ಡೆಹರಾಡೂನ್: ಕಾಲು ಮುರಿದುಕೊಂಡು, ಪಾದದ ಪ್ಯಾಡ್ಗಳ ಸಂಪೂರ್ಣ ಹಾನಿಗೊಳಗಾಗಿದ್ದ ಸ್ಥತಿಯಲ್ಲಿ ರಕ್ಷಿಸಲ್ಪಟ್ಟಿದ್ದ 35 ವರ್ಷದ ಮೋತಿ ಎಂಬ ಖಾಸಗಿ ಆನೆ (Elephant) ಸುಮಾರು ಒಂದು ತಿಂಗಳ ಕಾಲ ಜೀವನ್ಮರಣ ಹೋರಾಟ ನಡೆಸಿ, ಕೊನೆಗೆ ಶನಿವಾರ ಚಿಕಿತ್ಸೆ (Treatment) ಫಲಕಾರಿಯಾಗದೇ ಸಾವನ್ನಪ್ಪಿದೆ. ಮೋತಿ (Moti) ಒಂದು ಸಾಕಾನೆಯಾಗಿದ್ದು, ತನ್ನ ಬಹುತೇಕ ಜೀವನವನ್ನು ಸವಾರಿ ಮಾಡುವುದರಲ್ಲೇ ಕಳೆದಿತ್ತು. ಇದೇ ಕಾರಣದಿಂದ ಪಾದದ ಪ್ಯಾಡ್ ಸವೆದು ಗಾಯಗಳಾಗಿದ್ದವು. ಜೊತೆಗೆ ಬಲ ಮುಂಗಾಲು ಮುರಿದುಕೊಂಡಿದ್ದ ಈ ಆನೆಗೆ ಸರಿಯಾದ ಚಿಕಿತ್ಸೆ ಸಿಗದೇ ಕೆಲವು ಸಮಯವನ್ನು ಬಿದ್ದ ಜಾಗದಲ್ಲೇ ಕಳೆದಿತ್ತು.
ಈ ವೇಳೆ ಅದು ಹೃದಯ ಮತ್ತು ಮೂತ್ರಪಿಂಡ ಸಮಸ್ಯೆಗೂ ಒಳಗಾಗಿತ್ತು. ವೈಲ್ಡ್ ಲೈಫ್ ಎಸ್‌ಒಎಸ್ (WildlifeSOS) ಎಂಬ ಎನ್‌ಜಿಒ ಈ ಆನೆಯ ಜಾಗವನ್ನು ಪತ್ತೆ ಹಚ್ಚಿ, ಭಾರತೀಯ ಸೇನೆಯ (Indian Army) ಇಂಜಿನಿಯರ್ ವಿಭಾಗದ ಬೆಂಗಾಲ್ ಸಪ್ಪರ್ಸ್ ತಂಡದ ನೆರವು ಪಡೆದು ಕಳೆದ ಒಂದು ತಿಂಗಳಿಂದ ಚಿಕಿತ್ಸೆ ನೀಡುತ್ತಿತ್ತು. ಆದರೆ ಬಹು ಬಾಹ್ಯ ಮತ್ತು ಆಂತರಿಕ ಕಾಯಿಲೆಗಳ ವಿರುದ್ಧ ಸುಮಾರು ಒಂದು ತಿಂಗಳ ಕಾಲ ಹೋರಾಡಿದ್ದ ಮೋತಿ ಶನಿವಾರ ಕೊನೆಯುಸಿರೆಳೆದಿದೆ.
ಮುಂಗಾಲು ಮುರಿತ
ಮೋತಿ ತನ್ನ ಮುಂಗಾಲು ಮುರಿತಕ್ಕೊಳಗಾದರೂ ಸರಿಯಾದ ಚಿಕಿತ್ಸೆ ದೊರೆಯದ ಕಾರಣ ದುರ್ಬಲಗೊಂಡಿತ್ತು. ಜೊತೆಗೆ ಎಡ ಮುಂಗಾಲಿನ ಪಾದದ ಪ್ಯಾಡ್ ಹರಿದು ಹಾನಿಯಾಗಿತ್ತು. ಅಲ್ಲದೇ ಅನೇಕ ಆರೋಗ್ಯ ಸಮಸ್ಯೆಗಳು ಅದನ್ನು ಕಾಡಿದ್ದವು. ಆ ಆನೆಯನ್ನು ಅಕ್ಟೋಬರ್ 2020 ರಲ್ಲಿ ಪಾಟ್ನಾದಿಂದ ಇಮಾಮ್ ಅಖ್ತರ್ ಎಂಬುವವರು ತಂದಿದ್ದರು. ಆದರೆ 2021ರಲ್ಲಿ ಅಖ್ತರ್ ಕೊಲೆಯಾಗಿತ್ತು. ಆದಾದ ನಂತರ ಅನಾಥವಾಗಿದ್ದ ಮೋತಿ ಬೀದಿ ಬೀದಿಗಳಲ್ಲಿ ತಿರುಗುತ್ತಿತ್ತು. ಕೊನೆಗೆ ಅರಣ್ಯ ಇಲಾಖೆ ಅದನ್ನು ತಮ್ಮ ಸುಪರ್ದಿಗೆ ಪಡೆದುಕೊಂಡಿತ್ತು.
ಬಹು ಅಂಗಾಂಗ ವೈಫಲ್ಯದಿಂದ ಸಾವು
ಮೋತಿ 'ಲ್ಯಾಟರಲ್ ರಿಕಂಬೆನ್ಸಿ' ಮತ್ತು ನಂತರ ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿತ್ತು ಎಂದು ಅದಕ್ಕೆ ಚಿಕಿತ್ಸೆ ನೀಡುತ್ತಿದ್ದ ಎನ್‌ಜಿಒ ವನ್ಯಜೀವಿ ಎಸ್‌ಒಎಸ್ ತಂಡ ತಿಳಿಸಿದೆ . " ಮೋತಿಯ ಎಡಗಾಲಿನಲ್ಲಿ ಜನ್ಮಜಾತ ಸಮಸ್ಯೆಯಿತ್ತು ಮತ್ತು ಪರಿಣಾಮ ಹೆಚ್ಚುತೂಕ ಬಲಗಾಲಿನ ಮೇಲೆ ಬೀಳುತ್ತಿದ್ದರಿಂದ ಮುರಿತಕ್ಕೆ ಒಳಗಾಗಿತ್ತು. ಅಂತಹ ಸ್ಥಿತಿಯಲ್ಲಿ ಅದನ್ನು ನಮಗೆ ಒಪ್ಪಿಸಲಾಗಿತ್ತು. ನಾವು ಅದನ್ನು ಉಳಿಸಿಕೊಳ್ಳುವುದಕ್ಕೆ ನಮ್ಮಿಂದ ಸಾಧ್ಯವಾದದ್ದನ್ನೆಲ್ಲಾ ಮಾಡಿದೆವು, ಆದರೆ ಸಾಧ್ಯವಾಗಲಿಲ್ಲ " ಎಂದು ಮೋತಿಯನ್ನು ನೋಡಿಕೊಳ್ಳುವ ಕಾರ್ಯದಲ್ಲಿ ತೊಡಗಿದ್ದ ವನ್ಯಜೀವಿ ಸಂರಕ್ಷಣಾಧಿಕಾರಿ ಇಮ್ರಾನ್ ಖಾನ್ ತಿಳಿಸಿದ್ದಾರೆ.
ನಾಲ್ಕು ವಾರಗಳ ಕಾಲ ಚಿಕಿತ್ಸೆ ವ್ಯರ್ಥ
ಮೋತಿ ಹೋರಾಟದ ಮನೋಭಾವ ತೋರಿತ್ತು. ನಾಲ್ಕುವಾರಗಳ ಕಾಲ ನಾವು ಕೂಡ ಮೋತಿಯನ್ನು ಉಳಿಸಿಕೊಳ್ಳುವುದಕ್ಕೆ ಸಾಕಷ್ಟು ಪ್ರಯತ್ನ ಪಟ್ಟೆವು. ಆದರೆ ಉಳಿಸಿಕೊಳ್ಳಲು ಆಗಲಿಲ್ಲ. ಭಾರತದ ರಾಷ್ಟ್ರೀಯ ಸಂಪತ್ತು ಎನಿಸಿರುವ ಆನೆಗಳನ್ನು ಉದಾಸೀನದಿಂದ ನೋಡಬಾರದು. ಅವುಗಳ ಆರೋಗ್ಯ ಸಮಸ್ಯೆ ನಿರ್ಲಕ್ಷಿಸಿದರೆ ಮೋತಿಗೆ ಆದಂಥ ಗತಿ ಒದಗುತ್ತದೆ ಎಂದು ಎಂದು ವೈಲ್ಡ್‌ಲೈಫ್ ಎಸ್‌ಒಎಸ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಕಾರ್ತಿಕ್ ಸತ್ಯನಾರಾಯಣ್ ಬೇಸರ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಸಂತಾಪ
ದಯನೀಯ ಸ್ಥಿತಿಯಲ್ಲೂ ಕೆಚ್ಚೆದೆಯ ಹೋರಾಟವನ್ನು ಮೋತಿ ಆತ್ಮಸ್ಥೈರ್ಯವನ್ನು ಪ್ರಾಣಿ ಪ್ರಿಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಆನೆಗೆ ಗೌರವ ಸಲ್ಲಿಸಿದ್ದಾರೆ. ಮಾಜಿ ಸೇನಾ ಮುಖ್ಯಸ್ಥ ಮತ್ತು ಪ್ರಸ್ತುತ ಕೇಂದ್ರ ಸಚಿವ ಜನರಲ್ ವಿ.ಕೆ.ಸಿಂಗ್, ಮೋತಿಯನ್ನು ಉಳಿಸಲು ನಾಲ್ಕು ವಾರಗಳ ಕಾಲ ಶತಪ್ರಯತ್ನ ಪಟ್ಟ ವೈಲ್ಡ್‌ಲೈಫ್ ಎಸ್‌ಒಎಸ್ ತಂಡ ಹಾಗೂ ಸೇನಾ ಇಂಜಿನಿಯರಿಂಗ್ ವಿಭಾಗದ ಬೆಂಗಾಲ್ ಸಪ್ಪರ್ಸ್‌ನ 40 ಸದಸ್ಯರ ತಂಡದ ಪ್ರಯತ್ನವನ್ನು ಶ್ಲಾಘಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ