ಲಿಬಿಯಾದಿಂದ ಭಾರತಕ್ಕೆ ಹೊರಟಿದ್ದ 7 ಭಾರತೀಯರ ಅಪಹರಣ; ವಿದೇಶಾಂಗ ಸಚಿವಾಲಯ ಮಾಹಿತಿ

ಸೆಪ್ಟೆಂಬರ್ 14ರಂದು ಭಾರತಕ್ಕೆ ಮರಳಲು ತ್ರಿಪೋಲಿ ಏರ್​ಪೋರ್ಟ್​ಗೆ ತೆರಳುತ್ತಿದ್ದಾಗ ಲಿಬಿಯಾದ ಆಶ್ವೆರಿಫ್ ಎಂಬ ಸ್ಥಳದಿಂದ 7 ಭಾರತೀಯರನ್ನು ಅಪಹರಿಸಲಾಗಿದೆ. ಅಪಹರಣಕ್ಕೊಳಗಾಗಿರುವ ಭಾರತೀಯರು ಲಿಬಿಯಾದಲ್ಲಿ ನಿರ್ಮಾಣ ಮತ್ತು ತೈಲ ಪೂರೈಕೆ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು.

ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ್

ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ್

  • Share this:
ನವದೆಹಲಿ (ಅ. 9): ಆಂಧ್ರಪ್ರದೇಶ, ಬಿಹಾರ್, ಗುಜರಾತ್, ಉತ್ತರ ಪ್ರದೇಶ ಮೂಲದ 7 ಮಂದಿ ಭಾರತೀಯರನ್ನು ಲಿಬಿಯಾದಲ್ಲಿ ಅಪಹರಿಸಲಾಗಿದೆ ಎಂದು ವಿದೇಶಾಂಗ ಸಚಿವಾಲಯ ಮಾಹಿತಿ ನೀಡಿದೆ. ಕಳೆದ ತಿಂಗಳು ಏಳು ಭಾರತೀಯರನ್ನು ಅಪಹರಿಸಲಾಗಿದ್ದು, ಈ ಬಗ್ಗೆ ಮಾಹಿತಿ ಪಡೆಯಲು ಆಫ್ರಿಕನ್ ದೇಶವಾದ ಲಿಬಿಯಾದ ಅಧಿಕಾರಿಗಳ ಜೊತೆ ಭಾರತ ನಿಕಟ ಸಂಪರ್ಕದಲ್ಲಿದೆ. ಸೆಪ್ಟೆಂಬರ್ 14ರಂದು ಭಾರತಕ್ಕೆ ಮರಳಲು ತ್ರಿಪೋಲಿ ಏರ್​ಪೋರ್ಟ್​ಗೆ ತೆರಳುತ್ತಿದ್ದಾಗ ಲಿಬಿಯಾದ ಆಶ್ವೆರಿಫ್ ಎಂಬ ಸ್ಥಳದಿಂದ 7 ಭಾರತೀಯರನ್ನು ಅಪಹರಿಸಲಾಗಿದೆ ಎಂದು ಭಾರತೀಯ ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ ಗುರುವಾರ ತಿಳಿಸಿದ್ದಾರೆ.

ಲಿಬಿಯಾದಲ್ಲಿ ಅಪಹರಣಕ್ಕೊಳಗಾದ ಭಾರತೀಯರು ಕೆಲಸ ಮಾಡುತ್ತಿದ್ದ ತೈಲ ಕಂಪನಿಯ ಅಧಿಕಾರಿಗಳು ಈಗಾಗಲೇ ಅಪಹರಣಕಾರರೊಂದಿಗೆ ಮಾತನಾಡಿದ್ದಾರೆ. ಅಪಹರಣಕಾರರು ಕಳುಹಿಸಿರುವ ಫೋಟೋಗಳ ಮೂಲಕ 7 ಭಾರತೀಯರು ಸುರಕ್ಷಿತವಾಗಿರುವುದು ಖಚಿತವಾಗಿದೆ. ಅವರನ್ನು ರಕ್ಷಿಸುವ ಬಗ್ಗೆಯೂ ಅಲ್ಲಿ ಪ್ರಯತ್ನಗಳು ನಡೆಯುತ್ತಿವೆ. ಭಾರತ ಕೂಡ ಈ ಬಗ್ಗೆ ಕಾರ್ಯೋನ್ಮುಖವಾಗಿದೆ. ಅಪಹರಣಕ್ಕೊಳಗಾದ ಭಾರತೀಯರ ಕುಟುಂಬಸ್ಥರ ಜೊತೆಯೂ ಮಾತುಕತೆ ನಡೆಸಿ, ಧೈರ್ಯ ತುಂಬಲಾಗಿದೆ ಎಂದು ಅನುರಾಗ್ ತಿಳಿಸಿದ್ದಾರೆ.ಅಪಹರಣಕ್ಕೊಳಗಾಗಿರುವ ಭಾರತೀಯರು ಲಿಬಿಯಾದಲ್ಲಿ ನಿರ್ಮಾಣ ಮತ್ತು ತೈಲ ಪೂರೈಕೆ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ಕೂಡ ಅನುರಾಗ್ ಶ್ರೀವಾಸ್ತವ ಮಾಹಿತಿ ನೀಡಿದ್ದಾರೆ. ಉತ್ತರ ಆಫ್ರಿಕಾದ ಲಿಬಿಯಾ ತೈಲ ಸಂಪದ್ಭರಿತವಾದ ದೇಶಗಳಲ್ಲೊಂದು. 2011ರಲ್ಲಿ ಮುವಾಮ್ಮರ್ ಗಡಾಫಿಯ ನಾಲ್ಕು ದಶಕಗಳ ಆಡಳಿತ ಕೊನೆಯಾದ ಬಳಿಕ ಲಿಬಿಯಾದಲ್ಲಿ ಹಿಂಸಾಚಾರ ಹೆಚ್ಚಾಗಿದೆ. ಅಲ್ಲಿನ ಸ್ಥಳೀಯ ಬಂಡಾಯಕೋರರ ಗುಂಪು 7 ಮಂದಿ ಭಾರತೀಯರನ್ನು ಅಪಹರಿಸಿ, ಸರ್ಕಾರಕ್ಕೆ ಹಣದ ಬೇಡಿಕೆಯಿಟ್ಟಿದ್ದಾರೆ ಎನ್ನಲಾಗಿದೆ.
Published by:Sushma Chakre
First published: