇದಾದ ತಕ್ಷಣಕ್ಕೆ ಮತ್ತೆ ವರ್ಚುಯಲ್​ ಕಲಾಪದಿಂದ ಹೊರ ಹೋಗಿ ಕೆಲ ಕ್ಷಣದ ಬಳಿಕ ಮತ್ತೆ ಬಂದು 'ಬರಾತ್'​ ಸಿನಿಮಾದ 'ಮೆರಿ ಬನ್ನೊ ಕಿ' ಹಾಡನ್ನು ಹಾಡಿ ಕಲಾಪಕ್ಕೆ ಉದ್ದೇಶ ಪೂರ್ವಕವಾಗಿ ಅಡ್ಡಿಪಡಿಸಿದ ಘಟನೆ ನಡೆಯಿತು.

    ವರ್ಚುಯಲ್​ ಕಲಾಪದಲ್ಲಿ ನಡೆದ ಈ ವಿಚಿತ್ರ ಘಟನೆ ಹಿನ್ನಲೆ ವಿಚಾರಣೆಯನ್ನು ನಿಲ್ಲಿಸಲಾಯಿತು. ಬಳಿಕ ಆತನನ್ನು ತೆಗೆದು ಹಾಕಿ ಕಲಾಪವನ್ನು ಮತ್ತೆ ಪುನರ್​ ಆರಂಭಿಸಲಾಯಿತು.

    ನ್ಯಾಯಾಲಯ ಕಲಾಪಕ್ಕೆ ಅಡ್ಡಿ ಪಡಿಸಿದ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ದೆಹಲಿ ಹೈ ಕೋರ್ಟ್​ ಈ ಸಂಬಂಧ ನ್ಯಾಯಾಲಯದ ಘನತೆಗೆ ಧಕ್ಕೆ ತಂದ ಆರೋಪದ ಮೇಲೆ ಕಂಟೆಪ್ಟ್​ ನೋಟಿಸ್​ ಜಾರಿ ಮಾಡಿದೆ. ಆ ವ್ಯಕ್ತಿಯನ್ನು ಹುಡುಕಿ ಆತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚನೆ ನೀಡಲಾಗಿದೆ.

    ಇದನ್ನು ಓದಿ: ಮಗನ ದಯಾಮರಣಕ್ಕೆ ಅರ್ಜಿ ಸಲ್ಲಿಸಿದ ಬೆನ್ನಲ್ಲೇ ತಾಯಿ ಮಡಿಲಲ್ಲಿ ಪ್ರಾಣಬಿಟ್ಟ ಕಂದ

    5ಜಿ ರೇಡಿಯೋ ಫ್ರೀಕ್ವೆನ್ಸಿ ರೇಡಿಯೇಷನ್​ಗೆ ಜನರು ಮತ್ತು ಪ್ರಾಣಿಗಳಿಗೆ ಹಾನಿಯಾಗಲಿದೆ ಎಂದು ಬಾಲಿವುಡ್​ ಬೆಡಗಿ ಜೂಹಿ ಚಾವ್ಲಾ ದೆಹಲಿ ಹೈ ಕೋರ್ಟ್​ ಮೊರೆ ಹೋಗಿದ್ದಾರೆ. 5ಜಿ ತಂತ್ರಜ್ಞಾನ ತರಂಗವೂ ರೇಡಿಯೇಷನ್​ಗಿಂತ 10 ಅಥವಾ 100 ಪಟ್ಟು ಹೆಚ್ಚಾಗುವುದರಿಂದ ಭೂಮಿ ಮೇಲಿನ ಯಾವುದೇ ವ್ಯಕ್ತಿ, ಪ್ರಾಣಿ, ಪಕ್ಷಿ, ಕೀಟ ಸಸ್ಯ ತಪ್ಪಿಸಿಕೊಳ್ಳಲಿ ಸಾಧ್ಯವಿಲ್ಲ. ಈ ಹಿನ್ನಲೆ ಇದು ಎಷ್ಟು ಸುರಕ್ಷಾ ಎಂಬ ಬಗ್ಗೆ ಪೂರಕವಾದ ತಿಳಿಯಪಡೆಸಬೇಕು ಎಂದು ಅವರು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಹೈ ಕೋರ್ಟ್​ ಪೀಠ ಮತ್ತೊಂದು ಪೀಠಕ್ಕೆ ವರ್ಗಾಯಿಸಿತ್ತು. ಇದರ ವಿಚಾರಣೆ ಇಂದು ನಿಗದಿಯಾಗಿತ್ತು. ಈ ಹಿನ್ನಲೆ ನಟಿ ಕೂಡ ತಮ್ಮ ಟ್ವಿಟರ್​ ಖಾತೆಯಲ್ಲಿ ಇದರ ವರ್ಚುಯಲ್​ ವಿಚಾರಣೆ 10.45ಕ್ಕೆ ಆರಂಭವಾಗಲಿದ್ದು, ಇದರಲ್ಲಿ ಭಾಗಿಯಾಗುವ ಕುರಿತ ಲಿಂಕ್​ ಅನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡಿದ್ದರು.

    (ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.)
    Published by:Seema R
    First published: