ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರನ್ನು ಗುರಿಯಾಗಿಸಿಕೊಂಡು ಸಾವಿರಾರು ಪೋಸ್ಟರ್‌ಗಳನ್ನು (Poster Against Narendra Modi) ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ 36 ಎಫ್‌ಐಆರ್ (FIR) ದಾಖಲಾಗಿದ್ದು, 6 ಜನರನ್ನು (Delhi Police) ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.
ಮಂಗಳವಾರ ದೆಹಲಿ ಪೊಲೀಸರು ರಾಜ್ಯದ ವಿವಿಧ ಭಾಗಗಳಲ್ಲಿ ಕಾರ್ಯಾಚರಣೆ ನಡೆಸಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹಾಕಲಾಗಿದ್ದ ಸುಮಾರು 2,000ಕ್ಕೂ ಹೆಚ್ಚು ಪೋಸ್ಟರ್‌ಗಳನ್ನು ಕಿತ್ತೆಗೆದಿದ್ದಾರೆ. ಈ ಪೋಸ್ಟರ್‌ಗಳಲ್ಲಿ ಹೆಚ್ಚಿನವು ‘ಮೋದಿ ಹಠಾವೋ, ದೇಶ್ ಬಚಾವೋ’ (ಮೋದಿಯನ್ನು ತೊಲಗಿಸಿ, ದೇಶವನ್ನು ರಕ್ಷಿಸಿ) ಎಂಬ ಘೋಷಣೆಯನ್ನು ಹೊಂದಿದ್ದವು ಎಂದು ತಿಳಿದು ಬಂದಿದೆ.
ಇದನ್ನೂ ಓದಿ: Oyo Ritesh Agarwal: ಮದುವೆ ಸಂಭ್ರಮದಲ್ಲಿದ್ದ ಓಯೋ ಸಂಸ್ಥಾಪಕನಿಗೆ ಆಘಾತ, ಮೂರೇ ದಿನದಲ್ಲಿ ತಂದೆ ಕಳೆದುಕೊಂಡ ರಿತೇಶ್ ಅಗರ್ವಾಲ್
ದೆಹಲಿ ಪೊಲೀಸರಿಂದ ಒಂದೇ ದಿನ ಒಟ್ಟು 138 ಎಫ್‌ಐಆರ್ ದಾಖಲು!
ಬಂಧಿತ ಆರೋಪಿಗಳ ಪೈಕಿ ಇಬ್ಬರು ಪ್ರಿಂಟಿಂಗ್ ಪ್ರೆಸ್ ಹೊಂದಿದ್ದು, ಸಾರ್ವಜನಿಕ ಆಸ್ತಿಯನ್ನು ವಿರೂಪಗೊಳಿಸಿದ್ದಕ್ಕಾಗಿ ಮತ್ತು ಪೋಸ್ಟರ್‌ಗಳಿಗೆ ಪ್ರಿಂಟಿಂಗ್ ಪ್ರೆಸ್ ಹೆಸರನ್ನು ಹೊಂದಿರಬೇಕು ಎಂಬ ಕಾನೂನಿನ ಅಡಿಯಲ್ಲಿ ಆರೋಪಿಗಳನ್ನು ಬಂಧನ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ದೆಹಲಿ ಪೊಲೀಸರು ಮಂಗಳವಾರ ಒಟ್ಟು 138 ಎಫ್‌ಐಆರ್‌ಗಳನ್ನು ದಾಖಲಿಸಿದ್ದು, ಅದರಲ್ಲಿ 36 ಎಫ್ಐಆರ್‌ಗಳು ಪ್ರಧಾನಿ ನರೇಂದ್ರ ಮೋದಿ ವಿರೋಧಿ ಪೋಸ್ಟರ್‌ಗಳನ್ನು ಅಳವಡಿಸಿದ್ದಕ್ಕಾಗಿ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ದೆಹಲಿಯ ಆಮ್ ಆದ್ಮಿ ಪಕ್ಷದ (ಎಎಪಿ) ಕಚೇರಿಗೆ ತಲುಪಿಸಲಾಗುತ್ತಿದ್ದ ಸುಮಾರು 2,000 ಪೋಸ್ಟರ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಸೆಂಟ್ರಲ್ ದೆಹಲಿಯ ಐಪಿ ಎಸ್ಟೇಟ್ ಪ್ರದೇಶದಲ್ಲಿ ವ್ಯಾನ್ ಅನ್ನು ಅಡ್ಡಗಟ್ಟಿದ ಪೊಲೀಸರು ಪೋಸ್ಟರ್‌ಗಳನ್ನು ಸೀಜ್ ಮಾಡಿದ್ದಾರೆ. ಪೋಸ್ಟರ್ ತುಂಬಿಸಿ ವಾಹನ ಚಲಾಯಿಸುತ್ತಿದ್ದ ಚಾಲಕನನ್ನು ವಿಚಾರಿಸಿದಾಗ ಆತ ‘ಅದನ್ನು ಎಎಪಿ ಕೇಂದ್ರ ಕಚೇರಿಗೆ ತಲುಪಿಸುವಂತೆ ನನಗೆ ಹೇಳಿದ್ದರು’ ಎಂದು ಪೊಲೀಸರಿಗೆ ತಿಳಿಸಿದ್ದಾನೆ. ಇನ್ನು ಈ ಎಫ್‌ಐಆರ್ ವಿರುದ್ಧ ಆಮ್ ಆದ್ಮಿ ಪಕ್ಷ ಕಿಡಿಕಾರಿದ್ದು, ನರೇಂದ್ರ ಮೋದಿ ಸರ್ಕಾರದ ಸರ್ವಾಧಿಕಾರದ ತುತ್ತ ತುದಿಗೆ ಏರಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಈ ಮಧ್ಯೆ ಬಂಧನಕ್ಕೆ ಒಳಗಾಗಿರುವ ಪ್ರಿಂಟಿಂಗ್ ಪ್ರೆಸ್ ಮಾಲೀಕರು, ನಮಗೆ ‘ಮೋದಿ ಹಟಾವೋ, ದೇಶ್ ಬಚಾವೋ’ ಎಂಬ 50,000 ಪೋಸ್ಟರ್‌ಗಳನ್ನು ಮುದ್ರಿಸಲು ಆರ್ಡರ್ ಬಂದಿದೆ ಎಂದು ದೆಹಲಿ ಪೊಲೀಸರಿಗೆ ತಿಳಿಸಿದ್ದಾರೆ. ಆದರೆ ಪೋಸ್ಟರ್‌ಗಳಲ್ಲಿ ಪ್ರಿಂಟಿಂಗ್ ಪ್ರೆಸ್‌ನ ಹೆಸರನ್ನು ನಮೂದಿಸದ ಕಾರಣ ನೀಡಿ ಪ್ರಿಂಟಿಂಗ್ ಪ್ರೆಸ್ ಮಾಲೀಕರನ್ನು ಬಂಧನ ಮಾಡಲಾಗಿದೆ.
ಇನ್ನೊಂದೆಡೆ ಪೋಸ್ಟರ್‌ಗಳನ್ನು ಹಂಚಿದ ಕಾರಣಕ್ಕೆ ಬಂಧನ ಮಾಡಿರುವ ಪ್ರಕರಣ ಬಿಜೆಪಿ ಮತ್ತು ಆಮ್ ಆದ್ಮಿ ಮಧ್ಯೆ ತಿಕ್ಕಾಟಕ್ಕೆ ಕಾರಣವಾಗಿದ್ದು, ಪೋಸ್ಟರ್‌ಗಳನ್ನು ಹಾಕುವಾಗ ಎಎಪಿ ನೀತಿ ನಿಯಮಗಳನ್ನು ಅನುಸರಿಸುತ್ತಿಲ್ಲ ಎಂದು ಭಾರತೀಯ ಜನತಾ ಪಾರ್ಟಿ ಆರೋಪಿಸಿದ್ರೆ ಇತ್ತ ಆಮ್ ಆದ್ಮಿ ಪಕ್ಷ, ಬಿಜೆಪಿಯು ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಕಿಡಿಕಾರಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ