Attempts Abortion at Home: ಯುಟ್ಯೂಬ್ ನೋಡಿ ಗರ್ಭಪಾತ ಮಾಡಿಕೊಳ್ಳಲು ಮುಂದಾದ ಯುವತಿ.. ಮುಂದೇನಾಯ್ತು?

ಯುವತಿ ಗರ್ಭಿಣಿ ಎಂಬ ವಿಷಯ ತಿಳಿಯುತ್ತಲೇ ಯುಟ್ಯೂಬ್ ನಲ್ಲಿರುವ ಕೆಲ ವೀಡಿಯೋಗಳ ಮೂಲಕ ಗರ್ಭಪಾತ ಹೇಗೆ ಮಾಡಿಕೊಳ್ಳಬೇಕೆಂದು ತೋರಿಸಿದ್ದಾನೆ. ನಂತರ ಔಷಧಿಯನ್ನು ಸಹ ತಂದು ಕೊಟ್ಟಿದ್ದಾನೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಇಂದು ಏನೇ ಹೊಸ ಕೆಲಸ ಮಾಡಬೇಕು ಅಂದ್ರೆ ಒಮ್ಮೆ ಯುಟ್ಯೂಬ್ ನೋಡುತ್ತೇವೆ. ಹೊಸ ಮೊಬೈಲ್, ಕಾರ್, ಬೈಕ್ ಸೇರಿದಂತೆ ಎಲ್ಲ ತರಹದ ಮಾಹಿತಿ ಪಡೆಯಲು ಯುಟ್ಯೂಬ್ ಸಹಾಯ ಪಡೆದುಕೊಳ್ಳುತ್ತೇವೆ. ಹೆಚ್ಚಿನ ಜನರು ಹೊಸ ಅಡುಗೆ ಮಾಡೋದಕ್ಕಾಗಿ ಯುಟ್ಯೂಬ್ ತಡಕಾಡುತ್ತಾರೆ. ಆದ್ರೆ ನಾಗ್ಪುರದ 25 ವರ್ಷದ ಯುವತಿಯೊಬ್ಬಳು ಯುಟ್ಯೂಬ್ ನೋಡಿ ಆಬಾರ್ಷನ್ ಮಾಡಿಕೊಳ್ಳಲು ಹೋಗಿ ಪ್ರಾಣಕ್ಕೆ ಕುತ್ತು ತಂದುಕೊಂಡಿದ್ದಳು. ಸರಿಯಾದ ಸಮಯಕ್ಕೆ ಯುವತಿಯನ್ನು ಆಸ್ಪತ್ರೆಗೆ ದಾಖಲು ಮಾಡಿದ್ದರಿಂದ ಬದುಕುಳಿದಿದ್ದಾಳೆ.

  ಯುಟ್ಯೂಬ್ ಸಲಹೆ ನೀಡಿದ್ದು ಆಕೆಯ ಇನಿಯ

  ಸ್ಥಳೀಯ ಪತ್ರಿಕೆಗಳ ವರದಿ ಪ್ರಕಾರ, ಯುಟ್ಯೂಬ್ ನೋಡಿ ಭ್ರೂಣವನ್ನು ಹೊರತೆಗೆಯಲು ಯುವತಿಗೆ ಆಕೆಯ ಗೆಳೆಯ ಸಲಹೆ ನೀಡಿದ್ದನು. ಇನಿಯನ ಮಾತು ನಂಬಿ ಅಬಾರ್ಷನ್ ಗೆ ಮುಂದಾಗಿ ಪ್ರಾಣಕ್ಕೆ ಕುತ್ತು ತಂದುಕೊಂಡಿದ್ದಳು. ಈ ಘಟನೆ ನಾಗ್ಪುರದ ಯಶೋಧರ ನಗರದಲ್ಲಿ ನಡೆದಿದೆ.

  ಮಹಾರಾಷ್ಟ್ರದ ನಾಗ್ಪುರ (Nagpru, Maharashtra) ಮೂಲದ ಯುವತಿ, 30 ವರ್ಷದ ಶೋಯೆಬ್ ಖಾನ್ ಎಂಬಾತನನ್ನು ಪ್ರೀತಿಸುತಿದ್ದಳು. ಶೋಯೆಬ್ ಖಾನ್ ಮದುವೆಯಾಗೋದಾಗಿ ನಂಬಿಸಿ 2016ರಿಂದಲೂ ಯುವತಿಯ ಜೊತೆ ಲೈಂಗಿಕ ಸಂಪರ್ಕ ಹೊಂದಿದ್ದ. ಗರ್ಭಿಣಿ ಎಂಬ ವಿಷಯ ತಿಳಿದು ಕೂಡಲೇ ಶೋಯೆಬ್ ಗೆ ತನ್ನನ್ನು ಮದುವೆಯಾಗುವಂತೆ ಕೇಳಿಕೊಂಡಿದ್ದಾಳೆ. ಯುವತಿ ಗರ್ಭಿಣಿ ಎಂಬ ವಿಷಯ ತಿಳಿಯುತ್ತಲೇ ಯುಟ್ಯೂಬ್ ನಲ್ಲಿರುವ ಕೆಲ ವೀಡಿಯೋಗಳ ಮೂಲಕ ಗರ್ಭಪಾತ ಹೇಗೆ ಮಾಡಿಕೊಳ್ಳಬೇಕೆಂದು ತೋರಿಸಿದ್ದಾನೆ. ನಂತರ ಔಷಧಿಯನ್ನು ಸಹ ತಂದು ಕೊಟ್ಟಿದ್ದಾನೆ. ಯುವತಿಗೆ ಗರ್ಭಪಾತ ಮಾಡಿಕೊಳ್ಳುವಂತೆ ಒತ್ತಡ ಹಾಕಿದ್ದಾನೆ.

  ಇದನ್ನೂ ಓದಿ: Father kills Children: ಹೆಂಡತಿಯ ಶೀಲ ಶಂಕಿಸಿ ಇಬ್ಬರು ಮಕ್ಕಳನ್ನು ಕೊಂದ ಪಾಪಿ.. ಮಕ್ಕಳೇನು ಮಾಡಿದ್ದರು!?

  ಆಸ್ಪತ್ರೆಯಲ್ಲಿ ಯುವತಿ, ಕಂಬಿ ಹಿಂದೆ ಯುವಕ

  ಯುವತಿ ಗರ್ಭಪಾತ ಮಾಡಿಕೊಳ್ಳಲು ಮುಂದಾದಾಗ ಆಕೆಯ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡಿದರಿಂದ ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಯುವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾಳೆ. ಯುವತಿ ಹೇಳಿಕೆಯನ್ನಾಧರಿಸಿ ಅತ್ಯಾಚಾರ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಯುವಕನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಳೆದ ಗುರುವಾರ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

  ಮನೆಯಲ್ಲಿ ವೈದ್ಯಕೀಯ ಪ್ರಯೋಗ ಬೇಡ!

  ಸಾಮಾಜಿಕ ಜಾಲತಾಣಗಳಲ್ಲಿ ಶಸ್ತ್ರಚಿಕಿತ್ಸೆ ಸೇರಿದಂತೆ ವೈದ್ಯಲೋಕಕ್ಕೆ ಸಂಬಂಧಿಸಿದ ವೀಡಿಯೋಗಳು ಸಿಗುತ್ತವೆ. ಸಣ್ಣ ಪ್ರಮಾಣದ ಗಾಯಗಳಿಗೆ ಪ್ರಥಮ ಚಿಕಿತ್ಸೆ ಮಾತ್ರ ಮಾಡಬೇಕು. ಅದಕ್ಕಿಂತ ಹೆಚ್ಚಿನ ಗಾಯ ಅಥವಾ ರೋಗಿ ಗಂಭೀರವಾಗಿದ್ದರಿಂದ ಕೂಡಲೇ ಆಸ್ಪತ್ರೆಗೆ ದಾಖಲಿಸಬೇಕು. ಯುಟ್ಯೂಬ್ ನಲ್ಲಿ ವೀಡಿಯೋಗಳನ್ನ ನೋಡೋದಕ್ಕೂ ಮತ್ತು ಅದನ್ನ ಪ್ರಾಯೋಗಿಕವಾಗಿ ಮಾಡೋದಕ್ಕೂ ಸಾಕಷ್ಟು ವ್ಯತ್ಯಾಸ ಇರುತ್ತೆ. ಆದ್ದರಿಂದ ಸಾಮಾನ್ಯ ಜನರು ಇಂತಹ ಪ್ರಯೋಗಕ್ಕೆ ಮುಂದಾಗಾಬಾರದು ಎಂದು ವೈದ್ಯರು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.

  ವರದಿ: ಮೊಹ್ಮದ್​ ರಫೀಕ್​ ಕೆ 
  Published by:Kavya V
  First published: