ಸಿಆರ್‌ಪಿಎಫ್ ಮತ್ತು ಬಿಎಸ್‌ಎಫ್‌ನಂತಹ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ (ಸಿಎಪಿಎಫ್) ಒಟ್ಟು 680 ಸಿಬ್ಬಂದಿ ಕಳೆದ ಆರು ವರ್ಷಗಳಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವಂತಹ ಆಘಾತಕಾರಿ ವಿಷಯವನ್ನು ಕೇಂದ್ರ ಸರ್ಕಾರ ರಾಜ್ಯಸಭೆಗೆ ಬುಧವಾರ ಮಾಹಿತಿ ನೀಡಿದೆ.
2015 ರಿಂದ 2020 ರ ಅವಧಿಯಲ್ಲಿ ಅಪಘಾತಗಳು ಮತ್ತು ಎನ್ಕೌಂಟರ್ಗೆ ಸಾವನ್ನಪ್ಪಿದ ಸಿಬ್ಬಂದಿಗಳ ಸಂಖ್ಯೆ ಕ್ರಮವಾಗಿ 1,764 ಮತ್ತು 323 ಎಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ಹೇಳಿದರು.
ಸಿಎಪಿಎಫ್ ಮತ್ತು ಅಸ್ಸಾಂ ರೈಫಲ್ಸ್ ನೀಡಿದ ಮಾಹಿತಿಯ ಪ್ರಕಾರ, ಕಳೆದ ಆರು ವರ್ಷಗಳಲ್ಲಿ 680 ಸಿಬ್ಬಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಲಿಖಿತ ಪ್ರಶ್ನೆಗೆ ಸಚಿವರು ಉತ್ತರಿಸಿದ್ದಾರೆ. ಆತ್ಮಹತ್ಯೆಗಳ ಹಿಂದೆ ದೇಶೀಯ ಸಮಸ್ಯೆಗಳು, ಅನಾರೋಗ್ಯ ಮತ್ತು ಹಣಕಾಸಿನ ಸಮಸ್ಯೆಗಳು ಇತರ ಕಾರಣಗಳಾಗಿರಬಹುದು ಎಂದು ರೈ ಹೇಳಿದ್ದಾರೆ.
2021ರ ಜನವರಿ ತಿಂಗಳಲ್ಲಿ ಭಾರತೀಯ ಯುನೈಟೆಡ್ ಸರ್ವೀಸಸ್ ಸಂಸ್ಥೆ (USI) ಸೈನಿಕರ ಆತ್ಮಹತ್ಯೆ ಯಾಕೆ ಇಷ್ಟು ಪ್ರಮಾಣದಲ್ಲಿ ಆಗುತ್ತಿದೆ ಎಂದು ಒಂದು ಅಧ್ಯಯನ ವರದಿಯನ್ನು ಬಿಡುಗಡೆ ಮಾಡಿತ್ತು. ಆ ಅಧ್ಯಯನ ವರದಿಯ ಪ್ರಕಾರ ಅರ್ಧಕ್ಕಿಂತ ಹೆಚ್ಚು ಪ್ರಮಾಣದ ಸೇನಾ ಸಿಬ್ಬಂದಿ ಅತಿಯಾದ ಒತ್ತಡದಲ್ಲಿರುವ ಕಾರಣ, ಪ್ರತಿ ವರ್ಷ ಆತ್ಮಹತ್ಯೆ, ಕೊಲೆ ಹಾಗೂ ಅಹಿತಕರ ಘಟನೆಗಳಿಂದಾಗಿ ಹೆಚ್ಚಿನ ಯೋಧರು ತಮ್ಮ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಎಂದು ಹೇಳಿದೆ.
ಭಯೋತ್ಪಾದಕ ದಾಳಿಗಿಂತ ಹೆಚ್ಚಾಗಿ ಆತ್ಮಹತ್ಯೆ, ಕೊಲೆ, ಅಪಘಾತ ಸೇರಿದಂತೆ ಇತರೇ ಅವಘಡಗಳಿಂದ ಯೋಧರನ್ನು ಹೆಚ್ಚೆಚ್ಚು ಕಳೆದುಕೊಳ್ಳುತ್ತಿದ್ದು, ಇದು ಇತರೇ ಸೈನಿಕರ ಮೇಲೂ ಅತ್ಯಂತ ಹೆಚ್ಚು ಪರಿಣಾಮ ಬೀರುತ್ತಿದೆ ಎಂದು ಹೇಳಲಾಗಿದೆ.
ಗಡಿಭಾಗದಲ್ಲಿ ಸೈನಿಕರ ಸುದೀರ್ಘ ನಿಯೋಜನೆ, ಜಮ್ಮು ಮತ್ತು ಕಾಶ್ಮೀರ ಹಾಗೂ ಈಶಾನ್ಯ ಭಾಗಗಳಲ್ಲಿ ಕಾರ್ಯಾಚರಣೆಗೆ ಯೋಧರ ನಿಯೋಜನೆ ಇತ್ಯಾದಿಗಳು ಸೇನಾ ಸಿಬ್ಬಂದಿಗಳ ಮಾನಸಿಕ ಆರೋಗ್ಯ, ದೈಹಿಕ ಕ್ಷಮತೆಯ ಮೇಲೆ ಪರಿಣಾಮ ಬೀರುತ್ತಿದೆ ಎಂದೂ ಸಹ ಈ ವರದಿ ಈ ಹಿಂದೆ ಹೇಳಿತ್ತು, ಆದರೆ ಈಗ ಸರ್ಕಾರವೇ ಭಯಾನಕ ಸತ್ಯವನ್ನು ಹೊಗೆಡಹಿದೆ.
ಅಂಥಾ ಪ್ರದೇಶಗಳಲ್ಲಿ ನಿಯೋಜನೆಗೊಂಡ ಸೈನಿಕರು, ಮನೆಯವರ ಬಗ್ಗೆ ಕಾಳಜಿ ತೋರಲಾಗದೆ, ಮನೆಯ ಆಸ್ತಿ, ಹಣಕಾಸು ಅವ್ಯವ್ಯಸ್ಥೆ, ವೈವಾಹಿಕ ಜೀವನದ ಸಮಸ್ಯೆ, ಆರೋಗ್ಯ, ಸಂಬಂಧಗಳಿಂದ ದೂರ ಇರುವುದು ಹೀಗೆ ಅನೇಕ ಕಡೆಗಳಿಂದ ಹೆಚ್ಚು ಒತ್ತಡಕ್ಕೆ ಒಳಗಾಗುತ್ತಿದ್ದಾರೆ ಎಂದು ಅಧ್ಯಯನ ಹೇಳಿದೆ.
ಆದರೆ, ಭಾರತೀಯ ಭೂಸೇನೆ ಈ ವರದಿಯನ್ನು ತಿರಸ್ಕರಿಸಿತ್ತು, ಅಲ್ಲದೇ ಇದು ಕೇವಲ ಮೇಲ್ಮಟ್ಟದ ಅಧ್ಯನ ಎಂದು ಹೇಳಿ ಅಧ್ಯಯನ ಅವೈಜ್ಞಾನಿಕದಿಂದ ಕೂಡಿದೆ ಎಂದು ಹೇಳಿತ್ತು., ವರದಿ ತರ್ಕಬದ್ಧವಾಗಿಲ್ಲ ಎಂದು ಹಿರಿಯ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದ್ದರು.
ಇದನ್ನೂ ಓದಿ: ಯುಪಿ ಚುನಾವಣೆಗೂ ಮುನ್ನ ಲಾಲು, ಮುಲಾಯಂ ಭೇಟಿ; ಕಾಂಗ್ರೆಸ್ಗೆ ಕಾದಿದೆ ಅಚ್ಚರಿ!!
ಪ್ರತಿವರ್ಷ ಸರಾಸರಿ 100 ಕ್ಕಿಂತ ಹೆಚ್ಚು ಸೈನಿಕರು ಆತ್ಮಹತ್ಯೆ ಮಾಡಿಕೊಳ್ಳುವುದು ಸಾಮಾನ್ಯ ಎಂಬಂತಾಗಿದೆ. 2010ರ ಬಳಿಕ ಇದುವರೆಗೆ ಸುಮಾರು 950 ಯೋದರನ್ನು ಭಾರತೀಯ ಸೈನ್ಯ ಕೇವಲ ಈ ಕಾರಣದಿಂದ ಕಳೆದುಕೊಂಡಿದೆ.
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ