ಕೇರಳದ ಮಹಾಮಳೆಗೆ ಒಂದೇ ದಿನದಲ್ಲಿ 30 ಮಂದಿ ಸಾವು; ಶತಮಾನದ ಮೇಘಸ್ಫೋಟಕ್ಕೆ 97 ಜನರು ಬಲಿ

news18
Updated:August 17, 2018, 9:43 AM IST
ಕೇರಳದ ಮಹಾಮಳೆಗೆ ಒಂದೇ ದಿನದಲ್ಲಿ 30 ಮಂದಿ ಸಾವು; ಶತಮಾನದ ಮೇಘಸ್ಫೋಟಕ್ಕೆ 97 ಜನರು ಬಲಿ
ಕೊಚ್ಚಿಯಲ್ಲಿ ನಿರಾಶ್ರಿತರನ್ನು ಬೋಟ್​ ಮೂಲಕ ರಕ್ಷಿಸುತ್ತಿರುವುದು. ಪಿಟಿಐ ಚಿತ್ರ
news18
Updated: August 17, 2018, 9:43 AM IST
ನ್ಯೂಸ್ 18 ಕನ್ನಡ 

ತಿರುವನಂತರಪುರಂ/ಕೊಚ್ಚಿ/ದೆಹಲಿ (ಆ.17) : ಕೇರಳದಲ್ಲಿ ಸುರಿಯುತ್ತಿರುವ ಮಹಾಮಳೆ ಗುರುವಾರ ಒಂದೇ ದಿನದಲ್ಲಿ 30 ಮಂದಿಯ ಜೀವವನ್ನು ಬಲಿ ಪಡೆದಿದೆ. ಮಳೆಯಿಂದಾಗಿ ರಸ್ತೆ, ರೈಲು ಹಳಿ ಸೇರಿ ಸಾವಿರಾರು ಮನೆಗಳು ನಾಶವಾಗಿವೆ.

1924ರ ನಂತರ ಕೇರಳದಲ್ಲಿ ಸುರಿದ ದಾಖಲೆ ಮಳೆ ಹತ್ತು ದಿನದಲ್ಲಿ 97 ಮಂದಿಯನ್ನು ಬಲಿ ಪಡೆದಿದ್ದು, ಕಳೆದ ಎರಡು ದಿನದಲ್ಲಿ 55 ಮಂದಿ ಜೀವ ಕಳೆದುಕೊಂಡಿದ್ದಾರೆ.

ಮಳೆಯಿಂದಾಗಿ ತ್ರಿಚೂರು, ಅಳುವಾ ಮತ್ತು ಮುವತ್ತುಪುಝಾ ನಗರಗಳಲ್ಲಿ ಮನೆಗಳೆಲ್ಲ ಮುಳುಗಿದ್ದು, ಜನರು ಮನೆಗಳ ತಾರಸಿ ಮತ್ತು ಬೆಟ್ಟಗಳ ಮೇಲೆ ನಿಂತು ಆಶ್ರಯ ಪಡೆದಿದ್ದಾರೆ. ವಾಯುಪಡೆಯ ಯೋಧರು ಪ್ರವಾಹದಲ್ಲಿ ಸಿಲುಕಿರುವವರನ್ನು ಹೆಲಿಕಾಪ್ಟರ್ ಮೂಲಕ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರ ಮಾಡುತ್ತಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಸೂಚನೆ ಮೇರೆಗೆ ರಕ್ಷಣಾ ಸಚಿವಾಲಯ ಸೇನೆಯ ಮೂರು ವಿಭಾಗಗನ್ನು ರಾಜ್ಯಕ್ಕೆ ಕಳುಹಿಸಿದ್ದು, ಪರಿಹಾರ ಮತ್ತು ರಕ್ಷಣಾ ಕಾರ್ಯಕ್ಕೆ ಮುಂದಾಗಿದೆ. ರಾಜ್ಯಾದ್ಯಂತ ಮನೆ ಕಳೆದುಕೊಂಡ ಒಂದೂವರೆ ಲಕ್ಷ ಜನರನ್ನು ಆಶ್ರಯ ಕೇಂದ್ರಗಳಿಗೆ ಸಾಗಿಸಲಾಗುತ್ತಿದೆ.


Loading...


ಪ್ರಧಾನಿ ನರೇಂದ್ರ ಮೋದಿ ಅವರು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಗುರುವಾರ ಕರೆ ಮಾಡಿ, ಪರಿಸ್ಥಿತಿ ನಿಯಂತ್ರಣಕ್ಕೆ ಕೇಂದ್ರದಿಂದ ಸಕಲ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಅಂತಿಮ ದರ್ಶನ ಪಡೆದು, ಶುಕ್ರವಾರ ಮಧ್ಯಾಹ್ನ ಕೇರಳಕ್ಕೆ ಪ್ರಧಾನಿ ತೆರಳಲಿದ್ದಾರೆ.

ರಾಜ್ಯದಲ್ಲಿ ಸೃಷ್ಟಿಯಾಗಿರುವ ಪ್ರವಾಹದ ಬಗ್ಗೆ ಚರ್ಚಿಸಲಾಗಿದೆ. ರಕ್ಷಣಾ ಸಚಿವಾಲಯದಿಂದ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗೆ ಕ್ರಮ ತೆಗೆದುಕೊಳ್ಳಲಾಗಿದೆ. ಕೇರಳ ಜನತೆ ಸುರಕ್ಷಿತವಾಗಿರಲಿ ಎಂದು ಪ್ರಾರ್ಥಿಸಿಕೊಳ್ಳುತ್ತೇನೆ ಎಂದು ಪ್ರಧಾನಿ ಮೋದಿ ಟ್ವಿಟ್ ಮಾಡಿದ್ದಾರೆ.

ಹೆಚ್ಚುವರಿಯಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ 35 ತಂಡಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಿಯಾಗಿವೆ.

ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಮಿತಿ ದೆಹಲಿಯಲ್ಲಿ ಕ್ಯಾಬಿನೆಟ್ ಕಾರ್ಯದರ್ಶಿ ಪಿ.ಕೆ.ಸಿನ್ಹಾ ನೇತೃತ್ವದಲ್ಲಿ ರಕ್ಷಣಾ, ಗೃಹ ಇಲಾಖೆ ಸೇರಿದಂತೆ ಉನ್ನತಾಧಿಕಾರಿಗಳ ಸಭೆ ನಡೆಸಿ, ಕೇರಳದ ಪ್ರವಾಹ ಪರಿಸ್ಥಿತಿ ನಿಯಂತ್ರಣಕ್ಕೆ ಶೀಘ್ರ ಕ್ರಮಕ್ಕೆ ತೀರ್ಮಾನ ತೆಗೆದುಕೊಳ್ಳಲಾಯಿತು.

ಸುರಕ್ಷತೆ ದೃಷ್ಟಿಯಿಂದ ಮುಲ್ಲಪೆರಿಯಾರ್ ಜಲಾಶಯದಿಂದ 139 ಅಡಿಯಿಂದ 3 ಅಡಿ ನೀರನ್ನು ಕಡಿಮೆ ಮಾಡುವಂತೆ ಸುಪ್ರೀಂಕೋರ್ಟ್​ ವಿಪತ್ತು ನಿರ್ವಹಣಾ ಸಮಿತಿಗೆ ಆದೇಶಿಸಿತ್ತು. ಅದರಂತೆ ಪಿಣರಾಯಿ ವಿಜಯನ್ ಅವರು ತಮಿಳುನಾಡು ಮುಖ್ಯಮಂತ್ರಿ ಕೆ. ಪಳನಿಸ್ವಾಮಿ ಅವರಿಗೆ ಪತ್ರ ಬರೆದು, 122 ವರ್ಷಗಳ ಹಳೆಯ ಜಲಾಶಯದಿಂದ ನೀರು ಬಿಡುವಂತೆ ಮನವಿ ಮಾಡಿದರು. ಕೇರಳ ರಾಜ್ಯದ ಇಡುಕ್ಕಿ ಜಿಲ್ಲೆಯಲ್ಲಿರುವ ಈ ಜಲಾಶಯದ ಮಾಲೀಕತ್ವ ಮತ್ತು ನಿರ್ವಹಣೆ ತಮಿಳುನಾಡಿಗೆ ಸೇರಿದೆ.

ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವಿಮಾನ ಹಾರಾಟ ಸೇವೆಯನ್ನು ಆಗಸ್ಟ್ 26 ಮಧ್ಯಾಹ್ನ 2 ಗಂಟೆಯವರೆಗೆ ಸ್ಥಗಿತಗೊಳಿಸಲಾಗಿದೆ. ಕೊಚ್ಚಿ ಮೆಟ್ರೋ ಸೇವೆಯನ್ನು ಕೆಲ ಗಂಟೆಗಳವರೆಗೆ ಸ್ಥಗಿತಗೊಳಿಸಲಾಗಿದೆ. ಪ್ರವಾಹದ ಹಿನ್ನೆಲೆಯಲ್ಲಿ 25 ರೈಲುಗಳ ಸೇವೆಯನ್ನು ರದ್ದುಗೊಳಿಸಲಾಗಿದೆ.

ಹಲವು ನಗರ ಮತ್ತು ಹಳ್ಳಿಗಳಲ್ಲಿ ಮನೆಗಳು ಜಲಾವೃತಗೊಂಡಿದ್ದು, ಮಕ್ಕಳು ಸೇರಿದಂತೆ ನೂರಾರು ಜನರು ಮುಳುಗಿದ ಮನೆಯ ತಾರಸಿ ಮೇಲೆ ನಿಂತು, ರಕ್ಷಿಸುವಂತೆ ಮನವಿ ಮಾಡುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಮನಕಲಕುವಂತೆ ಇದೆ.

ಅಳುವಾ ನಗರದ ಖಾಸಗಿ ಆಸ್ಪತ್ರೆ ನೀರಿನಲ್ಲಿ ಮುಳುಗಿದ್ದು, ನವಜಾತ ಶಿಶುಗಳು ಮತ್ತು ತೀವ್ರ ನಿಗಾ ಘಟಕದಲ್ಲಿದ್ದ ಸುಮಾರು 200 ರೋಗಿಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.
First published:August 17, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...