Deadly Shootout - ಅಮೆರಿಕದ ಮಸಾಜ್ ಪಾರ್ಲರ್ಗಳಲ್ಲಿ ಗುಂಡಿನ ದಾಳಿ; ಎಂಟು ಮಂದಿ ಬಲಿ
ಅಮೆರಿಕದ ಜಾರ್ಜಿಯಾ ರಾಜ್ಯದ ಅಟ್ಲಾಂಟಾ ನಗರದ ಮೂರು ಮಸಾಜ್ ಪಾರ್ಲರ್ಗಳ ಮೇಲೆ ಗುಂಡಿನ ದಾಳಿ ನಡೆದಿದ್ದು, ಒಟ್ಟು ಎಂಟು ಮಂದಿ ಸಾವನ್ನಪ್ಪಿದ್ದಾರೆ. ಇವರಲ್ಲಿ ಬಹುತೇಕರು ಏಷ್ಯನ್ನರೇ ಆಗಿದ್ದಾರೆನ್ನಲಾಗಿದೆ.
ವಾಷಿಂಗ್ಟನ್(ಮಾ. 17): ಅಮೆರಿಕ ದೇಶದಲ್ಲಿ ಮತ್ತೊಂದು ಶೂಟೌಟ್ ದುರ್ಘಟನೆ ಸಂಭವಿಸಿದೆ. ಅಟ್ಲಾಂಟಾ ನಗರದ ಮೂರು ಸ್ಥಳಗಳಲ್ಲಿ ಗುಂಡಿನ ದಾಳಿ ನಡೆದಿದ್ದು ಎಂಟು ಮಂದಿ ಬಲಿಯಾಗಿದ್ದಾರೆ. ಜಾರ್ಜಿಯಾ ರಾಜ್ಯದ ರಾಜಧಾನಿ ಅಟ್ಲಾಂಟಾದ ವಿವಿಧ ಮಸಾಜ್ ಪಾರ್ಲರ್ಗಳಲ್ಲಿ ಈ ಘಟನೆ ನಡೆದಿದೆ. ಸತ್ತವರಲ್ಲಿ ನಾಲ್ವರು ಏಷ್ಯನ್ನರಾಗಿದ್ದಾರೆ. ಅಟ್ಲಾಂಟಾದ ಹೊರವಲಯದ ಆಕ್ವರ್ತ್ ಗ್ರಾಮೀಣ ಭಾಗದಲ್ಲಿದ್ದ ಯಂಗ್ಸ್ ಏಷ್ಯನ್ ಮಸಾಜ್ ಪಾರ್ಲರ್, ಬಕ್ಹೆಡ್ ಪ್ರದೇಶದಲ್ಲಿದ್ದ ಗೋಲ್ಡ್ ಸ್ಪಾ ಹಾಗೂ ಅದೇ ಸ್ಥಳದಲ್ಲಿದ್ದ ಇನ್ನೊಂದು ಮಸಾಜ್ ಪಾರ್ಲರ್ ಅರೋಮಾಥೆರಪಿ ಸ್ಪಾದಲ್ಲಿ ಆಗುಂತಕರಿಂದ ಶೂಟೌಟ್ ನಡೆದಿರುವುದು ತಿಳಿದುಬಂದಿದೆ. ಆಕ್ವರ್ತ್ನಲ್ಲಿ ಶೂಟೌಟ್ ಮಾಡಿದ್ದನೆನ್ನಲಾದ ಶಂಕಿತ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ಧಾರೆ. ಆರೋಪಿ 21 ವರ್ಷದ ವ್ಯಕ್ತಿಯಾಗಿದ್ದು, ಆತ ಈ ಕೃತ್ಯ ಯಾತಕ್ಕೆ ಎಸಗಿದ ಎಂಬುದು ತಿಳಿದುಬಂದಿಲ್ಲ. ಮೂರು ಶೂಟೌಟ್ ಪ್ರಕರಣದಲ್ಲಿ ಒಬ್ಬನೇ ಕೈವಾಡ ಇದೆಯೋ ಅಥವಾ ಪ್ರತ್ಯೇಕ ಗುಂಪುಗಳಲ್ಲಿ ದಾಳಿ ನಡೆಯಿತೋ ಎಂಬುದು ಗೊತ್ತಾಗಿಲ್ಲ.
ಅಮೆರಿಕದ ಕಾಲಮಾನದಲ್ಲಿ ಮಂಗಳವಾರ ಸಂಜೆ 5ರಿಂದ 6ಗಂಟೆಯ ವೇಳೆಯಲ್ಲಿ ಈ ಮೂರು ಶೂಟೌಟ್ಗಳು ನಡೆದಿವೆ. ಇಲ್ಲಿ ಏಷ್ಯನ್ನರಿಗೆ ಸೇರಿದ ಎರಡು ಮಸಾಜ್ ಪಾರ್ಲರ್ಗಳಿವೆ. ಏಷ್ಯನ್ ಅಮೆರಿಕನ್ ಸಮುದಾಯದ ಮೇಲೆ ಅಮೆರಿಕದಲ್ಲಿ ಹೆಚ್ಚುತ್ತಿರುವ ದ್ವೇಷದ ಹಿನ್ನೆಲೆಯಲ್ಲಿ ಈ ಘಟನೆಗಳು ನಡೆದಿರುವುದು ಗಮನಾರ್ಹವಾಗಿದೆ.
ಶೂಟೌಟ್ ನಡೆದ ಒಂದು ಸ್ಥಳದಲ್ಲಿದ್ದ ಸಿಸಿಟಿವಿ ಆಧರಿಸಿ ಪೊಲೀಸರು ಆರೋಪಿಯನ್ನ ಗುರುತಿಸುವಲ್ಲಿ ಯಶಸ್ವಿಯಾಗಿದ್ದಾರೆ. 21 ವರ್ಷದ ಆರೋಪಿ ರಾಬರ್ಟ್ ಆರೋನ್ ಲಾಂಗ್ ಎಂಬಾತ ಶೂಟೌಟ್ ನಡೆಸುವ 10 ನಿಮಿಷ ಮೊದಲು ಅಂದರೆ ಸಂಜೆಯ 4:50ರ ವೇಳೆಗೆ ಮಸಾಜ್ ಪಾರ್ಲರ್ಗೆ ಆಗಮಿಸಿದ್ದ. ಈ ವ್ಯಕ್ತಿಯೇ ಮತ್ತೆರಡು ಸ್ಥಳಗಳಲ್ಲಿ ದಾಳಿ ಎಸಗಿರುವ ಶಂಕೆ ಇದೆ. ಪೊಲೀಸರು ಸಿಸಿಟಿವಿಯಲ್ಲಿ ಆರೋಪಿಯನ್ನು ಪತ್ತೆ ಹಚ್ಚುತ್ತಿರುವಂತೆಯೇ ಈತ ಅಟ್ಲಾಂಟಾ ನಗರ ಬಿಟ್ಟು ಹೊರಗೆ ದೌಡಾಯಿಸುತ್ತಿರುವುದು ಗೊತ್ತಾಗಿದೆ. ಕೂಡಲೇ ನೆರೆಯ ಕ್ರಿಸ್ಪ್ ಕೌಂಟಿಯ ಪೊಲೀಸರಿಗೆ ಮಾಹಿತಿ ಕೊಡಲಾಯಿತು. ರಾತ್ರಿ 8:30ರ ಸಮಯದಲ್ಲಿ ಕಾರಿನಲ್ಲಿ ಹೋಗುತ್ತಿದ್ದ ಆರೋಪಿಯನ್ನ ಪೊಲೀಸರು ಅಡ್ಡಹಾಕಿ ಹಿಡಿಯುವಲ್ಲಿ ಯಶಸ್ವಿಯಾದರೆನ್ನಲಾಗಿದೆ.
Published by:Vijayasarthy SN
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ