ಫ್ಲೋರಿಡಾ: ಮಕ್ಕಳ ಕೈಗೆ ಅಪಾಯವನ್ನುಂಟು ಮಾಡುವ ಯಾವುದೇ ವಸ್ತುಗಳು ಸಿಗದಂತೆ ನೋಡಿಕೊಳ್ಳಬೇಕು. ಏಕೆಂದರೆ ಮಕ್ಕಳು (Children) ಎಲ್ಲಾ ವಸ್ತುಗಳನ್ನು ಅಟಿಕೆಯಂದೇ ಭಾವಿಸುತ್ತವೆ. ಆ ವಸ್ತುಗಳು ಎಂತಹ ಅಪಾಯವನ್ನು ಸೃಷ್ಟಿಸಬಹುದು ಎಂಬ ಅರಿವು ಅವರಿಗೆ ಇರುವುದಿಲ್ಲ, ಇದಕ್ಕೆ ಅಮೆರಿಕಾದ (America) ಫ್ಲೋರಿಡಾದಲ್ಲಿ (Florida) ನಡೆದ ಒಂದು ಘಟನೆ ಸಾಕ್ಷಿಯಾಗಿದೆ. 6 ವರ್ಷದ ಮಗು ಕಾರಿನಲ್ಲಿ ಅಜ್ಜಿ ಜೊತೆ ಪ್ರಯಾಣಿಸುವಾಗ ಕಾರಿನಲ್ಲಿ ಗನ್ ಸಿಕ್ಕಿದೆ. ತಕ್ಷಣ ಗನ್ (Gun) ತೆಗೆದುಕೊಂಡ ಮಗು ಆಕಸ್ಮಿಕವಾಗಿ ಶೂಟ್ ಮಾಡಿದೆ. ಕಾರು ಚಾಲನೆ ಮಾಡುತ್ತಿದ್ದ ಮಹಿಳೆಗೆ ಗುಂಡು ತಗುಲಿದೆ. ಅದೃಷ್ಟವಶಾತ್ ಆ ಮಹಿಳೆ ಮನೆಗೆ ಕಾರನ್ನು ಚಲಾಯಿಸಿ ತುರ್ತು ಸಹಾಯವಾಣಿಗೆ (US emergency helpline ) ಕರೆ ಮಾಡಿ ಜೀವ ಉಳಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಫೆಬ್ರವರಿ 26ರಂದು ಈ ಘಟನೆ ನಡದಿದೆ. 6 ವರ್ಷದ ಮಗು ತನ್ನ ಅಜ್ಜಿ ಜೊತೆಗೆ ಹೊರ ಹೋಗಿದ್ದ ವೇಳೆ ಹಿಂಬದಿ ಸೀಟಿನಲ್ಲಿ ಕುಳಿತಿದ್ದು, ಡ್ರೈವರ್ ಸೀಟ್ನ ಹಿಂಭಾಗದ ಜೇಬಿನಲ್ಲಿ ಗನ್ ಸಿಕ್ಕಿದೆ. ತಕ್ಷಣ ಕೈಗೆತ್ತುಕೊಂಡ ಬಾಲಕಿ ಆಕಸ್ಮಿಕವಾಗಿ ಟ್ರಿಗರ್ ಪ್ರೆಸ್ ಮಾಡಿದ್ದು, ಗುಂಡು ಡ್ರೈವ್ ಮಾಡುತ್ತಿದ್ದ 57 ವರ್ಷದ ಮಹಿಳೆಗೆ ತಗುಲಿದೆ. ಮಧ್ಯಾಹ್ನದ ವೇಳೆ ಈ ಘಟನೆ ನಡೆದಿದ್ದು, ಮಹಿಳೆಯ ಕೆಳ ಬೆನ್ನಿಗೆ ಗುಂಡು ಬಿದ್ದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಹಾಯವಾಣಿಗೆ ಕರೆ ಮಾಡಿ ಜೀವ ಉಳಿಸಿಕೊಂಡ ಮಹಿಳೆ
ಗುಂಡು ಬಿದ್ದರೂ ಸಹಾ ಭಯಪಡದ ಮಹಿಳೆ ಕಾರನ್ನು ಮನೆಗೆ ತೆಗೆದುಕೊಂಡು ಹೋಗುವಲ್ಲಿ ಸಫಲರಾಗಿದ್ದಾರೆ. ತಕ್ಷಣ ಅಮೆರಿಕಾದ ತುರ್ತು ಸಹಾಯವಾಣಿ 911ಕ್ಕೆ ಕರೆ ಮಾಡಿದ್ದಾರೆ. ತಕ್ಷಣ ನೆರವಿಗೆ ದಾವಿಸಿದ ರಕ್ಷಣಾ ತಂಡ ಮಹಿಳೆಯನ್ನು ಏರ್ಲಿಫ್ಟ್ ಮಾಡುವ ಮೂಲಕ ಆಸ್ಪತ್ರೆಗೆ ಸೇರಿಸಿದ್ದಾರೆ. ಗುಂಡು ಬಿದ್ದಿದ್ದರೂ ಸಹಾ ಜೀವಕ್ಕೆ ತೊಂದರೆಯಾಗಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸ್ ಮುಖ್ಯಸ್ಥ ಟಾಡ್ ಗ್ಯಾರಿಸನ್ ಈ ಕುರಿತು ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ. " ಈ ಘಟನೆ ಬಂದೂಕು ಸುರಕ್ಷತೆಯ ಪ್ರಾಮುಖ್ಯತೆಗೆ ಒಂದು ದುರದೃಷ್ಟಕರ ಉದಾಹರಣೆಯಾಗಿದೆ. ಈ ಘಟನೆಯಲ್ಲಿ ಕೇವಲ ಮಹಿಳೆ ಜೀವಕ್ಕೆ ಮಾತ್ರ ತೊಂದರೆಯನ್ನುಂಟು ಮಾಡಿಲ್ಲ, ಸ್ವತಃ ಮಗುವೂ ಕೂಡ ಜೀವ ಕಳೆದುಕೊಳ್ಳುವ ಸಂಭವವಿತ್ತು, ಹಾಗಾಗಿ ಗನ್ ಮಕ್ಕಳ ಕೈಗೆ ಸಿಗದಂತೆ ಜಾಗೃತಿ ವಹಿಸಬೇಕೆಂದು " ಎಂದು ತಿಳಿಸಿದ್ದಾರೆ.
ಶಿಕ್ಷಕಿಗೆ ಗುಂಡು ಹಾರಿಸಿದ್ದ 6 ವರ್ಷದ ಬಾಲಕ
ಅಮೆರಿಕಾದಲ್ಲಿ ಇಂತಹ ಹಲವು ಪ್ರಕರಣಗಳು ಆಗಾಗ್ಗೆ ಕೇಳಿಬರುತ್ತಿರುತ್ತವೆ. ಅಲ್ಲಿ ಬಹುತೇಕ ಮಂದಿ ಗನ್ ಲೈಸೆನ್ಸ್ ಪಡೆದಿದ್ದು, ಮನೆಯಲ್ಲಿ ಗನ್ಗಳನ್ನು ಹೊಂದಿದ್ದಾರೆ. ಇದರಿಂದ ಅಪ್ತಾಪ್ತರ ಕೈಗೆ ಸುಲಭವಾಗಿ ಗನ್ ಸಿಗುತ್ತಿದ್ದು, ಸಿಕ್ಕ ಸಿಕ್ಕಲ್ಲಿ ಶೂಟ್ ಮಾಡಿ ಹಲವರ ಸಾವಿಗೆ ಕಾರಣವಾಗಿರುವ ಹಲವು ಪ್ರಕರಣಗಳು ನಡೆದಿವೆ. ಜನವರಿಯಲ್ಲಿ 6 ವರ್ಷದ ವಿದ್ಯಾರ್ಥಿಯೊಬ್ಬ ತನ್ನ ಶಿಕ್ಷಕಿಗೆ ಗುಂಡು ಹಾರಿಸಿದ್ದ ಘಟನೆ ವರ್ಜೀನಿಯಾದಲ್ಲಿ ನಡೆದಿತ್ತು.
6 ವರ್ಷದ ಬಾಲಕನೊಬ್ಬ ತರಗತಿಯಲ್ಲಿ ಗುಂಡು ಹಾರಿಸಿದ್ದು ಈ ಘಟನೆಯಲ್ಲಿ ಶಿಕ್ಷಕಿಗೆ ಗುಂಡು ಬಿದ್ದಿತ್ತು. ಅದೃಷ್ಟವಶಾತ್ ಈ ದುರ್ಘಟನೆಯಲ್ಲಿ ಯಾವುದೇ ವಿದ್ಯಾರ್ಥಿಗಳಿಗೆ ಗುಂಡು ತಗುಲಿರಲಿಲ್ಲ, ಆದರೆ ಶಿಕ್ಷಕಿಗೆ ಗುಂಡು ಬಿದ್ದು ಗಂಭೀರ ಗಾಯಗೊಂಡಿದ್ದರು.
ಗನ್ ಮಕ್ಕಳಿಗೆ ಸಿಗದಂತೆ ನೋಡಿಕೊಳ್ಳಲು ಮನವಿ
ಇನ್ನು ಇಂತಹ ಘಟನೆಗಳು ಅಮೆರಿಕಾದಲ್ಲಿ ಆಗಾಗ್ಗೆ ಸಂಭವಿಸುತ್ತಿರುತ್ತವೆ. ಹಾಗಾಗಿ ಮಕ್ಕಳಿಗೆ, ಯುವಕರ ಕೈಗೆ ಗನ್ ಸಿಗದಂತೆ ನೋಡಿಕೊಳ್ಳಬೇಕು. ಇಂತಹ ಘಟನೆಗಳು ನಿಲ್ಲಬೇಕೆಂದರೆ ಸಾರ್ವಜನಿಕರ ಬೆಂಬಲ ಅಗತ್ಯ ಎಂದು ಪೊಲೀಸ್ ಅಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ.
ಕಳೆದ ವರ್ಷ ಮೇ ತಿಂಗಳಲ್ಲಿ ಅಮೆರಿಕದ ಟೆಕ್ಸಾಸ್‌ನ ಉವಾಲ್ಡೆ ಎಂಬ 18 ವರ್ಷ ಬಂದೂಕುಧಾರಿಯೊಬ್ಬ 19 ಮಕ್ಕಳು ಮತ್ತು ಇಬ್ಬರು ಶಿಕ್ಷಕರಿಗೆ ಗುಂಡು ಹಾರಿಸಿ ಬಲಿ ತೆಗೆದುಕೊಂಡಿದ್ದ. ಇನ್ನು ಕಳೆದ ವರ್ಷ ಅಮೆರಿಕಾದಲ್ಲಿ ಗನ್ ಸಂಬಂಧಿತ ಪ್ರಕರಣಗಳಲ್ಲಿ ಸುಮಾರು 44,000 ಸಾವು ಸಂಭವಿಸಿವೆ ಎಂದು ವರದಿಯಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ