ದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ (Delhi) ವ್ಯಕ್ತಿಯೊಬ್ಬರಿಗೆ ಡಿಕ್ಕಿ ಹೊಡೆದ ಕಾರೊಂದು (Car Accident) ಅವರನ್ನು ಕಿಲೋ ಮೀಟರ್‌ಗಟ್ಟಲೆ ಎಳೆದೊಯ್ದ ಪ್ರಕರಣ ಮಾಸುವ ಮುನ್ನ ಇಂತಹುದೇ ಪ್ರಕರಣವೊಂದು ದೆಹಲಿಯಲ್ಲಿ ಮತ್ತೆ ವರದಿಯಾಗಿದೆ. ಶುಕ್ರವಾರ ಮುಂಜಾನೆ ದೆಹಲಿಯ ಕೇಶವಪುರಂನಲ್ಲಿ ಈ ಆಘಾತಕಾರಿ ಘಟನೆ ನಡೆದಿದ್ದು, ಕಾರು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದ್ದು ಮಾತ್ರವಲ್ಲದೇ, ಚಾಲಕನನ್ನು ಕಾರ್ ಬಾನೆಟ್ ಮೇಲೆ ಸುಮಾರು 350 ಮೀಟರ್‌ವರೆಗೆ (Hit and Run Case) ಎಳೆದೊಯ್ಯಲಾಗಿದೆ. ಪರಿಣಾಮ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ಮತ್ತೋರ್ವನಿಗೆ ಗಾಯಗಳಾಗಿವೆ.
ಪೊಲೀಸರು ನೀಡಿರೋ ಮಾಹಿತಿ ಪ್ರಕಾರ, ಟಾಟಾ ಜೆಸ್ಟ್ ಕಾರಿನಲ್ಲಿ 19ರಿಂದ 21 ವರ್ಷದೊಳಗಿನ ಐವರು ವಿದ್ಯಾರ್ಥಿಗಳು ರಾಷ್ಟ್ರ ರಾಜಧಾನಿಯಲ್ಲಿ ತಿರುಗಾಡುತ್ತಿದ್ದರು. ಅವರೆಲ್ಲರೂ ಮದುವೆ ಕಾರ್ಯಕ್ರಮದಿಂದ ಹಿಂತಿರುಗುತ್ತಿದ್ದವರಾಗಿದ್ದು, ಮುಂಜಾನೆ ಮೂರು ಗಂಟೆಯ ಸುಮಾರಿಗೆ ದೆಹಲಿಯ ಕನ್ನಯ್ಯಾ ನಗರ ಪ್ರದೇಶದ ಪ್ರೇರಣಾ ಚೌಕ್‌ನಲ್ಲಿ ಹೋಂಡಾ ಆಕ್ಟೀವಾ ಸ್ಕೂಟರ್‌ಗೆ ಕಾರು ಡಿಕ್ಕಿ ಹೊಡೆಯುವುದನ್ನು ಕೇಶವಪುರಂ ಪೊಲೀಸ್ ಠಾಣೆಯ ಎರಡು ಪಿಸಿಆರ್ ವ್ಯಾನ್‌ಗಳಲ್ಲಿ ಗಸ್ತು ಕರ್ತವ್ಯದಲ್ಲಿದ್ದ ಪೊಲೀಸರು ಗಮನಿಸಿದ್ದಾರೆ.
ಇದನ್ನೂ ಓದಿ: Bus Accident: ಶಿರಡಿಗೆ ತೆರಳುತ್ತಿದ್ದ ಬಸ್ ನಾಸಿಕ್‌ನಲ್ಲಿ ಭೀಕರ ಅಪಘಾತ, 10 ಪ್ರಯಾಣಿಕರು ಸಾವು, 40 ಮಂದಿಗೆ ಗಾಯ
ಗಾಳಿಯಲ್ಲಿ ಜಿಗಿದ ಸ್ಕೂಟರ್ ಸವಾರ!
ಸ್ಕೂಟರ್ ಓಡಿಸುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಕೈಲಾಶ್ ಭಟ್ನಾಗರ್ ಮತ್ತು ಸುಮಿತ್ ಖಾರಿ ಎಂದು ಗುರುತಿಸಲಾಗಿದ್ದು, ಕಾರು ಸ್ಕೂಟರ್‌ಗೆ ಡಿಕ್ಕಿ ಹೊಡೆದ ರಭಸಕ್ಕೆ ಕಾರ್‌ನ ಬಾನೆಟ್ ತೆರೆದುಕೊಂಡಿದ್ದು, ಪರಿಣಾಮ ಸ್ಕೂಟರ್ ಚಲಾಯಿಸುತ್ತಿದ್ದ ಕೈಲಾಶ್ ಗಾಳಿಯಲ್ಲಿ ಜಿಗಿದು ಕಾರ್‌ನ ಗಾಜು ಮತ್ತು ಬಾನೆಟ್ ನಡುವೆ ಸಿಲುಕಿಕೊಂಡಿದ್ದಾರೆ. ಮತ್ತೋರ್ವ ಸ್ಕೂಟರ್ ಸವಾರ ಸುಮಿತ್ ಕೂಡ ವಾಹನದಿಂದ ಎಸೆಯಲ್ಪಟ್ಟು ಕಾರ್‌ನ ಛಾವಣಿಯ ಮೇಲೆ ಬಿದ್ದಿದ್ದಾನೆ. ಆಗ ಸ್ಕೂಟರ್ ಕಾರ್‌ನ ಬಂಪರ್‌ಗೆ ಸಿಲುಕಿಕೊಂಡಿದೆ.
ಭೀಕರ ಅಪಘಾತ ನಡೆದ ಹಿನ್ನೆಲೆ ಭಯಗೊಂಡ ಕಾರ್‌ನಲ್ಲಿದ್ದವರು ಕಾರನ್ನು ನಿಲ್ಲಿಸುವ ಬದಲು ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದಾರೆ. ಹೀಗಾಗಿ ಕಾರ್‌ನಲ್ಲಿ ಸಿಲುಕಿಕೊಂಡಿದ್ದ ಕೈಲಾಶ್‌ನನ್ನು ಹಾಗೆಯೇ ಎಳೆದುಕೊಂಡು ಹೋಗಿದ್ದಾರೆ. ಇದನ್ನು ಗಮನಿಸುತ್ತಿದ್ದ ಕೇಶವಪುರಂ ಪೊಲೀಸ್ ಠಾಣೆಯ ಹೆಡ್ ಕಾನ್ಸ್‌ಟೇಬಲ್‌ಗಳಾದ ಸುರ್ಜೀತ್ ಸೀಂಗ್ ಮತ್ತು ಕಾನ್‌ಸ್ಟೇಬಲ್ ರಾಮ್ ಕಿಶೋರ್ ಕಾರನ್ನು ಸುಮಾರು 350 ಮೀಟರ್‌ವರೆಗೂ ಹಿಂಬಾಲಿಸಿಕೊಂಡು ಹೋಗಿದ್ದಾರೆ. ಕಾರ್‌ನ್ನು ಪೊಲೀಸರು ಅಡ್ಡಗಟ್ಟಿದಾಗ ಕಾರ್‌ನಲ್ಲಿದ್ದ ಪ್ರವೀಣ್ ಅಲಿಯಾಸ್ ಸಿಲ್ಲಿ (20) ಮತ್ತು ದಿವ್ಯಾಂಶ್ ಪೊಲೀಸರ ಕಣ್ತಪ್ಪಿಸಿ ಪರಾರಿಯಾಗಲು ಯತ್ನಿಸಿದ್ದಾರೆ. ಆದರೆ ಪೊಲೀಸರು ಅವರನ್ನು ಹಿಡಿದು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮೃತಪಟ್ಟ ಕೈಲಾಶ್!
ಈ ಮಧ್ಯೆ ಮತ್ತೊಂದು ಪಿಸಿಆರ್ ವ್ಯಾನ್‌ನಲ್ಲಿ ನಿಯೋಜಿಸಲಾಗಿದ್ದ ಸಹಾಯಕ ಸಬ್ ಇನ್ಸ್‌ಪೆಕ್ಟರ್ ಅಜಬ್ ಸಿಂಗ್ ಮತ್ತು ಹೆಡ್ ಕಾನ್ಸ್‌ಟೇಬಲ್ ಅಮಿತ್ ಅಪಘಾತ ನಡೆದ ಬಗ್ಗೆ ಮಾಹಿತಿ ನೀಡಿದಾಗ ಅವರು ಗಾಯಾಳುಗಳಾದ ಕೈಲಾಶ್ ಮತ್ತು ಸುಮಿತ್ ಅವರನ್ನು ದೀಪ್ ಚಂದ್ ಬಂಧು ಆಸ್ಪತ್ರೆಗೆ ಸೇರಿಸಿದರು. ಆದರೆ ಭೀಕರ ಅಪಘಾತದಿಂದ ಗಂಭೀರ ಗಾಯಗೊಂಡಿದ್ದ ಕೈಲಾಶ್ ಅವರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಇತ್ತ ಸುಮಿತ್ ಅವರಿಗೂ ಗಂಭೀರ ಗಾಯಗಳಾಗಿದ್ದು, ಪೊಲೀಸರು ಚಿಕಿತ್ಸೆ ಮುಂದುವರಿಸಿದ್ದಾರೆ ಎಂದು ತಿಳಿದು ಬಂದಿದೆ.
ಘಟನೆ ನಡೆದ ವೇಳೆ ಕಾರ್‌ನಲ್ಲಿದ್ದ ಆರೋಪಿಗಳ ಪೈಕಿ ಬಹುತೇಕರು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಾಗಿದ್ದು, ಅವೆರಲ್ಲರೂ ಮದ್ಯದ ಅಮಲಿನಲ್ಲಿನ ಇದ್ದರು ಎಂದು ವೈದ್ಯಕೀಯ ಪರೀಕ್ಷೆ ವೇಳೆ ತಿಳಿದು ಬಂದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ