5 States Elections: ಇಂದು ಯೂಪಿ, ಗೋವಾ ಮತ್ತು ಉತ್ತರಾಖಂಡದಲ್ಲಿ ಮತದಾನ

ಸಾಮಾಜಿಕ ಅಂತರ ಕಾಪಾಡಿಕೊಂಡು ನಡೆಯಬೇಕಿರುವುದರಿಂದ ಮತದಾನದ ಅವಧಿಯನ್ನು ಬೆಳಿಗ್ಗೆ 8ರಿಂದ ಸಂಜೆ 5ಗಂಟೆಯ ಬದಲಿಗೆ ಬೆಳಿಗ್ಗೆ 8ರಿಂದ ಸಂಜೆ 6 ಗಂಟೆಯವರೆಗೆ ನಿಗದಿ ಮಾಡಲಾಗಿದೆ. ಅಂದರೆ 1 ಗಂಟೆ ಹೆಚ್ಚು ಸಮಯ ನೀಡಲಾಗಿದೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ನವದೆಹಲಿ(ಫೆ. 14): ರಾಷ್ಟ್ರ ರಾಜಕಾರಣದ ಮೇಲೂ ಗಮನಾರ್ಹ ಪರಿಣಾಮ ಬೀರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ (Uttar Pradesh Assembly Elections) ಈ ಬಾರಿ ಏಳು ಹಂತದಲ್ಲಿ ಮತದಾನ ನಡೆಯಲಿದ್ದು ಇಂದು ಎರಡನೇ ಹಂತದ ಮತದಾನವಾಗಲಿದೆ. ಅಲ್ಲದೆ ಇಂದು‌ ಗೋವಾ (Goa) ಮತ್ತು ಉತ್ತರಾಖಂಡ (Uttarakhand) ರಾಜ್ಯಗಳಲ್ಲಿ ಅಲ್ಲಿನ ಎಲ್ಲಾ ಕ್ಷೇತ್ರಗಳಿಗೂ ಒಂದೇ ಹಂತದ ಮತದಾನ ಕೂಡ ಜರುಗಲಿದೆ. ಕೊರೋನಾ (Corona) ಮತ್ತು ಓಮೈಕ್ರಾನ್ (Omicron) ಸೋಂಕು ಹರಡುವಿಕೆ ಇನ್ನೂ ನಿಂತಿಲ್ಲದಿರುವುದರಿಂದ ಕೇಂದ್ರ ಚುನಾವಣಾ ಆಯೋಗ (Central Election Commission)‌ ವಿಶೇಷವಾದ ನಿಯಮಗಳೊಂದಿಗೆ ಮತದಾನ ನಡೆಸುತ್ತಿದೆ.

ಮತದಾನಕ್ಕೆ 1 ಗಂಟೆ ಹೆಚ್ಚು ಸಮಯ

ಈ ಬಾರಿ ಬೆಳಿಗ್ಗೆ 8ಗಂಟೆಯಿಂದ ಸಂಜೆ 6 ಗಂಟೆವರೆಗೆ ಮತದಾನ ನಡೆಯಲು ಅವಕಾಶ ಮಾಡಿಕೊಡಲಾಗಿದೆ. ಮತದಾನವೂ ಕೊರೋನಾ ನಿಯಮಗಳ ಪ್ರಕಾರ ನಡೆಯಬೇಕಿರುವುದರಿಂದ ಅಂದರೆ ಸಾಮಾಜಿಕ ಅಂತರ ಕಾಪಾಡಿಕೊಂಡು ನಡೆಯಬೇಕಿರುವುದರಿಂದ ಮತದಾನದ ಅವಧಿಯನ್ನು ಬೆಳಿಗ್ಗೆ 8ರಿಂದ ಸಂಜೆ 5ಗಂಟೆಯ ಬದಲಿಗೆ ಬೆಳಿಗ್ಗೆ 8ರಿಂದ ಸಂಜೆ 6 ಗಂಟೆಯವರೆಗೆ ನಿಗಧಿ ಮಾಡಲಾಗಿದೆ. ಅಂದರೆ 1 ಗಂಟೆ ಹೆಚ್ಚು ಸಮಯ ನೀಡಲಾಗಿದೆ.

ಇದನ್ನೂ ಓದಿ:Goa Election: ಇಂದು ಗೋವಾ ವಿಧಾನಸಭೆ ಚುನಾವಣೆ, 301 ಅಭ್ಯರ್ಥಿಗಳ ಭವಿಷ್ಯ ನಿರ್ಧಾರ

ಯೂಪಿಯಲ್ಲಿ ಬಿಜೆಪಿಗೆ ಮಹತ್ವದ 2ನೇ ಹಂತ

ಫೆಬ್ರವರಿ 10ರಂದು‌ 11 ಜಿಲ್ಲೆಗಳ 55 ಕ್ಷೇತ್ರಗಳಿಗೆ ಪಶ್ಚಿಮ ಉತ್ತರ ಪ್ರದೇಶದಲ್ಲಿ ಮೊದಲ ಹಂತದ ಮತದಾನವಾಗಿತ್ತು. ಇಂದು 9 ಜಿಲ್ಲೆಗಳ 55 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಪಶ್ಚಿಮ ಉತ್ತರ ಪ್ರದೇಶದ 20 ಜಿಲ್ಲೆಗಳ ಈ 113 ಕ್ಷೇತ್ರಗಳಲ್ಲಿ ಕಳೆದ ಬಾರಿ ಬಿಜೆಪಿ 100ಕ್ಕೂ ಹೆಚ್ಚು ಸ್ಥಾನ ಗೆದ್ದಿತ್ತು. ಆದರೆ ಈ ಬಾರಿ ಆಡಳಿತಾರೂಢ (ಕೇಂದ್ರ ಮತ್ತು ರಾಜ್ಯ ಎರಡೂ ಕಡೆ) ಬಿಜೆಪಿ ಪಾಲಿಗೆ ಅತ್ಯಂತ ಕಷ್ಟಕರವಾಗಿ ಪರಿಣಮಿಸಿದೆ ಎಂದು ಕೂಡ ಹೇಳಲಾಗುತ್ತಿದೆ.‌ ಉತ್ತರ ಪ್ರದೇಶದಲ್ಲಿ ಕಳೆದ ಬಾರಿಯ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯು ಜಾಟ್ ಸಮುದಾಯದ ಪಕ್ಷ ಎಂದೇ ಹೇಳಲಾಗುವ ರಾಷ್ಟ್ರೀಯ ಲೋಕದಳ (RLD) ಜೊತೆ ಮೈತ್ರಿ ಮಾಡಿಕೊಂಡಿತ್ತು. ಈ ಬಾರಿ ರಾಷ್ಟ್ರೀಯ ಲೋಕದಳ ಪಕ್ಷವು ಬಿಜೆಪಿ ಮೈತ್ರಿ ಕೂಟದಿಂದ ಹೊರಹೋಗಿ ಸಮಾಜವಾದಿ ಪಕ್ಷದ ಜೊತೆ ಕೈಜೋಡಿಸಿದೆ.

ಮುಂದಿನ ಹಂತಗಳ ಮೇಲೂ ಪರಿಣಾಮ ಸಾಧ್ಯತೆ

ಕೇಂದ್ರ ಸರ್ಕಾರ ತಂದಿದ್ದ ಮೂರು ರೈತ ವಿರೋಧಿ ಕೃಷಿ ಕಾನೂನುಗಳ ಕಾರಣಕ್ಕೆ ಬಿಜೆಪಿ ವಿರುದ್ಧ ಉತ್ತರ ಪ್ರದೇಶದಲ್ಲಿ ಜಾಟ್ ಸಮುದಾಯ ಸಿಡಿದೆದ್ದಿದೆ. ಹಾಗಾಗಿ ಜಾಟ್ ಸಮುದಾಯದ ಪ್ರಾಬಲ್ಯ ಇರುವ ಪಶ್ಚಿಮ ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ತೀವ್ರ ಹಿನ್ನಡೆ ಆಗಬಹುದು ಎಂದು ಹೇಳಲಾಗುತ್ತಿದೆ. ಫೆಬ್ರವರಿ 10ರಂದು ನಡೆದಿದ್ದ ಮೊದಲ ಹಂತ ಹಾಗೂ ಇಂದು ನಡೆಯುವ ಎರಡನೇ ಹಂತದಲ್ಲೂ ಬಿಜೆಪಿಗೆ ಹೊಡೆತ ಬೀಳಲಿದೆ ಎಂದು ಹೇಳಲಾಗುತ್ತಿದೆ.‌ ಮೊದಲೆರಡು ಹಂತಗಳಲ್ಲಿ ಹಿನ್ನಡೆಯಾದರೆ ಅದೇ ಸಾರ್ವಜನಿಕ ಅಭಿಪ್ರಾಯ ಮುಂದಿನ ಹಂತಗಳಿಗೂ ವಿಸ್ತರಿಸಬಹುದು ಅಥವಾ ಪ್ರತಿಕೂಲ ಪರಿಣಾಮ ಬೀರಬಹುದೆಂದು ಬಿಜೆಪಿ ಚಿಂತೆಗೆ ಕಾರಣವಾಗಿದೆ.

SP-RLD ಸಾಲಿಡ್ ಮೈತ್ರಿ

ರಾಷ್ಟ್ರೀಯ ಲೋಕದಳ ಜಾಟ್ ಸಮುದಾಯದ ಪಕ್ಷ ಎಂದು ಹೇಗೆ ಜನಜನಿತವೋ‌ ಸಮಾಜವಾದಿ ಪಕ್ಷ ಯಾದವರ ಪಕ್ಷ ಎಂದು ಕೂಡ‌ ಪ್ರಸಿದ್ದಿ. ಸಮಾಜವಾದಿ ಪಕ್ಷಕ್ಕೆ ಮುಸ್ಲಿಂ ಸಮುದಾಯದ ಬೆಂಬಲ ಕೂಡ ಇದೆ. ಹಾಗಾಗಿ ಈ ಬಾರಿ ಜಾಟ್, ಯಾದವ್ ಮತ್ತು ‌ಮುಸ್ಲಿಂ ಸಮುದಾಯಗಳು ಒಂದೇ ಕಡೆ ಸೇರಿರುವುದರಿಂದ ಸಮಾಜವಾದಿ ಪಕ್ಷ ಹಾಗೂ ರಾಷ್ಟ್ರೀಯ ಲೋಕದಳ ಮೈತ್ರಿಕೂಟ ಮುನ್ನಡೆ ಸಾಧಿಸುವ ಸಾಧ್ಯತೆಗಳಿವೆ.

ಗೋವಾದಲ್ಲಿ ಒಂದೇ ಹಂತದಲ್ಲಿ ಮತದಾನ

ಕಡಲ ಕಿನಾರೆಯ ರಾಜ್ಯ ಗೋವಾದ 40 ವಿಧಾನಸಭೆ ಕ್ಷೇತ್ರಗಳಿಗೆ ಇವತ್ತು ಒಂದೇ ಹಂತದಲ್ಲಿ ಮತದಾನ ನಡೆಯುತ್ತಿದೆ. ಬಿಜೆಪಿ, ಕಾಂಗ್ರೆಸ್, ಟಿಎಂಸಿ ಮತ್ತು ಆಮ್ ಅದ್ಮಿ ಪಕ್ಷಗಳ ನಡುವೆ ತೀವ್ರ ಸೆಣಸಾಟ ಕಂಡುಬರುತ್ತಿದೆ. ಆಡಳಿತಾರೂಢ ಬಿಜೆಪಿ ಸಾಕಷ್ಟು ಸವಾಲುಗಳ ನಡುವೆ ಚುನಾವಣೆ ಎದುರಿಸುತ್ತಿದೆ.‌ ಟಿಎಂಸಿ ಮತ್ತು ಆಮ್ ಅದ್ಮಿ ಪಕ್ಷಗಳು ಇಲ್ಲಿ ಬಿಜೆಪಿ ಮತಗಳನ್ನು ಕಸಿಯುತ್ತಿವೆ ಎಂದು ಹೇಳಲಾಗುತ್ತಿದೆ. ಇದರಿಂದ ಕಾಂಗ್ರೆಸ್ ಪಕ್ಷಕ್ಕೆ ಲಾಭವಾಗುವ ನಿರೀಕ್ಷೆ ಇದೆ. 40 ಕ್ಷೇತ್ರಗಳಿಂದ ಒಟ್ಟು 301 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದು ಗೋವಾದ 11.6 ಲಕ್ಷ ಮಂದಿ ಮತದಾರರು ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸಲಿದ್ದಾರೆ.

ಇದನ್ನೂ ಓದಿ: Pulwama Attack: ಕರಾಳ ಪುಲ್ವಾಮಾ ದಾಳಿಗೆ ಮೂರು ವರ್ಷ, ಅಂದು ಏನೇನು ನಡೆದಿತ್ತು ಗೊತ್ತಾ.?

ಉತ್ತರಾಖಂಡದಲ್ಲೂ ಒಂದೇ ಹಂತದಲ್ಲಿ ಮತದಾನ

ಉತ್ತರಾಖಂಡದ 13 ಜಿಲ್ಲೆಯ ಎಲ್ಲಾ 70 ಕ್ಷೇತ್ರಗಳಿಗೆ ಇಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಒಟ್ಟು 632 ಮಂದಿ ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ. ಆ ಪೈಕಿ 564 ಪುರುಷರು ಮತ್ತು 62 ಮಹಿಳೆಯರು. ಇವರ ಅದೃಷ್ಟ ಪರೀಕ್ಷೆ 81 ಲಕ್ಷ ಅರ್ಹ ಮತದಾರರಿಂದ ನಿರ್ಧಾರವಾಗಲಿದೆ. ಇಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಹಣಾಹಣಿ ಇದೆ.
Published by:Latha CG
First published: