ನವದೆಹಲಿ: ಶ್ರದ್ಧಾ ವಾಕರ್ (Shraddha Walker) ಮತ್ತು ನಿಕ್ಕಿ ಯಾದವ್ (Nikki Yadav) ಅವರ ಬರ್ಬರ ಕೊಲೆ ಇನ್ನೂ ಜನರ ಮನಸ್ಸಿನಿಂದ ಮರೆಯಾಗಿಲ್ಲ. ಅದಾಗಲೇ ದೆಹಲಿಯಲ್ಲಿ (New Delhi) ಮತ್ತೊಂದು ಇಂತಹದೇ ಆಘಾತಕಾರಿ ಪ್ರಕರಣ ನಡೆದು ಹೋಗಿದೆ. ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದ (Live in relationship) ಮಹಿಳೆಯೊಬ್ಬರು ತನ್ನ ಸಂಗಾತಿಯಿಂದ ಬೆಂಕಿ ಹಚ್ಚಲ್ಪಟ್ಟು (Set On Fire) ಸಾವನ್ನಪ್ಪಿದ್ದು, ದೆಹಲಿ ಜನತೆಯನ್ನು ಬೆಚ್ಚಿ ಬೀಳಿಸಿದೆ.
ವಾಯುವ್ಯ ದೆಹಲಿಯ ಅಮನ್ ವಿಹಾರ್ ಬಳಿ ಈ ಘಟನೆ ಸಂಭವಿಸಿದ್ದು, ಡ್ರಗ್ಸ್ ವಿಚಾರವಾಗಿ ನಡೆದ ಇಬ್ಬರ ನಡುವಿನ ಗಲಾಟೆ ಮಹಿಳೆಯ ಕೊಲೆಯಲ್ಲಿ ಅಂತ್ಯವಾಗಿದೆ. ಆರೋಪಿ ಮತ್ತ ಮಹಿಳೆಯು ಕಳೆದ ಕೆಲ ಸಮಯಗಳಿಂದ ಲಿವಿಂಗ್ ಇನ್ ರಿಲೇಶನ್ ಶಿಪ್‌ಲ್ಲಿ ಇದ್ದರು. ಜೋಡಿ ಮಧ್ಯೆ ಆಗಾಗ ಗಲಾಟೆಯೂ ನಡೆಯುತ್ತಿತ್ತು. ಆದರೆ ಇಬ್ಬರ ಮಧ್ಯೆ ಫೆಬ್ರವರಿ 11ರಂದು ನಡೆದ ಗಲಾಟೆ ತಾರಕಕ್ಕೇರಿದ್ದು, ಈ ವೇಳೆ ಆರೋಪಿಯು ಮಹಿಳೆಯ ಮೇಲೆ ಟರ್ಪಂಟೈಲ್ ಆಯಿಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಪರಿಣಾಮ ಮಹಿಳೆಯ ದೇಹ 70%ಗೂ ಹೆಚ್ಚು ಸುಟ್ಟು ಕರಕಲಾಗಿದೆ.
ಇದನ್ನೂ ಓದಿ: Nikki Yadav Case: ನಿಕ್ಕಿ ಕೊಲೆ ಸಂಚಿನಲ್ಲಿ ಸಾಹಿಲ್ ಕುಟುಂಬವೂ ಭಾಗಿ, 2020ರಲ್ಲೇ ನಡೆದಿತ್ತು ಇಬ್ಬರ ವಿವಾಹ!
ಚಿಕಿತ್ಸೆ ಫಲಕಾರಿಯಾಗದೆ ನಿಧನ
ಸುಟ್ಟು ಕರಕಲಾದ ಮಹಿಳೆಯನ್ನು ನಂತರ ಯಾರೋ ನಗರದ ಎಸ್‌ಜಿಎಂ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಳಿಕ ವೈದ್ಯರ ಸೂಚನೆ ಮೇರೆಗೆ ಪೊಲೀಸ್ ಪ್ರಕರಣ ದಾಖಲಿಸಲಾಗಿದ್ದು, ಪೊಲೀಸರು ಆಸ್ಪತ್ರೆಗೆ ತೆರಳಿದಾಗ ಆಕೆಯ ಸ್ಥಿತಿ ಗಂಭೀರವಾಗಿತ್ತು. ಹೀಗಾಗಿ ಪೊಲೀಸರಿಗೆ ಸಂತ್ರಸ್ತ ಮಹಿಳೆಯಿಂದ ಯಾವುದೇ ಹೇಳಿಕೆಯನ್ನು ದಾಖಲಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಮಹಿಳೆಯ ಚೇತರಿಸಿಕೊಳ್ಳಲು ಪೊಲೀಸರು ಕಾಯುತ್ತಿದ್ದರು. ಆದರೆ ಸೋಮವಾರ ಚಿಕಿತ್ಸೆ ಫಲಕಾರಿಯಾಗದೆ ಮಹಿಳೆ ಮೃತಪಟ್ಟಿದ್ದಾರೆ.
ದೇಹದ ಬಹುಭಾಗ ಸುಟ್ಟು ಕರಕಲು
ವಿವಿಧ ಮಾಹಿತಿಯನ್ನರಸಿ ಹೊರಟ ಪೊಲೀಸರಿಗೆ ಮಹಿಳೆ ದೆಹಲಿಯ ಬಲ್ಬೀರ್ ವಿಹಾರ್ ನಿವಾಸಿ ಎಂದು ತಿಳಿದು ಬಂದಿದ್ದು, ಆಕೆ ಪಾದರಕ್ಷೆ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದಳು ಎನ್ನಲಾಗಿದೆ. ದೇಹದ ಬಹುಭಾಗ ಬೆಂಕಿಯಲ್ಲಿ ಸುಟ್ಟು ಕರಕಲಾಗಿದ್ದರಿಂದ ಆಕೆಯನ್ನು ಆರಂಭದಲ್ಲಿ ದೆಹಲಿಯ ಸಫ್ದರ್‌ಜಂಗ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಏಮ್ಸ್ ಟ್ರಾಮಾ ಸೆಂಟರ್‌ಗೆ ಕೊಂಡೊಯ್ಯಲಾಗಿತ್ತು. ಆದರೆ ಅಲ್ಲಿಯೂ ಚಿಕಿತ್ಸೆ ಫಲಿಸದ ಕಾರಣ ಸೋಮವಾರ ಮೃತಪಟ್ಟಿದ್ದಾರೆ.
ಇದನ್ನೂ ಓದಿ: Nikki Yadav ಕೊಲ್ಲುವ ಮುನ್ನ ಸ್ನೇಹಿತರ ಜೊತೆ ಎಂಗೇಜ್‌ಮೆಂಟ್ ಪಾರ್ಟಿ ಮಾಡಿದ್ದ ಕಿರಾತಕ Sahil Gehlot!
ಸದ್ಯ ಮೃತ ಮಹಿಳೆಯ ಮನೆಯವರು ನೀಡಿದ ದೂರಿನ ಆಧಾರದ ಮೇಲೆ ಅಮನ್ ವಿಹಾರ್ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಿಸಲಾಗಿದ್ದು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಆರೋಪಿಯ ಪತ್ತೆಗಾಗಿ ಬಲೆ ಬೀಸಿದ್ದಾರೆ. ಸದ್ಯ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿ ಶವವನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗಿದೆ.
ಪ್ರಕರಣ ಸಂಬಂಧ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ನೀಡಿರುವ ಮಾಹಿತಿ ಪ್ರಕಾರ, ಸಂತ್ರಸ್ತ ಮಹಿಳೆಗೆ ಈ ಹಿಂದೆ ವಿವಾಹವಾಗಿ ಒಂದು ಮಗು ಇತ್ತು. ಆದರೆ 6 ವರ್ಷಗಳ ಹಿಂದೆ ತನ್ನ ಗಂಡನಿಂದ ಬೇರ್ಪಟ್ಟು, ಆರೋಪಿ ಮೋಹಿತ್‌ನೊಂದಿಗೆ ವಾಸ ಮಾಡುತ್ತಿದ್ದರು. ಅಲ್ಲದೇ ನಂತರ ಮೋಹಿತ್‌ನಿಂದ ಇನ್ನೊಂದು ಮಗುವಿಗೆ ಜನ್ಮ ನೀಡಿದ್ದರು. ಕಳೆದ ಫೆಬ್ರವರಿ 6ರಂದು ಆರೋಪಿ ಮೋಹಿತ್ ತನ್ನ ಸ್ನೇಹಿತನ ಜತೆ ಡ್ರಗ್ಸ್ ಸೇವಿಸುತ್ತಿದ್ದ. ಇದನ್ನು ಕಂಡು ಸಂತ್ರಸ್ತ ಮಹಿಳೆ ಆರೋಪಿಯ ಜೊತೆ ಡ್ರಗ್ಸ್ ಸೇವನೆ ಮಾಡದಂತೆ ಜಗಳ ಮಾಡಿದ್ದಾರೆ. ಇದರಿಂದ ಸಿಟ್ಟಿಗೆದ್ದ ಆತ ಮಹಿಳೆಯ ಮೇಲೆ ಟರ್ಪಂಟೈಲ್ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ