ಕೊರೋನಾ ವೈರಸ್ ಸೋಂಕು ಹರಡುವಿಕೆ ನಿಯಂತ್ರಿಸಲು ಸತತ ಮೂರು ಬಾರಿ ಲಾಕ್ ಡೌನ್ ಘೋಷಿಸಲಾಗಿದೆ. ಬಹುತೇಕ ಉದ್ಯಮಗಳು ನೆಲಕಚ್ಚಿವೆ. ಕೋಟ್ಯಂತರ ಜನರು ಕೆಲಸ, ವ್ಯವಹಾರವಿಲ್ಲದೇ ಹೈರಾಣಗೊಂಡಿದ್ದಾರೆ. ಇವೆಲ್ಲದರ ಮಧ್ಯೆ ಕೆಲ ಕ್ಷೇತ್ರಗಳ ವ್ಯವಹಾರ ಮಾತ್ರ ಭರ್ಜರಿಯಾಗಿ ಮುಂದುವರಿದಿದೆ. ಅಂಥ ವ್ಯವಹಾರಗಳಲ್ಲಿ ಔಷಧ ಮಾರಾಟವೂ ಒಂದು. ಮಾಮೂಲಿಯ ಮೆಡಿಕಲ್ ಸ್ಟೋರ್ಗಳ ಜೊತೆ ಪ್ರಧಾನ ಮಂತ್ರಿ ಜನೌಷಧ ಕೇಂದ್ರಗಳೂ ಕೂಡ ಒಳ್ಳೆಯ ವ್ಯವಹಾರ ನಡೆಸಿವೆ. ಈಗ ನಾವು ಹೇಳಹೊರಟಿರುವ ಬ್ಯುನಿಸೆಸ್ ಅಪೋರ್ಚುನಿಟಿ ಕೂಡ ಇದೇ ಜನೌಷಧ ಕೇಂದ್ರವೇ.
ಪ್ರಧಾನ ಮಂತ್ರಿ ಭಾರತೀಯ ಜನ್ ಔಷಧಿ ಯೋಜನೆ ನಮ್ಮ ಪ್ರಧಾನಿಗಳ ನೆಚ್ಚಿನದ್ದು. 2015ರಲ್ಲಿ ಆರಂಭಗೊಂಡ ಈ ಯೋಜನೆಯಲ್ಲಿ ಬಹಳ ಕಡಿಮೆ ಬೆಲೆಯಲ್ಲಿ ಔಷಧಗಳನ್ನ ಜನರಿಗೆ ತಲುಪಿಸುವುದು ಮುಖ್ಯ ಉದ್ದೇಶ. ಮಾಮೂಲಿಯ ಮೆಡಿಕಲ್ ಸ್ಟೋರ್ಗಳಲ್ಲಿ ಬ್ರ್ಯಾಂಡೆಡ್ ಮೆಡಿಸಿನ್ಗಳಿರುತ್ತವೆ. ಪೇಟೆಂಟ್ ಇತ್ಯಾದಿ ವೆಚ್ಚ ಸೇರುವುದರಿಂದ ಮಾರುಕಟ್ಟೆಯಲ್ಲಿ ಔಷಧ ಬಹಳ ದುಬಾರಿಯಾಗುತ್ತದೆ. ಆದರೆ, ಜನೌಷಧಿ ಕೇಂದ್ರಗಳಲ್ಲಿ ಜೆನೆರಿಕ್ ಔಷಧಗಳು ಲಭ್ಯವಿರುತ್ತವೆ. ಅಂದರೆ ಪೇಟೆಂಟ್ ಇಲ್ಲದ ಔಷಧಗಳು ಸಿಗುತ್ತವೆ. ಇವು ಕೆಲವೊಮ್ಮೆ ಬ್ರಾಂಡೆಡ್ ಮೆಡಿಸಿನ್ಗಿಂತ ಶೇ 90ರಷ್ಟು ಅಗ್ಗದ ದರದಲ್ಲಿ ಲಭ್ಯವಿರುವುದುಂಟು. ಎರಡೂ ಔಷಧಗಳಲ್ಲಿ ಬ್ರ್ಯಾಂಡ್ ಬಿಟ್ಟರೆ ಬೇರೆ ಯಾವುದೇ ವ್ಯತ್ಯಾಸ ಇರದು. ಬಡವರಿಗೆ ಅನುಕೂಲವಾಗಲೆಂದು ಕೇಂದ್ರ ಸರ್ಕಾರವು ಜನ್ ಔಷಧಿ ಯೋಜನೆ ನಡೆಸಿದೆ.
ದೇಶಾದ್ಯಂತ 6,300 ಜನ್ ಔಷಧಿ ಕೇಂದ್ರಗಳ ಸ್ಥಾಪನೆಯಾಗಿದೆ. ಲಾಕ್ ಡೌನ್ ಇದ್ದ ಏಪ್ರಿಲ್ ತಿಂಗಳಲ್ಲಿ ಭರ್ಜರಿ ವಹಿವಾಟು ಆಗಿರುವುದು ತಿಳಿದುಬಂದಿದೆ. ಈಗ ವಾಟ್ಸಾಪ್ ಮತ್ತು ಇಮೇಲ್ ಮೂಲಕವೂ ಔಷಧಿಗೆ ಆರ್ಡರ್ ಮಾಡುವ ವ್ಯವಸ್ಥೆ ಮಾಡಲಾಗಿದೆ. ಒಟ್ಟಿನಲ್ಲಿ ಕೈಗೆಟಕುವ ದರದಲ್ಲಿ ಔಷಧಿಗಳು ಹೆಚ್ಚೆಚ್ಚು ಜನರಿಗೆ ತಲುಪಬೇಕೆಂಬುದು ಸರ್ಕಾರದ ಗುರಿ. ಈ ನಿಟ್ಟಿನಲ್ಲಿ ಜನೌಷಧಿ ಕೇಂದ್ರಗಳನ್ನು ಹೆಚ್ಚಿಸಲು ಕೇಂದ್ರ ಸರ್ಕಾರ ಸಂಕಲ್ಪ ತೊಟ್ಟಿದೆ. ನಿರುದ್ಯೋಗದಿಂದ ಹತಾಶರಾದವರಿಗೆ ಒಳ್ಳೆಯ ಉದ್ಯೋಗಾವಕಾಶ ಇದೆ.
ಇದನ್ನೂ ಓದಿ: SBI Home Loan: ಸಾಲಕ್ಕೆ ಹೊರೆ ಹೆಚ್ಚಿಸಿದ ಎಸ್ಬಿಐ; 30 ಮೂಲಾಂಕಗಳವರೆಗೆ ಸಾಲದ ಬಡ್ಡಿ ಹೆಚ್ಚಳ
ಜನೌಷಧಿ ಕೇಂದ್ರ ಸ್ಥಾಪಿಸುವುದು ಹೇಗೆ?
ಮೊದಲಿಗೆ ಫಾರ್ಮಾಸಿಸ್ಟ್, ಅಂದರೆ ಡಿಫಾರ್ಮಾ, ಎಂ ಫಾರ್ಮಾ ವ್ಯಾಸಂಗ ಮಾಡಿದವರು ಇದನ್ನು ತೆರೆಯಬಹುದು. ವೈದ್ಯರು ಅಥವಾ ನೊಂದಾಯಿತ ವೈದ್ಯಕೀಯ ಸೇವೆಯವರು ಇದನ್ನು ತೆರೆಯಬಹುದು. ಹಾಗೆಯೇ, ಟ್ರಸ್ಟ್, ಎನ್ಜಿಒ, ಖಾಸಗಿ ಆಸ್ಪತ್ರೆ ಮತ್ತು ಸಮಾಜ ಸ್ವಸಹಾಯ ಸಂಘಗಳು ಹಾಗೂ ರಾಜ್ಯ ಸರ್ಕಾರ ಸೂಚಿಸಿದ ಸಂಸ್ಥೆಗಳು ಜನೌಷಧಿ ಕೇಂದ್ರ ಸ್ಥಾಪಿಸಲು ಅರ್ಹತೆ ಹೊಂದಿರುತ್ತಾರೆ.
ಆಸಕ್ತರು ಮತ್ತು ಅರ್ಹರು 120 ಚದರ ಅಡಿ ಸ್ಥಳ ಹೊಂದಿರಬೇಕು. ಕನಿಷ್ಠ 2.5 ಲಕ್ಷ ರೂ ಬಂಡವಾಳ ಹೂಡುವಂತಿರಬೇಕು. ಇಷ್ಟಿದ್ದರೆ ಮಿಕ್ಕ ಧನ ಸಹಾಯವನ್ನು ಕೇಂದ್ರ ಸರ್ಕಾರವೇ ಒದಗಿಸುತ್ತದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಾಗೂ ವಿಶೇಷ ಚೇತನದವರಿಗೆ ಹೆಚ್ಚಿನ ಸಹಾಯ ನೀಡಲಾಗುತ್ತದೆ.
ಎಲ್ಲಕ್ಕಿಂತ ಮುಖ್ಯವಾಗಿ, ಆಕಾಂಕ್ಷಿಯು ಜನ್ ಔಷಧಿ ಸ್ಟೋರ್ ಹೆಸರಿನಲ್ಲಿ ರೀಟೇಲ್ ಡ್ರಗ್ ಮಾರಾಟದ ಪರವಾನಿಗೆ ಪಡೆಯಬೇಕು. ಬಳಿಕ ಜನೌಷಧಿ ಜಾಲತಾಣದಲ್ಲಿ ಲಭ್ಯವಿರುವ ಅರ್ಜಿಯನ್ನು ಡೌನ್ಲೋಡ್ ಮಾಡಬೇಕು. ಭರ್ತಿ ಮಾಡಿದ ಅರ್ಜಿಯನ್ನು ಬ್ಯೂರೋ ಆಫ್ ಫಾರ್ಮಾದ ಜನರಲ್ ಮ್ಯಾನೇಜರ್ಗೆ ಕಳುಹಿಸಿಕೊಡಬೇಕು. ವಿಳಾಸವೆಲ್ಲವೂ ವೆಬ್ಸೈಟ್ನಲ್ಲೇ ಇದೆ.
ಎಷ್ಟು ಆದಾಯ?:
ಮಾರಾಟವಾಗುವ ಔಷಧಿಯಲ್ಲಿ ಶೇ. 20ರಷ್ಟು ಕಮಿಷನಲ್ ಸಿಗುತ್ತದೆ. ಅಂದರೆ, ಒಂದು ಲಕ್ಷ ರೂ ಮೊತ್ತದಷ್ಟು ಔಷಧ ಮಾರಾಟವಾದರೆ 20 ಸಾವಿರ ರೂಪಾಯಿ ಲಾಭ ಸಿಗುತ್ತದೆ. ಮಳಿಗೆ ಪ್ರಾರಂಭಿಸಲು ಸರ್ಕಾರ 2 ಲಕ್ಷ ರೂಪಾಯಿಯರೆಗೆ ಸಹಾಯಧನ ನೀಡುತ್ತದೆ. ಔಷಧ ಮಾರಾಟದ ಆಧಾರದ ಮೇಲೆ ಹೆಚ್ಚುವರಿ 10 ಸಾವಿರ ರೂ ಪ್ರೋತ್ಸಾಹ ಧನ ಕೂಡ ಲಭಿಸಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ