ಇಂದೋರ್: ಆಸ್ತಿಗೋಸ್ಕರ (Property) ತಂದೆಯನ್ನು, ಅಜ್ಜನನ್ನು, ಸಹೋದರರನ್ನು ಕೊಲೆ (Murder) ಮಾಡಿರುವ ಹಲವು ಪ್ರಕರಣಗಳನ್ನು ನಾವು ಕೇಳಿದ್ದೇವೆ. ಆದರೆ 80 ವರ್ಷದ ತಾತ(Grandfather) ಆಸ್ತಿ ವಿಷಯವಾಗಿ ಏನೂ ಅರಿಯದ ಮುಗ್ಧ ಕಂದಮ್ಮನನ್ನು ಕೊಂದಿರುವ ಆಘಾತಕಾರಿ ಘಟನೆ ಮಧ್ಯ ಪ್ರದೇಶದ (Madhya Pradesh) ಇಂದೋರ್ನಲ್ಲಿ ನಡೆದಿದೆ. 80 ವರ್ಷದ ಶೋಭರಾಮ್ ಎಂಬಾತ ತನ್ನ 4 ವರ್ಷದ ಮರಿಮೊಮ್ಮಗನನ್ನು ನಿರ್ಧಾಕ್ಷಿಣ್ಯವಾಗಿ ಕೊಂದಿದ್ದಾನೆ. ಮೊದಲು ಇದು ಸಹಜ ಸಾವು ಎನ್ನಲಾಗಿತ್ತು, ಆದರೆ ಮರೋಣೋತ್ತರ ಪರೀಕ್ಷೆ ವರದಿ ಬಂದ ನಂತರ ಇದು ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ ಎಂಬುದು ಬೆಳಕಿಗೆ ಬಂದಿದೆ.
ಏಪ್ರಿಲ್ 8ರಂದು ಕೊಲೆ
ಕಳೆದ ತಿಂಗಳು ಏಪ್ರಿಲ್ 8ರಂದು 4 ವರ್ಷದ ಬಾಲಕ ಶ್ರೇಯಾಂಶ್ ಎಂಬ ಬಾಲಕ ಮೃತಪಟ್ಟಿದ್ದರ ಬಗ್ಗೆ ವರದಿಯಾಗಿತ್ತು. ನಂತರ ಬಾಲಕನ ಶವವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ವರದಿಯಲ್ಲಿ ಮಗುವನ್ನು ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ ಎಂಬುದು ಬೆಳಕಿಗೆ ಬಂದಿತ್ತು. ಈ ವರದಿ ಆಧಾರದ ಮೇಲೆ ತನಿಖೆ ಆರಂಭಿಸಲಾಗಿತ್ತು.
ಕೌಟುಂಬಿಕ ಕಲಹ ಕಾರಣ
ಮರಣೋತ್ತರ ಪರೀಕ್ಷೆಯ ವರದಿಯ ಮೇರೆಗೆ ತನಿಖೆ ನಡೆಸಿದ ಪೊಲೀಸರಿಗೆ ಕೌಟುಂಬಿಕ ಕಲಹದಿಂದ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ಶ್ರೇಯಾಂಶ್ ತಾಯಿ ನೀತು ಕಳೆದ ಎರಡು ವರ್ಷಗಳಿಂದ ಗಂಡನನ್ನು ಬಿಟ್ಟು ಮಗುವಿನೊಂದಿಗೆ ತವರಿನಲ್ಲಿದ್ದರು. ಆದರೆ ಮಹಿಳೆಯ ಕುಟುಂಬಸ್ಥರು ಮತ್ತೊಂದು ಮದುವೆ ಮಾಡುವ ಆಲೋಚನೆಯಲ್ಲಿದ್ದರು. ಆದರೆ ಮದುವೆ ನಡೆದಿರಲಿಲ್ಲ.
ಆಸ್ತಿಯಲ್ಲಿ ಪಾಲು ಹೋಗುತ್ತೆ ಅಂತಾ ಕೊಲೆ
ನೀತು ತವರಿನಲ್ಲೇ ಇದ್ದಿದ್ದರಿಂದ ಮಗ ಶ್ರೇಯಾಂಶ್ ಅಜ್ಜನ ಆಸ್ತಿಯಲ್ಲಿ ಪಾಲು ಪಡೆಯಬಹುದು ಎಂಬ ಮಾತು ಬಂದಿದೆ. ಹಾಗಾಗಿ ಬಾಲಕ ಬೆಳೆದು ದೊಡ್ಡವನಾದ ಮೇಲೆ ಆಸ್ತಿಯಲ್ಲಿ ಪಾಲು ಕೇಳಬಹುದು ಎಂದು ಅಜ್ಜ ಶೋಭರಾಮ್ ಭಾವಿಸಿದ್ದಾನೆ. ಹಾಗಾಗಿ ಆರೋಪಿ ಮಗುವಿನಿಂದ ಆಸ್ತಿ ಕಳೆದುಕೊಳ್ಳಬಹುದೆಂದು ಭಾವಿಸಿ, ಆತನನ್ನು ಮುಗಿಸಿದರೆ ಇದಕ್ಕೊಂದು ಅಂತ್ಯ ಹಾಡಬಹುದು ಎಂದು ಭಾವಿಸಿದ್ದಾನೆ.
ಒಂದು ದಿನ ಆರೋಪಿ ಶೋಭರಾಮ್ ಜೊತೆ ಮರಿ ಮೊಮ್ಮಗ ಶ್ರೇಯಾಂಶ್ ಮಲಗಿದ್ದ, ಮಧ್ಯರಾತ್ರಿ ಶ್ರೇಯಾಂಶ್ ಶೌಚಾಲಯಕ್ಕೆ ಹೋಗಬೇಕೆಂದು ಎದ್ದಿದ್ದಾನೆ. ಈ ವೇಳೆ ಶೋಭರಾಮ್ ಬೆಡ್ಶೀಟ್ನಿಂದ ಮುಚ್ಚಿ ಉಸಿರುಗಟ್ಟಿಸಿ ಕೊಂದಿದ್ದಾನೆ. ಕೌಟುಂಬಿಕ ವಿಷಯವಾಗಿದ್ದರಿಂದ ಯಾರೂ ಪೊಲೀಸರಿಗೆ ತಿಳಿಸಲಿಲ್ಲ, ಜೊತೆ ಯಾವುದೇ ಅನುಮಾನ ಕೂಡ ವ್ಯಕ್ತವಾಗಲಿಲ್ಲ. ಕುಟುಂಬದ ಉಳಿದ ಸದಸ್ಯರು ಶ್ರೇಯಾಂಶ್‌ನ ಸಾವನ್ನು ಸಹಜ ಸಾವು ಎಂದು ಒಪ್ಪಿಕೊಂಡಿದ್ದರು " ಎಂದು ಅಧಿಕಾರಿ ಹೇಳಿದ್ದಾರೆ.
ಆಸ್ಪತ್ರೆಯಿಂದ ಮಾಹಿತಿ
ಪೊಲೀಸರಿಗೆ ಆಸ್ಪತ್ರೆಯಿಂದ ಈ ವಿಷಯದ ಬಗ್ಗೆ ಮಾಹಿತಿ ಬಂದಿದ್ದು, ನಂತರ ಪೊಲೀಸರು ಮರಣವನ್ನು ಅನುಮಾನಾಸ್ಪದ ಎಂದು ಪರಿಗಣಿಸಿ ಮರಣೋತ್ತರ ಪರೀಕ್ಷೆಯನ್ನು ನಡೆಸಲಾಯಿತು ಎಂದು ಎಸ್ಪಿ ಹೇಳಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಬಾಲಕ ಉಸಿರುಗಟ್ಟಿ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ. ಅದರ ನಂತರ, ಪೊಲೀಸರು ಪ್ರಕರಣದ ತನಿಖೆಯನ್ನು ಪ್ರಾರಂಭಿಸಿದ್ದಾರೆ. ಈ ವೇಳೆ ನೀತು ಸೇರಿದಂತೆ ಆಕೆಯ ಪೋಷಕರು ಮತ್ತು ಅತ್ತೆಯ ಸಂಬಂಧಿಕರೊಂದಿಗೆ ಸಂಬಂಧ ಹೊಂದಿರುವ ಎಲ್ಲಾ ಜನರನ್ನು ಪ್ರಶ್ನಿಸಿದ್ದಾರೆ.
ಬಾಲಕ ಸಾವನ್ನಪ್ಪಿದ ರಾತ್ರಿ ಅಜ್ಜ ಶೋಭರಾಮ್ ಜೊತೆ ಮಲಗಿದ್ದನೆಂದು ತಿಳಿದು ತೀವ್ರ ವಿಚಾರಣೆ ನಡೆಸಿದಾಗ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ನಂತರ ಕೊಲೆಗೆ ಸಂಬಂಧಿಸಿದಂತೆ ಪೊಲೀಸರು ಐಪಿಸಿ ಸೆಕ್ಷನ್ 302ರ ಪ್ರಕಾರ ಆರೋಪಿ ಮೇಲೆ ಕೊಲೆ ಪ್ರಕರಣ ದಾಖಲಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ