ಲಕ್ನೋ (ಜನವರಿ 06); ಪಶ್ಚಿಮ ಉತ್ತರ ಪ್ರದೇಶದ ಬುಡಾನ್ ಜಿಲ್ಲೆಯಲ್ಲಿ ಭಾನುವಾರ ರಾತ್ರಿ 50 ವರ್ಷದ ಮಹಿಳೆಯೊಬ್ಬರನ್ನು ಅರ್ಚಕ ಮತ್ತು ಆತನ ಇಬ್ಬರು ಶಿಷ್ಯರು ಸೇರಿದಂತೆ ಒಟ್ಟು ಮೂರು ಜನ ಸಾಮೂಹಿಕ ಅತ್ಯಾಚಾರ ನಡೆಸಿ ಕೊಲೆ ಮಾಡಿದ್ದಾರೆ. ಈ ಘಟನೆಗೆ ಇಡೀ ದೇಶವೇ ಬೆಚ್ಚಿಬಿದ್ದಿದ್ದು, ಈ ಸಂಬಂಧ ಪ್ರಕರಣ ದಾಖಲಿಸಲಾಗಿದೆ. ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಉತ್ತರಪ್ರದೇಶ ಪೊಲೀಸರು ತಿಳಿಸಿದ್ದಾರೆ. ಮೃತ ಮಹಿಳೆ ನಿಯಮಿತವಾಗಿ ಪೂಜೆಗೆಂದು ದೇವಾಲಯಕ್ಕೆ ತೆರಳುವುದು ವಾಡಿಕೆ. ಭಾನುವಾರ ಸಂಜೆ 5 ಗಂಟೆ ಸುಮಾರಿಗೆ ಅವರು ಮನೆಯಿಂದ ಎಂದಿನಂತೆ ದೇವಾಲಯಕ್ಕೆ ಹೊರಟಿದ್ದಾರೆ. ರಾತ್ರಿ 11.30 ನಿಮಿಷಕ್ಕೆ ಸ್ವತಃ ಅರ್ಚಕ ಮತ್ತು ಆತನ ಶಿಷ್ಯಂದಿರು ತಮ್ಮ ಕಾರಿನಲ್ಲಿ ಆಕೆಯನ್ನು ಮತ್ತೆ ಮನೆಗೆ ತಂದು ಬಿಟ್ಟಿದ್ದಾರೆ. ಆದರೆ, ಈ ವೇಳೆ ಆಕೆ ಸಂಪೂರ್ಣ ನಿತ್ರಾಣಳಾಗಿದ್ದು ಬೆಳಗ್ಗೆ ವೇಳೆಗೆ ಮೃತಪಟ್ಟಿದ್ದಾರೆ ಎಂದು ಮೃತ ಮಹಿಳೆಯ ಮಗ ಮಧ್ಯಮಗಳಿಗೆ ತಿಳಿಸಿದ್ದಾನೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಬುಡಾನ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂಕಲ್ಪ್ ಶರ್ಮಾ ಟ್ವೀಟ್ ಮಾಡಿದ್ದು, "ಮಹಿಳೆ ಸಾವಿಗೆ ಸಂಬಂಧಿಸಿದಂತೆ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣ ದಾಖಲಾಗಿದ್ದು, ಇಬ್ಬರನ್ನು ಬಂಧಿಸಲಾಗಿದೆ. ಪ್ರಕರಣದ ಆರಂಭದಲ್ಲೇ ನಿರ್ಲಕ್ಷ್ಯ ತೋರಿದ ಆರೋಪದ ಮೇಲೆ ಸ್ಥಳೀಯ ಪೊಲೀಸರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗುತ್ತದೆ.
ಇನ್ನೂ"ಪ್ರಾಥಮಿಕ ವಿಚಾರಣೆಯಲ್ಲಿ ಸ್ಥಳೀಯ ಪೊಲೀಸ್ ಠಾಣೆ ಉಸ್ತುವಾರಿ ಪ್ರಕರಣವನ್ನು ನಿಭಾಯಿಸುವಲ್ಲಿ ನಿರ್ಲಕ್ಷ್ಯ ವಹಿಸಿದೆ ಎಂದು ತಿಳಿದುಬಂದಿದೆ. ಹೀಗಾಗಿ ಆತನನ್ನು ಅಮಾನತುಗೊಳಿಸಲು ನಾನು ಆದೇಶಿಸಿದ್ದೇನೆ" ಎಂದು ಮಾಹಿತಿ ನೀಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ