ಹೈದರಾಬಾದ್: ಎಲ್ಲಾ ತಂದೆ ತಾಯಿಯರು (Parents) ತಮ್ಮ ಮಕ್ಕಳು (Children) ಚೆನ್ನಾಗಿರಬೇಕೆಂದು ಕಷ್ಟಪಟ್ಟು ಬೆಳೆಸುತ್ತಾರೆ. ತಾವೆಷ್ಟು ನೋವುಂಡರು, ತಮ್ಮ ಮಕ್ಕಳಿಗೆ ಸುಖವಾದ ಜೀವನವನ್ನು ನೀಡುತ್ತಾರೆ. ಇದಕ್ಕಾಗಿ ಅವರು ತಮ್ಮ ಸುಖ, ಸಂತೋಷ, ಅಷ್ಟೇ ಏಕೆ ಪ್ರಾಣವನ್ನಾದರೂ ತ್ಯಾಗ ಮಾಡಲೂ ಹಿಂಜರಿಯುವುದಿಲ್ಲ. ತಮ್ಮ ಮಕ್ಕಳು ದೊಡ್ಡವರಾದ ಮೇಲೆ ತಮ್ಮನ್ನೂ ಅಷ್ಟೇ ಚೆನ್ನಾಗಿ ನೋಡಿಕೊಳ್ಳುತ್ತಾರೆ ಎಂದು ಬಯಸುತ್ತಾರೆ. ಆದರೆ ಕೆಲವು ಮಕ್ಕಳು ತಮ್ಮ ತಂದೆ-ತಾಯಿಯನ್ನು ಕೊನೆಗಾಲದಲ್ಲಿ ತುಂಬಾ ಕಡೆಗಣಿಸುತ್ತಾರೆ. ಕೆಲವು ತಂದೆ ತಾಯಿಯನ್ನು ಹಂಚಿಕೊಂಡು ನೋಡಿಕೊಳ್ಳುತ್ತಾರೆ. ಇಂತಹದೇ ಒಂದು ಘಟನೆ ತೆಲಂಗಾಣದಲ್ಲಿ (Telangana) ನಡೆದಿದ್ದು, ವೃದ್ಧ ತಂದೆಯನ್ನು ನೋಡಿಕೊಳ್ಳುವುದಕ್ಕೆ ನಾಲ್ವರು ಮಕ್ಕಳು ಹಂಚಿಕೊಂಡಿದ್ದಾರೆ. ಇದರಿಂದ ನೊಂದ ತಂದೆ ತನ್ನ ಚಿತೆಯನ್ನು ತಾನೇ ಸಿದ್ಧಪಡಿಸಿಕೊಂಡು ಜೀವಂತವಾಗಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ (Suicide) ಮಾಡಿಕೊಂಡಿದ್ದಾರೆ.
ತಾನೂ ಮಕ್ಕಳಿಗೆ ಬಾರವಾಗಬಾರದೆಂದು ಆತ್ಮಹತ್ಯೆ
ಮಕ್ಕಳು ತಮ್ಮ ಕಾಲಿನ ಮೇಲೆ ನಿಲ್ಲುವವರೆಗೂ ಪೋಷಕರು ಪೋಷಿಸುತ್ತಾರೆ. ಆದರೆ ಅಂತಹ ಪೋಷಕರು ವಯಸ್ಸಾದ ಮೇಲೆ ಮಕ್ಕಳು ಹೊರೆ ಎಂದು ಭಾವಿಸಿದರೆ ಹೇಗೆ? ತೆಲಂಗಾಣದ ಸಿದ್ದಿಪೇಟ್ ಜಿಲ್ಲೆಯ ಹುಸ್ನಾಬಾದ್ನ ಪೊಟ್ಲಪಲ್ಲಿ ಎಂಬಲ್ಲಿ ನಾಲ್ಕು ಮಕ್ಕಳ ವರ್ತನೆಯಿಂದ ಬೇಸತ್ತು ವೆಂಕಟಯ್ಯ ಎಂಬಾತ ಜೀವವನ್ನೆ ಬಿಟ್ಟಿದ್ದಾರೆ. ಮೇದಬೋಯಿನ ವೆಂಕಟಯ್ಯನಿಗೆ ಕನಕಯ್ಯ, ವುಮ್ಮಯ್ಯ, ಪೋಚಯ್ಯ, ಅರಯ್ಯ ಎಂಬ ನಾಲ್ವರು ಪುತ್ರರು ಹಾಗೂ ಒಬ್ಬ ಪುತ್ರಿ ಇದ್ದರೆಂದು ತಿಳಿದುಬಂದಿದೆ.
ಇದನ್ನೂ ಓದಿ: Boat Tragedy: ಕೇರಳ ಭೀಕರ ದುರಂತ, ಬೋಟ್ ಮುಳುಗಿ ಸಾವನ್ನಪ್ಪಿದವರ ಸಂಖ್ಯೆ 22ಕ್ಕೆ ಏರಿಕೆ!
ತಂದೆಯ ಹಾರೈಕೆಯನ್ನ ತಲಾ ಒಂದು ತಿಂಗಳು ಹಂಚಿಕೊಂಡಿದ್ದ ಮಕ್ಕಳು
ವೆಂಕಟಯ್ಯನಿಗೆ 90 ವರ್ಷ ವಯಸ್ಸು, ಆತನ ಪತ್ನಿ ಈಗಾಗಲೇ ಮೃತಪಟ್ಟಿದ್ದಾರೆ. ವೆಂಕಟಯ್ಯ ತನ್ನ 4 ಎಕರೆ ಜಮೀನನ್ನು ನಾಲ್ವರು ಗಂಡುಮಕ್ಕಳಿಗೆ ಸಮನಾಗಿ ಹಂಚಿದ್ದಾರೆ. ಅವರಿಗೆ ವೃದ್ಧಾಪ್ಯ ವೇತನ ಬರುತ್ತದೆ. ಆದರೆ 90 ವರ್ಷದ ತಂದೆಯನ್ನು ನೋಡಿಕೊಳ್ಳುವುದಕ್ಕೆ ಯಾವೊಬ್ಬ ಮಗನೂ ಮುಂದೆ ಬಂದಿಲ್ಲ. ಬದಲಾಗಿ ನಾಲ್ಕು ಮಕ್ಕಳು ತಮ್ಮ ತಂದೆಯ ಆರೈಕೆಗಾಗಿ ಸರದಿ ತೆಗೆದುಕೊಂಡಿದ್ದಾರೆ. ಗ್ರಾಮಸ್ಥರು ಪಂಚಾಯತಿ ನಡೆಸಿ ತಿಂಗಳಿಗೆ ಒಬ್ಬರು ನೋಡಿಕೊಳ್ಳುವುದಾಗಿ ತೀರ್ಮಾನಿಸಲಾಯಿತು.
ನಾಲ್ವರಲ್ಲಿ ಇಬ್ಬರು ಮಾತ್ರ ಊರಲ್ಲಿದ್ದರು
ವೃದ್ಧನ ನಾಲ್ವರು ಪುತ್ರರಲ್ಲಿ ಇಬ್ಬರು ಸ್ವಂತ ಊರಾದ ಪೊಟ್ಲಪಲ್ಲಿಯಲ್ಲಿದ್ದಾರೆ. 2ನೇ ಮಗ ಹುಸ್ನಾಬಾದ್‌ನಲ್ಲಿ ಮತ್ತು ಕೊನೆ ಮಗ ಕರೀಂನಗರ ಜಿಲ್ಲೆಯ ನವಾಬುಪೇಟೆಯಲ್ಲಿ ವಾಸವಿದ್ದರು. ಇತ್ತೀಚೆಗಷ್ಟೇ ಹಿರಿಯ ಮಗನ ಒಂದು ತಿಂಗಳ ಸರದಿ ಮುಗಿಸಿದ್ದರಿಂದ ವೆಂಕಟಯ್ಯ ನವಾಬುಪೇಟೆಗೆ 2ನೇ ಮಗನ ಮನೆಗೆ ಹೋಗಬೇಕಿತ್ತು. ತಿಂಗಳಿಗೊಮ್ಮೆ ಮನೆ ಬದಲಾಯಿಸುವುದು ವೃದ್ಧನಿಗೆ ತೊಡಕಾಗಿ ಕಾಣಿಸಿದೆ. ಅದೇ ಸಮಯದಲ್ಲಿ ತಾನೂ ತನ್ನ ಮಕ್ಕಳಿಗೆ ಹೊರೆಯಾಗಿದ್ದೇನೆ ಎಂದು ಭಾವಿಸಿದ್ದಾರೆ.
ತಾನೆ ಚಿತೆ ಸಿದ್ದಪಡಿಸಿಕೊಂಡು ಆತ್ಮಹತ್ಯೆ
ಮೇ 2ರಂದು ಸಂಜೆ ಹಿರಿಯ ಮಗನ ಮನೆಯಿಂದ ಹೊರಟ ವೆಂಕಟಯ್ಯ ಗ್ರಾಮದ ಜನಪ್ರತಿನಿಧಿಯೊಬ್ಬರ ಮನೆಗೆ ತೆರಳಿ ತನ್ನ ಅಳಲು ತೋಡಿಕೊಂಡಿದ್ದಾರೆ. 3ರಂದು ಬೆಳಗ್ಗೆ ನವಾಬುಪೇಟೆಗೆ ತೆರಳುತ್ತೇನೆ ಎಂದು ಹೋಗಿದ್ದಾರೆ. ಆದರೆ ಸಂಜೆಯಾದರೂ ಅಲ್ಲಿಗೆ ಹೋಗಿರಲಿಲ್ಲ. ಹೀಗಾಗಿ ಪುತ್ರರು ತಂದೆಗಾಗಿ ಹುಡುಕಾಟ ನಡೆಸಿದಾಗ ಮೇ 4ರಂದು ಮಧ್ಯಾಹ್ನ ಪೊಟ್ಲಪಲ್ಲಿ ಗ್ರಾಮದ ಎಲ್ಲಮ್ಮಗುಟ್ಟದ ಬಳಿ ಸುಟ್ಟ ಶವವೊಂದು ಪತ್ತೆಯಾಗಿದೆ. ಪರಿಶೀಲಿಸಿದಾಗ ಅದು ವೆಂಕಟಯ್ಯನೇ ಎಂಬುದು ಪತ್ತೆಯಾಯಿತು.
ವೆಂಕಟಯ್ಯ ಒಣ ತಾಳೆ ಎಲೆಗಳನ್ನು ರಾಶಿ ಹಾಕಿ ಅದಕ್ಕೆ ಬೆಂಕಿ ಹಚ್ಚಿ ಅದರ ಮೇಲೆ ಹಾರಿ ಸಾವನ್ನಪ್ಪಿದ್ದಾರೆ ಎಂದು ನಂಬಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಎಎಸ್‌ಐ ಮನೆಮ್ಮ ತನಿಖೆ ನಡೆಸುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ