ಚಂಡೀಘಡ (ಆಗಸ್ಟ್ 19); ಶಿಕ್ಷಕರ ನೇಮಕಾತಿ ಹಗರಣದಲ್ಲಿ ಜೈಲು ಪಾಲಾಗಿರುವ ಹರಿಯಾಣದ ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ್ ಚೌಟಾಲಾ ಇಂದು 10ನೇ ತರಗತಿ ತರಗತಿಯ ಇಂಗ್ಲೀಷ್ ಪರೀಕ್ಷೆಯನ್ನು ಬರೆದಿದ್ದಾರೆ ಎಂದು ತಿಳಿದುಬಂದಿದೆ. ಆದರೆ, 86 ವರ್ಷ ಚೌಟಾಲಾ ಪರೀಕ್ಷೆ ಆರಂಭಿಸಿ ಕೇವಲ 2 ಗಂಟೆಯಲ್ಲಿ ಪರೀಕ್ಷೆಯನ್ನು ಮುಗಿಸಿ ಹೊರಟಿದ್ದಾರೆ ಎಂದು ವರದಿಯಾಗಿದೆ. 2017 ರಲ್ಲಿ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲ್‌ನಿಂದ 10 ನೇ ತರಗತಿ ಪರೀಕ್ಷೆಯನ್ನು ಚೌಟಾಲಾ ಮೊದಲ ಬಾರಿಗೆ ಎದುರಿಸಿದ್ದರು. ಆದರೆ, ಶಿಕ್ಷಕರ ನೇಮಕಾರಿ ಹಗರಣದಲ್ಲಿ 2013ರಲ್ಲಿ ಸುಪ್ರೀಂ ಕೋರ್ಟ್ ಅವರಿಗೆ 10 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿತ್ತು.
ಓಂ ಪ್ರಕಾಶ್ ಚೌಟಾಲಾ ದೆಹಲಿಯ ತಿಹಾರ್ ಜೈಲಿನಲ್ಲಿದ್ದಾಗಲೇ ಪರೀಕ್ಷೆಗಾಗಿ ಅಧ್ಯಯನ ಮಾಡಿದ್ದರು. ಆದರೆ, ಇದೀಗ ಪರೋಲ್ನಲ್ಲಿ ಹೊರಗಿರುವ ಅವರು ಪರೀಕ್ಷೆಯನ್ನು ಎದುರಿಸಿದ್ದಾರೆ. ಏತನ್ಮಧ್ಯೆ, ಚೌಟಾಲಾ ಕಳೆದ ತಿಂಗಳು ರಾಷ್ಟ್ರಮಟ್ಟದಲ್ಲಿ "ಥರ್ಡ್ ಫ್ರಂಟ್" ಅನ್ನು ರೂಪಿಸಲು ಶೀಘ್ರದಲ್ಲೇ ವಿರೋಧ ಪಕ್ಷದ ನಾಯಕರನ್ನು ಸಂಪರ್ಕಿಸುವುದಾಗಿಯೂ ತಿಳಿಸಿದ್ದರು.ಬಿಜೆಪಿ ಮಿತ್ರ ಮತ್ತು ಬಿಹಾರದ ಸಿಎಂ ನಿತೀಶ್ ಕುಮಾರ್ ಅವರೊಂದಿಗಿನ ಊಟದ ಸಭೆಯ ಯೋಜನೆಯನ್ನು ಬಹಿರಂಗಪಡಿಸಿದ್ದರು.
ಕೇಂದ್ರದ "ಜನ ವಿರೋಧಿ, ರೈತ ವಿರೋಧಿ" ಸರ್ಕಾರವನ್ನು ತೊಡೆದುಹಾಕುವುದೇ ನಮ್ಮ ಮೊದಲ ಆದ್ಯ ಕರ್ತವ್ಯ ಎಂದು ಘೋಷಿಸಿದ್ದ ಚೌಟಾಲಾ ಸೆಪ್ಟೆಂಬರ್ 25, ಮಾಜಿ ಉಪ ಪ್ರಧಾನ ಮಂತ್ರಿ ದೇವಿ ಲಾಲ್ ಅವರ ಜನ್ಮ ದಿನಾಚರಣೆಗಿಂತ ಮುನ್ನವೇ ಪ್ರತಿಪಕ್ಷ ನಾಯಕರನ್ನು ಭೇಟಿ ಮಾಡಿ, ಎಲ್ಲರನ್ನೂ ಒಂದೇ ವೇದಿಕೆಗೆ ತರಲು ಪ್ರಯತ್ನಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.
"ಪ್ರಬಲವಾದ ತೃತೀಯ ರಂಗವು ರೂಪುಗೊಳ್ಳುವುದನ್ನು ನೋಡುವುದಕ್ಕಾಗಿಯೇ ನನ್ನ ಪ್ರಯತ್ನವಾಗಿದೆ. ಚುನಾವಣೆಯಲ್ಲಿ ನಾವು ಯಶಸ್ವಿಯಾದರೆ ಈ ಜನವಿರೋಧಿ ಮತ್ತು ಭ್ರಷ್ಟ ಸರ್ಕಾರವನ್ನು ಸೋಲಿಸಲಾಗುತ್ತದೆ" ಎಂದು ಹರಿಯಾಣದ ಮಾಜಿ ಮುಖ್ಯಮಂತ್ರಿ ಸುದ್ದಿಗಾರರಿಗೆ ತಿಳಿಸಿದ್ದಾರೆ. ಓಂ ಪ್ರಕಾಶ್ ಚೌಟಾಲಾ ತೃತೀಯ ರಂಗದ ರಚನೆಗೆ ಸಂಬಂಧಿಸಿದಂತೆ ಇತ್ತೀಚೆಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಭೇಟಿ ಮಾಡಿದ್ದರು ಎನ್ನಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ