news18-kannada Updated:December 23, 2020, 9:26 AM IST
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ.
ಕೋಲ್ಕತ್ತಾ (ಡಿಸೆಂಬರ್ 23); ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಆಡಳಿತರೂಢ ಟಿಎಂಸಿ ಪಕ್ಷದಿಂದ ಬಿಜೆಪಿಗೆ ಪಕ್ಷಾಂತರ ಮಾಡುವವರ ಸಂಖ್ಯೆ ದಿನದಿಂದ ದಿನಕ್ಕೆ ಅಧಿಕವಾಗುತ್ತಲೇ ಇದೆ. ಈ ಹಿಂದೆ ಟಿಎಂಸಿ ಹಿರಿಯ ನಾಯಕ ಸುವೆಂಧು ಅಧಿಕಾರಿ ಸೇರಿದಂತೆ ಐದು ಜನ ಟಿಎಂಸಿ ಶಾಸಕರು ಬಿಜೆಪಿಗೆ ಪಕ್ಷಾಂತರ ಮಾಡಿದ್ದರು. ಇದೀಗ ಮಂಗಳವಾರ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕರೆದಿದ್ದ ಮಹತ್ವದ ಕ್ಯಾಬಿನೆಟ್ ಸಭೆಗೆ ನಾಲ್ಕು ಸಚಿವರು ಗೈರಾಗಿದ್ದಾರೆ. ಹೀಗಾಗಿ ಚುನಾವಣೆ ಹತ್ತಿರವಾಗುವುದರ ಒಳಗಾಗಿ ಮತ್ತಷ್ಟು ಟಿಎಂಸಿ ಶಾಸಕರು ಪಕ್ಷವನ್ನು ತೊರೆಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಸಭೆಗೆ ಗೈರಾಗಿದ್ದ ನಾಲ್ವರು ಶಾಸಕರ ಪೈಕಿ ಮೂವರು ಸಭೆಗೆ ಗೈರಾಗಿದ್ದ ಬಗ್ಗೆ ಮಾನ್ಯವಾದ ಕಾರಣವನ್ನು ನೀಡಿದ್ದಾರೆ. ಆದರೆ, ರಾಜೀಬ್ ಬ್ಯಾನರ್ಜಿ ಎಂಬವರು ಮಾತ್ರ ಸಂಜೆಯವರೆಗೆ ಅಜ್ಞಾತವಾಗಿದ್ದರು ಎಂದು ಆಡಳಿತ ಪಕ್ಷದ ಪ್ರಧಾನ ಕಾರ್ಯದರ್ಶಿ ಪಾರ್ಥ ಚಟರ್ಜಿ ತಿಳಿಸಿದ್ದಾರೆ.
ಬಿಜೆಪಿ ಪಕ್ಷ ಈ ಬಾರಿ ಬಂಗಾಳದಲ್ಲಿ ಹೇಗಾದರೂ ಅಧಿಕಾರದ ಚುಕ್ಕಾಣಿ ಹಿಡಿಯಲೇಬೇಕು ಎಂದು ನಿರ್ಧರಿಸಿದೆ. ಪರಿಣಾಮ ಟಿಎಂಸಿ ನಾಯಕರು ತಮ್ಮ ಪಕ್ಷವನ್ನು ಮತ್ತಷ್ಟು ಗಟ್ಟಿಗೊಳಿಸಲು ಮುಂದಾಗುತ್ತಿದ್ದಂತೆ ಟಿಎಂಸಿ ಪಕ್ಷದ ಶಾಸಕರು ಮತ್ತು ಕಾರ್ಯಕರ್ತರನ್ನು ಬಿಜೆಪಿ ತನ್ನಡೆ ಸೆಳೆಯುವ ಕೆಲಸವನ್ನು ಮಾಡುತ್ತಲೇ ಇದೆ. ಈವರೆಗೆ ಸಚಿವರು ಸೇರಿದಂತೆ 7 ಜನ ಶಾಸಕರು ಮತ್ತು ಅಸಂಖ್ಯಾತ ಟಿಎಂಸಿ ಕಾರ್ಯಕರ್ತರನ್ನು ಬಿಜೆಪಿ ತನ್ನೆಡೆ ಸೆಳೆದಿದೆ.
ಇದನ್ನೂ ಓದಿ : ಹೊಸ ಕೊರೋನಾ ಭಯ; ಡಿ. 1ರಿಂದ ಬ್ರಿಟನ್ನಿಂದ ರಾಜ್ಯಕ್ಕೆ ಬಂದವರು 2 ಸಾವಿರಕ್ಕೂ ಹೆಚ್ಚು
ಸುವೆಂದು ಅಧಿಕಾರಿ ಟಿಎಂಸಿ ಪಕ್ಷದಲ್ಲಿ ಮಮತಾ ಬ್ಯಾನರ್ಜಿ ನಂತರದ ಪ್ರಬಲ ನಾಯಕ. ಇವರು 2011 ರಲ್ಲಿ ಮಮತಾ ಬ್ಯಾನರ್ಜಿ ಅಧಿಕಾರಕ್ಕೆ ಬರಲು ದಾರಿ ಮಾಡಿಕೊಟ್ಟ ನಂದಿಗ್ರಾಮ್ ಚಳವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆದರೆ, ಇದೀಗ ಇಂತಹ ಹಿರಿಯ ನಾಯಕರೇ ಪಕ್ಷವನ್ನು ತೊರೆದಿರುವುದು ಟಿಎಂಸಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಈ ನಡುವೆ ಮತ್ತಷ್ಟು ಸಚಿವರು ಸಂಪುಟ ಸಭೆಗೆ ಗೈರಾಗಿರುವುದು ಟಿಎಂಸಿ ಪಕ್ಷದೊಳಗೆ ಆತಂಕಕ್ಕೂ ಕಾರಣವಾಗಿದೆ.
ಪ್ರಸ್ತುತ ಟಿಎಂಸಿ ಪಕ್ಷದೊಳಗಿನ ಈ ಬಿಕ್ಕಟ್ಟು ಸಿಎಂ ಮಮತಾ ಬ್ಯಾನರ್ಜಿ ಶೀಘ್ರದಲ್ಲಿ ಪರಿಹರಿಸಬೇಕು. ಬಂಡಾಯ ನಾಯಕರುಗಳನ್ನು ಸಮಾಧಾನಪಡಿಸಬೇಕು. ಇಲ್ಲದಿದ್ದರೆ ಬಿಜೆಪಿ ಮೂರೇ ತಿಂಗಳಲ್ಲಿ ಪಕ್ಷಾಂತರದ ಮೂಲಕ ಟಿಎಂಸಿ ಪಕ್ಷಕ್ಕೆ ಭಾರೀ ಪೆಟ್ಟು ನೀಡಲಿದೆ ಎಂದು ರಾಜಕೀಯ ತಜ್ಞರು ವಿಶ್ಲೇಷಿಸುತ್ತಿದ್ದಾರೆ.
Published by:
MAshok Kumar
First published:
December 23, 2020, 9:23 AM IST