ಅಹಮದಾಬಾದ್: ಗೋವಿನ ಸಗಣಿಯಿಂದ (Cow Dung) ಮಾಡಿದ ಮನೆಗಳ ಮೇಲೆ ಪರಮಾಣು ವಿಕಿರಣದ ಪ್ರಭಾವ ಬೀರುವುದಿಲ್ಲ ಎಂದು ಗುಜರಾತ್ನ (Gujarath court) ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಅಕ್ರಮ ಜಾನುವಾರು ಸಾಗಾಟ ಪ್ರಕರಣದಲ್ಲಿ (Cow Slaughter) ವ್ಯಕ್ತಿಯೊಬ್ಬನಿಗೆ ಜೀವಾವಧಿ ಶಿಕ್ಷೆ ವಿಧಿಸುವ ಸಂದರ್ಭದಲ್ಲಿ ಗುಜರಾತ್ನ ತಾಪಿ ಜಿಲ್ಲಾ ಪ್ರಧಾನ ನ್ಯಾಯಾಧೀಶ ಸಮೀರ್ ವಿನೋದ್ ಚಂದ್ರ ವ್ಯಾಸ್ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಗೋಮೂತ್ರ ಗುಣಪಡಿಸಲಾರದ ಕಾಯಿಲೆಗೆ ಔಷಧಿ!
ಗೋಹತ್ಯೆಯನ್ನು ನಿಲ್ಲಿಸಿದರೆ ಭೂಮಿಯ ಎಲ್ಲಾ ಸಮಸ್ಯೆಗಳು ಬಗೆಹರಿಯುತ್ತವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿರುವ ತಾಪಿ ಪ್ರಧಾನ ಜಿಲ್ಲಾ ನ್ಯಾಯಾಧೀಶ ಸಮೀರ್ ವಿನೋದ್ ಚಂದ್ರ ವ್ಯಾಸ್, ಧರ್ಮವು ಗೋವಿನಿಂದ ಹುಟ್ಟುತ್ತದೆ. ಗೋವಿನ ಸಗಣಿಯಿಂದ ಮಾಡಿದ ಮನೆಗಳ ಮೇಲೆ ಪರಮಾಣು ವಿಕಿರಣದ ಪ್ರಭಾವ ಬೀರುವುದಿಲ್ಲ ಎಂದು ವಿಜ್ಞಾನ ಸಾಬೀತು ಪಡಿಸಿದೆ. ಜೊತೆಗೆ ಗೋಮೂತ್ರವು ಅನೇಕ ಗುಣ ಪಡಿಸಲಾಗದ ರೋಗಗಳಿಗೆ ರಾಮಬಾಣ ಎಂದೂ ಅವರು ಹೇಳಿದ್ದಾರೆ. ವಿಪರ್ಯಾಸ ಅಂದರೆ ನ್ಯಾಯಾಧೀಶರು ಹೇಳಿರುವ ಈ ಹೇಳಿಕೆಗಳಿಗೆ ಯಾವುದೇ ವೈಜ್ಞಾನಿಕ ಆಧಾರಗಳಿಲ್ಲ.
ಇದನ್ನೂ ಓದಿ: ಬೀದಿಯಲ್ಲಿ ಹಸಿದ ಗೋವುಗಳಿಗೆ ಆಹಾರ ಉಣಿಸಿದ ಶಿಖರ್ ಧವನ್; ಹ್ಯಾಟ್ಸ್ ಆಫ್ ಹೇಳಲೇ ಬೇಕು
'ಗೋವು ಕೇವಲ ಪ್ರಾಣಿಯಲ್ಲ, ತಾಯಿ'
ಗೋಸಂರಕ್ಷಣೆಯ ಕುರಿತು ಗುಜರಾತ್ ಸರ್ಕಾರ ಕಳೆದ ನವೆಂಬರ್ನಲ್ಲಿ ಅಂಗೀಕರಿಸಿದ ಕಾಯ್ದೆಯ ಅನುಷ್ಠಾನವನ್ನು ಸರಿಯಾಗಿ ಜಾರಿಗೆ ತರದಿರುವ ಬಗ್ಗೆ ಜಿಲ್ಲಾ ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿದ್ದು, ಗೋವು ಕೇವಲ ಪ್ರಾಣಿ ಮಾತ್ರವಲ್ಲ, ಅದು ತಾಯಿ. ಗೋವು 68 ಕೋಟಿ ಪವಿತ್ರ ಸ್ಥಳಗಳು ಮತ್ತು 33 ಕೋಟಿ ದೇವರುಗಳು ವಾಸಿಸುವ ಜೀವಂತ ಗ್ರಹವಾಗಿದೆ. ಇಡೀ ಬ್ರಹ್ಮಾಂಡದ ಮೇಲೆ ಗೋವಿನ ಪ್ರಾಧಾನ್ಯತೆ ದೊಡ್ಡ ಸ್ಥಾನದಲ್ಲಿ ಇದೆ ಎಂದು ನ್ಯಾಯಾಧೀಶ ಸಮೀರ್ ವಿನೋದ್ ಚಂದ್ರ ವ್ಯಾಸ್ ಹೇಳಿದ್ದಾರೆ.
ಹವಾಮಾನ ಬದಲಾವಣೆಗೆ ಗೋಹತ್ಯೆ ಕಾರಣವಂತೆ!
ಅಲ್ಲದೇ, ಕೆಲವೊಂದು ಸಂಸ್ಕೃತ ಶ್ಲೋಕಗಳನ್ನೂ ಉಲ್ಲೇಖಿಸಿರುವ ನ್ಯಾ. ವಿನೋದ್ ಚಂದ್ರ ವ್ಯಾಸ್, ನಾವು ಗೋವುಗಳನ್ನು ಅತೃಪ್ತಿಗೊಳಿಸಿದರೆ ನಮ್ಮ ಸಂಪತ್ತು, ಆಸ್ತಿಗಳು ಕಣ್ಮರೆಯಾಗುತ್ತವೆ ಎಂದು ಹೇಳಿರುವುದಲ್ಲದೇ, ಗೋಹತ್ಯೆಗೂ ಹವಾಮಾನ ಬದಲಾವಣೆಗೂ ಸಂಬಂಧ ಕಲ್ಪಿಸಿದ್ದಾರೆ. ಇಂದು ಸಮಾಜದಲ್ಲಿರುವ ಸಮಸ್ಯೆಗಳು ಉದ್ರಿಕ್ತಗೊಳ್ಳೋದು ಮತ್ತು ಕೋಪದ ಹೆಚ್ಚಳದ ಕಾರಣದಿಂದ ಆಗಿದೆ. ಇದಕ್ಕೆಲ್ಲ ಏಕೈಕ ಕಾರಣವೆಂದರೆ ಗೋಹತ್ಯೆ. ಗೋಹತ್ಯೆಯನ್ನು ಸಂಪೂರ್ಣವಾಗಿ ನಿಷೇಧಿಸುವವರೆಗೆ ಸಾತ್ವಿಕ ಹವಾಮಾನವು ಬದಲಾವಣೆಯಾಗಿ ತನ್ನ ಪರಿಣಾಮವನ್ನು ಬೀರುವುದಿಲ್ಲೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: Kodagu: ಸರ್ಕಾರದ್ದು ಮಾತಿನಲ್ಲಷ್ಟೇ ಗೋ ರಕ್ಷಣೆಯೇ? ಆಹಾರವಿಲ್ಲದೇ ಬಳಲುತ್ತಿವೆ ಪುಣ್ಯಕೋಟಿಗಳು
ಕಳೆದ ವರ್ಷದ ಆಗಸ್ಟ್ನಲ್ಲಿ 16ರಕ್ಕೂ ಹೆಚ್ಚು ಹಸುಗಳ ಅಕ್ರಮ ಸಾಗಾಟ ಪ್ರಕರಣದಲ್ಲಿ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿತ್ತು. ಇದೀಗ ಆತನಿಗೆ ನ್ಯಾಯಾಲಯವು 5 ಲಕ್ಷ ರೂಪಾಯಿ ದಂಡ ಮತ್ತು ಜೀವಾವಧಿ ಶಿಕ್ಷೆ ವಿಧಿಸಿದೆ.
ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್
ಸದ್ಯ ಗುಜರಾತ್ನ ತಾಪಿ ಪ್ರಧಾನ ಜಿಲ್ಲಾ ನ್ಯಾಯಾಧೀಶ ಸಮೀರ್ ವಿನೋದ್ ಚಂದ್ರ ವ್ಯಾಸ್ ಅವರ ಗೋವಿನ ಕುರಿತ ಅಭಿಪ್ರಾಯವು ಸಾಮಾಜಿಕ ಜಾಲತಾಣದಲ್ಲಿ ಪರ ವಿರೋಧ ಚರ್ಚೆಗೆ ಗ್ರಾಸವಾಗಿದ್ದು, ಒಂದಷ್ಟು ಜನರು ಅವರ ಹೇಳಿಕೆಯನ್ನು ಬೆಂಬಲಿಸಿದರೆ ಅನೇಕ ಜನರು ಫೇಸ್ಬುಕ್, ಟ್ವಿಟ್ಟರ್ ಸೇರಿದಂತೆ ಇನ್ನಿತರ ಸಾಮಾಜಿಕ ಜಾಲತಾಣದ ವೇದಿಕೆಗಳಲ್ಲಿ ಟ್ರೋಲ್ ಮಾಡಿದ್ದಾರೆ. ಗೋಹತ್ಯೆಗೂ ಹವಾಮಾನ ಬದಲಾವಣೆಗೂ ಸಂಬಂಧ ಕಲ್ಪಿಸಿರುವುದಕ್ಕೂ, ಸಮಾಜದ ಸಮಸ್ಯೆಗಳಿಗೆ ಗೋಹತ್ಯೆ ಕಾರಣ, ಗೋವಿನ ಸಗಣಿಯಿಂದ ಮಾಡಿದ ಮನೆಗಳು ಸೂರ್ಯನ ವಿಕಿರಣಗಳಿಂದ ರಕ್ಷಿಸಲ್ಪಡುತ್ತದೆ ಎಂಬ ಇನ್ನಿತರ ಹೇಳಿಕೆಗಳು ಟ್ರೋಲಿಗರ ಬಾಯಿಗೆ ಆಹಾರವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ