ಗೋರಖ್ಪುರ್(ಜ.28): ಗೋರಖ್‌ಪುರದಲ್ಲಿ (Gorakhpur) ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದೆ. ವೈರಲ್ ಆಗುತ್ತಿರುವ ಫೋಟೋಗಳು ಮತ್ತು ಸುದ್ದಿಗಳನ್ನು ನೋಡಿ, ಜನರು ಹೀಗೂ ಆಗುತ್ತಾ ಎಂದು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ. ಹೌದು ಯುಪಿಯ (Uttar Pradesh) ಗೋರಖ್‌ಪುರದಲ್ಲಿ 70 ವರ್ಷದ ಮಾವ ತನ್ನ 28 ವರ್ಷದ ವಿಧವೆ ಸೊಸೆಯೊಂದಿಗೆ ಮದುವೆಯಾಗಿದ್ದಾರೆ. ಅಗ್ನಿ ಸಾಕ್ಷಿಯಾಗಿ ಆಕೆಯನ್ನು ತನ್ನ ಜೀವನಸಂಗಾತಿಯಾಗಿಸಿದ್ದಾರೆ. ಈ ವಿಶಿಷ್ಟ ವಿವಾಹದ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ (Social Media) ವೈರಲ್ ಆಗಿದೆ. ಈ ಮದುವೆಯು ಗೋರಖ್‌ಪುರ ಮತ್ತು ಸುತ್ತಮುತ್ತಲಿನ ಜಿಲ್ಲೆಗಳಲ್ಲಿಯೂ ಭಾರೀ ಚರ್ಚೆಗೆ ಕಾರಣವಾಗಿದೆ.
ಗೋರಖ್‌ಪುರದ ಛಾಪಿಯಾ ಉಮ್ರಾವ್ ಗ್ರಾಮದಲ್ಲಿ 70 ವರ್ಷದ ವ್ಯಕ್ತಿಯೊಬ್ಬರು ತಮ್ಮ 28 ವರ್ಷದ ಸೊಸೆಯನ್ನು ವಿವಾಹವಾಗಿದ್ದಾರೆ. ಈ ಜೋಡಿಯ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಬರ್ಹಲ್‌ಗಂಜ್ ಪೊಲೀಸ್ ಠಾಣೆಯಲ್ಲಿ ವಾಚ್‌ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ ಕೈಲಾಶ್ ಯಾದವ್ 12 ವರ್ಷಗಳ ಹಿಂದೆ ತನ್ನ ಹೆಂಡತಿಯನ್ನು ಕಳೆದುಕೊಂಡಿದ್ದರು. ಇದಾದ ಕೆಲ ವರ್ಷಗಳ ಬಳಿಕ ಅವರ ಮೂರನೇ ಮಗ ಕೂಡ ಸಾವನ್ನಪ್ಪಿದ್ದಾನೆ.
ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆ ಮತವಾಗಿ ಪರಿವರ್ತಿತವಾಗಬಲ್ಲುದೇ? ಇಲ್ಲಿದೆ ಜನರ ಅಭಿಪ್ರಾಯ
ಏನಿದು ಪ್ರಕರಣ?
ಗೋರಖ್‌ಪುರದ ಬದಲ್‌ಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ಛಾಪಿಯಾ ಉಮ್ರಾವ್ ಗ್ರಾಮದ ನಿವಾಸಿ ಕೈಲಾಶ್ ಯಾದವ್ (70 ವರ್ಷ) ಅವರ ಪುತ್ರ ಹಲವು ವರ್ಷಗಳ ಹಿಂದೆ ಮೃತಪಟ್ಟಿದ್ದ. ಅಲ್ಲದೇ ಕೈಲಾಶ್ ಪತ್ನಿ ಕೂಡಾ 12 ವರ್ಷಗಳ ಹಿಂದೆ ಮೃತಪಟ್ಟಿದ್ದರು. ಬರ್ಹಲ್‌ಗಂಜ್ ಪೊಲೀಸ್ ಠಾಣೆಯ ಕಾವಲುಗಾರನಾಗಿ ಕೆಲಸ ಮಾಡುತ್ತಿರುವ ಕೈಲಾಶ್ ಯಾದವ್ ತನ್ನ ವಿಧವೆ ಸೊಸೆ 28 ವರ್ಷದ ಪೂಜಾ ಜೊತೆ ವಾಸಿಸುತ್ತಿದ್ದ. ಕೈಲಾಶ್ ಅವರ 4 ಮಕ್ಕಳಲ್ಲಿ ಮೂರನೇ ಮಗನ ಪತ್ನಿ ಪೂಜಾ ವಿಧವೆಯಾದ ನಂತರ ಒಬ್ಬಂಟಿಯಾದ್ದರು.
ಹೀಗಿರುವಾಗ ಕೈಲಾಶ್ ತನ್ನ ವಿಧವೆ ಸೊಸೆ ಪೂಜಾಳಿಗೆ ಎರಡನೇ ಬಾರಿಗೆ ಮದುವೆ ಮಾಡಿಸಿ ಕೊಟ್ಟಿದ್ದಾರೆ. ಆದರೆ ಈ ಮದುವೆ ಹೆಚ್ಚು ಕಾಲ ಉಳಿಯಲಿಲ್ಲ. ಇದಾದ ನಂತರ ಆಕೆ ಮತ್ತೆ ತನ್ನ ಮಾವನ ಮನೆಗೆ ಹಿಂದಿರುಗಿ ಮಾಜಿ ಗಂಡನ ಮನೆಯಲ್ಲಿ ವಾಸಿಸಲು ಪ್ರಾರಂಭಿಸಿದ್ದಾಳೆ. ಈ ನಡುವೆ ಕೈಲಾಶ್ ನೆರೆಹೊರೆಯವರು ಹಾಗೂ ಹಳ್ಳಿಯಲ್ಲಿ ಯಾರಿಗೂ ಹೇಳದೆ ಪೂಜಾಳನ್ನು ಸದ್ದಿಲ್ಲದೇ ಮದುವೆಯಾಗಿದ್ದಾರೆ. ಆದರೆ ಈ ಫೋಟೋ ವೈರಲ್ ಆದ ನಂತರ ಜನರಿಗೆ ವಿಷಯ ತಿಳಿದಿದೆ. ಈ ಮದುವೆ ಬಗ್ಗೆ ಇಡೀ ಪ್ರದೇಶದಲ್ಲಿ ಚರ್ಚೆ ನಡೆಯುತ್ತಿದೆ. ಈ ವಿಚಿತ್ರ ಮದುವೆ ಬಗ್ಗೆ ಜನರು ಸಾಮಾಜಿಕ ಜಾಲತಾಣಗಳ್ಲೂ ವಿವಿಧ ಚರ್ಚೆಗಳು ಹುಟ್ಟಿಕೊಂಡಿವೆ.
ಫೋಟೋ ನೋಡಿದ ಪೊಲೀಸರಿಗೂ ಶಾಕ್
ಕೈಲಾಶ್ ಯಾದವ್ ಮದುವೆ ಸುದ್ದಿ ಸಾಮಾಜಿಕ ಜಾಲತಾಣಗಳ ಮೂಲಕ ಗ್ರಾಮಸ್ಥರಿಗೆ ತಿಳಿದಿದೆ. ಬಳಿಕ ಇದು ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಬದಲ್‌ಗಂಜ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಜೆಎನ್ ಶುಕ್ಲಾ ಅವರು ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ನೋಡಿದ್ದು, ಈ ಬಗ್ಗೆ ಯಾವುದೇ ದೂರು ಬಂದಿಲ್ಲ ಎಂದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ