ನವದೆಹಲಿ: ಕೇಂದ್ರ ಸರ್ಕಾರ (Central Government) ತನಿಖಾ ಸಂಸ್ಥೆಗಳನ್ನು (Investigation Agency) ದುರುಪಯೋಗ ಪಡಿಸುತ್ತಿದೆ ಎಂದು ಆರೋಪಿಸಿ ಎಂಟು ರಾಷ್ಟ್ರೀಯ ಪಕ್ಷಗಳು (Opposition Party) ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಅವರಿಗೆ ಪತ್ರ ಬರೆದಿವೆ. ಆಮ್ ಆದ್ಮಿ ಪಕ್ಷದ ನಾಯಕ ಮನೀಶ್ ಸಿಸೋಡಿಯಾ ಅವರ ಬಂಧನದ ಬೆನ್ನಲ್ಲೇ ವಿಪಕ್ಷಗಳು ಒಟ್ಟಾಗಿ ಪ್ರಧಾನ ಮಂತ್ರಿಗೆ ಪತ್ರ ಬರೆದಿವೆ.
ಕೇಂದ್ರ ತನಿಖಾ ಸಂಸ್ಥೆಗಳನ್ನು ಸರ್ಕಾರ ದುರುಪಯೋಗ ಪಡಿಸುತ್ತಿದೆ ಎಂದು ಆರೋಪಿಸಿ ಪ್ರಧಾನಿಗೆ ಬರೆದಿರುವ ಪತ್ರಕ್ಕೆ ಮುಖ್ಯಮಂತ್ರಿಗಳಾದ ಕೆ ಚಂದ್ರಶೇಖರ್ ರಾವ್, ಮಮತಾ ಬ್ಯಾನರ್ಜಿ, ಭಗವಂತ್ ಮಾನ್ ಮತ್ತು ಅರವಿಂದ್ ಕೇಜ್ರಿವಾಲ್ ಸಹಿ ಹಾಕಿದ್ದು, ಜೊತೆಗೆ ವಿರೋಧ ಪಕ್ಷದ ನಾಯಕರುಗಳಾದ ಕಾನ್ಫರೆನ್ಸ್‌ನ ಫಾರೂಕ್ ಅಬ್ದುಲ್ಲಾ, ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಶರದ್ ಪವಾರ್, ಶಿವಸೇನೆಯ ಉದ್ದವ್ ಠಾಕ್ರೆ, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಮತ್ತು ಬಿಹಾರ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರು ಕೂಡ ಈ ಪತ್ರಕ್ಕೆ ಸಹಿ ಹಾಕಿದ್ದಾರೆ.
ಇದನ್ನೂ ಓದಿ: Kaustav Bagchi: ಮಮತಾ ಬ್ಯಾನರ್ಜಿ ವಿರುದ್ಧ ಹೇಳಿಕೆ ನೀಡಿದ ಕಾಂಗ್ರೆಸ್ ವಕ್ತಾರನನ್ನು ಬಂಧಿಸಿದ ಪಶ್ಚಿಮ ಬಂಗಾಳ ಪೊಲೀಸರು!
ದೂರ ಉಳಿದ ಕಾಂಗ್ರೆಸ್!
ಇನ್ನು ಎಂಟು ವಿಪಕ್ಷಗಳು ಸೇರಿ ತನಿಖಾ ಸಂಸ್ಥೆಗಳ ದುರುಪಯೋಗದ ವಿರುದ್ಧ ಕೇಂದ್ರ ಸರ್ಕಾರಕ್ಕೆ ಬರೆದಿರುವ ಪತ್ರದಲ್ಲಿ ಕಾಂಗ್ರೆಸ್‌ನ ಸಹಿ ಇಲ್ಲ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯಾಗಲಿ, ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಸೇರಿದಂತೆ ಯಾರೊಬ್ಬರ ಸಹಿಯೂ ಈ ಪತ್ರದಲ್ಲಿ ಇಲ್ಲ. ವಿಪಕ್ಷಗಳು ಒಟ್ಟಾಗಿ ಪ್ರಧಾನಿಗೆ ಬರೆದಿರುವ ಪತ್ರದ ವಿಚಾರದಲ್ಲಿ ಕಾಂಗ್ರೆಸ್ ಹಿಂದೆ ಸರಿದಿದೆಯೋ ಅಥವಾ ಕಾಂಗ್ರೆಸ್ ಪಕ್ಷವನ್ನು ವಿಪಕ್ಷಗಳು ಹೊರಗಿಟ್ಟಿವೆಯೋ ಅನ್ನೋದು ಇನ್ನಷ್ಟೇ ತಿಳಿದು ಬರಬೇಕಿದೆ.
ಹಾಗೆ ನೋಡಿದ್ರೆ ಕಳೆದ ವರ್ಷ ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಇ.ಡಿ ಇಲಾಖೆ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಅವರ ತಾಯಿ ಸೋನಿಯಾ ಗಾಂಧಿ ಇಬ್ಬರನ್ನೂ ಇಡಿ ವಿಚಾರಣೆ ನಡೆಸಿತ್ತು. ಕಾಂಗ್ರೆಸ್ ಪಕ್ಷ ದೇಶಾದ್ಯಂತ ಇದರ ವಿರುದ್ಧ ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳನ್ನು ದುರುಪಯೋಗ ಪಡಿಸುತ್ತಿದೆ. ವಿಪಕ್ಷಗಳ ವಿರುದ್ಧ ಸೇಡಿನ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿತ್ತು. ಆದರೆ ಪ್ರಸ್ತುತ ವಿಪಕ್ಷಗಳು ಸೇರಿ ಇದೇ ವಿಚಾರವಾಗಿ ಪ್ರಧಾನ ಮಂತ್ರಿಗೆ ಬರೆದಿರುವ ಪತ್ರದಲ್ಲಿ ಕಾಂಗ್ರೆಸ್‌ನ ಪಾತ್ರ ಇಲ್ಲದೇ ಇರುವುದು ಅಚ್ಚರಿ ಮೂಡಿಸಿದೆ.
ಇದನ್ನೂ ಓದಿ: American Airlines: ಕುಡಿದ ಮತ್ತಿನಲ್ಲಿ ವಿಮಾನ ಪ್ರಯಾಣಿಕರ ಮೇಲೆ ಮೂತ್ರ ವಿಸರ್ಜನೆ ಮಾಡಿದ ವಿದ್ಯಾರ್ಥಿ!
ಮೋದಿಗೆ ಬರೆದಿರುವ ಪತ್ರದಲ್ಲೇನಿದೆ?
ಕೇಂದ್ರ ತನಿಖಾ ಸಂಸ್ಥೆಗಳ ದುರುಪಯೋಗ ಖಂಡಿಸಿ ಎಂಟು ವಿಪಕ್ಷಗಳು ಪ್ರಧಾನಿ ನರೇಂದ್ರ ಮೋದಿಗೆ ಬರೆದಿರುವ ಪತ್ರದಲ್ಲಿ ಅನೇಕ ವಿಚಾರಗಳನ್ನು ಪ್ರಸ್ತಾಪಿಸಿದ್ದು, ‘ಭಾರತ ಈಗಳೂ ಪ್ರಜಾಸತ್ತಾತ್ಮಕ ದೇಶ ಎಂಬುದನ್ನು ನೀವು ಒಪ್ಪುತ್ತೀರಿ ಎಂದು ನಾವು ಭಾವಿಸುತ್ತೇವೆ. ವಿರೋಧ ಪಕ್ಷದ ಸದಸ್ಯರ ವಿರುದ್ಧ ಕೇಂದ್ರೀಯ ಸಂಸ್ಥೆಗಳ ಅಸ್ಪಷ್ಟ ದುರ್ಬಳಕೆಯು ನಾವು ಪ್ರಜಾಪ್ರಭುತ್ವದಿಂದ ನಿರಂಕುಶಪ್ರಭುತ್ವಕ್ಕೆ ಪರಿವರ್ತನೆಯಾಗಿದ್ದೇವೆ ಎಂಬುದನ್ನು ಸೂಚಿಸುತ್ತದೆ’ ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಅಲ್ಲದೇ, ‘ದೆಹಲಿ ಡಿಸಿಎಂ ಮನೀಶ್ ಸಿಸೋಡಿಯಾ ಅವರನ್ನು ಸಿಬಿಐ ಅಧಿಕಾರಿಗಳ ತಂಡ ಸುದೀರ್ಘವಾಗಿ ವಿಚಾರಣೆ ನಡೆಸಿದರೂ ಅವರ ವಿರುದ್ಧ ಅಕ್ರಮ ಎಸಗಿರುವ ಯಾವುದೇ ಸಾಕ್ಷ್ಯಾಧಾರಗಳು ಸಿಕ್ಕಿಲ್ಲ. ಅದಾಗ್ಯೂ ಅವರನ್ನು ಬಂಧನ ಮಾಡಲಾಗಿದೆ’ ಎಂದು ಪತ್ರದಲ್ಲಿ ಉಲ್ಲೇಖಿಸಿರುವ ವಿಪಕ್ಷಗಳು, ‘2014ರಿಂದ ನಿಮ್ಮ ಆಡಳಿತದ ಅವಧಿಯಲ್ಲಿ ತನಿಖಾ ಸಂಸ್ಥೆಗಳು ಎಫ್‌ಐಆರ್ ದಾಖಲಿಸಿರೋದು, ಬಂಧನ ಮಾಡಿರೋದು, ದಾಳಿ ಮಾಡಿರೋದು, ವಿಚಾರಣೆಗೆ ಒಳಪಡಿಸಿರುವ ಒಟ್ಟು ರಾಜಕಾರಣಿಗಳ ಪೈಕಿ ಬಹುತೇಕರು ವಿಪಕ್ಷಗಳಿಗೆ ಸೇರಿದವರಾಗಿದ್ದಾರೆ. ಅಚ್ಚರಿಯ ವಿಷಯ ಅಂದ್ರೆ ಬಿಜೆಪಿಗೆ ಸೇರುವ ವಿಪಕ್ಷದ ನಾಯಕರ ವಿರುದ್ಧ ತನಿಖೆ ಮಾಡಲು ತನಿಖಾ ಸಂಸ್ಥೆಗಳು ಮುಂದಾಗೋದಿಲ್ಲ’ ಎಂದು ಉಲ್ಲೇಖ ಮಾಡಲಾಗಿದೆ.
ಇನ್ನು ‘ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ಅವರು ಕಾಂಗ್ರೆಸ್‌ನಲ್ಲಿದ್ದಾಗ ಶಾರದಾ ಚಿಟ್ ಫಂಡ್ ಹಗರಣದಲ್ಲಿ ಅವರ ವಿರುದ್ಧ 2014, 2015ರಲ್ಲಿ ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ಪ್ರಕರಣ ದಾಖಲಿಸಿತ್ತು. ಆದರೆ ಅವರು ಬಿಜೆಪಿಗೆ ಸೇರಿದ ನಂತರ ಈ ಪ್ರಕರಣ ಮೂಲೆಗುಂಪಾಗಿದೆ. ‘ಮಾಜಿ ಟಿಎಂಸಿ (ತೃಣಮೂಲ ಕಾಂಗ್ರೆಸ್) ನಾಯಕರಾದ ಸುವೇಂದು ಅಧಿಕಾರಿ ಮತ್ತು ಮುಕುಲ್ ರಾಯ್ ಅವರ ವಿರುದ್ಧದ ಹಗರಣ ಆರೋಪದಲ್ಲಿ ಇ.ಡಿ ಮತ್ತು ಸಿಬಿಐ ವಿಚಾರಣೆಗೆ ಮುಂದಾಗಿತ್ತು. ಆದರೆ ಅವರು ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಗೂ ಮುನ್ನ ಬಿಜೆಪಿಗೆ ಸೇರಿದ ನಂತರ ಆ ಪ್ರಕರಣವೂ ಹಳ್ಳ ಹಿಡಿದಿದೆ ಎಂದು ಪತ್ರದಲ್ಲಿ ಉಲ್ಲೇಖ ಮಾಡಲಾಗಿದೆ.
ಇನ್ನು 2014 ರಿಂದ, ಪ್ರತಿಪಕ್ಷ ನಾಯಕರ ವಿರುದ್ಧದ ದಾಳಿಗಳು, ಪ್ರಕರಣಗಳು ಮತ್ತು ಬಂಧನಗಳ ಸಂಖ್ಯೆಯಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ. ಲಾಲು ಪ್ರಸಾದ್ ಯಾದವ್ (ರಾಷ್ಟ್ರೀಯ ಜನತಾ ದಳ), ಸಂಜಯ್ ರಾವುತ್ (ಶಿವಸೇನೆ), ಅಜಮ್ ಖಾನ್ (ಸಮಾಜವಾದಿ ಪಕ್ಷ) ), ನವಾಬ್ ಮಲಿಕ್, ಅನಿಲ್ ದೇಶಮುಖ್ (ಎನ್‌ಸಿಪಿ), ಅಭಿಷೇಕ್ ಬ್ಯಾನರ್ಜಿ (ಟಿಎಂಸಿ) ಅವರ ಮೇಲಿನ ದಾಳಿಯಿಂದ ತನಿಖಾ ಸಂಸ್ಥೆಗಳು ಕೇಂದ್ರ ಸರ್ಕಾರದ ಕೈಗೊಂಬೆಯಂತೆ ಕೆಲಸ ಮಾಡುತ್ತಿದೆ ಎಂಬ ಅನುಮಾನ ನಿಜವಾಗುತ್ತಿದೆ ಎಂದು ವಿಪಕ್ಷಗಳು ಆರೋಪ ಮಾಡಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ