Viral Video: ಲಾಕ್ಡೌನ್ ಟೈಮಲ್ಲಿ ಜನ ಏನು ಮಾಡಿದ್ರೋ ಬಿಟ್ರೋ ಬಾಯಿರುಚಿಯನ್ನೆಲ್ಲಾ ಮನೆಯಲ್ಲೇ ಥರಾವರಿ ತಿಂಡಿ ತಿನಿಸು ಮಾಡ್ಕೊಂಡು ತೀರಿಸಿಕೊಂಡುಬಿಟ್ರು. ಹೊರಗಂತೂ ಹೋಗುವಂತಿಲ್ಲ, ಮನೆಮಂದಿಯೆಲ್ಲಾ ಮನೆಯೊಳಗೇ ಇರುವಾಗ ಬಾಯಿ ರುಚಿ ತಣಿಸೋಕೆ ನಾನಾ ಯೂಟ್ಯೂಬ್ ಚಾಣೆಲ್ಗಳು, ಫುಡ್ ಬ್ಲಾಗ್ಗಳನ್ನು ನೋಡಿಕೊಂಡೇ ಅದೆಷ್ಟೋ ಜನ ಅಡುಗೆ ಮಾಡುವ ಕಲೆಯನ್ನು ಕರಗತ ಮಾಡಿಕೊಂಡುಬಿಟ್ರು. ವಿವಿಧ ದೇಶಗಳ ಅಡುಗೆ ತಿಂಡಿಗಳೂ ಪರಿಚಿತ ಎನ್ನುವಂತಾಗಿಬಿಡ್ತು. ಅದ್ರಲ್ಲೂ ಬೇಕಿಂಗ್ ವಿಚಾರದಲ್ಲಂತೂ ಎಲ್ರೂ ಎಕ್ಸ್ಪರ್ಟ್ಗಳಾಗ್ಬಿಟ್ರು. ಇದೆಲ್ಲದರ ನಡುವೆ ಸೂಪರ್ ಹಿಟ್ ಅಂತ ಆಗಿದ್ದು ಮಾತ್ರ ಪಾನಿಪುರಿ ಅಲಿಯಾಸ್ ಗೋಲ್ಗಪ್ಪ.
ಬೇರೆ ತಿಂಡಿ ತಿನಿಸುಗಳದ್ದೇ ಒಂದು ತೂಕ ಆದ್ರೆ ಈ ಪಾನಿಪುರಿಯದ್ದೇ ಒಂದು ತೂಕ. ಅಪರೂಪಕ್ಕಾದ್ರೂ ಸರಿ, ಚಾಟ್ಸ್ ತಿನ್ನದಿದ್ರೆ ಬಾಯಿಯ ರುಚಿಯೇ ಕೆಟ್ಟಂತಾಗಿರುತ್ತೆ. ಪಾನಿ ಪುರಿ, ಮಸಾಲಾ ಪುರಿ, ಭೇಲ್ ಪುರಿ, ಸೇವ್ ಪುರಿ, ದಹಿ ಪುರಿ ಯಾವ್ದಾದ್ರೂ ಸರಿ.. ನಾಲಗೆಯ ಮೇಲೆ ಚಟಪಟ ಎನ್ನಿಸುವಂಥಾ ಚಾಟ್ಗಳು ಎಲ್ಲರಿಗೂ ಪ್ರಿಯವೇ. ಪಾನಿ ಪುರಿಗೆ ಬಹುಶಃ ಎಲ್ಲಕ್ಕಿಂತ ಹೆಚ್ಚಿನ ಅಭಿಮಾನಿಗಳು ಇದ್ದಾರೆ ಎನಿಸುತ್ತದೆ.
ಇದನ್ನೂ ಓದಿ: Bengaluru TechHalli: ಸಿಲಿಕಾನ್ ಸಿಟಿ ಅಲ್ಲ, ಬೆಂಗಳೂರು ಇನ್ಮೇಲೆ ಟೆಕ್-ಹಳ್ಳಿ, ರಾಜಧಾನಿಗೆ ಹೊಸಾ ಹೆಸರು !
ಈಗ್ಯಾಕೆ ಇದೆಲ್ಲದರ ವಿಷ್ಯ ಅಂದ್ರೆ ಪಾನಿಪುರಿ ಕೇವಲ ಮನುಷ್ಯರಿಗೆ ಮಾತ್ರವಲ್ಲ, ಪ್ರಾಣಿಗಳಿಗೂ ಅಚ್ಚುಮೆಚ್ಚಿನ ತಿನಿಸು ಎನ್ನುವುದು ಪ್ರೂವ್ ಆಗ್ಬಿಟ್ಟಿದೆ. ಸದ್ಯ ಎಲ್ಲಾ ಕಡೆ ಸಿಕ್ಕಾಪಟ್ಟೆ ಶೇರ್ ಆಗ್ತಿರೋ ವಿಡಿಯೋ ಒಂದರಲ್ಲಿ ಲಖನೌದ ವ್ಯಕ್ತಿಯೊಬ್ಬ ಗೋಲ್ಗಪ್ಪಾವನ್ನು ಹಸು ಮತ್ತು ಅದರ ಕರುವಿಗೆ ತಿನ್ನಿಸುತ್ತಿದ್ದಾರೆ. ಅವುಗಳು ಕೂಡಾ ಒಂದಾದ ಮೇಲೆ ಒಂದು ಎನ್ನುವಂತೆ ಬಾಯಿ ಚಪ್ಪರಿಸಿಕೊಂಡು ಪಾನಿಪುರಿ ಸವಿಯುತ್ತಿವೆ.
ಕಿಶೋರ್ ಕುಮಾರ್ ಹಾಡಿನ ಹಿನ್ನೆಲೆಯೊಂದಿಗೆ ಹರಿದಾಡ್ತಿರೋ ಈ ವಿಡಿಯೋ ಈಗ ಸೂಪರ್ ಹಿಟ್ ಆಗಿದೆ. ಮೊದಲು ಅಂಗಡಿಯವನು ಒಂದು ಪಾನಿಪುರಿಯನ್ನು ತೆಗೆದು ಗ್ರಾಹಕನ ಬಟ್ಟಲಲ್ಲಿ ಇಡುತ್ತಾನೆ. ಗ್ರಾಹಕ ಅದನ್ನು ತೆಗೆದುಕೊಂಡು ತನ್ನ ಬಾಯಿಗೆ ಹಾಕಿಕೊಳ್ಳೋ ಬದಲು ತನ್ನನ್ನೇ ನೋಡುತ್ತಾ ನಿಂತಿದ್ದ ಕರುವಿನ ಬಾಯಿಗಿಡುತ್ತಾನೆ. ಮುಂದಿನ ಪಾನಿಪುರಿ ಕರುವಿನ ಪಕ್ಕದಲ್ಲೇ ಇರುವ ಹಸುವಿಗೆ ನೀಡುತ್ತಾನೆ. ಕರು ಮತ್ತು ಹಸು ಎರಡೂ ಒಂದಾದ ಮೇಲೆ ಒಂದರಂತೆ ಪಾನಿ ಪುರಿ ತಿಂದು ನಾಲಗೆಯಲ್ಲಿ ಮೂತಿ ಒರೆಸಿಕೊಂಡು ಚಪ್ಪರಿಸುತ್ತಿವೆ. ಅವುಗಳಿಗೆ ಇದರ ರುಚಿ ಬಹಳ ಇಷ್ಟವಾದಂತೆ ತೋರುತ್ತದೆ. ಯಾಕಂದರೆ ಒಂದು ಗೋಲ್ಗಪ್ಪವನ್ನು ಕ್ಷಣಾರ್ಧದಲ್ಲಿ ತಿಂದು ಮುಗಿಸುತ್ತಿರುವ ಅವು ಮುಂದಿನದಕ್ಕೆ ಆಗಲೇ ಕುತ್ತಿಗೆ ಮುಂದೆ ಮಾಡಿ ಸಜ್ಜಾಗುತ್ತಿವೆ. ಹೀಗೆ ಹಸುಗಳು ತಿನ್ನುವ ವೇಗಕ್ಕೂ, ಆತ ಅವುಗಳ ಬಾಯಿಗೆ ಇಡೋ ಟೈಮಿಗೂ, ಅದೇ ಸ್ಪೀಡಿಗೆ ಕರೆಕ್ಟಾಗಿ ಒಂದೊಂದಾಗಿ ಪಾನಿಪುರಿ ರೆಡಿ ಮಾಡಿ ಬಟ್ಟಲಿಗೆ ನೀಡೋ ಅಂಗಡಿಯವನಿಗೂ.. ವಿಡಿಯೋ ನೋಡಿದ್ರೆ ಎಲ್ಲರ ಟೈಮಿಂಗ್ ಮಾತ್ರ ಅದ್ಭುತ ಎನಿಸುತ್ತದೆ.
View this post on Instagram
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ