ಹಿಂದೂಗಳ (Hindu) ದೊಡ್ಡ ಕನಸು (Dream) ನನಸಾಗುವ ಸಮಯ ಸನಿಹದಲ್ಲಿದೆ. ಉತ್ತರ ಪ್ರದೇಶದ (Uttara Pradesh) ಅಯೋಧ್ಯೆಯಲ್ಲಿರುವ ( Ayodhya Ram Mandir ) ಭವ್ಯ ರಾಮ ಮಂದಿರವು ಜನವರಿ 1, 2024 ರಂದು ಉದ್ಘಾಟನೆಗೊಳ್ಳುವ ನಿರೀಕ್ಷೆಯಿದೆ. ಗಡುವನ್ನು ಪೂರೈಸಲು ನಿರ್ಮಾಣ ಕಾರ್ಯ ಸಹ ಭರದಿಂದ ಸಾಗುತ್ತಿದೆ. ವಿಶೇಷ ಎಂದರೆ ದೇಶದ (Nation) ಹಲವು ಭಾಗಗಳಿಂದ ನಿರ್ಮಾಣಕ್ಕೆ ಬೇಕಾದ ವಸ್ತುಗಳು ಹರಿದು ಬರುತ್ತಿವೆ. ಈ ಹಿಂದೆ ಮಂದಿರ ನಿರ್ಮಾಣಕ್ಕಾಗಿ ಚಿಕ್ಕಬಳ್ಳಾಪುರ (Chikkaballapur) ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆ 12,500 ಗ್ರಾನೈಟ್ ಕಲ್ಲುಗಳನ್ನು ಪೂರೈಕೆ ಮಾಡಿತ್ತು.
ನೇಪಾಳದಿಂದ ರಾಮ ಮಂದಿರಕ್ಕೆ ದೊಡ್ಡ ಉಡುಗೊರೆ!
ಈಗ ನೆರೆಯ ದೇಶ ನೇಪಾಳವು ಸಹ ಮಂದಿರ ನಿರ್ಮಾಣಕ್ಕೆ ಉಡುಗೊರೆ ನೀಡಲು ಸಜ್ಜಾಗಿದ್ದು ಕಾಳಿ ಗಂಡಕಿ ನದಿಯಿಂದ ಎರಡು ಕಲ್ಲುಗಳನ್ನು ರವಾನಿಸಲು ನಿರ್ಧರಿಸಿದೆ ಎನ್ನಲಾಗಿದೆ.
ಮತ್ತು ನೇಪಾಳ ಕಳುಹಿಸಿಕೊಟ್ಟ ಕಲ್ಲುಗಳನ್ನು ವಿಗ್ರಹವನ್ನು ಕೆತ್ತಲು ಬಳಸಲಾಗುತ್ತದೆ ಎಂದು ವರದಿಯಾಗಿದೆ. ಅಷ್ಟೇ ಅಲ್ಲ ಕಲ್ಲುಗಳ ಜೊತೆಗೆ ಶ್ರೀರಾಮನ ಪತ್ನಿ ಸೀತೆಯ ಹುಟ್ಟೂರಾದ ಜನಕಪುರದ ಜನರು ಸಂಪೂರ್ಣ ಲೋಹದ “ಶಿವ ಧನುಷ್” ಅನ್ನು ಉಡುಗೊರೆಯಾಗಿ ನೀಡಲು ಬಯಸಿದ್ದಾರೆ ಎನ್ನಲಾಗಿದೆ.
ಸಾಲಿಗ್ರಾಮದ ಶಿಲೆ ಸಿಗುವ ಗಂಡಕಿ ನದಿಯಿಂದ ಕಲ್ಲು ರವಾನೆ
ನೇಪಾಳದ ಕಾಳಿ ಗಂಡಕಿ ನದಿಯಿಂದ ಸುಮಾರು ಏಳು ಅಡಿ ಉದ್ದ ಮತ್ತು 350 ಟನ್ ತೂಕದ ಎರಡು ಕಲ್ಲುಗಳನ್ನು ಅಯೋಧ್ಯೆಗೆ ಕಳುಹಿಸಲಾಗುತ್ತದೆ.
ಅಲ್ಲಿ ಅವುಗಳನ್ನು ರಾಮನ ವಿಗ್ರಹವನ್ನು ಕೆತ್ತಲು ಬಳಸಲಾಗುತ್ತದೆ ಎಂದು ನೇಪಾಳದ ಜಾನಕಿ ದೇವಸ್ಥಾನದ (ಜನಕ್ಪುರ) ಅರ್ಚಕರು ತಿಳಿಸಿದ್ದಾರೆ.
ಆದರೆ ರಾಮ ಮಂದಿರದ ಟ್ರಸ್ಟ್ ನೇಪಾಳದ ಕಲ್ಲುಗಳನ್ನು ವಿಗ್ರಹವನ್ನು ನಿರ್ಮಿಸಲು ಬಳಸುತ್ತಾರೆಯೇ, ಇಲ್ಲವೇ ಎಂಬುದರ ಬಗ್ಗೆ ಯಾವುದೇ ಸ್ಪಷ್ಟನೆಯನ್ನು ನೀಡಿಲ್ಲ.
ಟ್ರಸ್ಟ್ ವತಿಯಿಂದ ಯಾವುದೇ ಸ್ಪಷ್ಟನೆ ಇಲ್ಲ
ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ಈ ಬಗ್ಗೆ ಯಾವುದೇ ಸ್ಪಷ್ಟನೆ ನೀಡಿಲ್ಲ. ಆದಾಗ್ಯೂ, ಅಯೋಧ್ಯೆಗೆ ಕಲ್ಲುಗಳನ್ನು ಕಳುಹಿಸುವ ಬಗ್ಗೆ ಟ್ರಸ್ಟ್ಗೆ ತಿಳಿದಿಲ್ಲ ಎಂದು ಅವರ ಕಚೇರಿ ತಿಳಿಸಿದೆ.
ರೈ ಅವರು ನವೆಂಬರ್ 2022 ರಲ್ಲಿ, ಶ್ರೀ ರಾಮನ ಪ್ರತಿಮೆಯನ್ನು ನಿರ್ಮಿಸಲು ಕಾಳಿ ಗಂಡಕಿ ನದಿಯಿಂದ ಕಲ್ಲುಗಳನ್ನು ಪಡೆಯುವ ಕಲ್ಪನೆಯನ್ನು ಸ್ವಾಗತಿಸಿ, ಜಾನಕಿ ದೇವಸ್ಥಾನಕ್ಕೆ ಪತ್ರವನ್ನು ಕಳುಹಿಸಿದ್ದರು.
ಕಳೆದ ವರ್ಷ ನವೆಂಬರ್ನಲ್ಲಿ ಟ್ರಸ್ಟ್ನ ಸಭೆಯೊಂದರಲ್ಲಿ ಈ ವಿಚಾರವನ್ನು ಚರ್ಚಿಸಲಾಗಿದೆ ಎಂದು ಕ್ಷೇತ್ರದ ಹಿರಿಯ ಸದಸ್ಯರೊಬ್ಬರು ದಿ ಹಿಂದೂಗೆ ತಿಳಿಸಿದರು.
"ನೇಪಾಳದ ಬಂಡೆಯಿಂದ ವಿಗ್ರಹವನ್ನು ನಿರ್ಮಿಸಬೇಕೆ ಅಥವಾ ದೊಡ್ಡ ದೇವಾಲಯಗಳಲ್ಲಿ ದೇವರು ಮತ್ತು ದೇವತೆಗಳ ವಿಗ್ರಹಗಳನ್ನು ನಿರ್ಮಿಸಲು ಭಾರತದಲ್ಲಿ ಸಾಮಾನ್ಯವಾಗಿ ಬಳಸುವ ಮಕ್ರಾನಾ ಮಾರ್ಬಲ್ನಿಂದ ನಿರ್ಮಿಸಬೇಕೆ ಎಂದು ನಮಗೆ ಇನ್ನೂ ಖಚಿತವಾಗಿಲ್ಲ" ಎಂದು ಸದಸ್ಯರು ಹೇಳಿದ್ದರು.
ಕಲ್ಲುಗಳಿಗೆ ಪೂಜೆ ನೆರವೇರಿಸಿದ ನೇಪಾಳ
ಪುರೋಹಿತರು, ಸ್ಥಳೀಯ ಮುಖಂಡರು ಮತ್ತು ಬೇನಿ ಪುರಸಭೆಯ ನಿವಾಸಿಗಳ ಗುಂಪು ಭಾನುವಾರ ನೇಪಾಳದ ಮಯಾಗಡಿ ಜಿಲ್ಲೆಯ ಕಾಳಿ ಗಂಡಕಿ ನದಿಯ ದಡದಲ್ಲಿ ಹಿಮಾಲಯದ ಕಲ್ಲುಗಳಿಗೆ ಪೂಜೆ ನೆರವೇರಿಸಿತು.
ಸಮಾರಂಭದಲ್ಲಿ ನೇಪಾಳಿ ಕಾಂಗ್ರೆಸ್ನ ಕೇಂದ್ರ ಸಮಿತಿ ಸದಸ್ಯ ಬಿಮಲೇಂದ್ರ ನಿಧಿ, ಗಂಡಕಿ ಪ್ರಾಂತ್ಯದ ಮುಖ್ಯಸ್ಥ ಪೃಥ್ವಿ ಮಾನ್ ಗುರುಂಗ್ ಮತ್ತು ರಾಜೇಂದ್ರ ಸಿಂಗ್ ಪಂಕಜ್, ಹಿರಿಯ ವಿಶ್ವ ಹಿಂದೂ ಪರಿಷತ್ ನಾಯಕ (VHP) ಸೇರಿ ಹಲವರು ಉಪಸ್ಥಿತರಿದ್ದರು.
ಇದನ್ನೂ ಓದಿ:Ayodhya Ram Mandir: ಹೀಗೆ ನಿರ್ಮಾಣವಾಗಲಿದೆ ಶ್ರೀರಾಮ ಮಂದಿರ, ಫೋಟೋಗಳಲ್ಲಿ ನೋಡಿ ಕಣ್ತುಂಬಿಕೊಳ್ಳಿ
ವಾರಗಳ ಕಾಲ ನಡೆದ ಕಲ್ಲು ಪರೀಕ್ಷೆ
ಭೂಗರ್ಭಶಾಸ್ತ್ರಜ್ಞರು ಮತ್ತು ತಂತ್ರಜ್ಞರು ಸೇರಿದಂತೆ ತಜ್ಞರ ತಂಡವು ಹಲವು ದಿನಗಳ ಕಾಲ ಬೃಹತ್ ಕಲ್ಲುಗಳ ತುಂಡುಗಳನ್ನು ಪರೀಕ್ಷೆ ಮಾಡಿ ನಂತರ ಅಂತಿಮವಾಗಿ ಅವುಗಳನ್ನು ಬಳಸಲು ನಿರ್ಧರಿಸಿದೆ ಎಂದು ಜಾನಕಿ ದೇವಸ್ಥಾನದ ಮುಖ್ಯಸ್ಥ ಮಹಂತ್ ರಾಮತಾಪೇಶ್ವರ್ ದಾಸ್ ತಿಳಿಸಿದರು.
ಈ ಕಲ್ಲುಗಳು ಸಾವಿರಾರು ವರ್ಷಗಳವರೆಗೆ ಇರುತ್ತದೆ ಮತ್ತು ಭೂಕಂಪಗಳಿಂದ ಹಾನಿಗೊಳಗಾಗುವುದಿಲ್ಲ ಎಂದು ಧಾರ್ಮಿಕ ಮುಖಂಡರು ಹೇಳಿದ್ದಾರೆ.
ಸಾಲಿಗ್ರಾಮದ ಶಿಲೆಗಳು ಕಂಡುಬರುವ ಏಕೈಕ ಸ್ಥಳ
ನೇಪಾಳದಲ್ಲಿರುವ ಕಾಳಿ ಗಂಡಕಿ ನದಿಯನ್ನು, ನಾರಾಯಣಿ ಎಂದೂ ಕರೆಯುತ್ತಾರೆ. ಯಾಕೆಂದರೆ, ವಿಶ್ವದಲ್ಲಿ ಭಗವಾನ್ ವಿಷ್ಣುವಿನ ರೂಪ ಎಂದೇ ಪರಿಗಣನೆ ಮಾಡಲಾಗಿರುವ ಸಾಲಿಗ್ರಾಮದ ಶಿಲೆಗಳು ಕಂಡುಬರುವ ಏಕೈಕ ಮೂಲ, ಕಾಳಿ ಗಂಡಕಿ ನದಿಯ ತಟ.
ಭಗವಾನ್ ರಾಮನನ್ನು ವಿಷ್ಣುವಿನ ಅವತಾರವೆಂದೇ ಹಿಂದೂಗಳು ನಂಬುತ್ತಾರೆ. ಹಿಮಾಲಯದ ಕಲ್ಲುಗಳ ವಿನಿಮಯವು ನೇಪಾಳ ಮತ್ತು ಭಾರತದ ನಡುವಿನ ಧಾರ್ಮಿಕ ಸಂಬಂಧಗಳನ್ನು ಬಲಪಡಿಸುತ್ತದೆ ಎಂಬುವುದು ಸಹ ಒಂದು ಉದ್ದೇಶ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ