Sushma ChakreSushma Chakre
|
news18-kannada Updated:July 31, 2020, 6:49 PM IST
ಮುಖೇಶ್ ಅಂಬಾನಿ
ಮುಂಬೈ (ಜು. 31): 1995ರಲ್ಲಿ ಅಂದರೆ 25 ವರ್ಷಗಳ ಹಿಂದೆ ಭಾರತದಲ್ಲಿ ಮೊಬೈಲ್ ಫೋನ್ ಚಾಲ್ತಿಗೆ ಬಂದಿತು. ಈ ಪ್ರಯುಕ್ತ ಕೇಂದ್ರ ದೂರಸಂಪರ್ಕ ಇಲಾಖೆ ಮೊಬೈಲಿಟಿ ಬೆಳ್ಳಿಹಬ್ಬದ ಸಂಭ್ರಮಾಚರಣೆ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಮಾತನಾಡಿರುವ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಚೇರ್ಮನ್ ಹಾಗೂ ಎಂಡಿ ಮುಖೇಶ್ ಅಂಬಾನಿ, ನಮ್ಮ ದೇಶದ ಅಭಿವೃದ್ಧಿಯಲ್ಲಿ ಇದೊಂದು ಮೈಲುಗಲ್ಲು. ಇದು ನಮಗೆಲ್ಲ ಹೆಮ್ಮೆಯ ಕ್ಷಣ ಎಂದಿದ್ದಾರೆ.
1995ರಲ್ಲಿ ಭಾರತದಲ್ಲಿ ಮೊಬೈಲ್ ಸಂಪರ್ಕ ಆರಂಭವಾಗುವ ಮೂಲಕ ಸಂಪರ್ಕ ಮಾಧ್ಯಮದಲ್ಲಿ ದೊಡ್ಡ ಸಂಚಲನವೇ ಸೃಷ್ಟಿಯಾಯಿತು. ಇದೀಗ ತಂತ್ರಜ್ಞಾನದ ಮೂಲಕ ನಾವು ಅನೇಕ ಹೊಸ ಹೊಸ ಅನ್ವೇಷಣೆಗಳನ್ನು ಮಾಡಿದ್ದೇವೆ. ಇದು ಒಂದುರೀತಿ ಕನಸು ನನಸಾದ ಘಟನೆ ಎಂದರೆ ತಪ್ಪಾಗಲಾರದು. ನಾವು ಕತೆಗಳಲ್ಲಿ ಕೇಳುತ್ತಿದ್ದುದನ್ನು ಸಾಧ್ಯವಾಗಿಸಿದ್ದ ಮೊಬೈಲ್ಗಳು. ರಾಜ್ಯ, ದೇಶಗಳನ್ನು ದಾಟಿ ಮೊಬೈಲ್ ಮೂಲಕ ಒಬ್ಬರಿಗೊಬ್ಬರು ಸಂಪರ್ಕ ಮಾಡಬಹುದು ಎಂಬುದನ್ನು 25 ವರ್ಷಗಳ ಹಿಂದೆ ಊಹಿಸಿಕೊಳ್ಳಲೂ ಸಾಧ್ಯವಿರಲಿಲ್ಲ. ಈಗ ಮೊಬೈಲ್ಗಳು ನಮ್ಮ ಮುಂದೆ ಪ್ರಪಂಚವನ್ನೇ ಬಿಚ್ಚಿಡುತ್ತಿವೆ ಎಂದು ಮುಖೇಶ್ ಅಂಬಾನಿ ಹೇಳಿದ್ದಾರೆ.
ಇದನ್ನೂ ಓದಿ: ನಕಲಿ ಆಲ್ಕೋಹಾಲ್ ಸೇವಿಸಿ ಪಂಜಾಬ್ನಲ್ಲಿ 21 ಜನ ಸಾವು; ಸಿಎಂ ಅಮರೀಂದರ್ ಸಿಂಗ್ ತನಿಖೆಗೆ ಆದೇಶ
ಟೆಲಿಫೋನ್ಗಳಿಂದ ಮೊಬೈಲ್ ಫೋನ್ಗಳಿಗೆ ಶಿಫ್ಟ್ ಆಗುವುದು ಸುಲಭವಾಗಿರಲಿಲ್ಲ. ಮೊಬೈಲ್ ಫೋನ್ಗಳು ಪ್ರತಿಯೊಬ್ಬರ ಅತ್ಯಗತ್ಯ ಸೌಲಭ್ಯವಾಗಿ ಪರಿವರ್ತನೆಯಾಗಲು ಬಹಳ ಸಮಯ ಬೇಕಾಯಿತು. ದಿನದ 24 ಗಂಟೆಯೂ ಎಲ್ಲಿಂದ ಬೇಕಾದರೂ, ಯಾವಾಗ ಬೇಕಾದರೂ ನಮಗೆ ಬೇಕಾದವರೊಂದಿಗೆ ಮಾತನಾಡಲು ಸಾಧ್ಯ ಎಂಬುದು ಅತಿದೊಡ್ಡ ಅನ್ವೇಷಣೆ. ಲ್ಯಾಂಡ್ಲೈನ್ ಫೋನ್ಗಳಿಂದ ಮೊಬೈಲ್ಗಳಿಗೆ ಜನರು ಶಿಫ್ಟ್ ಆಗಿದ್ದು ಕ್ರಾಂತಿಕಾರಿ ಬೆಳವಣಿಗೆ ಎಂಬುದರಲ್ಲಿ ಅನುಮಾನವೇ ಇಲ್ಲ ಎಂದಿದ್ದಾರೆ.
ಈ 25 ವರ್ಷಗಳಲ್ಲಿ ಮೊಬೈಲ್ ಸೇವೆಯಲ್ಲಿ ಸಾಕಷ್ಟು ಬದಲಾವಣೆಗಳು ಆಗಿವೆ. ದುಬಾರಿಯಾಗಿದ್ದ ಮೊಬೈಲ್ಗಳು ಜನಸಾಮಾನ್ಯರ ಕೈಗೆಟುಕುವ ದರದಲ್ಲಿ ಸಿಗತೊಡಗಿದವು. 1995ರಲ್ಲಿ ಮೊಬೈಲ್ನಲ್ಲಿ 1 ನಿಮಿಷ ಮಾತನಾಡಲು 24 ರೂ.ಗಳು ಬೇಕಾಗುತ್ತಿತ್ತು. ಫೋನ್ ಮಾಡಿದವರಿಗೆ 16 ರೂ. ಖರ್ಚಾಗುತ್ತಿತ್ತು, ರಿಸೀವ್ ಮಾಡಿದವರಿಗೆ 8 ರೂ. ಖರ್ಚಾಗುತ್ತಿತ್ತು. ಆದರೆ, ಈಗ ವಾಯ್ಸ್ ಕಾಲ್ಗಳು ಉಚಿತವಾಗಿವೆ. ಎಷ್ಟು ಹೊತ್ತು ಬೇಕಾದರೂ ಮಾತನಾಡಲು ಈಗ ಅವಕಾಶವಿದೆ ಎಂದು ಹಳೆಯ ಕಾಲಕ್ಕೂ ಈಗಿನ ಕಾಲದ ಬದಲಾವಣೆಗೂ ಮುಖೇಶ್ ಅಂಬಾನಿ ಹೋಲಿಕೆ ಮಾಡಿದ್ದಾರೆ.
ಇದನ್ನೂ ಓದಿ: Reliance Jio: ಮೊದಲ ತ್ರೈಮಾಸಿಕದಲ್ಲಿ ರಿಲಯನ್ಸ್ಗೆ 13,248 ಕೋಟಿ ರೂ. ಲಾಭ; ಜಿಯೋ ಆದಾಯ ಶೇ.7.4 ವೃದ್ಧಿಈಗ ಮೊಬೈಲ್ ಫೋನ್ಗಳು ಕೇವಲ ಮಾತನಾಡಲು ಮಾತ್ರ ಉಪಯೋಗವಾಗುತ್ತಿಲ್ಲ. ಇಂಟರ್ನೆಟ್ ಸೇವೆಯಿಂದಾಗಿ ವಿಡಿಯೋ ಕಾಲ್, ಬ್ಯಾಂಕ್ ಸೇವೆ, ರೀಚಾರ್ಜ್, ಟಿವಿಯಾಗಿ ಹೀಗೆ ಎಲ್ಲ ರೀತಿಯಲ್ಲೂ ಮೊಬೈಲ್ ಸೇವೆ ನೀಡುತ್ತಿದೆ. ಜನರು ಮೊಬೈಲ್ ಫೋನ್ಗಳ ಮೂಲಕವೇ ಮನರಂಜನೆ, ಜ್ಞಾನ, ಮಾಹಿತಿ ತಿಳಿಯತೊಡಗಿದ್ದಾರೆ. ಈಗ ಮೊಬೈಲ್ ಜನರ ದಿನನಿತ್ಯದ ಪ್ರಮುಖ ಭಾಗವಾಗಿಹೋಗಿದೆ. ವಸ್ತುಗಳ ಖರೀದಿಗೆ, ಸುದ್ದಿ ತಿಳಿಯಲು, ವಿಡಿಯೋಗಳನ್ನು ನೋಡಲು, ಸಿನಿಮಾ ವೀಕ್ಷಣೆಗೆ, ದರ ಪಾವತಿಗೆ, ಶಿಕ್ಷಣಕ್ಕೆ ಸಂಬಂಧಿಸಿದ ಮಾಹಿತಿ ಪಡೆಯಲು, ವರ್ಚುವಲ್ ಮೀಟಿಂಗ್ಗೆ ಹೀಗೆ ಎಲ್ಲ ರೀತಿಯಲ್ಲೂ ಮೊಬೈಲ್ ಕಾರ್ಯ ನಿರ್ವಹಿಸುತ್ತಿದೆ ಎಂದು ಮುಖೇಶ್ ಅಂಬಾನಿ ತಿಳಿಸಿದ್ದಾರೆ.
ಪ್ರಧಾನಮಂತ್ರಿಗಳ ಡಿಜಿಟಲ್ ಇಂಡಿಯಾ ಪರಿಕಲ್ಪನೆಗೆ ಜಿಯೋ ಮೊಬೈಲ್ ನೆಟ್ವರ್ಕ್ ಕೂಡ ಕೈಜೋಡಿಸಿದೆ. ಅತ್ಯಂತ ಕಡಿಮೆ ದರದಲ್ಲಿ ದೇಶದ ಬಹುತೇಕ ಎಲ್ಲ ಭಾಗಗಳಲ್ಲಿ ಜಿಯೋ ತನ್ನ ಸೇವೆಯನ್ನು ನೀಡುತ್ತಿದೆ. 2ಜಿ ಕಾಲದಲ್ಲೇ 3ಜಿ, 4ಜಿ ಆರಂಭಿಸಿದ ಜಿಯೋ ಈಗ 5ಜಿ ಸೇವೆಯತ್ತ ಕಾಲಿಟ್ಟಿದೆ. ಈ 25 ವರ್ಷಗಳ ಮೊಬೈಲ್ ಪಯಣದಲ್ಲಿ ಸಾಕಷ್ಟು ಅನ್ವೇಷಣೆಗಳಾಗಿದ್ದು, ಇನ್ನಷ್ಟು ಸಂಶೋಧನೆಗಳು ನಡೆಯುತ್ತಲೇ ಇವೆ ಎಂದು ಮುಖೇಶ್ ಅಂಬಾನಿ ಹೇಳಿದ್ದಾರೆ.
Published by:
Sushma Chakre
First published:
July 31, 2020, 6:49 PM IST