45 Years of Emergency: ತುರ್ತು ಪರಿಸ್ಥಿತಿಗೆ 45 ವರ್ಷ: ಅಧಿಕಾರಕ್ಕಾಗಿ ಪ್ರಜಾಪ್ರಭುತ್ವವನ್ನೇ ಕೊಂದ ಕಾಂಗ್ರೆಸ್ - ಅಮಿತ್​​ ಶಾ

ಕಾಂಗ್ರೆಸ್​​​​​ ವರಿಷ್ಠರಲ್ಲಿ ತುರ್ತು ಪರಿಸ್ಥಿತಿ ಹೇರಿದ್ದ ಸಂದರ್ಭದಲ್ಲಿದ್ದ ಮನಸ್ಥಿತಿಯೇ ಇನ್ನೂ ಯಾಕೆ ಉಳಿದಿದೆ? ಗಾಂಧಿ ಕುಟುಂಬಕ್ಕೆ ಸೇರದ ಕಾಂಗ್ರೆಸ್​​ ನಾಯಕರು ಯಾಕೇ ಈಗಲೂ ದನಿಯೆತ್ತಲು ಹೆದರುತ್ತಾರೆ? ಕಾಂಗ್ರೆಸ್​ ಯಾಕೇ ಹತಾಶೆಗೆ ಒಳಗಾಗಿದೆ? ದೇಶದ ಜನತೆಯ ಸಂಪರ್ಕದಲ್ಲಿಲ್ಲದ ಕಾಂಗ್ರೆಸ್​​ ರಾಜಕಾರಣ ಅಂತ್ಯವಾಯ್ತೇ? ಎಂಬ ಪ್ರಶ್ನೆಗಳನ್ನು ಕೇಳಿಕೊಳ್ಳಬೇಕಿದೆ ಎಂದು ಅಮಿತ್​​ ಶಾ ಸೋನಿಯಾ ಗಾಂಧಿ ಮತ್ತು ರಾಹುಲ್​​ಗೆ ಸಲಹೆ ನೀಡಿದ್ಧಾರೆ.

ಅಮಿತ್ ಶಾ

ಅಮಿತ್ ಶಾ

  • Share this:
    ನವದೆಹಲಿ(ಜೂ.25): ಕಾಂಗ್ರೆಸ್​ ಪಕ್ಷವೂ ದೇಶದ ಮೇಲೆ ಕರಾಳ ತುರ್ತು ಪರಿಸ್ಥಿತಿ ಹೇರಿ ಇಂದಿಗೆ 45 ವರ್ಷ. 1975ರ ಜೂನ್ 25ರಂದು ಇಂದಿರಾ ಗಾಂಧಿ ಅವರು ಈ ದೇಶದಲ್ಲಿ ತುರ್ತು ಸ್ಥಿತಿ ಜಾರಿಗೆ ತಂದಿದ್ದರು. ಹೆಚ್ಚೂಕಡಿಮೆ ಎರಡು ವರ್ಷಗಳ ಕಾಲವಿದ್ದ ಈ ಅವಧಿಯಲ್ಲಿ ದೇಶದ ನ್ಯಾಯಾಂಗ ವ್ಯವಸ್ಥೆಯಿಂದ ಹಿಡಿದು ಎಲ್ಲವನ್ನೂ ಇಂದಿರಾ ಗಾಂಧಿ ತಮ್ಮ ಸುಪರ್ದಿಗೆ ಇಟ್ಟುಕೊಂಡಿದ್ದರು. ತಮ್ಮ ರಾಜಕೀಯ ವಿರೋಧಿಗಳೆಲ್ಲರನ್ನೂ ಜೈಲಿಗೆ ಕಳುಹಿಸಿ ಸರ್ವಾಧಿಕಾರಿಯಾಗಿ ರಾಜ್ಯಭಾರ ಮಾಡಿದ್ದರು. ಈ ಸಂದರ್ಭದಲ್ಲಿ ಲಕ್ಷಾಂತರ ಜನರು ಭೂಗತರಾಗಿ ತುರ್ತು ಪರಿಸ್ಥಿತಿ ವಿರುದ್ಧ ಹೋರಾಟ ಮಾಡಿದ್ದರು. 1977ರ ಮಾರ್ಚ್ 21ರವರೆಗೆ ತುರ್ತು ಪರಿಸ್ಥಿತಿಯನ್ನು ಈ ದೇಶ ಅನುಭವಿಸಿತ್ತು.

    ಆದರೀಗ, ಭಾರತದಲ್ಲಿ ತುರ್ತು ಪರಿಸ್ಥಿತಿ ಹೇರಿಕೆಯಾದ 45ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್​​​ ಶಾ ಸರಣಿ ಟ್ವೀಟ್‌ಗಳ ಮೂಲಕ ಕಾಂಗ್ರೆಸ್ ಪಕ್ಷದ ಮೇಲೆ ವಾಗ್ದಾಳಿ ನಡೆಸಿದ್ದಾರೆ. "1975ರ ಜೂನ್ 25-26ರ ಮಧ್ಯರಾತ್ರಿಯಂದು ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಯಿತು. ಅಂದು ಕಾಂಗ್ರೆಸ್​​ ದೇಶದ ತಳಸಮುದಾಯ ಮತ್ತು ಬಡವರ ಮೂಲಭೂತ ಹಕ್ಕುಗಳನ್ನು ದಮನಗೊಳಿಸಿತ್ತು. ಕಾಂಗ್ರೆಸ್​ ಪಕ್ಷವನ್ನು ವಿರೋಧಿಸಿದ್ದ ಟೀಕಾಕಾರರನ್ನು ಜೈಲಿಗಟ್ಟಲಾಗಿತ್ತು. ಇಲ್ಲಿನ ನ್ಯಾಯಾಂಗ, ಕಾರ್ಯಾಂಗ, ಪ್ರಜಾಪ್ರಭುತ್ವ, ಸಂವಿಧಾನಕ್ಕೆ ಬೆಲೆಯೇ ಇಲ್ಲದಂತಹಾ ಪರಿಸ್ಥಿತಿ ನಿರ್ಮಾಣವಾಗಿತ್ತು" ಎಂದು ಅಮಿತ್​ ಶಾ ಟ್ವೀಟ್​ ಮೂಲಕ ಕುಟುಕಿದ್ಧಾರೆ.



    ದೇಶದ ಲಕ್ಷಾಂತರ ಜನರ ಹೋರಾಟದ ಫಲದಿಂದ ಈ ತುರ್ತು ಪರಿಸ್ಥಿತಿ ಕೊನೆಯಾಯ್ತು. ಭಾರತದಲ್ಲಿ ಪ್ರಜಾಪ್ರಭುತ್ವ ಪುನಃಸ್ಥಾಪನೆಯಾಯ್ತು. ಆದರೆ, ಕಾಂಗ್ರೆಸ್​ನ ದರ್ಪ ಮಾತ್ರ ಕಡಿಮೆಯಾಗಲಿಲ್ಲ. ಒಂದು ಕುಟುಂಬದ ಹಿತಾಸಕ್ತಿಯೂ ರಾಷ್ಟ್ರ ಮತ್ತು ಪಕ್ಷದ ಹಿತಾಸಕ್ತಿ ಆಗಿತ್ತು. ಅಂದಿನಿಂದಲೂ ಇಂದಿನವರೆಗೂ ಕಾಂಗ್ರೆಸ್​ನಲ್ಲಿ ಈ ಕುಟುಂಬ ರಾಜಕಾರಣ ಹಾಗೆಯೇ ಇದೆ ಎಂದು ಅಮಿತ್​ ಶಾ ಮತ್ತೊಂದು ಟ್ವೀಟ್​ನಲ್ಲಿ ಕಿಡಿಕಾರಿದ್ಧಾರೆ.



    ಇನ್ನು, ಮತ್ತೊಂದು ಟ್ವೀಟ್​​ನಲ್ಲಿ ಅಮಿತ್​​ ಶಾ ಕಾಂಗ್ರೆಸ್​ ಕಾರ್ಯಕಾರಿ ಸಮಿತಿ ಸಭೆ ಬಗ್ಗೆ ಉಲ್ಲೇಖಿಸಿದ್ದಾರೆ. ಈ ಸಭೆಯಲ್ಲಿ ಕಾಂಗ್ರೆಸ್​ನ ಹಿರಿಯ ನಾಯಕರು ದೇಶದ ಗಂಭೀರ ಸಮಸ್ಯೆಗಳನ್ನು ಉಲ್ಲೀಖಿಸಿದ್ದರು. ಆದರೆ, ವರಿಷ್ಠರು ಮಾತ್ರ ಪಕ್ಷದ ನಾಯಕರ ವಿರುದ್ಧ ಕೂಗಾಡುತ್ತಿದ್ದರು. ಇದರಿಂದ ಪಕ್ಷದ ಮುಖ್ಯ ವಕ್ತಾರರೊಬ್ಬರನ್ನು ಕಿತ್ತೊಗಿದಿದ್ಧಾರೆ. ಕಾಂಗ್ರೆಸ್‌ ಪಕ್ಷದಲ್ಲಿ ಈಗ ಉಸಿರುಗಟ್ಟಿದ ವಾತಾವರಣ ನಿರ್ಮಾಣವಾಗಿದೆ ಎಂದು ಗಂಭೀರ ಆರೋಪ ಮಾಡಿದ್ಧಾರೆ.



    ಇದನ್ನೂ ಓದಿ: ಕೋವಿಡ್​​-19 ತಡೆಗೆ ಮತ್ತೆ ಲಾಕ್​​ಡೌನ್ - ಇಂದಿನ ಸಚಿವ ಸಂಪುಟ ಸಭೆಯಲ್ಲಿ ಅಂತಿಮ ನಿರ್ಧಾರ

    ದೇಶದ ಪ್ರಮುಖ ವಿರೋಧ ಪಕ್ಷವಾಗಿ ಕಾಂಗ್ರೆಸ್​ ತನ್ನನ್ನು ತಾನೇ ಪ್ರಶ್ನಿಸಿಕೊಳ್ಳುವ ಸಮಯವಿದು. ಕಾಂಗ್ರೆಸ್​​​​​ ವರಿಷ್ಠರಲ್ಲಿ ತುರ್ತು ಪರಿಸ್ಥಿತಿ ಹೇರಿದ್ದ ಸಂದರ್ಭದಲ್ಲಿದ್ದ ಮನಸ್ಥಿತಿಯೇ ಇನ್ನೂ ಯಾಕೆ ಉಳಿದಿದೆ? ಗಾಂಧಿ ಕುಟುಂಬಕ್ಕೆ ಸೇರದ ಕಾಂಗ್ರೆಸ್​​ ನಾಯಕರು ಯಾಕೇ ಈಗಲೂ ದನಿಯೆತ್ತಲು ಹೆದರುತ್ತಾರೆ? ಕಾಂಗ್ರೆಸ್​ ಯಾಕೇ ಹತಾಶೆಗೆ ಒಳಗಾಗಿದೆ? ದೇಶದ ಜನತೆಯ ಸಂಪರ್ಕದಲ್ಲಿಲ್ಲದ ಕಾಂಗ್ರೆಸ್​​ ರಾಜಕಾರಣ ಅಂತ್ಯವಾಯ್ತೇ? ಎಂಬ ಪ್ರಶ್ನೆಗಳನ್ನು ಕೇಳಿಕೊಳ್ಳಬೇಕಿದೆ ಎಂದು ಅಮಿತ್​​ ಶಾ ಸೋನಿಯಾ ಗಾಂಧಿ ಮತ್ತು ರಾಹುಲ್​​ಗೆ ಸಲಹೆ ನೀಡಿದ್ಧಾರೆ.


    First published: