news18-kannada Updated:December 20, 2020, 12:57 PM IST
ಕೋಲ್ಕತ್ತಾ ರ್ಯಾಲಿಯಲ್ಲಿ ಸುವೆಂಧು ಅಧಿಕಾರಿಯ ಜೊತೆ ಅಮಿತ್ ಶಾ.
ಕೋಲ್ಕತ್ತಾ (ಡಿಸೆಂಬರ್ 20); ಬಿಹಾರದ ಚುನಾವಣೆ ಬೆನ್ನಿಗೆ ಬಹು ನಿರೀಕ್ಷಿತ ಪಶ್ಚಿಮ ಬಂಗಾಳ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಮುಂದಿನ ವರ್ಷ ಚುನಾವಣೆ ನಡೆಯುವುದು ಪಕ್ಕಾ ಆಗಿದೆ. ಈ ನಡುವೆ ಬಂಗಾಳದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲೇಬೇಕು ಎಂದು ಬಿಜೆಪಿ ಪಣ ತೊಟ್ಟಂತೆ ಕಾಣುತ್ತಿದೆ. ಕಳೆದ ತಿಂಗಳು ಬಂಗಾಳಕ್ಕೆ ಭೇಟಿ ನೀಡಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಕಾರ್ಯಕರ್ತರ ಸಭೆ ನಡೆಸಿ ಭೂತ್ ಮಟ್ಟದಿಂದ ಪಕ್ಷವನ್ನು ಬಲಪಡಿಸುವಂತೆ ಕಿವಿಮಾತು ಹೇಳಿದ್ದರು. ಇನ್ನೂ ನಿನ್ನೆಯಿಂದ ಮತ್ತೆ ಬಂಗಾಳಕ್ಕೆ ಎರಡು ದಿನಗಳ ಪ್ರವಾಸಕ್ಕೆ ತೆರಳಿರುವ ಅಮಿತ್ ಶಾ ಪಶ್ಚಿಮ ಬಂಗಾಳ ರಾಜಕೀಯದಲ್ಲಿ ಪಕ್ಷಾಂತರದ ಬಿರುಗಾಳಿಯನ್ನೇ ಎಬ್ಬಿಸುತ್ತಿದ್ದಾರೆ. ಆಡಳಿತರೂಢ ಪಕ್ಷ ಸಚಿವ ಸುವೆಂಧು ಅಧಿಕಾರಿ ಈ ಹಿಂದೆಯೇ ಬಿಜೆಪಿಗೆ ಸೇರ್ಪಡೆಯಾಗುವುದು ಖಚಿತವಾಗಿತ್ತು. ಆದರೆ, ಇಂದು ಅವರ ಜೊತೆಗೆ ಮತ್ತೆ ಐವರು ಟಿಎಂಸಿ ಶಾಸಕರು ಸೇರಿದಂತೆ 9 ಶಾಸಕರು ಬಿಜೆಪಿ ಪಾಲಾಗಿದ್ದಾರೆ. ಈ ಬೆಳವಣಿಗೆ ಚುನಾವಣೆ ಮೇಲೆ ಭಾರೀ ಪರಿಣಾಮ ಬೀರಲಿದೆ ಎನ್ನಲಾಗುತ್ತಿದೆ.
ಪ್ರಭಾವಿ ಮುಖಂಡ ಮತ್ತು ಮಾಜಿ ಸಚಿವ ಸುವೇಂದು ಅಧಿಕಾರಿ ಸೇರಿದಂತೆ, 2018ರಲ್ಲಿ ಸಿಪಿಎಂ ತೊರೆದು ಟಿಎಂಸಿ ಸೇರಿದ್ದ ಶಾಸಕಿ ದೀಪಾಲಿ ಬಿಸ್ವಾಸ್ ಮತ್ತು ಸಿಪಿಎಂ, ಸಿಪಿಐ ಹಾಗೂ ಕಾಂಗ್ರೆಸ್ನ ತಲಾ ಒಬ್ಬ ಶಾಸಕರು ಗೃಹ ಸಚಿವ ಅಮಿತ್ ಶಾ ಸಮ್ಮುಖದಲ್ಲಿ ಮೇದಿನಿಪುರದಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಬರ್ಧಮಾನ್ ಪೂರ್ವ ಕ್ಷೇತ್ರದ ಟಿಎಂಸಿ ಸಂಸದ ಸುನಿಲ್ ಮಂಡಲ್ ಕೂಡ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಕೋಲ್ಕತ್ತಾದಲ್ಲಿ ಗೆಲುವು ಸಾಧಿಸುವುದು ಕಷ್ಟ ಎನ್ನಲಾಗಿತ್ತು. ಆದರೆ, ಎಲ್ಲಾ ನಿರೀಕ್ಷೆಗಳನ್ನೂ ಮೀರಿ ಬಿಜೆಪಿ ಅಧಿಕ ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಟಿಎಂಸಿ ಪಕ್ಷಕ್ಕೆ ದೊಡ್ಡ ಶಾಕ್ ನೀಡಿತ್ತು. ಇದೀಗ ವಿಧಾನಸಭಾ ಚುನಾವಣೆ ಬೆನ್ನಿಗೆ ಟಿಎಂಸಿ ಶಾಸಕರು ಬಿಜೆಪಿಗೆ ಪಕ್ಷಾಂತರ ಮಾಡಿರುವುದು ಚುನಾವಣೆ ಮೇಲೆ ಮತ್ತಷ್ಟು ಪರಿಣಾಮ ಬೀರಲಿದೆ. ಈ ಬೆಳವಣಿಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಅವರ ಪಕ್ಷಕ್ಕೆ ಅತ್ಯಂತ ದೊಡ್ಡ ಹಿನ್ನಡೆಯಾಗಲಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ : ಮಾಲೆಗಾಂವ್ ಸ್ಪೋಟ ಪ್ರಕರಣ: 2 ನೇ ಬಾರಿಯೂ ಕೋರ್ಟ್ ಎದುರು ವಿಚಾರಣೆಗೆ ಹಾಜರಾಗದ ಪ್ರಜ್ಞಾ ಸಿಂಗ್ ಠಾಕೂರ್
ಈ ಕುರಿತು ಮಾತನಾಡಿರುವ ಪಕ್ಷಾಂತರಗೊಂಡ ಸುವೆಂಧು ಅಧಿಕಾರಿ, "ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷ ಅಧಿಕಾರದಲ್ಲಿ ಇರಬೇಕು ಎಂದು ನಾನು ಬಯಸುತ್ತೇನೆ. ಇಲ್ಲದೇ ಇದ್ದರೆ ಪಶ್ಚಿಮ ಬಂಗಾಳಕ್ಕೆ ಉಳಿಗಾಲವಿಲ್ಲ. ಇಲ್ಲಿನ ಅರ್ಥ ವ್ಯವಸ್ಥೆ ಮುರಿದುಬಿದ್ದಿದೆ. ಉದ್ಯೋಗ ಇಲ್ಲ, ಎಲ್ಲೆಡೆ ಭ್ರಷ್ಟಾಚಾರ ಇದೆ. ಈ ಎಲ್ಲದರಿಂದ ಹೊರಗೆ ಬರಲು ಇರುವ ಏಕೈಕ ದಾರಿಯೆಂದರೆ ರಾಜ್ಯವನ್ನು ಮೋದಿ ಕೈಗೆ ನೀಡುವುದು" ಎಂದಿದ್ದಾರೆ.
ಅಲ್ಲದೆ, ಅಮಿತ್ ಶಾ ಜೊತೆಗಿನ ಸಾರ್ವಜನಿಕ ಸಭೆಯಲ್ಲಿ ಮಮತಾ ಬ್ಯಾನರ್ಜಿಯವರಿಗೆ ಸವಾಲು ಹಾಕಿರುವ ಸುವೇಂದು ಅಧಿಕಾರಿ, "ಮುಂದಿನ ವರ್ಷ ನಡೆಯಲಿರುವ ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಬಿಜೆಪಿ 200ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದು ಸರ್ಕಾರ ರಚಿಸಲಿದೆ" ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಪಶ್ಚಿಮ ಬಂಗಾಳದ ಇಲ್ಲಿನ ವಿಧಾನಸಭೆಯ ಸದಸ್ಯ ಬಲ 294.
Published by:
MAshok Kumar
First published:
December 20, 2020, 12:55 PM IST