ಉತ್ತರ ಪ್ರದೇಶ : ಜಗತ್ತಿನಲ್ಲಿ ದಂಪತಿಗಳ ಮಧ್ಯೆ ಜಗಳ ನಡೆಯೋದು ಸಾಮಾನ್ಯ. ಗಂಡ ಹೆಂಡತಿ ಜಗಳ ಉಂಡು ಮಲಗುವ ತನಕ ಅನ್ನೋ ಮಾತೇ ಇದೆ. ಆದರೆ ಇಲ್ಲೊಂದು ಕಡೆ, ಪತಿರಾಯನೊಬ್ಬ ತನ್ನ ಪತ್ನಿಯ ವಿರುದ್ಧವೇ ಪೊಲೀಸ್ ಠಾಣೆ ಮೆಟ್ಟಿಲೇರಿದ ಘಟನೆ ನಡೆದಿದೆ. ಪದೇ ಪದೇ ದುಬಾರಿ ಗಿಫ್ಟ್ ( Costly Gift) ಕೇಳುತ್ತಿದ್ದ ಪತ್ನಿಯ ಕಿರಿಕಿರಿ ಸಹಿಸಲಾರದ ಗಂಡ, ಇನ್ನು ತನ್ನ ಕೈಲಿ ಸಹಿಸೋಕೆ ಆಗಲ್ಲ ಎಂದು ನಿರ್ಧರಿಸಿ ಪೊಲೀಸರಿಗೆ ದೂರು ನೀಡಿದ ಘಟನೆ ( Police Case ) ಉತ್ತರ ಪ್ರದೇಶದ ಲಕ್ನೋದಲ್ಲಿ ( Lucknow ) ನಡೆದಿದೆ.
ಉತ್ತರ ಪ್ರದೇಶದ ಲಕ್ನೋ ನಗರದ ಆಶಿಯಾನ ನಿವಾಸಿ ಜಿತೇಂದ್ರ ಸಿಂಗ್ (Jitendra Singh) ಎಂಬ ವ್ಯಕ್ತಿ ತನ್ನ ಪತ್ನಿಯ ವಿರುದ್ಧವೇ ಪೊಲೀಸರಿಗೆ ದೂರು ನೀಡಿದ್ದು, ‘ನನ್ನ ಹೆಂಡತಿ ಪದೇ ಪದೇ ಬೆಲೆ ಬಾಳುವ ಉಡುಗೊರೆಗಳನ್ನು ನೀಡುವಂತೆ ನನ್ನನ್ನು ಒತ್ತಾಯಿಸುತ್ತಾಳೆ. ನನಗೆ ಅವಳ ಆಸೆಗಳನ್ನು ಪೂರೈಸಿ ಸಾಕಾಗಿ ಹೋಗಿದೆ. ಇತ್ತೀಚೆಗಂತೂ ಆಕೆಯ ಬೇಡಿಕೆಗಳನ್ನು ಈಡೇರಿಸುವುದಿಲ್ಲ ಎಂದು ಹೇಳಿದರೆ ಮಾನಸಿಕ ಹಿಂಸೆ ನೀಡುತ್ತಾಳೆ ಎಂದು ಜಿತೇಂದ್ರ ಸಿಂಗ್ ಅವರು ತನ್ನ ಪತ್ನಿ ಸೋನಮ್ ವಿರುದ್ಧ ದೂರು ನೀಡಿದ್ದಾರೆ.
ಫೇಸ್ಬುಕ್ ಪರಿಚಯ ಮದುವೆಯತನಕ
ಪೊಲೀಸರಿಗೆ ನೀಡಿರುವ ದೂರಿನಲ್ಲಿ ತನ್ನ ಸಮಸ್ಯೆಯ ಕುರಿತು ವಿಸ್ತಾರವಾಗಿ ಬರೆದಿರುವ ಜಿತೇಂದ್ರ ಸಿಂಗ್, ನಾನು ಮತ್ತು ಸೋನಂ (Sonam ) ಫೇಸ್ಬುಕ್ ಮೂಲಕ ಪರಿಚಯವಾಗಿ ಎರಡು ವರ್ಷಗಳ ಹಿಂದೆ ( 2021 ) ರಲ್ಲಿ ಮದುವೆ ಆಗಿದ್ದೇವೆ. ಮದುವೆ ಆದಾಗಿನಿಂದ ನನಗೆ ಈಕೆ ಮಾನಸಿಕ ಹಿಂಸೆ ನೀಡುತ್ತಾ ಬಂದಿದ್ದಾಳೆ. ನಾನು ಆಕೆಯ ಬೇಡಿಕೆಗಳನ್ನು ಎಲ್ಲಾ ಸಮಯದಲ್ಲಿ ಪೂರೈಸಲು ಪ್ರಯತ್ನ ಪಟ್ಟಿದ್ದೇನೆ. ಆದರೆ ಈಗ ಆಕೆಯ ಬೇಡಿಕೆಗಳು ಹೆಚ್ಚುತ್ತಲೇ ಇವೆ. ಇದರಿಂದ ನನಗೆ ಮಾನಸಿಕ ಒತ್ತಡ ಹೆಚ್ಚುತ್ತಿದೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಇದನ್ನೂ ಓದಿ: Husband and Wife: ತನ್ನ ದುಡ್ಡಲ್ಲಿ ಮಜಾ ಮಾಡ್ತಿದ್ದ ಸೋಮಾರಿ ಪತಿಗೆ ಬುದ್ಧಿ ಕಲಿಸಿದ ಪತ್ನಿ!
ಡಿವೋರ್ಸ್ ನೀಡುವ ಬೆದರಿಕೆ!
ನನ್ನ ಪತ್ನಿ ಸೋನಂ ಪದೇ ಪದೇ ಹಣ ಕೇಳುತ್ತಾಳೆ ಎಂದಿರುವ ಜಿತೇಂದ್ರ ಸಿಂಗ್, ಆಕೆ ಐಷಾರಾಮಿ ಕಾರು ಖರೀದಿಸುವಂತೆ ನನಗೆ ಪೀಡಿಸುತ್ತಾಳೆ. ಅಲ್ಲದೇ ನನ್ನ ಅಮ್ಮನ ಮನೆಯನ್ನು ನಮ್ಮ ಹೆಸರಿಗೆ ವರ್ಗಾಯಿಸಿಕೊಳ್ಳಬೇಕು ಎಂದು ಹಠ ಹಿಡಿದಾಗ ನಾನು ಅದಕ್ಕೆ ಒಪ್ಪಿರಲಿಲ್ಲ. ಅದರ ನಂತರ ಆಕೆ ನನಗೆ ಮಾನಸಿಕವಾಗಿ ಹಿಂಸೆ ನೀಡಲು ಶುರು ಮಾಡಿದಳು. ಅಷ್ಟೇ ಅಲ್ಲದೇ ನನ್ನಿಂದ ಡಿವೋರ್ಸ್ ಪಡೆಯುವಾಗಿ ಬೆದರಿಕೆ ಹಾಕಿದ್ದಾಳೆ. ಆದರೆ ನಾನು ಆರಂಭದಲ್ಲಿ ಆಕೆಯ ಎಲ್ಲಾ ಬೇಡಿಕೆಗಳನ್ನು ಈಡೇರಿಸಿದ್ದೇನೆ. ಬೇಡಿಕೆ ಹೆಚ್ಚಾದಾಗ ನನಗೆ ಕಿರಿಕಿರಿ ಆಗಲು ಶುರು ಆಯಿತು ಎಂದು ಜಿತೇಂದ್ರ ಸಿಂಗ್ ಹೇಳಿದ್ದಾರೆ.
ಇದನ್ನೂ ಓದಿ: Mutual Divorce: ಪರಸ್ಪರ ಒಪ್ಪಿಗೆಯ ಮೇರೆಗೆ ಡಿವೋರ್ಸ್ ಪಡೆಯಲು ಈ ನಿಯಮಗಳನ್ನು ಅನುಸರಿಸಬೇಕು
ಅತ್ತೆ ಮನೆಯನ್ನೂ ತಮ್ಮ ಹೆಸರಿಗೆ ಮಾಡುವಂತೆ ಕಿರಿಕಿರಿ!
ಸೋನಂ ಫೇಸ್ಬುಕ್ನಲ್ಲಿ ಪರಿಚಯವಾದ ನಂತರ ಆತ್ಮೀಯತೆ ಬೆಳೆದು ಆಕೆಯನ್ನು ಮದುವೆಯಾದ ಜಿತೇಂದ್ರ ಸಿಂಗ್ ಲಕ್ನೋದ ಆಶಿಯಾನ ಬಳಿಯ ರಜನಿಕಾಂಡ್ ಸಮೀಪವಿರುವ ಮನಗೆ ಬಂದು ವಾಸಿಸಲು ನಿರ್ಧರಿಸಿದ್ದರು. ಆರಂಭದಲ್ಲಿ ಸಹಜವಾಗಿದ್ದ ಸೋನಂ ದಿನ ಕಳೆದಂತೆ ತನಗೆ ಅತ್ತೆಯೊಂದಿಗೆ ವಾಸ ಮಾಡಲು ಸಾಧ್ಯವಿಲ್ಲ ಎಂದು ಹಠ ಹಿಡಿದಿದ್ದಾಳೆ. ಹೆಂಡತಿಯ ಮಾತಿಗೆ ಒಪ್ಪಿದ ಜಿತೇಂದ್ರ ಸಿಂಗ್ ತಾನು ಬೇರೆ ಮನೆ ಮಾಡಲು ನಿರ್ಧರಿಸಿ ಇಬ್ಬರೂ ಹೊರ ಬಂದಿದ್ದರು. ಅದರ ಬೆನ್ನಲ್ಲೇ ಸೋನಂ ಬೆಲೆ ಬಾಳುವ ಉಡುಗೊರೆಗಳನ್ನು ಕೇಳಲು ಶುರು ಮಾಡಿದ್ದಾಳೆ. ಬಳಿಕ ಅದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿ ಅತ್ತೆಯ ಮನೆಯನ್ನು ತಮ್ಮ ಹೆಸರಿಗೆ ಬರೆಸಲು ಒತ್ತಾಯಿಸಿದಾಗ ಜಿತೇಂದ್ರ ಸಿಂಗ್ ಪತ್ನಿಯ ವಿರುದ್ಧ ತಿರುಗಿ ಬಿದ್ದು ಪೊಲೀಸ್ ಠಾಣೆ ಮೆಟ್ಟಿಲೇರಲು ನಿರ್ಧಾರ ಮಾಡಿದ್ದಾನೆ.
ಸದ್ಯ ಪತ್ನಿಯ ಕಿರಿಕಿರಿಗೆ ಬೇಸತ್ತು ಪೊಲೀಸ್ ಠಾಣೆಯ ಮೆಟ್ಟಿಲೇರಿರುವ ಜಿತೇಂದ್ರ ಸಿಂಗ್, ತನ್ನ ಹೆಂಡತಿಯ ವಿರುದ್ಧ ದೂರು ದಾಖಲಿಸಿದ್ದು, ದುಬಾರಿ ಗಿಫ್ಟ್ ನೀಡುವಂತೆ ಪೀಡಿಸುವ ತನ್ನ ಪತ್ನಿ ಸೋನಂ ವಿರುದ್ಧ ತನಗೆ ಮುಕ್ತಿ ನೀಡಬೇಕೆಂದು ಮೊರೆ ಇಟ್ಟಿದ್ದಾನೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ