ಒಡಿಶಾ: 70 ವರ್ಷದ ವೃದ್ಧೆಯೊಬ್ಬರು (Old Woman) ತನ್ನ ಪಿಂಚಣಿ (Pension) ಹಣವನ್ನು ಪಡೆದುಕೊಳ್ಳುವುದಕ್ಕಾಗಿ ಮುರಿದ ಕುರ್ಚಿಯನ್ನು ಆಧಾರವಾಗಿಟ್ಟುಕೊಂಡು ಚಪ್ಪಲಿಯೂ ಇಲ್ಲದೇ ಬರೀ ಗಾಲಲ್ಲಿ ಕೆಲವು ಕಿಲೋ ಮೀಟರ್ ದೂರ ನಡೆದುಕೊಂಡು ಬಂದ ಆಘಾತಕಾರಿ ಘಟನೆ ಒಡಿಶಾದ (Odisha) ನಬ್ರಂಗ್ಪುರ್ ಜಿಲ್ಲೆಯಲ್ಲಿ ಝಾರಿಗಾಂವ್ ಎಂಬಲ್ಲಿ ಏಪ್ರಿಲ್ 17ರಂದು ನಡೆದಿದೆ. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗಿದೆ. ಉರಿಬಿಸಿಲಿನಲ್ಲಿ ವೃದ್ಧೆ ಒಂದೊಂದೆ ಹೆಜ್ಜೆ ಹಾಕಿಕೊಂಡು ಡಾಂಬರು ರಸ್ತೆಯಲ್ಲಿ ಬರಿಗಾಲಲ್ಲಿ ನಡೆದುಕೊಂಡು ಹೋಗುತ್ತಿರುವ ದೃಶ್ಯ ಮನಕಲಕುವಂತಿದೆ. ವಿಡಿಯೋ ವೈರಲ್ (Video Viral) ಆದ ಬೆನ್ನಲ್ಲೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitaraman) ಟ್ವೀಟ್ ಮಾಡಿ ಸಮಸ್ಯೆ ಬಗೆಹರಿಸಲು ಎಸ್ಬಿಐಗೆ ಸೂಚಿಸಿದ್ದಾರೆ.
ವರದಿಯ ಪ್ರಕಾರ ಸೂರ್ಯ ಹರಿಜನ್ ಎಂಬ ಈ ಮಹಿಳೆ ಕಡು ಬಡತನದಿಂದ ಪರದಾಡುತ್ತಿದ್ದು, ತನ್ನ ಕಿರಿಯ ಮಗನ ಜೊತೆ ವಾಸವಾಗಿದ್ದಾರೆ. ಆತ ಕೂಡ ಊರಿನ ಜನರ ಹಸುಗಳನ್ನು ಮೇಯಿಸುವ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಕಷ್ಟಪಟ್ಟು ನಡೆದು ಬಂದ ಮಹಿಳೆಗೆ ನಿರಾಶೆ
ಸುಡು ಬಿಸಿಲಿನಲ್ಲಿ, ಬರಿಗಾಲಲ್ಲಿ ನಡೆದುಕೊಂಡು ಬಂದ ಮಹಿಳೆಗೆ ಬ್ಯಾಂಕ್ನಲ್ಲಿ ಆಘಾತ ಎದುರಾಗಿದೆ. ಏಕೆಂದರೆ ಆಕೆಯ ಹೆಬ್ಬೆರಳಿನ ಗುರುತು ದಾಖಲೆಗಳಿಗೆ ಹೊಂದಿಕೆಯಾಗುತ್ತಿಲ್ಲ ಎಂದು ಬ್ಯಾಂಕ್ ಸಿಬ್ಬಂದಿ ವೃದ್ಧೆಗೆ ಪಿಂಚಣಿ ನೀಡಿಲ್ಲ. ಈ ವಿಷಯದ ಬಗ್ಗೆ ಬ್ಯಾಂಕ್ ಮ್ಯಾನೇಜರ್ ಕೇಳಿದರೆ ಮಹಿಳೆಗೆ ಹೆಬ್ಬೆರಳು ಮುರಿದಿದ್ದು ಹೆಬ್ಬರಳಿನ ಗುರುತು ಹೊಂದಿಕೆಯಾಗಿಲ್ಲ ತಿಳಿಸಿದ್ದು, ಬ್ಯಾಂಕ್ ಸಂಭವನೀಯ ಪರಿಹಾರಕ್ಕಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: Hakki Pikki Community: ಆಫ್ರಿಕಾದಲ್ಲಿ ಹಕ್ಕಿ ಪಿಕ್ಕಿ ಸಮುದಾಯದವರೇ ಡಾಕ್ಟರ್ಸ್!
ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ಟ್ವೀಟ್
ವೃದ್ಧೆ ನಡೆದುಕೊಂಡು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬೆನ್ನಲ್ಲೇ ಸೀತಾರಾಮನ್ ಕೂಡ ತಮ್ಮ ಟ್ವಿಟರ್ನಲ್ಲಿ ಹಂಚಿಕೊಂಡು, ಎಸ್‌ಬಿಐ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಬ್ಯಾಂಕ್ ಮ್ಯಾನೇಜರ್ ಈ ಬಗ್ಗೆ ಪ್ರತಿಕ್ರಿಯೆ ಬಗ್ಗೆ ನಾವು ಎದುರು ನೋಡುತ್ತಿದ್ದೇವೆ. ಹಣಕಾಸು ಇಲಾಖೆ ಮತ್ತು ಎಸ್‌ಬಿಐ ಈ ವಿಷಯದಲ್ಲಿ ಮಾನವೀಯತೆ ತೋರಿಸಬೇಕು. ಬ್ಯಾಂಕ್ ಎಂಬುದು ಜನಸ್ನೇಹಿ ಅಲ್ಲವೇ? ಎಂದು ಪ್ರಶ್ನಿಸಿ ಟ್ವೀಟ್ ಮಾಡಿದ್ದಾರೆ.
ಬ್ಯಾಂಕ್ ಪ್ರತಿಕ್ರಿಯೆ
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮ್ ಅವರ ಟ್ವೀಟ್ಗೆ ಎಸ್‌ಬಿಐ ಪ್ರತಿಕ್ರಿಯೆ ನೀಡಿದೆ. ಮಹಿಳೆಯ ಕೈಬೆರಳುಗಳು ಮುರಿದಿದ್ದು, ಹಣ ತೆಗೆಯಲು ತೊಂದರೆಯಾಗುತ್ತಿದೆ ಎಂದು ಬ್ಯಾಂಕ್ ಮ್ಯಾನೇಜರ್ ಉತ್ತರಿಸಿದ್ದಾರೆ. ಅಲ್ಲದೆ ಶೀಘ್ರದಲ್ಲೇ ಈ ಸಮಸ್ಯೆಯನ್ನು ಪರಿಹರಿಸುತ್ತೇವೆ ಎಂದು ತಿಳಿಸಿದೆ.
" ಮೇಡಂ, ಈ ವಿಡಿಯೋ ನೋಡಿ ನಮಗೂ ಅಷ್ಟೇ ನೋವಾಗಿದೆ. ವಿಡಿಯೋದಲ್ಲಿ ಸೂರ್ಯ ಹರಿಜನ್ ಪ್ರತಿ ತಿಂಗಳು ತನ್ನ ಹಳ್ಳಿಯಲ್ಲಿರುವ ಸಿಎಸ್‌ಪಿ ಪಾಯಿಂಟ್‌ನಿಂದ ತನ್ನ ವೃದ್ಧಾಪ್ಯ ಪಿಂಚಣಿಯನ್ನು ಪಡೆಯುತ್ತಿದ್ದರು. ವಯಸ್ಸಾದ ಕಾರಣ, CSP ಪಾಯಿಂಟ್‌ನಲ್ಲಿ ಆಕೆಯ ಬೆರಳಚ್ಚುಗಳು ಹೊಂದಿಕೆಯಾಗುತ್ತಿಲ್ಲದ ಕಾರಣ ಸಮಸ್ಯೆಯಾಗಿದೆ " ಎಂದು ತಿಳಿಸಿದೆ.
ಮನೆ ಬಾಗಿಲಿಗೆ ಪಿಂಚಣಿ ಭರವಸೆ
ಮತ್ತೊಂದು ಟ್ವೀಟ್ನಲ್ಲಿ ಮಹಿಳೆ ತನ್ನ ಸಂಬಂಧಿಯೊಂದಿಗೆ ನಮ್ಮ ಝಾರಿಗಾಂವ್ ಶಾಖೆಗೆ ಭೇಟಿ ನೀಡಿದ್ದರು. ನಮ್ಮ ಬ್ರಾಂಚ್ ಮ್ಯಾನೇಜರ್ ಈಗಾಗಲೇ ಅವರ ಖಾತೆಗೆ ನೇರವಾಗಿ ಪಿಂಚಣಿ ಮೊತ್ತವನ್ನು ಜಮಾ ಮಾಡಿದ್ದಾರೆ. ಮುಂದಿನ ತಿಂಗಳಿನಿಂದ ಅವರ ಪಿಂಚಣಿಯನ್ನು ಅವರ ಮನೆ ಬಾಗಿಲಿಗೆ ತಲುಪಿಸಲಾಗುವುದು ಎಂದು ನಮ್ಮ ಶಾಖಾ ವ್ಯವಸ್ಥಾಪಕರು ಸಹ ತಿಳಿಸಿದ್ದಾರೆ. ಜೊತೆಗೆ ಆ ವೃದ್ಧೆಗೆ ಎಸ್‌ಬಿಐ ಕಡೆಯಿಂದ ವೀಲ್ಹ್ಚೇರ್ ನೀಡಲಾಗುವುದು ಎಂದು ತಿಳಿಸಿದೆ.
ಒಂದು ಸಣ್ಣ ಗುಡಿಸಲಿನಲ್ಲಿ ವಾಸ
ಕುಟುಂಬದ ಪೋಷಣೆಗಾಗಿ ವೃದ್ಧೆಯ ಹಿರಿಯ ಮಗ ಬೇರೆ ರಾಜ್ಯದಲ್ಲಿ ವಲಸೆ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದಾರೆ. ಆಕೆ ಕಿರಿಯ ಮಗನೊಂದಿಗೆ ವಾಸಿಸುತ್ತಿದ್ದಾರೆ. ಆತ ಕೂಡ ಊರಿನ ಜನರ ದನಗಳನ್ನು ಮೇಯಿಸುವುದರ ಮೂಲಕ ಜೀವನ ನಡೆಸುತ್ತಿದ್ದಾರೆ. ಚಿಕ್ಕ ಗುಡಿಸಲಿನಲ್ಲಿ ಇವರ ಬದುಕು ದಿನದಿಂದ ದಿನಕ್ಕೆ ಶೋಚನೀಯವಾಗುತ್ತಿದೆ. ಹಿಂದೆ ಹರಿಜನ್ರಿಗೆ ಕೈಯಲ್ಲಿ ಪಿಂಚಣಿ ಹಣ ನೀಡಲಾಗುತ್ತಿತ್ತು. ಆದರೆ, ನಿಯಮಗಳ ಬದಲಾವಣೆಯಿಂದಾಗಿ ಪ್ರಸ್ತುತ ಬ್ಯಾಂಕ್ ಖಾತೆಗೆ ಆನ್‌ಲೈನ್ ಮೂಲಕ ಹಣ ವರ್ಗಾವಣೆಯಾಗುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ