ನವದೆಹಲಿ: ಭಾರತದ ಪ್ರಧಾನಿ ನರೇಂದ್ರ ಮೋದಿ ಇಂದು ತಮ್ಮ 70ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ವಿಶ್ವದ ಬಹುತೇಕ ದೇಶದ ನಾಯಕರು ಮೋದಿ ಶುಭಾಶಯಗಳನ್ನು ಕೋರುತ್ತಿದ್ದಾರೆ. ಈ ಪೈಕಿ ಪ್ರಧಾನಿ ನರೇಂದ್ರ ಮೋದಿಯವರ 70ನೇ ಹುಟ್ಟುಹಬ್ಬಕ್ಕೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಶುಭಾಶಯ ಕೋರಿದ್ದಾರೆ. ನರೇಂದ್ರ ಮೋದಿಗೆ ಜನ್ಮದಿನದ ಶುಭಾಶಯ ಕೋರಿ ಪತ್ರ ಬರೆದಿರುವ ಪುಟಿನ್, "ಪ್ರಧಾನ ಮಂತ್ರಿಯಾಗಿ ನೀವು ಮಾಡಿದ ಸಾಧನೆಯೂ ಅಂತಾರಾಷ್ಟ್ರೀಯ ಮಟ್ಟದ ಗೌರವಕ್ಕೆ ಅರ್ಹ. ನಿಮ್ಮ ನಾಯಕತ್ವದಲ್ಲಿ ಭಾರತ ಆರ್ಥಿಕ, ಸಾಮಾಜಿಕ ಮತ್ತು ತಂತ್ರಜ್ಞಾನದ ಕ್ಷೇತ್ರದಲ್ಲಿ ಅದ್ಭುತ ಸಾಧನೆ ಮಾಡಿದೆ. ಭಾರತ ರಷ್ಯಾ ನಡುವಿನ ಶತಮಾನಗಳಷ್ಟು ಹಳೆಯದಾದ ಬಾಂಧವ್ಯವನ್ನು ಇನ್ನಷ್ಟು ವೃದ್ಧಿಗೊಳಿಸಲು ಶ್ರಮಿಸಿದ ನಿಮ್ಮ ಬಗ್ಗೆ ಎಷ್ಟು ಹೇಳಿದರೂ ಸಾಲದು. ಅಭಿವೃದ್ಧಿ ಹಾಗೂ ಶಾಂತಿ ಸ್ಥಾಪನೆಗಾಗಿ ನಿಮ್ಮೊಂದಿಗೆ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ" ವ್ಲಾಡಿಮಿರ್ ಪುಟಿನ್ ಶುಭಾಶಯ ಸಂದೇಶದಲ್ಲಿ ತಿಳಿಸಿದ್ದಾರೆ. ಅಲ್ಲದೆ, ಈ ಹುಟ್ಟುಹಬ್ಬದ ಸಂದರ್ಭದಲ್ಲಿ ಆರೋಗ್ಯವಂತರಾಗಿ, ಸಂತೋಷದಿಂದ ದೀರ್ಘಕಾಲ ಬಾಳಿ ಎಂದು ಹಾರೈಸುತ್ತೇನೆ ಎಂದು ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಮೂರು ದಶಕಗಳ ನಂತರ ಭಾರತದಲ್ಲಿ ಬಹುಮತ ಪಡೆದು ಸರ್ಕಾರ ರಚನೆ ಮಾಡಿರುವ ಹಾಗೂ ಸತತ ಎರಡು ಬಾರಿ ಪ್ರಧಾನಿ ಹುದ್ದೆಗೆ ಏರಿರುವ ಮೊದಲ ಕಾಂಗ್ರೆಸೇತರ ವ್ಯಕ್ತಿ ಎಂಬ ಶ್ರೇಯಕ್ಕೆ ಪಾತ್ರರಾಗಿದ್ದಾರೆ.
ಗುಜರಾತ್ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸುತ್ತಿದ್ದ ಸಂದರ್ಭದಲ್ಲಿ ನರೇಂದ್ರ ಮೋದಿಯನ್ನು ಬಿಜೆಪಿ 2014ರಲ್ಲಿ ದೇಶದ ಪ್ರಧಾನಿ ಅಭ್ಯರ್ಥಿ ಎಂದು ಘೋಷಣೆ ಮಾಡಿತ್ತು. ಈ ವರ್ಷದ ಲೋಕಸಭಾ ಚುನಾವಣೆಯಲ್ಲಿ ಮೋದಿ ಹವಾ ಸಹ ಕೆಲಸ ಮಾಡಿತ್ತು. ಹೀಗಾಗಿ ಈ ಚುನಾವಣೆಯಲ್ಲಿ ಬಿಜೆಪಿ ಮೊದಲ ಬಾರಿಗೆ ಪ್ರಚಂಡ ಗೆಲುವು ಸಾಧಿಸುವ ಮೂಲಕ ಬಹುಮತ ಸರ್ಕಾರವನ್ನು ರಚನೆ ಮಾಡಿತ್ತು. ಮೋದಿ ಮೊದಲ ಬಾರಿಗೆ ಪ್ರಧಾನಿ ಹುದ್ದೆಯನ್ನು ಅಲಂಕರಿಸಿದ್ದರು.
2019ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲೂ ಬಿಜೆಪಿ ಪ್ರಚಂಡ ಗೆಲುವು ಸಾಧಿಸಿತ್ತು. ನರೇಂದ್ರ ಎರಡನೇ ಅವಧಿಗೆ ಸರ್ಕಾರ ರಚನೆ ಮಾಡಿದ್ದರು. ಆದರೆ, ಈ ಅವಧಿಯಲ್ಲಿ ಕಾಶ್ಮೀರಕ್ಕೆ ನೀಡಲಾಗುತ್ತಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸುವುದು, ಸಿಎಎ ಕಾಯ್ದೆ ಜಾರಿ ಎಂಬ ಮಹತ್ವದ ಹೆಜ್ಜೆ ಇಟ್ಟಿದ್ದರು. ಮೋದಿ ಅವರ ಈ ನಿರ್ಧಾರಕ್ಕೆ ತೀವ್ರ ವಿರೋಧ ವ್ಯಕ್ತವಾದರೂ ಸಹ ಇದನ್ನು ಆದರಿಸುವ ಜನರ ಸಂಖ್ಯೆಯೂ ಅಧಿಕವಾಗಿತ್ತು.
ಆದರೂ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಎಷ್ಟೇ ಟೀಕೆಗಳು ವಿಮರ್ಶೆಗಳು ಇದ್ದರೂ ಸಹ ಪ್ರಸ್ತುತ ಪರಿಸ್ಥಿತಿಯಲ್ಲಿ ಮೋದಿ ಇಡೀ ವಿಶ್ವವೇ ಗುರುತಿಸುತ್ತಿರುವ ನಾಯಕ ಎಂಬುದರಲ್ಲಿ ಎರಡು ಮಾತಿಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ