Gujarat: ಕುದಿಯುವ ಎಣ್ಣೆಯಲ್ಲಿ ಕೈಯಿಟ್ಟು ಆಣೆ-ಪ್ರಮಾಣ ಮಾಡು; ಪುಟ್ಟ ಬಾಲಕಿಗೆ ಮಹಿಳೆ ಕಾಟ

ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಂತ್ರಸ್ತ ಬಾಲಕಿ ಅಳುತ್ತಾ, ತನ್ನ ಬಲಗೈಗೆ ಆಗಿರುವ ಗಾಯವನ್ನು ತೋರಿಸುತ್ತಾ,ತನಗಾಗಿರುವ ದೌರ್ಜನ್ಯದ ಬಗ್ಗೆ ಹೇಳಿಕೊಂಡಿರುವ ವಿಡಿಯೋ ವೈರಲ್ ಆಗುತ್ತಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಗುಜರಾತ್(ಸೆ.26): ಪ್ರೇಮ ಸಂಬಂಧವಿಲ್ಲವೆಂದು ಸಾಬೀತು ಪಡಿಸಲು ಅಪ್ರಾಪ್ತ ಬಾಲಕಿಯ(Minor Girl) ಕೈಯ್ಯನ್ನು ಕುದಿಯುತ್ತಿರುವ ಎಣ್ಣೆಯಲ್ಲಿ ಬಲವಂತವಾಗಿ ಮುಳುಗಿಸಿದ ಕ್ರೂರ ಕೃತ್ಯ ರಾಜ್‌ಕೋಟ್(Rajkot) ನ ಭಗವತಿಪುರದಲ್ಲಿ ಕಳೆದ ವರ್ಷವಷ್ಟೇ ನಡೆದಿತ್ತು.. ಈ ಘಟನೆ ಜನರ ಮನಸ್ಸಿನಿಂದ ಮಾಸುವ ಮುನ್ನವೇ ಗುಜರಾತಿ(Gujarat)ನಲ್ಲಿ ಮತ್ತೆ ಇಂಥದ್ದೇ ಹೀನಕೃತ್ಯ ವರದಿಯಾಗಿದೆ .

    ಹೌದು, ತಾನೂ ಸುಳ್ಳು ಹೇಳುತ್ತಿಲ್ಲ ಎಂದು ಸಾಬೀತು ಪಡಿಸುವಂತೆ ಮಾಡಲು, 11ವರ್ಷದ ಬಾಲಕಿಯನ್ನು ಕುದಿಯುವ ಎಣ್ಣೆಯಲ್ಲಿ ಕೈಯಿಟ್ಟು ಆಣೆ ಮಾಡುವಂತೆ ಕ್ರೌರ್ಯ ಮೆರೆದಿದ್ದ ಮಹಿಳೆಯನ್ನು ಪೊಲೀಸರು ಬಂಧಿಸಿರುವ ಘಟನೆ ಗುಜರಾತಿನಲ್ಲಿ ನಡೆದಿದೆ.. ಪಟನ್‌ನ ಸಂತಲ್ಪುರ ಪಟ್ಟಣದಲ್ಲಿ 11 ವರ್ಷದ ಬಾಲಕಿಯನ್ನು ಕುದಿಯುವ ಎಣ್ಣೆಯಲ್ಲಿ ಕೈ ಹಾಕಿ ಆಣೆ ಮಾಡಲು ಒತ್ತಾಯ ಮಾಡಿದ್ದಳು, ಹೀಗಾಗಿ 40 ವರ್ಷದ ಮಹಿಳೆ ಲಖಿ ಮಕ್ವಾನಾಳನ್ನು ಸಂತಲ್ಪುರ ಪೊಲೀಸರು ಬಂಧಿಸಿದ್ದಾರೆ.

    ಘಟನೆಯ ಬಗ್ಗೆ ಮಾಹಿತಿ ನೀಡಿರುವ ಸಂತಲ್ಪುರ್ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಎನ್ ಡಿ ಪರ್ಮಾರ್, ಕಳೆದ ಹತ್ತು ದಿನಗಳ ಹಿಂದೆ ಮಹಿಳೆ ಬೇರೊಬ್ಬ ಪುರುಷನ ಜೊತೆ ಮಾತನಾಡುವುದನ್ನು ಬಾಲಕಿ ನೋಡಿದ್ದಳು.. ಇದನ್ನು ಗಮನಿಸಿದ ಮಹಿಳೆ ಬಾಲಕಿಯ ಮನೆಯಲ್ಲಿ ಯಾರು ಇಲ್ಲದೆ ಇರುವುದನ್ನು ಗಮನಿಸಿ, ಆಕೆಯನ್ನು ಕರೆದು ಬೇರೊಬ್ಬರೊಂದಿಗೆ ಮಾತನಾಡುತ್ತಿದ್ದ ವಿಚಾರವನ್ನ ಯಾರಿಗಾದರೂ ತಿಳಿಸಿದ್ದೀಯಾ ಎಂದು ಪ್ರಶ್ನಿಸಿದ್ದಾಳೆ. ಬಾಲಕಿ ಇಲ್ಲ ಎಂದು ಹೇಳಿದಾಗ, ಇದನ್ನು ಸತ್ಯ ಎಂದು ಸಾಬೀತುಪಡಿಸಲು ಕುದಿಯುವ ಎಣ್ಣೆಗೆ ಕೈ ಹಾಕಿ ಯಾರಿಗೂ ಹೇಳಿಲ್ಲವೆಂದು ಆಣೆ ಮಾಡುವಂತೆ ಬೆದರಿಕೆ ಹಾಕಿದ್ದಾಳೆ. ಇದರಿಂದ ಬಾಲಕಿ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾಳೆ. ಅಲ್ಲದೆ ಆಕೆಯ ಬಲಗೈಯನ್ನು ಬಲವಂತವಾಗಿ ಕುದಿಯುವ ಎಣ್ಣೆಯಲ್ಲಿ ಹಾಕಲು ಯತ್ನಿಸಿದ್ದಾಳೆ, ಇದರಿಂದ ಬಾಲಕಿಗೆ ಗಾಯಗಳಾಗಿವೆ ಎಂದು ಸಬ್ ಇನ್ಸ್‌ಪೆಕ್ಟರ್ ಎನ್ ಡಿ ಪರ್ಮಾರ್ ತಿಳಿಸಿದ್ದಾರೆ.

    ಇದನ್ನೂ ಓದಿ:Bharat Bandh: ನಾಳೆ ಭಾರತ್ ಬಂದ್, ಕರ್ನಾಟಕದಲ್ಲಿ ಬಂದ್​ ಯಶಸ್ವಿಯಾಗುತ್ತಾ? ಅಂದು ಏನಿರುತ್ತೆ, ಏನಿರಲ್ಲ? ಇಲ್ಲಿದೆ ಮಾಹಿತಿ

    ಇನ್ನು ಈ ಘಟನೆ ಬಳಿಕ ಬಾಲಕಿಯ ನೆರೆಮನೆಯ ವ್ಯಕ್ತಿಯೊಬ್ಬ ಬಾಲಕಿಯನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಿಸಿದ್ದಾರೆ. ಸದ್ಯ ಬಾಲಕಿಯ ಪೋಷಕರು ನೀಡಿದ ದೂರಿನ ಆಧಾರದ ಮೇಲೆ ಹಲ್ಲೆ ಮತ್ತು ಕ್ರಿಮಿನಲ್ ಬೆದರಿಕೆ ಆರೋಪದ ಮೇಲೆ ಪ್ರಕರಣ ದಾಖಲು ಮಾಡಿಕೊಂಡು, ಘಟನೆಯ ಬಳಿಕ ಪರಾರಿಯಾಗಿದ್ದ ಆರೋಪಿ ಮಹಿಳೆಯನ್ನು ಬಂಧಿಸಿರುವುದಾಗಿ ಇನ್ಸ್‌ಪೆಕ್ಟರ್ ಎನ್ ಡಿ ಪರ್ಮಾರ್ ಮಾಹಿತಿ ನೀಡಿದ್ದಾರೆ.

    ಇನ್ನು ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗುಜರಾತಿನ ಮಕ್ಕಳ ಹಕ್ಕುಗಳ ಆಯೋಗದ ಅಧ್ಯಕ್ಷ ಜಾಗೃತಿಬೆನ್ ಪಾಂಡ್ಯ, ಕುರಿತು ಈಗಾಗಲೇ ಪಟಾನ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಲ್ಲದೆ ಘಟನೆಯ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ತಿಳಿಸಿದ್ದಾರೆ. ಅಲ್ಲದೆ ಸಂತ್ರಸ್ತ ಬಾಲಕಿಯ ನಿವಾಸಕ್ಕೆ ಭೇಟಿ ನೀಡಿ, ಆಕೆಯ ಚಿಕಿತ್ಸೆಯ ವೆಚ್ಚವನ್ನು ಭರಿಸುವಂತೆ ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ಪಾಂಡ್ಯ ತಿಳಿಸಿದ್ದಾರೆ.

    ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಂತ್ರಸ್ತ ಬಾಲಕಿ ಅಳುತ್ತಾ, ತನ್ನ ಬಲಗೈಗೆ ಆಗಿರುವ ಗಾಯವನ್ನು ತೋರಿಸುತ್ತಾ,ತನಗಾಗಿರುವ ದೌರ್ಜನ್ಯದ ಬಗ್ಗೆ ಹೇಳಿಕೊಂಡಿರುವ ವಿಡಿಯೋ ವೈರಲ್ ಆಗುತ್ತಿದ್ದು, ಕ್ಷುಲಕ ಕಾರಣಕ್ಕೆ ಬಾಲಕಿಯ ಮೇಲೆ ವಿಕೃತಿ ಮೆರೆದ ಮಹಿಳೆಯ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ನೆಟ್ಟಿಗರು, ಅಪ್ರಾಪ್ತೆ ಮೇಲೆ ರಾಕ್ಷಸಿ ಕೃತ್ಯ ಮೆರೆದ ಮಹಿಳೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    • ವರದಿ - ವಾಸುದೇವ್. ಎಂ

    Published by:Latha CG
    First published: