news18-kannada Updated:February 20, 2021, 9:33 AM IST
Representative photo
ಇಂಗ್ಲೆಂಡಿನ ಡರ್ಬಿಶೈರ್ ನಿವಾಸಿ 33 ವರ್ಷದ ಲೌರೆನ್ ನಿಕೋಲ್ ಜೋನ್ಸ್ ಎಂಬಾಕೆ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದಾಳೆ. ತನನ್ನು ತಾನೇ ಗುರುತಿಸಲಾಗದ ಈ ವಿಚಿತ್ರ ಕಾಯಿಲೆಗೆ ತುತ್ತಾಗಿರುವ ಈಕೆಗೆ ಫೋಟೋ ಆಲ್ಬಂಗಳಲ್ಲಿರುವ ತನ್ನ ಕುಟುಂಬಸ್ಥರ ಮುಖಗಳ ನೆನಪೇ ಆಗುತ್ತಿಲ್ಲವಂತೆ.
ಹೌದು, ಪ್ರೊಸೊಪಾಗ್ನೋಸಿಯಾ(ಮುಖದ ಕುರುಡುತನ) ಎಂಬ ವಿಚಿತ್ರ ಕಾಯಿಲೆಯಿಂದ ಲೌರೆನ್ ಬಳಲುತ್ತಿದ್ದಾಳೆ. ಈ ಸಮಸ್ಯೆಗೆ ತುತ್ತಾದವರು ತಮ್ಮ ಪರಿಚಯಸ್ಥರ ಮುಖದ ಗುರುತನ್ನೇ ಮರೆತುಬಿಡುತ್ತಾರಂತೆ. ಒಮ್ಮೊಮ್ಮೆ ತಮ್ಮ ಮುಖದ ಗುರುತನ್ನೇ ಅವರು ಮರೆಯುತ್ತಾರಂತೆ. ಇದೀಗ ಲೌರೆನ್ ಪರಿಸ್ಥಿತಿ ಕೂಡ ತುಂಬಾ ಸೂಕ್ಷ್ಮವಾಗಿದ್ದು, ಒಂದೊಂದು ಸಲ ಮದುವೆ ಆಲ್ಬಂನಲ್ಲಿರುವ ತನ್ನನ್ನು ಗುರುತಿಸಲು ಆಕೆ ಹೆಣಗಾಡುತ್ತಾಳಂತೆ.
ಮದುವೆ ದಿನ ಅವಳು ವಧುವಾಗಿ ಧರಿಸಿದ್ದ ಬಿಳಿ ಗೌನಿನ ಕಾರಣದಿಂದ ತನ್ನನ್ನು ತಾನು ಗುರುತಿಸಿಕೊಂಡಿದ್ದಾಳೆ. ಅದು ಇಲ್ಲದಿದ್ದರೆ ಲೌರೆನ್ ತನ್ನನ್ನು ಗುರುತಿಸಿಕೊಳ್ಳುತ್ತಿರಲಿಲ್ಲವೆಂದು ಆಕೆಯ ಕುಟುಂಬಸ್ಥರು ತಿಳಿಸಿದ್ದಾರೆ. ಕನ್ನಡಿಯೊಂದಿಗೆ ಮಾತನಾಡುತ್ತಾ ಆಕೆ ಯಾವಾಗಲೂ ತನ್ನನ್ನು ಫೋಟೋಗಳಲ್ಲಿ ಗುರುತಿಸಲಾಗದ ಕಾರಣಕ್ಕೆ ನೊಂದುಕೊಂಡು ಬೇಸರಪಟ್ಟುಕೊಳ್ಳುತ್ತಿರುತ್ತಾಳೆ. ತನಗೆ ಬಂದಿರುವ ಈ ವಿಚಿತ್ರ ಕಾಯಿಲೆ ಬಗ್ಗೆ ಆಕೆ ಕಣ್ಣೀರಿಡುತ್ತಾಳೆ. ಒಂದು ಫೋಟೋ ನೋಡಿದಾಗ ಆಕೆಗೆ ಹಿಂದೆ ನಡೆದ ಕೆಲ ಘಟನೆಗಳ ಬಗ್ಗೆ ತಿಳಿಯುತ್ತದೆ. ಆದರೆ ಅವಳು ಅವಳಲ್ಲ ಅನ್ನುವುದು ಗೊತ್ತಾದ ಕೂಡಲೇ ಆಶ್ಚರ್ಯ ವ್ಯಕ್ತಪಡಿಸುತ್ತಾಳಂತೆ.
ಈ ವಿಚಾರವಾಗಿ ಮಾತನಾಡಿರುವ ಲೌರೆನ್, ನನ್ನ ಮದುವೆ ಆಲ್ಬಂನಲ್ಲೇ ನನ್ನನ್ನು ನಾನು ಗುರುತಿಸಲು ಸಾಧ್ಯವಾಗಲಿಲ್ಲ. ನಾನು ಮದುವೆಗೆ ಧರಿಸಿದ್ದ ಗೌನ್ ನೆನಪಿದ್ದರಿಂದ ನನಗೆ ಅದು ನಾನೇ ಎಂಬುದು ತಿಳಿಯಿತು ಎಂದು ಹೇಳಿದ್ದಾಳೆ. ಲೌರೆನ್ ಗೆ ಉಂಟಾಗಿರುವ ಈ ಸಮಸ್ಯೆ ಎಷ್ಟರ ಮಟ್ಟಿಗೆ ತೀವ್ರವಾಗಿದೆಯೆಂದರೆ ಫೋಟೋ ಆಲ್ಬಂಗಳಲ್ಲಿರುವ ಅವಳ ನೆಚ್ಚಿನ ಸ್ನೇಹಿತರು, ಸೆಲೆಬ್ರಿಟಿಗಳ ಮುಖವನ್ನೂ ಆಕೆ ಗುರುತಿಸುವುದಿಲ್ಲವಂತೆ.
ಆಕೆಯ ಈ ಸ್ಥಿತಿಗೆ ಯಾವುದೇ ಚಿಕಿತ್ಸೆ ಇಲ್ಲದಿರುವುದರಿಂದ ಜನರನ್ನು ಅವರ ಅಭ್ಯಾಸ, ಧ್ವನಿ ಮತ್ತು ನಡವಳಿಕೆಗಳಿಂದ ಗುರುತಿಸುವುದನ್ನು ಆಕೆ ಕಲಿತಿದ್ದಾಳೆ. ತನ್ನ ಹುಟ್ಟುಹಬ್ಬದ ಊಟವನ್ನು ನೆನಪಿಸಿಕೊಳ್ಳುತ್ತಾ, 12ನೇ ವಯಸ್ಸಿನಿಂದ ತನ್ನ ನೆಚ್ಚಿನ ಸ್ನೇಹಿತೆಯಾಗಿದ್ದ ಗೆಳತಿಯೊಬ್ಬಳು ಆಲಂಗಿಸಲು ಬಂದಾಗ ಆಕೆಯನ್ನು ಗುರುತಿಸಲು ಲೌರೆನ್ ಗೆ ಸಾಧ್ಯವಾಗಿರಲಿಲ್ಲ.
ಲೌರೆನ್ ಜೀವನದಲ್ಲಿ ಕೆಲ ವಿಚಿತ್ರ ಸನ್ನಿವೇಶಗಳು ಕೂಡ ನಡೆದಿವೆ. ಆಕೆ ತನ್ನ ಮಾಜಿ ಪ್ರಿಯಕರನೆಂದು ಭಾವಿಸಿ ಸುಮಾರು 40 ನಿಮಿಷಗಳ ಕಾಲ ಅಪರಿಚಿತ ವ್ಯಕ್ತಿಯೊಂದಿಗೆ ಮಾತನಾಡಿದ್ದಳು. ಕೆಲ ಬಾರಿ ತನ್ನದೇ ಪ್ರತಿಬಿಂಬವನ್ನು ಆಕೆ ಬೇರೊಬ್ಬ ವ್ಯಕ್ತಿಯೆಂದು ತಪ್ಪಾಗಿ ಗ್ರಹಿಸಿದ್ದಳು. ಒಂದೇ ರೀತಿ ಕಾಣುವ ವ್ಯಕ್ತಿಗಳ ಪಾತ್ರವಿರುವ ದೃಶ್ಯಗಳನ್ನು ವೀಕ್ಷಿಸಿದ ಬಳಿಕ ಲೌರೆನ್ ಸಿನಿಮಾ ನೋಡುವುದು ಎಷ್ಟು ಕಷ್ಟ ಎಂದು ಅದರಿಂದ ದೂರವಾಗಿದ್ದಾಳಂತೆ. ಹೀಗಾಗಿ ಆಕೆ ಸದ್ಯ ಸಿನಿಮಾ ನೋಡುವುದನ್ನು ಬಿಟ್ಟು ಪುಸ್ತಕ ಓದಲು ಆದ್ಯತೆ ನೀಡುತ್ತಿದ್ದಾಳಂತೆ.
ನರವಿಜ್ಞಾನಿ ಆಲಿವರ್ ಸಾಕ್ಸ್ ಅವರ ಪುಸ್ತಕ ಓದಿದ ನಂತರ ತನಗೆ ಬಂದಿರುವ ಸ್ಥಿತಿಯನ್ನು ಕಂಡುಕೊಂಡಾಗ ಆಕೆಗೆ ಕೇವಲ 19 ವರ್ಷ. ಇದು ಅಪರೂಪದಲ್ಲೇ ಅಪರೂಪದ ಕಾಯಿಲೆಯಾಗಿದ್ದು, ಸುಮಾರು 50 ಜನರಲ್ಲಿ ಒಬ್ಬರು ಈ ವಿಚಿತ್ರ ಕಾಯಿಲೆಯ ವಿವಿಧ ಹಂತಗಳಲ್ಲಿ ಬಳಲುತ್ತಿದ್ದಾರೆಂದು ನಂಬಲಾಗಿದೆ. ವೈದ್ಯರು ಕೂಡ ಈ ಸ್ಥಿತಿಯ ಬಗ್ಗೆ ವಿರಳ ಮಾಹಿತಿ ಹೊಂದಿದ್ದಾರೆ. ಆದರೆ ಇದು ಜನ್ಮದತ್ತವಾಗಿ ಅಥವಾ ಮೆದುಳಿನ ಒಂದು ಭಾಗದಲ್ಲಿನ ಹಾನಿಯಿಂದ ಉಂಟಾಗುತ್ತದೆ ಎಂದು ವೈದ್ಯಲೋಕ ನಂಬಿದೆ. ಈಗ ಲೌರೆನ್ ತನ್ನ ಪತಿ ಮತ್ತು ಹತ್ತಿರದ ಕೆಲ ಕುಟುಂಬ ಸದಸ್ಯರನ್ನು ಮಾತ್ರ ಗುರುತಿಸುತ್ತಾಳೆ.
Published by:
Harshith AS
First published:
February 20, 2021, 9:30 AM IST