ರಾಯ್‌ಪುರ, ಛತ್ತೀಸ್‌ಗಢ : ಖಲಿಸ್ತಾನಿ ನಾಯಕ (Khalistan Leader) ಹಾಗೂ ವಾರಿಸ್ ಪಂಜಾಬ್ ದೇ (Waris Punjab De) ಮುಖ್ಯಸ್ಥ ಅಮೃತಪಾಲ್ ಸಿಂಗ್ನನ್ನು ( Amritpal Singh) ಬೆಂಬಲಿಸಿ ನಗರದಲ್ಲಿ ರ್‍ಯಾಲಿ (Rally) ನಡೆಸಿದ್ದಕ್ಕಾಗಿ ರಾಯ್ಪುರದಲ್ಲಿ (Raipur) ಗುರುವಾರ ನಾಲ್ವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಎಲ್ಲಾ ಆರೋಪಿಗಳು ಛತ್ತೀಸ್‌ಗಢದ ರಾಜಧಾನಿ ರಾಯ್‌ಪುರ ನಿವಾಸಿಗಳೆಂದು ತಿಳಿದುಬಂದಿದೆ. ದಿಲೇರ್ ಸಿಂಗ್ ರಾಂಧ್ವಾ (46), ಮಣಿಂದರ್ಜಿತ್ ಸಿಂಗ್ ಅಲಿಯಾಸ್ ಮಿಂಟು ಸಂಧು ಅಲಿಯಾಸ್ ಹರಿಂದರ್ ಸಿಂಗ್ ಖಾಲ್ಸಾ (44) ಮತ್ತು ಹರ್‌ಪ್ರೀತ್ ಸಿಂಗ್ ರಾಂಧವಾ ಅಲಿಯಾಸ್ ಚಿಂಟು (42) ಎಂಬುವವರನ್ನು ಬಂಧಿಸಲಾಗಿದೆ.
ಸಿಸಿಟಿವಿ ದೃಶ್ಯಾವಳಿ ಆಧಾರದ ಮೇಲೆ ಬಂಧನ
" ರ್‍ಯಾಲಿ ಸ್ಥಳದಲ್ಲಿ ಸ್ಥಾಪಿಸಲಾದ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳ ಆಧಾರದ ಮೇಲೆ ರಾಯ್ಪುರದ ಸಿವಿಲ್ ಲೈನ್ಸ್ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಐಪಿಸಿ ಸೆಕ್ಸನ್ 147, 153(ಎ), 504 ಮತ್ತು 505(1)(ಬಿ) ಅಡಿಯಲ್ಲಿ ಅಪರಾಧ ಪ್ರಕರಣ ದಾಖಲಿಸಲಾಗಿದೆ " ಎಂದು ರಾಯ್‌ಪುರ ಪೊಲೀಸರು ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ಬಂಧನಕ್ಕೂ ಮೊದಲು ಅವರಿಗೆ ನೋಟಿಸ್ ನೀಡಲಾಗಿತ್ತು, ಆದರೆ ಅವರ ಉತ್ತರಗಳು ತೃಪ್ತಿಕರವೆನಿಸಲಿಲ್ಲ, ಹಾಗಾಗಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ರಾಯ್‌ಪುರದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ. ಛತ್ತೀಸ್‌ಗಢ ವಿಧಾನಸಭೆಯಲ್ಲಿ ಗುರುವಾರ ಬಿಜೆಪಿ ಶಾಸಕ ಅಜಯ್ ಚಂದ್ರಕರ್ ಈ ಬಗ್ಗೆ ಈ ವಿಷಯವನ್ನು ಪ್ರಸ್ತಾಪಿಸಿದ್ದರು.
ಇದನ್ನೂ ಓದಿ: Punjab: ಪಾಕಿಸ್ತಾನಿ ಮಾಫಿಯಾ ಜೊತೆ ಅಮೃತಪಾಲ್ ಸಿಂಗ್ ನಂಟು, ತನಿಖಾ ಏಜೆನ್ಸಿಯ ವರದಿ ರೆಡಿ!
ಪೊಲೀಸರಿಂದ ತಪ್ಪಿಸಿಕೊಂಡಿದ್ದ ಅಮೃತ್ಪಾಲ್ ಸಿಂಗ್
ಪೊಲೀಸರ ಕಣ್ತಪ್ಪಿಸಿ ತಿರುಗುತ್ತಿರುವ ಖಲಿಸ್ತಾನಿ ನಾಯಕ ಅಮೃತ್ಪಾಲ್ ಸಿಂಗ್ಗೆ ಆಶ್ರಯ ನೀಡಿದ ಆರೋಪದ ಮೇಲೆ ಮಹಿಳೆಯೊಬ್ಬರನ್ನ ಹರಿಯಾಣದ ಪೊಲೀಸರು ಬಂಧಿಸಿದ್ದಾರೆ. ಮಾರ್ಚ್ 18ರಂದು ಅಮೃತ್ಪಾಲ್ ಮತ್ತು ಸಹಚರರು ಪೊಲೀಸರಿಂದ ತಪ್ಪಿಸಿಕೊಂಡು ಪಲಾಯನ ಮಾಡಿದ್ದರು. ಪೊಲೀಸರು ಹಾಕಿದ್ದ ನಾಕಬಂದಿಯನ್ನು ಗುದ್ದಿಕೊಂಡು ಅಮೃತ್ಪಾಲ್ ಸಿಂಗ್ ಪರಾರಿಯಾಗಿದ್ದ. ಆತನ ಸಹಚರರನ್ನು ಮಾತ್ರ ಪೊಲೀಸರು ಬಂಧಿಸಿದ್ದರು.
ಆಶ್ರಯ ನೀಡಿದ್ದ ಮಹಿಳೆ ಬಂಧನ
ಪೊಲೀಸರಿಂದ ತಪ್ಪಿಸಿಕೊಂಡು ಹೋಗಿದ್ದ ಅಮೃತ್ಪಾಲ್ ಸಿಂಗ್ ಮತ್ತು ಆತನ ಸಹಚರ ಪಾಪಲ್ಪ್ರೀತ್ ಸಿಂಗ್ಗೆ ಹರಿಯಾಣದ ಬಲ್ಜಿತ್ ಕೌರ್ ಎಂಬ ಮಹಿಳೆ ತನ್ನ ಮನೆಯಲ್ಲಿ ಆಶ್ರಯ ನೀಡಿದ್ದಳು. ಇದೇ ಕಾರಣಕ್ಕೆ ಆಕೆಯನ್ನು ಹರಿಯಾಣ ಪೊಲೀಸರು ಬಂಧಿಸಿ, ಪಂಜಾಬ್ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ ಎಂದು ತಿಳಿದುಬಂದಿದೆ.
ಸಹೋದನಿಂದಲೇ ಮಾಹಿತಿ
ಅಮೃತ್ಪಾಲ್ ಸಿಂಗ್ ಬಲ್ಜಿತ್ ಕೌರ್ ಮನೆಯಲ್ಲಿ ಭಾನುವಾರ ತಂಗಿದ್ದು, ಸೋಮವಾರ ಬೆಳಗ್ಗೆ ಅಲ್ಲಿಂದ ಪರಾರಿಯಾಗಿದ್ದ. ಬಲ್ಜಿತ್ ಕೌರ್ ಈ ವಿಚಾರವನ್ನು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಪೊಲೀಸರು ಅಲ್ಲಿಗೆ ತೆರಳಿ ವಿಚಾರಣೆ ನಡೆಸಿ ಬಲ್ಜಿತ್ ಕೌರ್ ಬಂಧಿಸಿದ್ದಾರೆ. ಪಾಪಲ್ ಪ್ರೀತ್ ಸಿಂಗ್ ಈಕೆಗೆ ಪರಿಚಯಸ್ಥನಾಗಿದ್ದು, ಹಲವು ಬಾರಿ ತನ್ನ ಮನೆಯಲ್ಲಿ ತಂಗಿದ್ದ ಎಂದು ಮಹಿಳೆ ಹೇಳಿಕೊಂಡಿದ್ದಾಳೆ.
ಯುಕೆ ಪೌರತ್ವಕ್ಕೆ ಅರ್ಜಿ
ಭಾರತದಲ್ಲಿ ಕಾನೂನು ಕ್ರಮದಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಅಮೃತ್ಪಾಲ್ ಸಿಂಗ್ ಭಾರತದಿಂದ ಪಲಾಯನ ಮಾಡಿ ಯುನೈಟೆಡ್ ಕಿಂಗ್ಡಮ್ನಲ್ಲಿ ನೆಲೆಸುವ ಹುನ್ನಾರ ನಡೆಸುತ್ತಿದ್ದಾನೆ ಎಂದು ಗುಪ್ತಚರ ಇಲಾಖೆಯ ಮೂಲಗಳಿಂದ ಮಾಹಿತಿ ತಿಳಿದುಬಂದಿದೆ. ಈಗಾಗಲೆ ಬ್ರಿಟಿಷ್ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಿದ್ದಾನೆ ಎಂದು ಹೇಳಲಾಗುತ್ತಿದೆ. ಆತನ ಪತ್ನಿ ಕಿರಣ್ ಕೌರ್ ಬ್ರಿಟನ್ ನಾಗರಿಕಳಾಗಿರುವುದರಿಂದ ಆತ ಅಲ್ಲಿ ಪೌರತ್ವ ಪಡೆಯುವುದಕ್ಕೆ ಬಯಸಿದ್ದಾನೆ ಎನ್ನಲಾಗುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ