ನವ ದೆಹಲಿ (ನವೆಂಬರ್ 20); ಜಮ್ಮು-ಕಾಶ್ಮೀರದ ನಾಗ್ರೋತಾ ಎಂಬ ಭಾಗದಲ್ಲಿ ಗುರುವಾರ ಭದ್ರತಾ ಪಡೆಯೊಂದಿಗಿನ ಗುಂಡಿನ ಚಕಮಕಿಯಲ್ಲಿ ನಾಲ್ವರು ಉಗ್ರರು ಹತ್ಯೆಯಾಗಿದ್ದರು. ಉಗ್ರರು ಇದ್ದ ಬಸ್ ಅನ್ನು ಟೋಲ್ ಪ್ಲಾಜಾ ಬಳಿ ತಪಾಸಣೆ ಮಾಡುವಾಗ ಗುಂಡಿನ ಚಕಮಕಿ ನಡೆದಿತ್ತು, ಈ ವೇಳೆ ಉಗ್ರರನ್ನು ಕೊಲ್ಲಲಾಗಿದೆ. ಆದರೆ, ವಿಚಾರಣೆ ವೇಳೆ ಉಗ್ರರು ಬಸ್ ಮೂಲಕ ಜಮ್ಮುವಿನಿಂದ ಕಾಶ್ಮೀರಕ್ಕೆ ಹೋಗುತ್ತಿದ್ದರೆನ್ನಲಾಗಿದೆ. ಹೀಗಾಗಿ 26/11 ತಾಜ್ ದಾಳಿಯ ವಾರ್ಷಿಕೋತ್ಸವದ ಸಲುವಾಗಿ ಉಗ್ರರು ದೇಶದಲ್ಲಿ ಮತ್ತೊಂದು ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದಾರೆಯೇ ಎಂಬುದನ್ನು ತಿಳಿದುಕೊಳ್ಳುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಇಂದು ಉನ್ನತ ಗುಪ್ತಚರ ಸ್ಥಾಪನೆಯ ವಿದೇಶಾಂಗ ಕಾರ್ಯದರ್ಶಿ ಅವರೊಂದಿಗೆ ಪರಿಶೀಲನಾ ಸಭೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಭಾರತದಲ್ಲಿ ನಡೆದ ಅತಿಮುಖ್ಯ ಹಾಗೂ ಅಷ್ಟೇ ಧಾರುಣ ವಿಧ್ವಂಸಕ ಕೃತ್ಯಗಳಲ್ಲಿ 26/11ರ ಮುಂಬೈ ತಾಜ್ ದಾಳಿ ಅತ್ಯಂತ ಪ್ರಮುಖವಾದದ್ದು. ಈ ದಾಳಿಯಲ್ಲಿ ಹೇಮಂತ್ ಕರ್ಕರೆ, ವಿಜಯ್ ಸಾಲಸ್ಕರ್ ಅವರಂತಹ ಪ್ರಾಮಾಣಿಕ ಅಧಿಕಾರಿಗಳು ಸೇರಿದಂತೆ ಅನೇಕರು ಮೃತಪಟ್ಟಿದ್ದರು. ಈ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನದ ನಡುವಿನ ಭಾಂದವ್ಯ ಸಂಪೂರ್ಣವಾಗಿ ಹದಗೆಟ್ಟಿತ್ತು. ಅಲ್ಲದೆ, ಒಂದು ಹಂತದಲ್ಲಿ ಗಡಿ ಭಾಗದಲ್ಲಿ ಯುದ್ಧದ ವಾತಾವರಣ ನಿರ್ಮಾಣವಾಗಿತ್ತು. ಈ ಘಟನೆಯ ನಂತರ ಭಾರತ ಪಾಕಿಸ್ತಾನದ ಜೊತೆಗಿನ ಕ್ರಿಕೆಟ್ ಭಾಂದವ್ಯವನ್ನೂ ಕೊನೆಗೊಳಿಸಿತ್ತು.
ಇದನ್ನೂ ಓದಿ : ಜಮ್ಮುವಿನ ನಗ್ರೋತಾದಲ್ಲಿ ಎನ್ಕೌಂಟರ್; ಬಸ್ನೊಳಗಿದ್ದ 4 ಉಗ್ರರ ಹತ್ಯೆ
ಆದರೂ, ಗಡಿ ಭಾಗದಲ್ಲಿ ಉಗ್ರರನ್ನು ಪೋಷಿಸುವ ತನ್ನ ಗುಣವನ್ನು ಮಾತ್ರ ಪಾಕಿಸ್ತಾನ ಈಗಲೂ ಬಿಟ್ಟಿಲ್ಲ. ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಭಾಗದಲ್ಲಿ ಅನೇಕ ಉಗ್ರರಿಗೆ ತರಬೇತಿ ನೀಡಿ ಭಾರತದೊಳಗೆ ಕಳುಹಿಸುತ್ತಲೇ ಇದೆ. ಕಳೆದ ವರ್ಷ ನಡೆದ ಪುಲ್ವಾಮಾ ದಾಳಿಯ ಹಿಂದೆಯೂ ಪಾಕಿಸ್ತಾನದ ಐಎಸ್ಐ ಕೈಚಳಕ ಇರುವುದು ಗುಟ್ಟಾಗೇನು ಇಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ