HOME » NEWS » National-international » 9 HELD FOR ISSUING BOGUS TOLL RECEIPTS AT KHED SHIVAPUR PLAZA STG LG

ನಕಲಿ ಟೋಲ್ ರಶೀದಿ ನೀಡಿ ಪ್ರಯಾಣಿಕರಿಗೆ ವಂಚನೆ; 9 ಜನರ ಬಂಧನ

ಫೆಬ್ರವರಿ 16ರಂದು ಟೋಲ್ ಬೂತ್ ಸಿಬ್ಬಂದಿ ಸತಾರಾಗೆ ಹೋಗುತ್ತಿದ್ದ ಬಾಬರ್ ಅವರಿಂದ 190 ರೂ. ಶುಲ್ಕ ತೆಗೆದುಕೊಂಡಿದ್ದರು. ಬಳಿಕ ಫೆಬ್ರವರಿ 20ರಂದು ಹಿಂದಿರುಗುವಾಗ 130 ರೂ. ಮೊತ್ತದ ನಕಲಿ ರಶೀದಿ ನೀಡಿದ್ದರು. ಇದರಿಂದ ಅನುಮಾನಗೊಂಡ ಬಾಬರ್ ಪೊಲೀಸರಿಗೆ ಮಾಹಿತಿ ನೀಡಿದ್ದರು.

news18-kannada
Updated:February 26, 2021, 12:59 PM IST
ನಕಲಿ ಟೋಲ್ ರಶೀದಿ ನೀಡಿ ಪ್ರಯಾಣಿಕರಿಗೆ ವಂಚನೆ; 9 ಜನರ ಬಂಧನ
ಸಾಂದರ್ಭಿಕ ಚಿತ್ರ
  • Share this:
ಟೋಲ್ ಶುಲ್ಕ ಪಾವತಿ ತಪ್ಪಿಸಲು ಮತ್ತು ವಾಹನ ದಟ್ಟಣೆ ನಿವಾರಿಸುವ ಉದ್ದೇಶದಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (ಎನ್‌ಎಚ್‌ಎಐ) ಅಡಿಯಲ್ಲಿ ಪ್ರಮುಖ ಹೆದ್ದಾರಿಗಳಲ್ಲಿ ಫಾಸ್ಟ್‌ಟ್ಯಾಗ್‌ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಆದರೆ ಟೋಲ್ ಪ್ಲಾಜಾಗಳಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿ ಪ್ರಯಾಣಿಕರಿಗೆ ವಂಚಿಸುತ್ತಿರುವ ಘಟನೆ ಬೆಳಕಿಗೆ ಬಂದಿದೆ.

ಪುಣೆ-ಸತಾರಾ ಹೆದ್ದಾರಿಯಲ್ಲಿರುವ ಖೇಡ್-ಶಿವಪುರ ಟೋಲ್ ಪ್ಲಾಜಾದಲ್ಲಿ ಪ್ರಯಾಣಿಕರಿಗೆ ನಕಲಿ ಟೋಲ್ ರಶೀದಿ ನೀಡಿ ವಂಚಿಸುತ್ತಿದ್ದ 9 ಜನರನ್ನು ರಾಜ್‌ಗಡ್ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳಿಂದ 30ಕ್ಕೂ ಹೆಚ್ಚು ನಕಲಿ ಟೋಲ್ ರಶೀದಿಗಳು, ಮೊಬೈಲ್, ಕಂಪ್ಯೂಟರ್‌ಗಳು, ಬೋಗಸ್ ರಶೀದಿ ತಯಾರಿಸಲು ಬಳಿಸುತ್ತಿದ್ದ ಪ್ರಿಂಟರ್ ಸೇರಿ 71 ಸಾವಿರ ರೂ. ಮೌಲ್ಯದ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ನಿರುದ್ಯೋಗಿಗಳಿಗೆ ಸಿಹಿಸುದ್ದಿ: ಕ್ಯಾಪ್​ಜೆಮಿನಿ ಕಂಪನಿಯಲ್ಲಿ 30 ಸಾವಿರ ಮಂದಿಗೆ ಉದ್ಯೋಗಾವಕಾಶ...!

ಬಂಧಿತ ಆರೋಪಿಗಳನ್ನು ಸುದೇಶ್ ಪ್ರಕಾಶ್ ಗಂಗವಾನೆ, ಅಕ್ಷಯ್ ತಾನಾಜಿ ಸನಾಸ್, ಶುಭಂ ಸೀತಾರಾಮ್ ಡೋಲಾರೆ, ಸಾಯಿ ಲಾಡುರಾಮ್ ಸುತಾರ್, ಹೇಮಂತ್ ಭಾಟೆ, ದಾದಾ ದಲ್ವಿ, ಸತೀಶ್ ಮಾರ್ಗಜೆ, ಸಂಕೇತ್ ಜೈವಂತ್ ಗಾಯಕವಾಡ್.ಮತ್ತು ಅಜಯ್ ಕಾಶಿನಾಥ್ ಚವಾಣ್ ಎಂದು ಗುರುತಿಸಲಾಗಿದೆ. ಪ್ರಯಾಣಿಕರಿಗೆ ಟೋಲ್ ಸಿಬ್ಬಂದಿ ಮೋಸ ಮಾಡುತ್ತಿರುವ ಬಗ್ಗೆ ಅಭಿಜಿತ್ ವಸಂತ್ ಬಾಬರ್ ಎಂಬುವರು ಪೊಲೀಸರಿಗೆ ದೂರು ನೀಡಿದ್ದರು. ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.

ಫೆಬ್ರವರಿ 16ರಂದು ಟೋಲ್ ಬೂತ್ ಸಿಬ್ಬಂದಿ ಸತಾರಾಗೆ ಹೋಗುತ್ತಿದ್ದ ಬಾಬರ್ ಅವರಿಂದ 190 ರೂ. ಶುಲ್ಕ ತೆಗೆದುಕೊಂಡಿದ್ದರು. ಬಳಿಕ ಫೆಬ್ರವರಿ 20ರಂದು ಹಿಂದಿರುಗುವಾಗ 130 ರೂ. ಮೊತ್ತದ ನಕಲಿ ರಶೀದಿ ನೀಡಿದ್ದರು. ಇದರಿಂದ ಅನುಮಾನಗೊಂಡ ಬಾಬರ್ ಪೊಲೀಸರಿಗೆ ಮಾಹಿತಿ ನೀಡಿದ್ದರು. ಟೋಲ್ ಪ್ಲಾಜಾಗೆ ಆಗಮಿಸಿದ ಪೊಲೀಸ್ ಸಿಬ್ಬಂದಿ ರಶೀದಿಯ ಸತ್ಯಾಸತ್ಯತೆಯನ್ನು ಪರಿಶೀಲಿಸಿದ ವೇಳೆ ಪ್ರಯಾಣಿಕರಿಗೆ ವಂಚಿಸಲು ಟೋಲ್ ಸಿಬ್ಬಂದಿ ನಕಲಿ ರಶೀದಿ ನೀಡುತ್ತಿರುವುದು ಗೊತ್ತಾಗಿದೆ.

ರಾಜ್‌ಗಡ್ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ ಪೆಕ್ಟರ್ ಸಂದೀಪ್ ಘೋರ್ಪಡೆ ಮಾತನಾಡಿ, ‘ನಕಲಿ ರಶೀದಿ ನೀಡಿ ಪ್ರಯಾಣಿಕರಿಗೆ ಮೋಸ ಮಾಡುತ್ತಿದ್ದ 9 ಆರೋಪಿಗಳನ್ನು ಬಂಧಿಸಲಾಗಿದ್ದು, ಎಲ್ಲಾ ಆರೋಪಿಗಳ ವಿರುದ್ಧವೂ ಮೋಸ ಮತ್ತು ಖೋಟಾ ಪ್ರಕರಣವನ್ನು ದಾಖಲಿಸಲಾಗಿದೆ. ಈಗ ಈ ದಂಧೆಯ ಹಿಂದಿರುವ ಕಿಂಗ್‌ಪಿನ್‌ಗಾಗಿ ಹುಡುಕಲಾತ್ತಿದೆ’ ಎಂದು ಹೇಳಿದ್ದಾರೆ.

ಖೇಡ್ ಶಿವಪುರ ಟೋಲ್ ನಾಕಾ ಹಟಾವೊ ಸಮಿತಿಯ ಮೌಲಿ ದರ್ವಾಟ್ಕರ್ ಮಾತನಾಡಿ, ‘ಇದು ಗಂಭೀರ ವಿಷಯವಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಮತ್ತು ಟೋಲ್ ನಿರ್ವಹಿಸುವ ಖಾಸಗಿ ಗುತ್ತಿಗೆದಾರರು ಈ ವಿಷಯದ ಬಗ್ಗೆ ಸಂಪೂರ್ಣ ನಿರ್ಲಕ್ಷ್ಯ ವಹಿಸಿದ್ದಾರೆ. ಪ್ರಕರಣದ ಸತ್ಯಗಳನ್ನು ಬೆಳಕಿಗೆ ತರಲು ಆಡಿಟ್ ನಡೆಸುವ ಅವಶ್ಯಕತೆಯಿದೆ’ ಎಂದು ಹೇಳಿದ್ದಾರೆ.

ಎನ್‌ಎಚ್‌ಎಐ ನಿರ್ದೇಶಕ ಸುಹಾಸ್ ಚಿಟ್ನಿಸ್ ಪ್ರತಿಕ್ರಿಯಿಸಿದ್ದು, ‘ನನಗೆ ಈ ವಿಷಯದ ಬಗ್ಗೆ ತಿಳಿದಿಲ್ಲ. ಪುಣೆ-ಸತಾರಾ ಪ್ರಾದೇಶಿಕ ಹೆದ್ದಾರಿ (ಪಶ್ಚಿಮ ಪ್ರದೇಶ)ಯ ರಿಲಯನ್ಸ್ ಇನ್ಫ್ರಾಸ್ಟ್ರಕ್ಚರ್ ಮುಖ್ಯಸ್ಥ ಅಮಿತ್ ಭಾಟಿಯಾ ಅವರೊಂದಿಗೆ ಮಾತನಾಡುತ್ತೇನೆ ಎಂದಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಸ್ಥಳೀಯ ಅಪರಾಧ ಶಾಖೆಗೆ ಪುಣೆ ಗ್ರಾಮೀಣ ಎಸ್‌ಪಿ ಅಭಿನವ್ ದೇಶಮುಖ್ ಆದೇಶಿಸಿದ್ದಾರೆ. ಪೊಲೀಸರು ಭಾರತೀಯ ದಂಡ ಸಂಹಿತೆ (ಐಪಿಸಿ) 467, 468, 420 ಮತ್ತು ಸೆಕ್ಷನ್ 47 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.
Published by: Latha CG
First published: February 26, 2021, 12:58 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories