ಕೇರಳ ಗೋಲ್ಡ್ ಸ್ಮಗ್ಲಿಂಗ್ ಕೇಸ್: ಒಂದು ವರ್ಷದಲ್ಲಿ 250 ಕಿಲೋ ಚಿನ್ನ ಸಾಗಣೆ – ಎನ್ಐಎ ಅಂದಾಜು

ಈ ಪ್ರಕರಣದಲ್ಲಿ ಎರಡು ತನಿಖೆಗಳು ನಡೆಯುತ್ತಿವೆ. ಕಸ್ಟಮ್ಸ್ ಇಲಾಖೆ ಮತ್ತು ಎನ್ಐಎ ಪ್ರತ್ಯೇಕವಾಗಿ ತನಿಖೆ ನಡೆಸುತ್ತಿವೆ. ಒಂದು ವರ್ಷದಲ್ಲಿ ಕಳ್ಳಸಾಗಣೆ ಆಗಿರುವ ಚಿನ್ನ 180 ಕಿಲೋ ಇರಬಹುದು ಎಂದು ಕಸ್ಟಮ್ಸ್​ನವರು ಅಂದಾಜು ಮಾಡಿದ್ದಾರೆ. ಅದು 250 ಕಿಲೋ ಇರಬಹುದು ಎಂಬುದು ಎನ್ಐಎ ಶಂಕೆ.

ಕೇರಳ ಗೋಲ್ಡ್ ಸ್ಮಗ್ಲಿಂಗ್ ಕೇಸ್

ಕೇರಳ ಗೋಲ್ಡ್ ಸ್ಮಗ್ಲಿಂಗ್ ಕೇಸ್

 • Share this:
  ತಿರುವನಂತಪುರಂ(ಜುಲೈ 21): ಕೇರಳ ಗೋಲ್ಡ್ ಸ್ಮಗ್ಲಿಂಗ್ ಕೇಸ್​ನ ತನಿಖೆ ಮಾಡುತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆ ಎನ್​ಐಎ ಇದೀಗ ಈ ಕಳ್ಳಸಾಗಾಣಿಕೆ ಜಾಲದಿಂದ ಒಂದು ವರ್ಷದಲ್ಲಿ ಕೆಜಿಗಟ್ಟಲೆ ಚಿನ್ನದ ಸ್ಮಗ್ಲಿಂಗ್ ಆಗಿರಬಹುದು ಎಂದು ಅಂದಾಜಿಸಿದೆ. 2019ರ ಜುಲೈನಿಂದೀಚೆ ಯುಎಇ ರಾಜತಾಂತ್ರಿಕ ಕಚೇರಿಯ ಕೆಲ ಸಿಬ್ಬಂದಿಯನ್ನು ಬಳಸಿ 250 ಕಿಲೋ ಚಿನ್ನವನ್ನು ಕಳ್ಳಸಾಗಾಣಿಕೆ ಮಾಡಿರಬಹುದು. ಭಾರತದ ಆರ್ಥಿಕತೆಯನ್ನ ಹಳಿತಪ್ಪಿಸುವ ದುರುದ್ದೇಶದಿಂದ ಚಿನ್ನದ ಕಳ್ಳಸಾಗಣೆ ಆಗಿರಬಹುದು ಎಂದು ಎನ್​ಐಎ ಶಂಕಿಸಿದೆ.

  “ಭಯೋತ್ಪಾದನೆ ಎಂಬುದು ಬಾಂಬ್ ಸ್ಫೋಟ ನಡೆಸುವುದು ಅಥವಾ ಶಸ್ತ್ರಾಸ್ತ್ರ, ಮದ್ದುಗುಂಡುಗಳನ್ನ ಉಗ್ರರಿಗೆ ಪೂರೈಸುವುದಷ್ಟೇ ಅಲ್ಲ. ಕಾನೂನುವಿರೋಧಿ ಚಟುವಟಿಕೆ ನಿಯಂತ್ರಣ ಕಾಯ್ದೆ (UAPA) ಪ್ರಕಾರ ಭಯೋತ್ಪಾದನೆ ಮತ್ತು ಭಯೋತ್ಪಾದಕತೆಗೆ ಹಣಕಾಸು ನೆರವು ವಿಚಾರಕ್ಕೆ ವಿಸ್ತೃತ ವ್ಯಾಖ್ಯಾನ ಇದೆ. ಕೇರಳದ ಈ ಸ್ಮಗ್ಲಿಂಗ್ ಪ್ರಕರಣದಲ್ಲಿ ಆರ್ಥಿಕವಾಗಿ ಭಾರತಕ್ಕೆ ಘಾಸಿ ಮಾಡುವ ಉದ್ದೇಶವಿದ್ದಂತಿದೆ” ಎಂದು ತನಿಖೆಯಲ್ಲಿ ಭಾಗಿಯಾಗಿರುವ ಎನ್​ಐಎ ಅಧಿಕಾರಿಯೊಬ್ಬರು ನ್ಯೂಸ್18ಗೆ ತಿಳಿಸಿದ್ದಾರೆ.

  ಈ ಪ್ರಕರಣದಲ್ಲಿ ಎರಡು ತನಿಖೆಗಳು ನಡೆಯುತ್ತಿವೆ. ಕಸ್ಟಮ್ಸ್ ಇಲಾಖೆ ಮತ್ತು ಎನ್​ಐಎ ಪ್ರತ್ಯೇಕವಾಗಿ ತನಿಖೆ ನಡೆಸುತ್ತಿವೆ. ಕಸ್ಟಮ್ಸ್ ಆಕ್ಟ್​ನ ನಿಯಾವಳಿಗಳ ಉಲ್ಲಂಘನೆ ಆಗಿದೆಯಾ ಎನ್ನುವ ನಿಟ್ಟಿನಲ್ಲಿ ಕಸ್ಟಮ್ಸ್ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಇತ್ತ, ಎನ್​ಐಎ ಅಧಿಕಾರಿಗಳು ಈ ಪ್ರಕರಣದಲ್ಲಿ ಆರೋಪಿಗಳು ವೈಯಕ್ತಿಕ ಲಾಭಕ್ಕಾಗಿ ಕಳ್ಳಸಾಗಾಣಿಕೆ ಮಾಡಿದರಾ? ಅಥವಾ ದೇಶವನ್ನು ಅಭದ್ರಗೊಳಿಸುವ ಸಂಚಿನಿಂದ ಮಾಡಿದರಾ ಎಂಬುದನ್ನು ಪತ್ತೆ ಹಚ್ಚುವ ಪ್ರಯತ್ನದಲ್ಲಿದ್ದಾರೆ.

  ಇದನ್ನೂ ಓದಿ: ಜೈಲಿನಲ್ಲೇ ಆತ್ಮಹತ್ಯೆಗೆ ಯತ್ನಿಸಿದ ರಾಜೀವ್ ಗಾಂಧಿ ಹತ್ಯೆ ಅಪರಾಧಿ ನಳಿನಿ

  ಆದರೆ ಎಷ್ಟು ಪ್ರಮಾಣದಲ್ಲಿ ಚಿನ್ನದ ಸ್ಮಗ್ಲಿಂಗ್ ಆಗಿದೆ ಎಂಬ ವಿಚಾರದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಮತ್ತು ಎನ್​ಐಎ ಅಧಿಕಾರಿಗಳ ಅಂದಾಜಿನಲ್ಲಿ ವ್ಯತ್ಯಾಸ ಇದೆ. ಕಳೆದ ವರ್ಷದ ಜುಲೈನಿಂದೀಚೆ, ಅಂದರೆ ಕಳೆದ ಒಂದು ವರ್ಷದಲ್ಲಿ ರಾಜತಾಂತ್ರಿಕ ಹಾದಿಯಲ್ಲಿ (ಡಿಪ್ಲೊಮಾಟಿಕ್ ರೂಟ್) 20 ಪಾರ್ಸಲ್​ಗಳ ಮೂಲಕ 180 ಕಿಲೋ ಚಿನ್ನವನ್ನು ಭಾರತಕ್ಕೆ ಅಕ್ರಮವಾಗಿ ತಂದಿರಬಹುದು ಎಂಬುದು ಕಸ್ಟಮ್ಸ್ ಅಧಿಕಾರಿಗಳ ಶಂಕೆ. ಆದರೆ, ಎನ್​ಐಎನವರು 250 ಕಿಲೋ ಚಿನ್ನದ ಕಳ್ಳಸಾಗಾಣಕೆ ಆಗಿರಬಹುದು ಎಂದು ಅಂದಾಜಿಸಿದ್ದಾರೆ.

  ಇದೇ ಜುಲೈ 5ರಂದು ತಿರುವನಂತಪುರಂ ಏರ್​ಪೋರ್ಟ್ ಬಳಿ 30 ಕಿಲೋ ಚಿನ್ನವಿರುವ ಪಾರ್ಸಲ್​ವೊಂದನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದರು. ಈ ಮೂಲಕ ಸ್ಮಗ್ಲಿಂಗ್ ರ್ಯಾಕೆಟ್ ಬಯಲಿಗೆ ಬಂದಿತ್ತು. ಈ ಪ್ರಕರಣ ಸಂಬಂಧ ಕಸ್ಟಮ್ಸ್ ಇಲಾಖೆಯವರು 13 ಮಂದಿಯನ್ನು ಈವರೆಗೆ ಬಂಧಿಸಿದ್ದಾರೆ. ಎನ್​ಐಎಯಿಂದ ನಾಲ್ವರ ಬಂಧನವಾಗಿದೆ.

  ಇದನ್ನೂ ಓದಿ: ಹಾಂಕಾಂಗ್ ಜೊತೆಗಿನ ಹಸ್ತಾಂತರ ಒಪ್ಪಂದ ರದ್ದು ಮಾಡಿದ ಬ್ರಿಟನ್; ಶಸ್ತ್ರಾಸ್ತ್ರ ಸರಬರಾಜು ಸ್ಥಗಿತ

  ಫೈಸಲ್ ಫರೀದ್, ಸ್ವಪ್ನ ಸುರೇಶ್, ಸಂದೀಪ್ ನಾಯರ್ ಮತ್ತು ಸರಿತ್ ಅವರು ಈ ಪ್ರಕರಣದ ಪ್ರಮುಖ ಆರೋಪಿಗಳೆಂದು ಪರಿಗಣಿಸಲಾಗಿದೆ. ಸ್ವಪ್ನ ಸುರೇಶ್ ಅವರಿಗೂ ಕೇರಳ ಸಿಎಂ ಪಿಣಾರಯಿ ವಿಜಯನ್ ಅವರಿಗೂ ಸಂಬಂಧ ಇದೆ ಎಂಬ ಹಿನ್ನೆಲೆಯಲ್ಲಿ ಕೇರಳ ರಾಜಕಾರಣದ ಬಗ್ಗೆ ಬಿಸಿಬಿಸಿ ಚರ್ಚೆಯಾಗುತ್ತಿದೆ. ಸ್ವಪ್ನ ಸುರೇಶ್ ಮತ್ತು ಸರಿತ್ ಅವರಿಬ್ಬರೂ ಕೂಡ ಯುಎಇ ರಾಜತಾಂತ್ರಕ ಕಚೇರಿ ಜೊತೆ ಈ ಹಿಂದೆ ಕೆಲಸ ಮಾಡಿದವರು. ಅದೇ ಪ್ರಭಾವ ಇಟ್ಟುಕೊಂಡು ಅಧಿಕೃತ ಪಾರ್ಸಲ್​ಗಳ ಮೂಲಕ ಚಿನ್ನ ಕಳ್ಳಸಾಗಣೆ ಮಾಡುತ್ತಿದ್ದರೆನ್ನಲಾಗಿದೆ. ಸಂದೀಪ್ ನಾಯರ್ ಎಂಬ ಉದ್ಯಮಿಯ ಸೂಚನೆ ಮೇರೆಗೆ ತಾವು ಈ ಕೆಲಸ ಮಾಡುತ್ತಿದ್ದುದಾಗಿ ಈ ಇಬ್ಬರು ಬಾಯಿಬಿಟ್ಟಿದ್ಧಾರೆ.

  ಇನ್ನು, ಫೈಸಲ್ ಫರೀದ್ ಕೇರಳದ ತ್ರಿಶೂರ್​ನವರಾಗಿದ್ದು, ದುಬೈನಲ್ಲಿದ್ದಾನೆ. ದುಬೈನಿಂದ ಚಿನ್ನವನ್ನು ಇಲ್ಲಿಗೆ ಪಾರ್ಸಲ್ ಮೂಲಕ ಈತನೇ ಕಳುಹಿಸಿರುವ ಶಂಕೆ ಇದೆ. ದುಬೈ ಪೊಲೀಸರು ಈತನನ್ನು ಹಿಡಿಯಲು ಬಲೆಬೀಸಿದ್ಧಾರೆ.
  Published by:Vijayasarthy SN
  First published: