news18-kannada Updated:November 26, 2020, 11:10 AM IST
ಕಸಬ್
ಮುಂಬೈ (ನವೆಂಬರ್ 11): ವಾಣಿಜ್ಯ ನಗರಿ ಮುಂಬೈನಲ್ಲಿ 2008ರ ನವೆಂಬರ್ 28ರಂದು ಉಗ್ರ ದಾಳಿ ನಡೆದಿತ್ತು. ಈ ಕರಾಳ ಘಟನೆ ನಡೆದು 12 ವರ್ಷ ಕಳೆದಿವೆ. ಈ ದಾಳಿಯಲ್ಲಿ ಭಾಗಿಯಾಗಿದ್ದ 9 ಉಗ್ರರರನ್ನು ಹತ್ಯೆ ಮಾಡಿದ್ದರೆ, ಪ್ರಮುಖ ಉಗ್ರ ಅಜ್ಮಲ್ ಅಮಿರ್ ಕಸಬ್ನನ್ನು ಬಂಧಿಸಿ ಗಲ್ಲಿಗೇರಿಸಲಾಗಿತ್ತು. ಈ ಘಟನೆ ಬಗ್ಗೆ ಮುಂಬೈ ಮಾಜಿ ಪೊಲೀಸ್ ಕಮಿಷನರ್ ರಾಕೇಶ್ ಮರಿಯಾ ಅಚ್ಚರಿಯ ವಿಚಾರ ಬಿಚ್ಚಿಟ್ಟಿದ್ದರು. ಆ ಬಗ್ಗೆ ಇಲ್ಲಿದೆ ಮಾಹಿತಿ.
‘ಲೆಟ್ ಮಿ ಸೇ ಇಟ್ ನವ್’ ಪುಸ್ತಕದಲ್ಲಿ ರಾಕೇಶ್ ಮರಿಯಾ ಹಲವು ವಿಚಾರಗಳನ್ನು ಬರೆದುಕೊಂಡಿದ್ದಾರೆ. “2008ರ ಉಗ್ರರ ದಾಳಿಯನ್ನು ಹಿಂದೂಗಳು ನಡೆಸಿದ ಕೃತ್ಯ ಎಂದು ಬಣ್ಣಿಸುವ ಕೆಲಸ ನಡೆದಿತ್ತು. ಸಾಮಾನ್ಯವಾಗಿ ಹಿಂದುಗಳು ಕೈಗೆ ಕೆಂಪು ದಾರ ಕಟ್ಟಿಕೊಳ್ಳುತ್ತಾರೆ. ಇದೇ ಕಾರಣಕ್ಕೆ ಕಸಬ್ ಕೈಯಲ್ಲಿ ಕೆಂಪು ದಾರವಿತ್ತು. ಇದನ್ನು ನೋಡಿ ಆತ ಹಿಂದು ಎಂದು ಜನರು ಅಂದುಕೊಳ್ಳುತ್ತಾರೆ ಎನ್ನುವುದು ಉಗ್ರ ಸಂಘಟನೆಯ ಲೆಕ್ಕಾಚಾರವಾಗಿತ್ತು. ಅದೃಷ್ಟವಶಾತ್ ಆ ರೀತಿ ಆಗಿಲ್ಲ,” ಎಂದು ಮರಿಯಾ ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ.
“ದಾಳಿಯಲ್ಲಿ ಹತ್ಯೆಯಾದ ಉಗ್ರರಿಗೆ ಹೈದರಾಬಾದ್ನ ಅರುಣೋದಯ ಕಾಲೆಜ್ನ ನಕಲಿ ಐಡಿ ಕಾರ್ಡ್ ನೀಡಲಾಗಿತ್ತು. ಕಸಬ್ನಿಂದ ವಶಪಡಿಸಿಕೊಂಡ ಐಡಿ ಕಾರ್ಡ್ನಲ್ಲಿ ಆತ ಬೆಂಗಳೂರು ನಿವಾಸಿ ಎಂದಿತ್ತು. ಅಲ್ಲದೆ, ಆತನ ಹೆಸರು ಸಮಿರ್ ದಿನೇಶ್ ಚೌಧರಿ ಎಂದು ನಕಲಿ ದಾಖಲೆ ಸೃಷ್ಟಿಸಲಾಗಿತ್ತು. ಇವೆಲ್ಲವೂ ನಕಲಿ ಗುರುತಿನ ಚೀಟಿಗಳಾಗಿದ್ದವು,” ಎಂದು ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ.
ಆರಂಭದಲ್ಲಿ ಕಸಬ್ ಕಳ್ಳತನ ಮಾಡಲು ಲಷ್ಕರ್-ಎ-ತೊಯ್ಬಾ ಸಂಘಟನೆಗೆ ಸೇರ್ಪಡೆ ಆಗಿದ್ದನಂತೆ. “ಕಸಬ್ ಹಾಗೂ ಆತನ ಗೆಳೆಯ ಮುಜಾಫರ್ ಲಾಲ್ ಖಾನ್ ರಾಬರಿ ಮಾಡುವ ಉದ್ದೇಶ ಇಟ್ಟುಕೊಂಡಿದ್ದರು. ಈ ಮೂಲಕ ಶ್ರೀಮಂತನಾಗುವ ಕನಸನ್ನು ಆತ ಕಂಡಿದ್ದ. ಇದಕ್ಕೆ ಇವರು ಎಲ್ಇಟಿ ವೇದಿಕೆ ಆಗಲಿದೆ ಎಂದುಕೊಂಡಿದ್ದ,” ಎಂದಿದ್ದಾರೆ ಮರಿಯಾ.
ಭಾರತದ ಮುಸ್ಲಿಂಗಳಿಗೆ ನಮಾಜ್ ಮಾಡಲು ಅವಕಾಶ ನೀಡುವುದಿಲ್ಲ, ಭಾರತದ ಮಸೀದಿಗಳಿಗೆ ಬೀಗ ಹಾಕಿಡಲಾಗುತ್ತದೆ ಎನ್ನುವುದನ್ನು ಕಸಬ್ ಬಲವಾಗಿ ನಂಬಿದ್ದ ಎಂದಿರುವ ಮರಿಯಾ, “ಕಸಬ್ ಹಲವಷ್ಟು ತಪ್ಪು ಕಲ್ಪನೆಗಳನ್ನು ಇಟ್ಟುಕೊಂಡಿದ್ದ. ಆದರೆ, ಆತ ಜೈಲಿನಲ್ಲಿದ್ದಾಗ ದಿನಕ್ಕೆ 5 ಬಾರಿ ಆಜಾನ್ ಕೇಳುತ್ತಿತ್ತು. ಇದಾದ ನಂತರ ಆತನಿಗೆ ತನ್ನ ಕಲ್ಪನೆಗಳು ತಪ್ಪು ಎನ್ನುವುದು ಗೊತ್ತಾಗಿತ್ತು. ಅಲ್ಲದೆ, ಆತನನ್ನು ಹತ್ತಿರದ ಮಸೀದಿಗೆ ಕರೆದುಕೊಂಡು ಹೋಗಿ ನಮಾಜ್ ಮಾಡುತ್ತಿರುವವರನ್ನು ತೋರಿಸಲಾಗಿತ್ತು. ಈ ವೇಳೆ ಕಸಬ್ ದಿಗ್ಭ್ರಮೆ ಗೊಂಡಿದ್ದ,” ಎಂದು ಮರಿಯಾ ತಮ್ಮ ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ.
Published by:
Rajesh Duggumane
First published:
November 26, 2020, 10:15 AM IST