ನವದೆಹಲಿ(ಫೆ. 15): ಈತ ಒಂದಲ್ಲ, ಎರಡಲ್ಲ ಬರೋಬ್ಬರಿ 14 ಜನ ಮಹಿಳೆಯರನ್ನು(Women) ಮದುವೆಯಾಗಿದ್ದ(Marriage). ಅದುವೇ ಒಂದೊಂದು ರಾಜ್ಯದಿಂದ ಒಬ್ಬೊಬ್ಬ ಮಹಿಳೆಯನ್ನು ವರಿಸಿ ಮೋಸ(Cheating) ಮಾಡಿದ್ದ. ಒಟ್ಟು 7 ರಾಜ್ಯಗಳ 14 ಯುವತಿಯರ ಬಾಳಲ್ಲಿ ವಿಲನ್ ಆಗಿದ್ದ. ಈ ವಂಚಕನನ್ನು ಪೊಲೀಸರು ಕೊನೆಗೂ ಪತ್ತೆಹಚ್ಚಿ ಅರೆಸ್ಟ್(Arrest) ಮಾಡಿದ್ದಾರೆ. ತನ್ನ 48 ವರ್ಷಗಳ ಜೀವಿತಾವಧಿಯಲ್ಲಿ 7 ರಾಜ್ಯಗಳ 14 ಮಹಿಳೆಯರನ್ನು ಮದುವೆಯಾಗಿ ಈಗ ಪೊಲೀಸರ ಅತಿಥಿಯಾಗಿದ್ದಾನೆ. ಸೋಮವಾರ ಭುವನೇಶ್ವರದಲ್ಲಿ (Bhuwaneshwar) ಪೊಲೀಸರು ಈ ಕಾಮುಕನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.
ಬಂಧಿತ ಆರೋಪಿ ಒಡಿಶಾದ ಕೇಂದ್ರಾಪರ ಜಿಲ್ಲೆಯ ಪಟ್ಕುರಾ ಪೊಲೀಸ್ ಠಾಣಾ ವ್ಯಾಪ್ತಿಗೆ ಒಳಪಡುವ ಗ್ರಾಮದವನು ಎಂದು ತಿಳಿದು ಬಂದಿದೆ. ಈತ ಅನೇಕ ಮಹಿಳೆಯರನ್ನು ಮದುವೆಯಾಗುವುದಾಗಿ ನಂಬಿಸಿ, ಅವರಿಂದ ಹಣ ಪಡೆದು ಪರಾರಿಯಾಗುತ್ತಿದ್ದ ಎಂಬ ಆರೋಪ ಕೇಳಿ ಬಂದಿದೆ. ಆದರೆ ವಂಚಕ ಈ ಆರೋಪವನ್ನು ಅಲ್ಲಗಳೆದಿದ್ದಾನೆ.
ಒಡಿಶಾದ ಇಬ್ಬರು ಮಹಿಳೆಯರನ್ನು ಮದುವೆಯಾಗಿದ್ದ
ಆರೋಪಿಯು ಮೊದಲ ಬಾರಿಗೆ ಮದುವೆಯಾಗಿದ್ದು 1982ರಲ್ಲಿ. ಬಳಿಕ 2002ರಲ್ಲಿ ಮತ್ತೊಂದು ಮದುವೆಯಾಗುತ್ತಾನೆ. ಈ ಎರಡು ಮದುವೆಯಾಗಿ 5 ಮಕ್ಕಳಿಗೆ ತಂದೆಯಾಗಿದ್ದ ಈ ಭೂಪ ಎಂದು ಭುವನೇಶ್ವರ ಡೆಪ್ಯುಟಿ ಕಮಿಷನರ್ ಆಫ್ ಪೊಲೀಸ್ ಉಮಾಶಂಕರ್ ದಾಶ್ ಹೇಳಿದ್ದಾರೆ.
ಇದನ್ನೂ ಓದಿ:Railway Station: ದೇಶದ 30 ರೈಲು ನಿಲ್ದಾಣಗಳಲ್ಲಿ ಆರಂಭವಾಗಲಿದೆ ವಿಶೇಷ ಸೌಲಭ್ಯ
ಮ್ಯಾಟ್ರಿಮೋನಿಯಲ್ ವೆಬ್ಸೈಟ್ ಮೂಲಕ ವಂಚನೆ
2002ರಿಂದ 2022ರ ನಡುವೆ ಈತ ಮ್ಯಾಟ್ರಿಮೋನಿಯಲ್ ವೆಬ್ಸೈಟ್ಗಳ ಮೂಲಕ ಅನೇಕ ಮಹಿಳೆಯರ ಜೊತೆ ಸಲುಗೆ ಬೆಳೆಸಿಕೊಂಡಿದ್ದ. ತನಗೆ ಈಗಾಗಲೇ ಮದುವೆಯಾಗಿರುವ ವಿಷಯ ಹೇಳದೇ, ಅವರನ್ನು ಒಲಿಸಿಕೊಂಡು ಮದುವೆಯಾಗಿದ್ದ ಎಂದು ದಾಶ್ ಹೇಳಿದ್ದಾರೆ.
ವಿಷಯ ಮುಚ್ಚಿಟ್ಟು 14 ಮದುವೆ
ಹೀಗೆ ಎಲ್ಲರಿಂದಲೂ ವಿಷಯ ಮುಚ್ಚಿಟ್ಟು 14 ಮಂದಿ ಪತ್ನಿಯರನ್ನು ಕಟ್ಟಿಕೊಂಡು ಜೀವನ ಸಾಗಿಸುತ್ತಿದ್ದವನಿಗೆ ಪೊಲೀಸರು ಶಾಕ್ ನೀಡಿದ್ದಾರೆ. ಆರೋಪಿ ಕೊನೆಯ ಹೆಂಡತಿ ಜೊತೆ ಒಡಿಶಾದ ರಾಜಧಾನಿಯಲ್ಲಿ ಇದ್ದ. ಆಕೆ ಶಾಲಾ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಳು. ಹೀಗಿರುವಾಗ ಕೊನೆಯ ಪತ್ನಿಗೆ ಆತನ ಎಲ್ಲಾ ಮೋಸದಾಟಗಳು ತಿಳಿದಿವೆ. ಈಗಾಗಲೇ ಸಾಕಷ್ಟು ಮದುವೆಗಳಾಗಿ ವಂಚನೆ ಮಾಡಿದ್ದಾನೆ ಎಂಬ ವಿಷಯ ಬೆಳಕಿಗೆ ಬಂದಿದೆ. ಕೂಡಲೇ ಆಕೆ ಪೊಲೀಸರಿಗೆ ದೂರು ನೀಡಿದ್ದಾಳೆ.
ದೂರು ಕೊಟ್ಟ ಕೊನೆಯ ಹೆಂಡತಿ
ದೂರು ದಾಖಲಿಸಿಕೊಂಡ ಪೊಲೀಸರು ಭುವನೇಶ್ವರದ ಮನೆಯಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ. ಈತ ಮಧ್ಯ ವಯಸ್ಸಿನ ಒಂಟಿ ಮಹಿಳೆಯರನ್ನೇ ಹೆಚ್ಚಾಗಿ ಟಾರ್ಗೆಟ್ ಮಾಡುತ್ತಿದ್ದ. ಮ್ಯಾಟ್ರಿಮೋನಲ್ ವೆಬ್ಸೈಟ್ಗಳಲ್ಲಿ ಒಡನಾಟ ಬಯಸುತ್ತಿದ್ದ ವಿಚ್ಚೇದಿತರನ್ನೇ ಈತ ಹೆಚ್ಚಾಗಿ ವಂಚಿಸಿದ್ದಾನೆ. ಮಹಿಳೆಯರಿಂದ ಹಣ ಪಡೆದು ಬಳಿಕ ಪರಾರಿಯಾಗುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಡಾಕ್ಟರ್ ಎಂದು ಹೇಳಿಕೊಂಡಿದ್ದ
ಈತ ಎಲ್ಲರೊಂದಿಗೆ ತಾನು ಡಾಕ್ಟರ್ ಎಂದು ಹೇಳಿಕೊಂಡು, ಲಾಯರ್ಗಳು, ಫಿಜಿಸಿಯನ್ ಹಾಗೂ ಉನ್ನತ ಶಿಕ್ಷಣ ಪಡೆದಿರುವ ಮಹಿಳೆಯರನ್ನು ಮದುವೆಯಾಗಿದ್ದ. ಪ್ಯಾರಾ-ಮಿಲಿಟರಿ ಪಡೆಯಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯೂ ಸಹ ಈತನ ಮೋಸದಾಟದಲ್ಲಿ ಸಿಲುಕಿದ್ದಾಳೆ.
ಇದನ್ನೂ ಓದಿ: Kerala: ಮದುವೆ ಮನೆಯಲ್ಲಿ ಗೆಳೆಯ ಎಸೆದ ಬಾಂಬ್ಗೆ ಯುವಕ ಬಲಿ, ಅಲ್ಲಿ ನಡೆದದ್ದಾರೂ ಏನು?
7 ರಾಜ್ಯಗಳ ಮಹಿಳೆಯರನ್ನು ಮದುವೆಯಾಗಿದ್ದ
ದೆಹಲಿ, ಪಂಜಾಬ್, ಅಸ್ಸಾಂ, ಜಾರ್ಖಂಡ್ ಮತ್ತು ಒಡಿಶಾ ಸೇರಿದಂತೆ ಒಟ್ಟು 7 ರಾಜ್ಯಗಳ ಮಹಿಳೆಯರನ್ನು ವಂಚಿಸಿದ್ದಾನೆ. ಈತನ ಮೊದಲ ಇಬ್ಬರು ಹೆಂಡತಿಯರು ಒಡಿಶಾದವರು ಎಂದು ತಿಳಿದು ಬಂದಿದೆ.
ವಂಚಕನ ಕೊನೆಯ ಹೆಂಡತಿ ಶಾಲಾ ಶಿಕ್ಷಕಿ ದೂರು ನೀಡಿದಾಗ ಈ ವಿಷಯ ಬೆಳಕಿಗೆ ಬಂದಿದೆ. ಆರೋಪಿ 2018ರಲ್ಲಿ ನವದೆಹಲಿಯಲ್ಲಿ ಆಕೆಯನ್ನು ಮದುವೆಯಾಗಿ ಬಳಿಕ ಭುವನೇಶ್ವರ್ಗೆ ಕರೆತಂದಿದ್ದ.
ಆರೋಪಿಯು 2018 ರಲ್ಲಿ ತನ್ನನ್ನು ನವದೆಹಲಿಯಲ್ಲಿ ಮದುವೆಯಾಗಿ ಭುವನೇಶ್ವರಕ್ಕೆ ಕರೆದೊಯ್ದಿದ್ದಾನೆ ಎಂದು ಕಳೆದ ವರ್ಷ ಜುಲೈನಲ್ಲಿ ಶಾಲಾ ಶಿಕ್ಷಕಿ ಮಹಿಳಾ ಪೊಲೀಸರಿಗೆ ದೂರು ನೀಡಿದಾಗ ವಿಷಯ ಬಯಲಿಗೆ ಬಂದಿದೆ ಎಂದು ಡಿಸಿಪಿ ಹೇಳಿದರು.
ಎಟಿಎಂ & ಆಧಾರ್ ಕಾರ್ಡ್ಗಳ ವಶ
ಈತ ಈಗಾಗಲೇ ಅನೇಕ ಮದುವೆಗಳಾಗಿದ್ದಾನೆ ಎಂಬುದು ಮಹಿಳೆಯ ಗಮನಕ್ಕೆ ಬಂದಿದೆ. ಪೊಲೀಸರು ಮಹಿಳೆಯ ದೂರನ್ನು ಆಧರಿಸಿ ಆರೋಪಿಯನ್ನು ಬಂಧಿಸಿದ್ದಾರೆ. ಇಷ್ಟೇ ಅಲ್ಲದೇ, ಪೊಲೀಸರು ಆರೋಪಿಯಿಂದ 11 ಎಟಿಎಂ ಕಾರ್ಡ್ಗಳು, 4 ಆಧಾರ್ ಕಾರ್ಡ್ಗಳು ಹಾಗೂ ಇನ್ನಿತರೆ ಡಾಕ್ಯುಮೆಂಟ್ಗಳನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿಯನ್ನು ಈ ಹಿಂದೆ 2 ಬಾರಿ ಅರೆಸ್ಟ್ ಮಾಡಲಾಗಿತ್ತು. ಹೈದರಾಬಾದ್ & ಎರ್ನಾಕುಲಂನಲ್ಲಿ ನಿರುದ್ಯೋಗಿ ಯುವಕರಿಗೆ ಕೆಲಸ ಮತ್ತು ಸಾಲ ಕೊಡಿಸುವುದಾಗಿ ನಂಬಿಸಿ ಈತ ಮೋಸ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ