Union Budget 2023: ಪಾರ್ಲಿಮೆಂಟ್ನಲ್ಲಿ 2023-24 ನೇ ಸಾಲಿನ ಕೇಂದ್ರ ಬಜೆಟ್ ಮಂಡನೆಯಾಗುತ್ತಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್(Finance Minister Nirmala Sitharaman) ಅವರು ಕೇಂದ್ರ ಬಜೆಟ್(Union Budget) ಮಂಡಿಸುತ್ತಿದ್ದಾರೆ. ಇದು ಅವರ ಐದನೇ ಮತ್ತು ಈ ಸರ್ಕಾರದ ಅವಧಿಯ ಕೊನೆಯ ಪೂರ್ಣ ಬಜೆಟ್ ಆಗಿದೆ. ಮುಂದಿನ ವರ್ಷ ನಡೆಯಲಿರುವ ಸಾರ್ವತ್ರಿಕ ಚುನಾವಣೆಗೂ ಮುನ್ನವೇ, ಈ ಕೊನೆಯ ಪೂರ್ಣ ಪ್ರಮಾಣದ ಬಜೆಟ್ ಮೂಲಕ ಸರ್ಕಾರವು ಜನರ ನಿರೀಕ್ಷೆ ತಲುಪಲು ಹೊಸ ಯೋಜನೆಗಳನ್ನು ಆರಂಭಿಸುತ್ತಿದೆ. ಆರ್ಥಿಕತೆಯ ವಿವಿಧ ಕ್ಷೇತ್ರಗಳನ್ನು ಉತ್ತೇಜಿಸಲು ಹೊಸ ಯೋಜನೆಗಳನ್ನು ಘೋಷಣೆ ಮಾಡಲಾಗಿದೆ.
ಪ್ರವಾಸೋದ್ಯಮಕ್ಕೆ ಉತ್ತೇಜನ
ದೇಶೀಯ ಮತ್ತು ಅಂತರಾಷ್ಟ್ರೀಯ ಪ್ರವಾಸೋದ್ಯಮಕ್ಕಾಗಿ ಪ್ಯಾಕೇಜ್ ರೂಪದಲ್ಲಿ 50 ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸಲು ಆಯ್ಕೆ ಮಾಡಲಾಗಿದೆ. ದೇಶೀಯ ಮತ್ತು ವಿದೇಶಿ ಪ್ರವಾಸಿಗರನ್ನು ಆಕರ್ಷಿಸಲು ಅಪಾರವಾದ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಿದೆ. ಪ್ರವಾಸೋದ್ಯಮದಕ್ಕೆ ಹೆಚ್ಚಿನ ಉತ್ತೇಜನ ನೀಡಲಿದ್ದು, ವಿಶೇಷವಾಗಿ ಯುವಕರಿಗೆ ಉದ್ಯೋಗ ಮತ್ತು ಉದ್ಯಮಶೀಲತೆಗೆ ಈ ಕ್ಷೇತ್ರವು ದೊಡ್ಡ ಅವಕಾಶವನ್ನು ಒದಗಿಸಲಿದೆ. ಸರ್ಕಾರಿ ಕಾರ್ಯಕ್ರಮ ಮತ್ತು ಸಾರ್ವಜನಿಕ-ಖಾಸಗಿಗಳ ಒಮ್ಮುಖದೊಂದಿಗೆ ಪ್ರವಾಸೋದ್ಯಮದ ಪ್ರಚಾರವನ್ನು ಮಿಷನ್ ಮೋಡ್‌ನಲ್ಲಿ ತೆಗೆದುಕೊಳ್ಳಲಾಗುವುದು ಎಂದು ನಿರ್ಮಲಾ ಸೀತಾರಾಮನ್ ಅವರು ಹೇಳಿದ್ದಾರೆ.
50 ಪ್ರವಾಸಿತಾಣಗಳ ಅಭಿವೃದ್ಧಿಗೆ ಒತ್ತು
ಸುಮಾರು 50 ಪ್ರವಾಸಿತಾಣಗಳನ್ನು ಅಭಿವೃದ್ಧಿಗೊಳಿಸಲು ಆಯ್ಕೆ ಮಾಡಿಕೊಳ್ಳಲಾಗಿದೆ. ಭೌತಿಕ ಸಂಪರ್ಕ, ವರ್ಚುವಲ್ ಸಂಪರ್ಕ, ಪ್ರವಾಸಿ ಮಾರ್ಗದರ್ಶಿಗಳು, ಬೀದಿ ಬದಿಗಳಲ್ಲಿ ಉನ್ನತ ಗುಣಮಟ್ಟ ಆಹಾರ ಮತ್ತು ಪ್ರವಾಸಿ ಭದ್ರತೆಯಂತಹ ಅಂಶಗಳ ಬಗ್ಗೆ ಗಮನ ಹರಿಸಲಾಗಿದೆ. ಜೊತೆಗೆ ಟ್ರಿಪ್ ಅನುಭವವನ್ನು ಹೆಚ್ಚಿಸಲು ಎಲ್ಲಾ ಸಂಬಂಧಿತ ಅಂಶಗಳನ್ನು ಅಪ್ಲಿಕೇಶನ್‌ನಲ್ಲಿ ಲಭ್ಯವಾಗುವಂತೆ ಮಾಡಲಾಗುವುದು. ಪ್ರತಿ ತಾಣವನ್ನು ಅಭಿವೃದ್ಧಿಪಡಿಸಲಾಗುವುದು. ಇದೊಂದು ಕಂಪ್ಲೀಟ್ ಪ್ಯಾಕೇಜ್ ಆಗಿದೆ ಎಂದು ತಿಳಿಸಿದ್ದಾರೆ.
ಇದೇ ಮೊದಲ ಬಾರಿಗೆ ಬಜೆಟ್ನಲ್ಲಿ ಪ್ರವಾಸೋದ್ಯಮಕ್ಕೆ ಪ್ರಾಮುಖ್ಯತೆ
ಇದೇ ಮೊದಲ ಬಾರಿ ಕೇಂದ್ರ ಬಜೆಟ್ನಲ್ಲಿ ಪ್ರವಾಸೋದ್ಯಮ ಕ್ಷೇತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ದೇಶದ ವೈವಿಧ್ಯಮಯ ಸಂಪ್ರದಾಯ ಮತ್ತು ಸಂಸ್ಕೃತಿಯನ್ನು ಗಮನಿಸಿದರೆ ಭಾರತವು ಪ್ರವಾಸೋದ್ಯಮದಲ್ಲಿ ದೊಡ್ಡ ಹೆಸರನ್ನು ಹೊಂದಿದೆ. ಹೀಗಾಗಿ ಪ್ರವಾಸೋದ್ಯಮವನ್ನು ಉತ್ತೇಜಿಸಲು ಇಂಡಿಯನ್ ಹೋಟೆಲ್‌ಗಳು, EIH ಮತ್ತು ಲೆಮನ್ ಟ್ರೀ ಹೋಟೆಲ್‌ಗಳು ಸೇರಿದಂತೆ ಹೋಟೆಲ್ ಕಂಪನಿಗಳತ್ತ ಸರ್ಕಾರ ಗಮನ ಹರಿಸಿರುವುದು ನಿಜಕ್ಕೂ ಮೆಚ್ಚಬೇಕಾದ ವಿಚಾರವಾಗಿದೆ.
ಡಿಜಿಟಲ್ ಲೈಬ್ರರಿ ಸ್ಥಾಪನೆ
ಆ ಮಹತ್ತರ ಘೋಷಣೆಗಳಲ್ಲಿ ರಾಷ್ಟ್ರೀಯ ಡಿಜಿಟಲ್ ಲೈಬ್ರರಿ ಸ್ಥಾಪನೆಯೂ ಪ್ರಮುಖವಾಗಿದೆ. ಗ್ರಾಮ ಪಂಚಾಯತ್ ಮತ್ತು ವಾರ್ಡ್ ಮಟ್ಟದಲ್ಲಿ ನ್ಯಾಷನಲ್ ಡಿಜಿಟಲ್ ಲೈಬ್ರರಿಗಳ ಸ್ಥಾಪನೆ ಮಾಡುವುದಾಗಿ ಬಜೆಟ್ನಲ್ಲಿ ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ. ಓದುವ ಸಂಸ್ಕೃತಿಯನ್ನು ಉತ್ತೇಜಿಸಲು ರಾಷ್ಟ್ರೀಯ ಪುಸ್ತಕ ಟ್ರಸ್ಟ್ನ್ನು ನಿರ್ಮಿಸಲಾಗುತ್ತಿದೆ, ಮಕ್ಕಳ ಪುಸ್ತಕ ಟ್ರಸ್ಟ್ನ್ನು ಪ್ರಾದೇಶಿಕ ಭಾಷೆಗಳು ಮತ್ತು ಇಂಗ್ಲಿಷ್‌ನಲ್ಲಿ ಪ್ರೋತ್ಸಾಹಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ರಾಜ್ಯಕ್ಕೆ ಬಂಪರ್ ಕೊಡುಗೆ
ಕರ್ನಾಟಕಕ್ಕೆ ಬಜೆಟ್ನಲ್ಲಿ ಬಂಪರ್ ಕೊಡುಗೆ ನೀಡಲಾಗಿದೆ, ಭದ್ರಾ ಮೇಲ್ದಂಡೆ ಯೊಜನೆಗೆ 5,300 ಕೋಟಿ ಅನುದಾನವನ್ನು. ನೀಡುವುದಾಗಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಘೋಷಣೆ ಮಾಡಿದ್ದಾರೆ.
ರಾಜ್ಯ ಸರ್ಕಾರಗಳಿಗೆ ಹಣಕಾಸು ನೆರವು ನೀಡುವುದಾಗಿ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ. ರಾಜ್ಯಗಳ ರಸ್ತೆ, ರೈಲು, ವಿಮಾನ ನಿಲ್ದಾಣಗಳ ಅಭಿವೃದ್ಧಿಗೆ ಬಡ್ಡಿ ರಹಿತ ಸಾಲ ಸೌಲಭ್ಯ ಮುಂದುವರಿಕೆ ಮಾಡುವುದಾಗಿ ಸಹ ಘೋಷಿಸಿದ್ದಾರೆ. ರಾಜ್ಯಗಳಿಗೆ 50 ವರ್ಷಗಳ ಬಡ್ಡಿ ರಹಿತ ಸಾಲ ಮುಂದುವರಿಯುತ್ತದೆ ಎಂದು ಬಜೆಟ್ ಭಾಷಣದಲ್ಲಿ ಸೀತಾರಾಮನ್ ಘೋಷಿಸಿದ್ದಾರೆ.
ದೇಶದಲ್ಲಿ ಹೊಸದಾಗಿ 50 ಏರ್ಪೋರ್ಟ್ಗಳ ಅಭಿವೃದ್ಧಿಗೆ ಅನುಮೋದನೆ-ಅನುದಾನ ನೀಡಲಾಗುವುದು. ಮ್ಯಾನ್ ಹೋಲ್ಗಳಲ್ಲಿ ಮಾನವರು ಇಳಿಯದಂತೆ ಯಂತ್ರಗಳ ಬಳಕೆ ಹೆಚ್ಚಿಸಲಾಗುವುದು. ಸರ್ಕಾರಿ ನೌಕರರ ಕೌಶಲಾಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.
ಆರೋಗ್ಯ, ಕೃಷಿ, ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಕೃತಕ ಬುದ್ದಿಮತ್ತೆಯ ಬಳಕೆ ಹೆಚ್ಚಿಸಲಾಗುವುದು. ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಕೇಂದ್ರಗಳನ್ನು ಸ್ಥಾಪಿಸಿ ವಿವಿಧ ಕ್ಷೇತ್ರಗಳಲ್ಲಿ ಬಳಕೆಯನ್ನು ಉತ್ತೇಜಿಸಲಾಗುವುದು ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಘೋಷಣೆ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ