ಶಾಲಾ ಮಕ್ಕಳ ಬ್ಯಾಗ್ ಹೊರೆ ಇಳಿಸಲು ಪ್ರಿನ್ಸಿಪಾಲ್​​ ಮಾಡಿದ ಉಪಾಯವೇನು ಗೊತ್ತಾ?

Latha CG | news18india
Updated:January 11, 2019, 6:00 PM IST
ಶಾಲಾ ಮಕ್ಕಳ ಬ್ಯಾಗ್ ಹೊರೆ ಇಳಿಸಲು ಪ್ರಿನ್ಸಿಪಾಲ್​​ ಮಾಡಿದ ಉಪಾಯವೇನು ಗೊತ್ತಾ?
ಸಾಂದರ್ಭಿಕ ಚಿತ್ರ
Latha CG | news18india
Updated: January 11, 2019, 6:00 PM IST
ಗುಜರಾತ್ (ಜ. 11): ಶಾಲಾ ಮಕ್ಕಳು ಮಣಭಾರದ ಬ್ಯಾಗ್​ ಹೊತ್ತು ಕಷ್ಟಪಟ್ಟು ಹೋಗುತ್ತಿದ್ದರೆ ಎಂತಹವರ ಮನಸೂ ಮಮ್ಮುಲ ಮರುಗುತ್ತದೆ. ಬ್ಯಾಗ್​ನ ತೂಕಕ್ಕೆ ಮಕ್ಕಳ ಬೆನ್ನು ಬಾಗಿರುತ್ತದೆ. ಹೀಗಾಗಿಯೇ ಕೇಂದ್ರ ಸರ್ಕಾರ ಶಾಲಾ ಮಕ್ಕಳ ಬ್ಯಾಗ್​ ಹೊರೆ ಇಳಿಸುವ ಕ್ರಮಗಳನ್ನು ಕೈಗೊಂಡಿದೆ. ಸರ್ಕಾರ ಎಷ್ಟೇ ನಿಯಮಗಳನ್ನು ಜಾರಿಗೆ ತಂದರೂ ಸಹ ಅವು ಕಾಗದದ ಮೇಲೆ ಅಚ್ಚಾಗಿರುತ್ತದೆಯೇ ಹೊರತು ಕಾರ್ಯರೂಪಕ್ಕೆ ಬಂದಿರುವುದಿಲ್ಲ. ಇಂದಿಗೂ ಶಾಲಾ ಮಕ್ಕಳಿಗೆ ಮಣಭಾರದ ಬ್ಯಾಗ್​ ಹೊತ್ತು ಪ್ರತಿದಿನ ಶಾಲೆಗೆ ಹೋಗುವ ಕಷ್ಟವಂತೂ ತಪ್ಪಿಲ್ಲ.

ಈ ಕಷ್ಟವನ್ನು ಕಂಡು ಚಿಂತೆಗೀಡಾಗಿದ್ದ ಗುಜರಾತ್​ನ ಅಹಮದಾಬಾದ್​ನ ಸರ್ಕಾರಿ ಪ್ರಾಥಮಿಕ ಶಾಲೆಯ ಪ್ರಾಂಶುಪಾಲ ಆನಂದ್​ಕುಮಾರ್​ ಖಲಾಸ್ ಶಾಲಾ ಮಕ್ಕಳ ಬ್ಯಾಗ್​ ಹೊರೆ ಇಳಿಸುವ ಕ್ರಮಕ್ಕೆ ಮುಂದಾಗಿದ್ದಾರೆ. ಅಷ್ಟಕ್ಕೂ ಅವರು ಬ್ಯಾಗ್​ ಹೊರೆ ಇಳಿಸಲು ಮಾಡಿದ ಉಪಾಯವಾದರೂ ಏನು ಅಂತೀರಾ..? ಮುಂದೆ ಓದಿ.

ಪ್ರಾಥಮಿಕ ಶಾಲೆಯ ಮಕ್ಕಳು ಎಲ್ಲಾ ವಿಷಯಗಳ ಪಠ್ಯಪುಸ್ತಕಗಳನ್ನು ಪ್ರತಿದಿನ ಹೊತ್ತು ಶಾಲೆಗೆ ಬರುತ್ತಿದ್ದರು. ಮಕ್ಕಳ ಕಷ್ಟ ನೋಡಿ ಮರುಗಿದ ಶಾಲೆಯ ಪ್ರಾಂಶುಪಾಲ ಆನಂದ್​ಕುಮಾರ್ ಹೊಸ ಉಪಾಯವೊಂದನ್ನು ಮಾಡಿದರು. ಪ್ರಾಥಮಿಕ ತರಗತಿಯ ಸಂಪೂರ್ಣ ಪಠ್ಯಕ್ರಮವನ್ನು 10 ಪುಸ್ತಕಗಳಾಗಿ ಮಾಡಿದರು.

ಇದನ್ನೂ ಓದಿ: ಪ್ರೇಯಸಿಯೊಂದಿಗೆ ಸಲುಗೆಯಿಂದಿದ್ದ ಎಂದು ಸೋದರಳಿಯನ ಕೊಲೆ; 3 ವರ್ಷಗಳ ಬಳಿಕ ಆರೋಪಿ ಬಂಧನ

ಒಂದು ಪುಸ್ತಕದಲ್ಲಿ ಒಂದು ತಿಂಗಳ ಪೂರ್ತಿ ಪಠ್ಯ ಇರುವಂತೆ ಮಾಡಿದರು. ಇದರಿಂದ ಮಕ್ಕಳು ಎಲ್ಲಾ ಪುಸ್ತಕಗಳನ್ನು ಹೊತ್ತು ತರುವ ಬದಲು, ಅಗತ್ಯ ಪಠ್ಯ ಸಾಮಾಗ್ರಿಗಳ ಜೊತೆಗೆ ಒಂದೇ ಒಂದು ಪುಸ್ತಕ ತರಲು ಶುರು ಮಾಡಿದರು. 5-6 ಕೆ.ಜಿ ತೂಕದ ಬ್ಯಾಗ್​ ಕೇವಲ 700 ಗ್ರಾಂ ಗೆ ಇಳಿಯಿತು.

ಪ್ರಿನ್ಸಿಪಾಲರ ಈ ಹೊಸ ಉಪಾಯವನ್ನು ಗುಜರಾತ್​ ಕೌನ್ಸಿಲ್​ ಆಫ್ ಎಜುಕೇಷನ್​ ರಿಸರ್ಚ್​ ಅಂಡ್​ ಟ್ರೈನಿಂಗ್​​ ಸಂಸ್ಥೆ ಒಂದು ದೊಡ್ಡ ಸಾಧನೆಯಾಗಿ ಪ್ರಶಂಸಿಸಲ್ಪಟ್ಟಿತು.

'ಟೈಮ್ಸ್ ಆಫ್​ ಇಂಡಿಯಾ' ವರದಿ ಪ್ರಕಾರ, 'ನನ್ನ ಮಕ್ಕಳು ಮಣಭಾರದ ಬ್ಯಾಗ್​ ಹೊರುತ್ತಿದ್ದದ್ದು ನನ್ನನ್ನು ಚಿಂತಿಗೀಡು ಮಾಡಿತ್ತು. ನಾನು ಅವರನ್ನು ಬಸ್​ ಸ್ಟಾಪ್​ಗೆ ಬಿಟ್ಟು ಬರುವಾಗ ಅವರ ಬ್ಯಾಗ್​ ತೂಕ ಎಷ್ಟಿದೆ ಎಂದು ಗೊತ್ತಾಯಿತು. ಈ ಸಮಸ್ಯೆಗೆ ಪರಿಹಾರ ಹುಡುಕಲು ನಾನು ಸಹ ಶಿಕ್ಷಕರ ಜೊತೆ ಚರ್ಚೆ ನಡೆಸಿದೆ. ಆಗ ಈ ಉಪಾಯ ಹೊಳೆಯಿತು. ಇದರಿಂದ ಮಕ್ಕಳಿಗೆ ಬ್ಯಾಗ್​ ಹೊರೆ ಕಡಿಮೆಯಾಯಿತು. ಪ್ರತಿ ತಿಂಗಳು ನಾವು ಮಾಡುವ ಪಾಠವನ್ನು ಒಂದು ಪುಸ್ತಕಕ್ಕೆ ಮಾತ್ರ ಸೀಮಿತಗೊಳಿಸಿದೆವು' ಎಂದು ಆನಂದ್​ ಕುಮಾರ್ ಹೇಳಿದ್ದಾರೆ.
Loading...

ಇದನ್ನೂ ಓದಿ: 2021 ರ ಡಿಸೆಂಬರ್​ನಲ್ಲಿ ಮಾನವ ಸಹಿತ ಗಗನಯಾನ; ಇಸ್ರೋ ಅಧ್ಯಕ್ಷ ಕೆ.ಶಿವನ್

ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯ ಪ್ರಕಾರ, 'ಹೆಚ್ಚಿನ ಪುಸ್ತಕ ಮತ್ತು ಪಠ್ಯ ಸಾಮಾಗ್ರಿಗಳನ್ನು ತರುವಂತೆ ಶಿಕ್ಷಕರು ಮಕ್ಕಳಿಗೆ ಒತ್ತಡ ಹೇರಬಾರದು. ಸ್ಕೂಲ್​ ಬ್ಯಾಗ್​ಗಳು ಹೆಚ್ಚಿನ ತೂಕ ಇರಬಾರದು, ಭಾರ ಮಿತಿಯಲ್ಲಿರಬೇಕು' ಎಂದು ಹೇಳಿದೆ.

1 ಮತ್ತು 2 ನೇ ತರಗತಿ ಮಕ್ಕಳ ಬ್ಯಾಗ್​ನ ಗರಿಷ್ಠ ತೂಕ 1.5 ಕೆಜಿ ಇರಬೇಕು. 3, 4 ಮತ್ತು 5 ನೇ ತರಗತಿ ಮಕ್ಕಳ ಬ್ಯಾಗ್ ತೂಕ 2-3 ಕೆಜಿ ಮೀರಬಾರದು. 6 ಮತ್ತು 7 ನೇ ತರಗತಿ ಮಕ್ಕಳ ಬ್ಯಾಗ್​ 4 ಕೆಜಿ, 8 ಮತ್ತು 9 ನೇ ತರಗತಿ ಮಕ್ಕಳ ಬ್ಯಾಗ್ 4.5 ಕೆಜಿ, ಹಾಗೂ 10 ನೇ ತರಗತಿ ಮಕ್ಕಳ ಬ್ಯಾಗ್​ ತೂಕ 5 ಕೆಜಿ ಮೀರಿರಬಾರದು.

ಒಟ್ಟಾರೆ, ಗುಜರಾತ್​ನಲ್ಲಿ ತಂದಿರುವ ಈ ಹೊಸ ಯೋಜನೆ ಶಾಲಾ ಮಕ್ಕಳಿಗೆ ಅದರಲ್ಲೂ ಪ್ರಾಥಮಿಕ ಶಾಲೆಗೆ ಹೋಗುವ ಮಕ್ಕಳಿಗೆ ಹೊರೆಯನ್ನು ಕಡಿಮೆ ಮಾಡಿದೆ. ಇದರಿಂದ ಮಕ್ಕಳು ಕಡಿಮೆ ತೂಕದ ಬ್ಯಾಗ್​ನೊಂದಿಗೆ ಆರಾಮಾಗಿ ಶಾಲೆಗೆ ಹೋಗುತ್ತಿದ್ದಾರೆ.

First published:January 11, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ